ರಾಜ್ಯದ ಈರುಳ್ಳಿಗೆ ಬೆಲೆ ಇಲ್ಲ, ಪೂನಾ ಈರುಳ್ಳಿಗೆ ಹೆಚ್ಚು ಬೆಲೆ; ರೈತ ಕಂಗಾಲು
ರಾಜ್ಯದ ಈರುಳ್ಳಿ ರೈತರು ಬೆಳೆಯೂ ಇಲ್ಲದೆ, ಬೆಲೆಯೂ ಸಿಗದೆ ಕಂಗಾಲಾಗಿದ್ದಾರೆ. ಈ ಬಾರಿ ಈರುಳ್ಳಿ ಬಿತ್ತನೆ ಕ್ಷೇತ್ರ ಗಣನೀಯವಾಗಿ ಇಳಿಕೆಯಾಗಿದೆ. ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿ, ಕೊಳೆರೋಗದಿಂದ ಬೆಳೆ ನೆಲಕಚ್ಚಿತ್ತು.
ಮಯೂರ ಹೆಗಡೆ
ಬೆಂಗಳೂರು (ನ.09): ರಾಜ್ಯದ ಈರುಳ್ಳಿ ರೈತರು ಬೆಳೆಯೂ ಇಲ್ಲದೆ, ಬೆಲೆಯೂ ಸಿಗದೆ ಕಂಗಾಲಾಗಿದ್ದಾರೆ. ಈ ಬಾರಿ ಈರುಳ್ಳಿ ಬಿತ್ತನೆ ಕ್ಷೇತ್ರ ಗಣನೀಯವಾಗಿ ಇಳಿಕೆಯಾಗಿದೆ. ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿ, ಕೊಳೆರೋಗದಿಂದ ಬೆಳೆ ನೆಲಕಚ್ಚಿತ್ತು. ಉಳಿದ ಬೆಳೆ ಇನ್ನೇನು ಕೈಗೆ ಬಂತು ಎನ್ನುವಾಗ ಸೆಪ್ಟೆಂಬರ್, ಅಕ್ಟೋಬರ್‌ನ ಅಕಾಲಿಕ ಮಳೆಗೆ ಸಿಲುಕಿ ಗುಣಮಟ್ಟಹದಗೆಟ್ಟಿದೆ. ಬೆಳೆ ಕಡಿಮೆ ಕಾರಣಕ್ಕೆ ದರ ಏರಿಕೆಯಾಗುವ ಲೆಕ್ಕಾಚಾರವೂ ತಲೆಕೆಳಗಾಗಿದ್ದು, ಉಳ್ಳಾಗಡ್ಡೆ ಬೆಳೆದ ರೈತ ಕಣ್ಣೀರಿಡುವಂತಾಗಿದೆ.
ರಾಜ್ಯದಲ್ಲಿ ಸರಾಸರಿ 2 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆಯಲಾಗುತ್ತಿದ್ದ ಈರುಳ್ಳಿ ಈ ವರ್ಷ 129145 ಹೆಕ್ಟೇರ್‌ಗೆ ಇಳಿದಿತ್ತು. ಮುಂಗಾರಲ್ಲಿ ಅತಿವೃಷ್ಟಿಯಿಂದಾಗಿ 31330.32 ಹೆಕ್ಟೇರ್ ಬೆಳೆ ನಾಶವಾಗಿದೆ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ.ಧನರಾಜ್ ಕೆ. ತಿಳಿಸಿದ್ದಾರೆ. ಕೊಯ್ಲಿನ ಅವಧಿಗೆ ಸರಿಯಾಗಿ ಸುರಿದ ಅಕಾಲಿಕ ಮಳೆಗೆ ಮತ್ತಷ್ಟುಬೆಳೆ ನಾಶವಾಗಿದೆ. ಯಶವಂತಪುರ ಎಪಿಎಂಸಿಯಲ್ಲಿ ಮಹಾರಾಷ್ಟ್ರ ಈರುಳ್ಳಿ ಎದುರು ರಾಜ್ಯದ ಬೆಳೆ ಮಂಕಾಗಿದೆ. ಪೂನಾ ಡಬಲ್ ಪತ್ತಿ ಈರುಳ್ಳಿಗೆ ಕಳೆದ ವಾರ ಕ್ವಿಂಟಲ್‌ಗೆ 4 ಸಾವಿರ ರು.ವರೆಗೆ ಬೆಲೆಯಿತ್ತು. ಶನಿವಾರದಿಂದ ಪೂನಾ ಈರುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿರುವುದರಿಂದ ಕ್ವಿಂಟಲ್‌ಗೆ 3200 ರು. ಆಸುಪಾಸಲ್ಲಿದೆ. ಆದರೆ, ಶೇ.90ರಷ್ಟುರಾಜ್ಯದ ಈರುಳ್ಳಿ ಗುಣಮಟ್ಟವಿಲ್ಲದ ಕಾರಣಕ್ಕೆ 1500 ರು. ನಿಂದ ಗರಿಷ್ಠ 2 ಸಾವಿರ ರು. ಬೆಲೆಗೆ ಹರಾಜಾಗುತ್ತಿದೆ.
