ಬೆಂಗಳೂರು :  ಸೇವಾ ಹಿರಿತನ ಆಧಾರದಡಿ ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಅಲೋಕ್‌ ಕುಮಾರ್‌ ಸೇರಿದಂತೆ ಮೂವರು ಹಿರಿಯ ಐಜಿಪಿಗಳ ಮುಂಬಡ್ತಿ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಬ್ರೇಕ್‌ ಹಾಕಿದೆ.

ಇದರೊಂದಿಗೆ ಬೆಂಗಳೂರು ಅಪರಾಧ ವಿಭಾಗದ ಹೆಚ್ಚುವರಿ ಆಯುಕ್ತ ಹುದ್ದೆಯಲ್ಲೇ ಅಲೋಕ್‌ ಕುಮಾರ್‌ ಅವರು ಇನ್ನೂ ಒಂದು ವರ್ಷ ಮುಂದುವರೆಯುವ ಸಾಧ್ಯತೆಗಳು ದಟ್ಟವಾಗಿವೆ.

ಪ್ರತಿ ವರ್ಷದ ಮೊದಲ ದಿನ ಉಡುಗೊರೆ ರೂಪದಲ್ಲಿ ಐಪಿಎಸ್‌ ಅಧಿಕಾರಿಗಳಿಗೆ ಮುಂಬಡ್ತಿ ನೀಡುವ ಅಲಿಖಿತ ನಿಯಮವೊಂದನ್ನು ಸರ್ಕಾರವು ಪಾಲಿಸಿಕೊಂಡು ಬಂದಿದೆ. ಆದರೆ ಈ ಬಾರಿ ಬಿ.ಆರ್‌.ರವಿಕಾಂತೇಗೌಡ ಸೇರಿದಂತೆ ಏಳು ಮಂದಿ ಹಿರಿಯ ಎಸ್‌ಪಿ ಮತ್ತು ಓರ್ವ ಡಿಐಜಿ ದರ್ಜೆ ಅಧಿಕಾರಿಗಳಿಗೆ ಸಿಹಿ ಕೊಟ್ಟಸರ್ಕಾರ, ಹೆಚ್ಚುವರಿ ಮಹಾನಿರ್ದೇಶಕರ ಹುದ್ದೆ ನಿರೀಕ್ಷೆಯಲ್ಲಿದ್ದ ಹಿರಿಯ ಐಜಿಪಿಗಳಾದ ಬಿ.ದಯಾನಂದ್‌, ಅಲೋಕ್‌ ಕುಮಾರ್‌ ಹಾಗೂ ಪ್ರಣವ್‌ ಮೊಹಂತಿ ಅವರಿಗೆ ನಿರಾಸೆಗೊಳಿಸಿದೆ.

ಹಿರಿತನವಿದ್ದರೂ ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇಲ್ಲ ಎಂಬ ಕಾರಣ ಹೇಳಿ ಐಜಿಪಿಗಳ ಮುಂಬಡ್ತಿಯನ್ನು ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ತಡೆ ಹಿಡಿದಿದ್ದಾರೆ. ಆದರೆ ಇದೇ ನಿಯಮವನ್ನು ಐಎಎಸ್‌ ಅಧಿಕಾರಿಗಳಿಗೆ ಅನ್ವಯ ಮಾಡುತ್ತಿಲ್ಲ ಎಂದು ಐಪಿಎಸ್‌ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಮೇ ತಿಂಗಳಲ್ಲಿ ಪ್ರಣವ್‌ಗೆ ಸಿಹಿ:

