ವಿಧಾನಸೌಧ ಮುಂಭಾಗದಲ್ಲಿ ಕೆಂಪೇಗೌಡರ ಪ್ರತಿಮೆ ಅನಾವರಣ: ಸಚಿವ ಅಶೋಕ್
ವಿಧಾನಸೌಧದ ಮುಂಭಾಗದಲ್ಲಿ 2023ರ ಫೆಬ್ರವರಿಯಲ್ಲಿ ಕೆಂಪೇಗೌಡರ ಪ್ರತಿಮೆ ಅನಾವರಣ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.
ಬೆಂಗಳೂರು (ನ.09): ವಿಧಾನಸೌಧದ ಮುಂಭಾಗದಲ್ಲಿ 2023ರ ಫೆಬ್ರವರಿಯಲ್ಲಿ ಕೆಂಪೇಗೌಡರ ಪ್ರತಿಮೆ ಅನಾವರಣ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು. ನಗರದ ಪುಟ್ಟಣ್ಣ ಚೆಟ್ಟಿಪುರಭವನದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿಯಿಂದ ಮಂಗಳವಾರ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನಾವರಣಗೊಳ್ಳುತ್ತಿರುವ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಹಾಗೂ ಕೆಂಪೇಗೌಡ ಥೀಮ್ ಪಾರ್ಕ್ ಉದ್ಘಾಟನೆ ಅಂಗವಾಗಿ ಸಂಗ್ರಹವಾದ ಮೃತ್ತಿಕೆ (ಮಣ್ಣು) ಹಾಗೂ ಕೆಂಪೇಗೌಡ ರಥಗಳಿಗೆ ಚಾಲನೆ ನೀಡಿ ಮಾತನಾಡಿ ಅವರು,
ವಿಧಾನಸೌಧ ನಿರ್ಮಾಣವಾಗಿ 75 ವರ್ಷಗಳು ಕಳೆದರೂ ವಿಧಾನಸೌಧದ ಮುಂದೆ ಕೆಂಪೇಗೌಡರ ಪ್ರತಿಮೆ ಸ್ಥಾಪನೆಯಾಗಿಲ್ಲ, ವಿಧಾನಸಭಾದ ಮುಂದೆ ಬೆಂಗಳೂರು ನಗರ ಕಟ್ಟಿದ ಕೆಂಪೇಗೌಡರ ಪ್ರತಿಮೆ ಇಲ್ಲದಿರುವುದು ಬೆಂಗಳೂರಿಗೆ ಅರ್ಥವಿಲ್ಲದಂತಾಗಿದೆ. ಮುಂಬರುವ ಫೆಬ್ರವರಿಯಲ್ಲಿ ಕೆಂಪೇಗೌಡರ ಪ್ರತಿಮೆ ಅನಾವರಣ ಮಾಡಲಾಗುತ್ತದೆ ಎಂದರು. ನ.11ರಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಂದೆ ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಯುತ್ತಿದ್ದು, ನಾಡಿಗೆ ಮಹಾ ಪುರುಷನನ್ನು ನೆನಪು ಮಾಡುವಂತಹ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದರು.
ಸಿದ್ದು ಕ್ಷೇತ್ರ ಬಾದಾಮಿಯಲ್ಲಿ ಡಿಕೆಶಿ ರಹಸ್ಯ ಸಂಚಾರ?
ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಬಿ.ಎನ್.ಬಚ್ಚೇಗೌಡ, ವಿಶ್ವ ಒಕ್ಕಗರ ಮಹಾಸಂಸ್ಥಾನದ ಮಠದ ಶ್ರೀ ಕುಮಾರ ಚಂದ್ರಶೇಖರನಾಥ, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ, ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಂಗಪ್ಪ ಉಪಸ್ಥಿತರಿದ್ದರು.
ಕೆಂಪೇಗೌಡರ ಪ್ರತಿಮೆ ನಿರ್ಮಿಸಿ, ನಾಡಿನ ಜನರ ಒಗ್ಗೂಡಿಸುವ ಕಾರ್ಯ: ಬೆಂಗಳೂರಿನಲ್ಲಿ ಕೆಂಪೇಗೌಡರ 108ಅಡಿ ಪ್ರತಿಮೆ ನಿರ್ಮಾಣ ಹಿನ್ನೆಲೆ ರಾಜ್ಯದ ಜನರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯನಗರ ಸಾಮ್ರಾಜ್ಯ ಹಂಪಿಯಿಂದ ಆಂಧ್ರಪ್ರದೇಶ, ತೆಲಂಗಾಣ, ಓರಿಸ್ಸಾವರೆಗೆ ವಿಸ್ತರಿಸಿತ್ತು. ಕೆಂಪೇಗೌಡರು ತಮ್ಮ ಆಳ್ವಿಕೆ ವೇಳೆ ಹಲವು ಬಾರಿ ಹಂಪಿಗೆ ಭೇಟಿ ನೀಡಿದ್ದಾರೆ ಎಂದರು. ಕನ್ನಡ ತಾಯಿ ಭುವನೇಶ್ವರಿದೇವಿಯೂ ಹಂಪಿಯಲ್ಲೇ ಇದ್ದಾಳೆ.
ಹಂಪಿಯ ಭುವನೇಶ್ವರಿ ದೇವಿಯನ್ನು ನಾಡಿನ ಅಸ್ಮಿತೆಯ ದ್ಯೋತ್ಯಕವಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಶೀಘ್ರವೇ ವಿಜಯನಗರಕ್ಕೆ ಆಗಮಿಸಿ, ಸಭೆ ಕರೆದು ಚರ್ಚಿಸುವೆ ಎಂದರು. ಹಂಪಿ ಪುಣ್ಯ ನೆಲದ ಮಣ್ಣನ್ನು ಪ್ರತಿಮೆಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಬೆಂಗಳೂರಿಗೆ ಇರುವ ಮಹತ್ವ ಜಗತ್ತಿನ ಯಾವ ನಗರಕ್ಕೂ ಇಲ್ಲ. ಪ್ರತಿಮೆ ನಿರ್ಮಾಣದ ಪುಣ್ಯ ಕೆಲಸಕ್ಕೆ ಇಲ್ಲಿನ ಮಣ್ಣು ಒಯ್ಯುತ್ತಿದ್ದೇವೆ.
ನ.14ಕ್ಕೆ ಡಿ.ಕೆ.ಶಿವಕುಮಾರ್‌ಗೆ ಮತ್ತೆ ಇ.ಡಿ.ಬುಲಾವ್
ಶ್ರೀವಿರೂಪಾಕ್ಷೇಶ್ವರನ ಆಶೀರ್ವಾದ ಪಡೆಯಲು ಬಂದಿದ್ದೇವೆ. ಪ್ರತಿಮೆ ಅನಾವರಣ ವೇಳೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಸಚಿವರು ಭಾಗಿಯಾಗಲಿದ್ದಾರೆ ಎಂದರು. ಕೋವಿಡ್ ಹಿನ್ನೆಲೆ ಹಂಪಿ ಉತ್ಸವ ಆಚರಣೆ ಮಾಡಿರಲಿಲ್ಲ. ಈ ಸಲ ಆಚರಣೆಗೆ ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಅವರಲ್ಲಿ ಚರ್ಚಿಸಲಾಗಿದೆ. ಶೀಘ್ರವೇ ಸಭೆ ಕರೆದು ಉತ್ಸವಕ್ಕೆ ತಯಾರಿ ನಡೆಸಲಾಗುವುದು ಎಂದರು.