ವಿಧಾನಸೌಧ ಮುಂಭಾಗದಲ್ಲಿ ಕೆಂಪೇಗೌಡರ ಪ್ರತಿಮೆ ಅನಾವರಣ: ಸಚಿವ ಅಶೋಕ್
‘ರಾಜ್ಯದ ಈರುಳ್ಳಿಯಲ್ಲಿ ರಫ್ತು ಮಾಡುವಷ್ಟುಗುಣಮಟ್ಟವೇ ಇಲ್ಲ. ಒಂದೆರಡು ದಿನ ದಾಸ್ತಾನು ಮಾಡುವುದೂ ಕಷ್ಟ. ಗಾತ್ರದ ಅನ್ವಯವೂ ಮೊದಲ ದರ್ಜೆ ಈರುಳ್ಳಿಯಿಲ್ಲ. 2, 3ನೇ ದರ್ಜೆಯ ಈರುಳ್ಳಿ ತೀರಾ ಕಡಿಮೆ ಇದೆ. ರಫ್ತು ಮಾಡುವಷ್ಟುಗುಣಮಟ್ಟದ ಉತ್ಪನ್ನ ಲಭ್ಯವಿದ್ದರೆ ಹೆಚ್ಚಿನ ಬೆಲೆ ಸಿಗುತ್ತಿತ್ತು’ ಎಂದು ಈರುಳ್ಳಿ ರಫ್ತುದಾರ ಎಸ್. ಆನಂದನ್ ತಿಳಿಸಿದರು. ‘ಸಾಮಾನ್ಯವಾಗಿ ಎಕರೆಗೆ ಕನಿಷ್ಠ 300 ಚೀಲ ಬೆಳೆ ಸಿಗುತ್ತದೆ. ಆದರೆ, ಅಕಾಲಿಕ ಮಳೆಗೆ ಬೆಳೆ ನಾಶವಾಗಿ 150 ಚೀಲ ಮಾತ್ರ ಬೆಳೆ ಸಿಕ್ಕಿದೆ. ಒಂದು ಕ್ವಿಂಟಲ್ ಮಾರುಕಟ್ಟೆಗೆ ತಲುಪುವವರೆಗೆ 1900 ರು. ಖರ್ಚಾಗುತ್ತದೆ. ಆದರೆ, ಬೆಂಗಳೂರು ಎಪಿಎಂಸಿಗೆ ತರುವವರೆಗೆ 50-60 ಕೆ.ಜಿ. ಚೀಲದಲ್ಲಿ 15-20 ಕೆ.ಜಿ. ಕೊಳೆತುಹೋಗುತ್ತಿದೆ. ನಿರೀಕ್ಷಿತ ಬೆಲೆ ಸಿಗದೆ ಹೂಡಿದ ಹಣವೂ ಕೈ ಸೇರುತ್ತಿಲ್ಲ ಎಂದು ಬಾಗಲಕೋಟೆ ರೈತ ಸಂಗಯ್ಯ ಅಂಗಡಿಮಠ ಅಳಲು ತೋಡಿಕೊಂಡರು.