ರಾಜ್ಯದಲ್ಲಿ ಪ್ರಸ್ತುತ 177 (ಆಂಧ್ರಪ್ರದೇಶ ಕೇಡರ್‌ನ ಚೈತ್ರಾ ಹಾಗೂ ರಾಜಸ್ಥಾನ ಕೇಡರ್‌ನ ಶರತ್‌ ಸುಹಾಸ್‌ ಸೇರಿ) ಐಪಿಎಸ್‌ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇದರಲ್ಲಿ ಡಿಜಿ-ಐಜಿ, ಐವರು ಡಿಜಿಪಿ ಹಾಗೂ 21 ಎಡಿಜಿಪಿ ಹುದ್ದೆಗಳಿವೆ. ಸೇವಾ ಹಿರಿತನದ ಆಧಾರದಡಿ ಮತ್ತೆ ಮೂವರಿಗೆ ಎಡಿಜಿಪಿ ಹುದ್ದೆ ಸಿಗುವ ನಿರೀಕ್ಷೆಯಿತ್ತು. ಆದರೆ ಪ್ರಸ್ತುತ ಎಡಿಜಿಪಿ ಹುದ್ದೆಗಳು ಹೆಚ್ಚುವರಿಗಳಾಗಿವೆ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿಗಳು ತಡೆ ಹಾಕಿರುವುದಾಗಿ ಗೊತ್ತಾಗಿದೆ.

ಅದರಂತೆ ಇದೇ ವರ್ಷದ ಮೇನಲ್ಲಿ ರಾಜ್ಯ ಪೊಲೀಸ್‌ ಗೃಹ ಮಂಡಳಿಯ ಡಿಜಿಪಿ ಸಿ.ಎಚ್‌.ಕಿಶೋರ್‌ ಚಂದ್ರ ನಿವೃತ್ತರಾಗಲಿದ್ದಾರೆ. ಅವರಿಂದ ತೆರವಾಗುವ ಡಿಜಿಪಿ ಹುದ್ದೆಯನ್ನು ಸೇವಾ ಹಿರಿತನದಡಿ ಅಲೋಕ್‌ ಮೋಹನ್‌ ಅಲಂಕರಿಸಲಿದ್ದಾರೆ. ಆಗ ಕೇಂದ್ರ ಸೇವೆಯಲ್ಲಿರುವ ಪ್ರಣವ್‌ ಮೊಹಂತಿ ಅವರಿಗೆ ಎಡಿಜಿಪಿ ಹುದ್ದೆ ಸಿಗಲಿದೆ. ಬಳಿಕ 2020ರ ಜನವರಿ ಅಂತ್ಯಕ್ಕೆ ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ಎನ್‌.ರಾಜು ಹಾಗೂ ಅಗ್ನಿಶಾಮಕ ದಳದ ಡಿಜಿಪಿ ಎಂ.ಎನ್‌.ರೆಡ್ಡಿ ನಿವೃತ್ತರಾಗಲಿದ್ದಾರೆ. ಆಗ ಅಲೋಕ್‌ ಕುಮಾರ್‌ ಪದೋನ್ನತಿ ಪಡೆಯಲಿದ್ದಾರೆ. ಅಲ್ಲಿವರೆಗೆ ಅಲೋಕ್‌ ಕುಮಾರ್‌ ಅವರು ಹೆಚ್ಚುವರಿ ಆಯುಕ್ತರಾಗಿಯೇ ಮುಂದುವರೆಯಲಿದ್ದಾರೆ. ಅದೇ ರೀತಿ ಕೇಂದ್ರ ವಲಯ ಐಜಿಪಿ ಬಿ.ದಯಾನಂದ್‌ ಅವರಿಗೆ ಪೂರ್ವ (ದಾವಣಗೆರೆ) ವಲಯ ಹೆಚ್ಚುವರಿ ಹೊಣೆಗಾರಿಕೆ ಕೂಡಾ ಇದೆ. ಈ ಎರಡು ಜವಾಬ್ದಾರಿಗಳನ್ನು ಮತ್ತಷ್ಟುದಿನಗಳ ಕಾಲ ಅವರು ನಿರ್ವಹಿಸಲಿದ್ದಾರೆ ಎಂದು ಗೃಹ ಇಲಾಖೆಯ ಉನ್ನತ ಮೂಲಗಳು ಮಾಹಿತಿ ನೀಡಿವೆ.