ಸಿಎಂ ಪತ್ರಕ್ಕೂ ಸಿಗದ ಪರಿಹಾರ: ಈರುಳ್ಳಿ ಬೆಳೆ ಹಾನಿಗೆ ರೈತರಿಗೆ ಒಂದು ರು. ಪರಿಹಾರವೂ ಸಿಕ್ಕಿಲ್ಲ. ಪರಿಹಾರಕ್ಕಾಗಿ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದೆವು. ಅ. 20ರಂದೇ ಸಿಎಂ ಅಧೀನ ಕಾರ್ಯದರ್ಶಿಗಳು ಕೃಷಿ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದು ಕ್ರಮಕ್ಕೆ ಸೂಚಿಸಿದ್ದಾರೆ. ಆದರೆ, ಪ್ರಯೋಜನವಾಗಿಲ್ಲ ರೈತರು ದೂರುತ್ತಿದ್ದಾರೆ. ಗ್ರಾಹಕರಿಗೆ ತಟ್ಟದ ಬಿಸಿ: ರಾಜ್ಯದ ಈರುಳ್ಳಿ ಉತ್ಪನ್ನ ಕಡಿಮೆ ಇದ್ದರೂ ಮಹಾರಾಷ್ಟ್ರದ ಪೂನಾ, ನಾಸಿಕ್‌ನಿಂದ ಹಳೆಯ ಈರುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ರಾಜ್ಯಕ್ಕೆ ಬರುತ್ತಿದೆ. ಮುಂದಿನ ವಾರದಿಂದ ಹೊಸ ಈರುಳ್ಳಿ ಆವಕವೂ ಹೆಚ್ಚಾಗಲಿದೆ. ರಾಜಸ್ಥಾನ, ಮಧ್ಯಪ್ರದೇಶ ಈರುಳ್ಳಿ ಆವಕದ ಹೆಚ್ಚಿನ ನಿರೀಕ್ಷೆಯಿದೆ. ಹೀಗಾಗಿ ಸದ್ಯಕ್ಕೆ ಈರುಳ್ಳಿ ದರ 10 ರು. ನಿಂದ 30 ರು.ವರೆಗಿದ್ದು, ಗ್ರಾಹಕರಿಗೆ ದರದ ಬಿಸಿ ತಟ್ಟಿಲ್ಲ.
ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ಹಾನಿ
ಜಿಲ್ಲೆ ಹಾನಿ (ಹೆ.)
ಗದಗ 12498.26
ಚಿಕ್ಕಮಗಳೂರು 4399.10
ಚಿತ್ರದುರ್ಗ 7089.94
ಧಾರವಾಡ 2120
ಬಾಗಲಕೋಟೆ 3716.40
ಹಾವೇರಿ 182.89
ಚಿಕ್ಕಬಳ್ಳಾಪುರ 17.87
ಚಾಮರಾಜನಗರ 448.08
ತುಮಕೂರು 25.19
ದಾವಣಗೆರೆ 170.38
ಮಂಡ್ಯ 46.38
ವಿಜಯಪುರ 382.07
ಬೆಳಗಾವಿ 95.90
ಕಲಬುರ್ಗಿ 87.20
ಕೊಪ್ಪಳ 37.24
ಯಾದಗಿರಿ 4.14
ಹಾಸನ 2.88
ಬೀದರ್ 1.40
ರಾಯಚೂರು 4
ವಿಜಯನಗರ 1.60
ಒಟ್ಟು 31330.32
Hindu Word War: ಕಾಂಗ್ರೆಸ್ ಪಕ್ಷದ ಹಿಂದುಗಳೇ ಜಾಗೃತರಾಗಿ: ಶಾಸಕ ರಘುಪತಿ ಭಟ್
ರಾಜ್ಯದಲ್ಲಿ ಶೇ.60-70ರಷ್ಟುಈರುಳ್ಳಿ ನೆಲಕಚ್ಚಿದ್ದು, ನಿರೀಕ್ಷಿತ ಬೆಲೆಯೂ ಇಲ್ಲ. ಸಿಎಂಗೆ ಪತ್ರ ಬರೆದು ತಿಂಗಳು ಸಮೀಪಿಸಿದರೂ ಬೆಳೆ ಹಾನಿ ಪರಿಹಾರದ ಬಗ್ಗೆ ಕ್ರಮವಾಗಿಲ್ಲ. ಸರ್ಕಾರ ಎಚ್ಚೆತ್ತು ಇನ್ನು ಮುಂದಾದರೂ ಕ್ವಿಂಟಲ್ ಈರುಳ್ಳಿಗೆ 3 ಸಾವಿರ ಬೆಂಬಲ ಬೆಲೆ ಘೋಷಿಸಬೇಕು.
-ಎನ್.ಎಂ.ಸಿದ್ದೇಶ, ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ
ರಾಜ್ಯದ ಈರುಳ್ಳಿ ಕ್ವಾಲಿಟಿ ಇಲ್ಲದ ಕಾರಣಕ್ಕೆ ಬೆಲೆ ಕಡಿಮೆಯಿದೆ. ಮಹಾರಾಷ್ಟ್ರದ ಈರುಳ್ಳಿ ಹೆಚ್ಚಾಗಿ ಬರುತ್ತಿರುವ ಕಾರಣ ದರ ಸಮತೋಲನ ಕಾಯ್ದುಕೊಂಡಿದೆ ಎನ್ನಬಹುದು.
-ಬಿ. ರವಿಶಂಕರ್, ಯಶವಂತಪುರ ಎಪಿಎಂಸಿ ಈರುಳ್ಳಿ ವರ್ತಕರ ಸಂಘ ಕಾರ್ಯದರ್ಶಿ