4 ತಿಂಗಳು ಅಂದುಕೊಂಡಿದ್ದವರಿಗೆ ಶಾಕ್‌

ನಾಲ್ಕು ತಿಂಗಳ ಹಿಂದೆ ಬೆಳಗಾವಿ ವಲಯದ ಐಜಿಪಿಯಾಗಿದ್ದ ಅಲೋಕ್‌ ಕುಮಾರ್‌ ಅವರು ಮತ್ತೆ ರಾಜಧಾನಿಗೆ ಮರು ಪ್ರವೇಶ ಪಡೆದಾಗ ಅಪರಾಧ ಜಗತ್ತಿನಲ್ಲಿ ಸಣ್ಣದೊಂದು ಕಂಪನ ಮೂಡಿತ್ತು. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿ ಬಡ್ಡಿ ಹಾಗೂ ಡ್ರಗ್ಸ್‌ ಮಾಫಿಯಾ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಸಲುವಾಗಿಯೇ ಅಲೋಕ್‌ ಕುಮಾರ್‌ ಅವರನ್ನು ವರ್ಗಾವಣೆ ಮಾಡಿದ್ದಾರೆ ಎನ್ನಲಾಗಿತ್ತು. ಇದೇ ಹೊತ್ತಿನಲ್ಲಿ ಮೈತ್ರಿ ಸರ್ಕಾರ ಕೆಡವಲು ಕಿಂಗ್‌ಪಿನ್‌ಗಳ ಸಂಚು ವಿಚಾರವು ಬಿಸಿಬಿಸಿ ಚರ್ಚೆಯಲ್ಲಿತ್ತು. ಆದರೆ ಆ ಸಂದರ್ಭದಲ್ಲಿ ಜನವರಿಗೆ ಅಲೋಕ್‌ ಕುಮಾರ್‌ ಮುಂಬಡ್ತಿ ಪಡೆಯಲಿದ್ದು, ಕೇವಲ ನಾಲ್ಕು ತಿಂಗಳಿಗೆ ಮಾತ್ರವಷ್ಟೇ ಅವರು ಸಿಸಿಬಿ ಮುಖ್ಯಸ್ಥ ಹುದ್ದೆಯಲ್ಲಿರುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಈಗ ಮುಂಬಡ್ತಿಗೆ ಬ್ರೇಕ್‌ ಬಿದ್ದ ಪರಿಣಾಮ ಇನ್ನೊಂದು ವರ್ಷ ಅಲೋಕ್‌ ಕುಮಾರ್‌ ಅವರ ಹುದ್ದೆ ಬದಲಾವಣೆ ಇಲ್ಲ ಎನ್ನುತ್ತವೆ ವಿಶ್ವಸನೀಯ ಮೂಲಗಳು.

ಹಿರಿಯ ಐಪಿಎಸ್‌ ಅಧಿಕಾರಿಗಳ ಹುದ್ದೆಗಳ ವಿವರ

ಒಟ್ಟು ಐಪಿಎಸ್‌ ಅಧಿಕಾರಿಗಳು- 177

ಡಿಜಿ-ಐಜಿ-1

ಡಿಜಿಪಿ-5

ಎಡಿಜಿಪಿ-21

ಐಜಿಪಿ-17

ಡಿಐಜಿ-7

ಎಡಿಜಿಪಿ ಹುದ್ದೆ ಖಾಲಿ ಇಲ್ಲ

ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಎಡಿಜಿಪಿ ಹುದ್ದೆಗಳು ಖಾಲಿ ಇಲ್ಲ. ಹೀಗಾಗಿ ಮೂವರು ಹಿರಿಯ ಐಜಿಪಿ ಅಧಿಕಾರಿಗಳ ಹುದ್ದೆಯನ್ನು ವೇತನ ಶ್ರೇಣಿಯಲ್ಲಿ ಉನ್ನತೀಕರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮುಂಬಡ್ತಿ ನೀಡಲಾಗುತ್ತದೆ.

- ವಿಜಯ್‌ ಭಾಸ್ಕರ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ

ವರದಿ : ಗಿರೀಶ್‌ ಮಾದೇನಹಳ್ಳಿ