ಮುಡಾದಲ್ಲಿ 4 ಸಾವಿರ ಕೋಟಿ ಅಕ್ರಮವಾಗಿದೆ ಎಂದಿದ್ದಕ್ಕೆ ಇಡಿ ದಾಳಿ ಆಗಿದೆ: ಆರ್. ಅಶೋಕ್!
ಜಾರಿ ನಿರ್ದೇಶನಾಲಯದ ದಾಳಿಗೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ಕಾಂಗ್ರೆಸ್ ನಾಯಕರು ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಭ್ರಷ್ಟಾಚಾರದ ಆರೋಪ ಮಾಡಿದ್ದರಿಂದಲೇ ದಾಳಿ ನಡೆದಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವರ ವಿರುದ್ಧ 1200 ಕ್ಕೂ ಹೆಚ್ಚು ನಿವೇಶನಗಳ ಹಗರಣದ ದೂರುಗಳಿವೆ.
ಬೆಂಗಳೂರು (ಅ.18): ಜಾರಿ ನಿರ್ದೇಶನಾಲಯದ (ಇಡಿ) ದಾಳಿಗೆ ಯಾವುದೇ ರಾಜಕೀಯ ಕಾರಣಗಳಿಲ್ಲ. ಸ್ವತಃ ಕಾಂಗ್ರೆಸ್ ನಾಯಕರುಗಳೇ ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರದಲ್ಲಿ 3 ರಿಂದ 4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದರಿಂದಲೇ ಇಡಿ ದಾಳಿ ನಡೆದಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾದ ಮೇಲೆ ಜಾರಿ ನಿರ್ದೇಶನಾಲಯ ದಾಳಿ ಮಾಡಿದೆ. ಸಿಎಂ ಸಿದ್ದರಾಮಯ್ಯ ಅವರದ್ದೂ ಸೇರಿದಂತೆ ಸುಮಾರು 1,200 ಕ್ಕೂ ಅಧಿಕ ನಿವೇಶನಗಳ ಹಗರಣ ನಡೆದಿದೆ ಎಂಬ ದೂರು ಬಂದಿದ್ದು, ಅದಕ್ಕಾಗಿ ದಾಳಿ ಮಾಡಲಾಗಿದೆ. 3-4 ಸಾವಿರ ಕೋಟಿ ರೂ. ಹಗರಣ ನಡೆದಿದೆ ಎಂದು ಮುಡಾ ಅಧ್ಯಕ್ಷರಾಗಿದ್ದ, ಕಾಂಗ್ರೆಸ್‌ನವರೇ ಆದ ಮರಿಗೌಡ ಪತ್ರದಲ್ಲಿ ತಿಳಿಸಿದ್ದರು. ಅದಾದ ಬಳಿಕ ಸ್ನೇಹಮಯಿ ಕೃಷ್ಣ ಇಡಿಗೆ ದೂರು ನೀಡಿದ್ದಾರೆ. ಇದರಲ್ಲಿ ರಾಜಕೀಯದ ಪ್ರಶ್ನೆ ಉದ್ಭವವೇ ಆಗುವುದಿಲ್ಲ. ಇದರಲ್ಲಿ ಬಿಜೆಪಿ ಅಥವಾ ಕೇಂದ್ರ ಸರ್ಕಾರದ ಪಾತ್ರವೇ ಇಲ್ಲ ಎಂದರು.
ಇದನ್ನೂ ಓದಿ: ಸೂಕ್ತ ದಾಖಲೆ ನೀಡದ ಮೈಸೂರು ಮುಡಾ ಕಚೇರಿ ಮೇಲೆ ಇಡಿ ದಾಳಿ
ರಾಜ್ಯದಲ್ಲಿ ಮುಡಾ ಕಚೇರಿ ಮೇಲೆ ನಡೆದ ಇಡಿ ದಾಳಿಯನ್ನು ರಾಜಕೀಯವಾಗಿ ನೋಡಬಾರದು. ನಿವೇಶನಗಳು ವಾಪಸ್ ಸಿಕ್ಕರೆ ಹಾಗೂ ಹಣ ಸಿಕ್ಕರೆ ರಾಜ್ಯ ಸರ್ಕಾರಕ್ಕೆ ಲಾಭವಾಗುತ್ತದೆ. ಸರ್ಕಾರದಲ್ಲಿ ಖಜಾನೆ ಖಾಲಿಯಾಗಿ ಸಂಬಳ ಕೊಡಲಾಗದ ಪರಿಸ್ಥಿತಿ ಇದೆ. ಇಂತಹ ಸ್ಥಿತಿಯಲ್ಲಿ ಖಜಾನೆಗೆ ಹಣ ಬಂದರೆ ಒಳ್ಳೆಯದು. ಇದನ್ನು ಕಾಂಗ್ರೆಸ್‌ನವರು ಸ್ವಾಗತಿಸಬೇಕು. ಇದನ್ನು ರಾಜಕಾರಣ ಎನ್ನಲು ಬಿಜೆಪಿ ನಾಯಕರೇನೂ ದೂರು ನೀಡಿಲ್ಲ ಎಂದರು.
ಅಕ್ರಮ ಹಣ ವರ್ಗಾವಣೆಯಾಗಿಲ್ಲ ಎಂದಾದರೆ 3-4 ಸಾವಿರ ಕೋಟಿ ರೂ. ಹಣದ ಅಕ್ರಮ ನಡೆದಿರುವುದು ಹೇಗೆ? ನಿವೇಶನ ಮಂಜೂರಾಗಿದೆ ಎಂದಮೇಲೆ ಅದರ ಹಣ ಯಾರಿಗಾದರೂ ಸಿಕ್ಕೇ ಸಿಕ್ಕಿರುತ್ತದೆ. ಅದಕ್ಕೆ ನಗದಿನಲ್ಲಿ ಹಣ ನೀಡಲಾಗಿರುತ್ತದೆ. ಅಂತಹ ನಗದು ಕಪ್ಪು ಹಣವೇ ಆಗಿರುತ್ತದೆ. ಇಡಿ ಬಗ್ಗೆ ಪ್ರಶ್ನೆ ಮಾಡುವವರು ಕೋರ್ಟ್‌ನಲ್ಲಿ ಪ್ರಶ್ನೆ ಮಾಡಬಹುದಿತ್ತು. ಆದರೆ, ಸಿಎಂ ಸಿದ್ದರಾಮಯ್ಯನವರು ಕೋರ್ಟ್‌ಗೆ ಹೋಗಲೇ ಇಲ್ಲ. ಇಡಿಗೆ ಅಧಿಕಾರ ಇಲ್ಲವೆಂದಾದರೆ ಎಸ್‌ಐಟಿ ಮಾಡಲು ಸರ್ಕಾರಕ್ಕೆ ಅಧಿಕಾರವಿದೆಯೇ ಎಂದು ಪ್ರಶ್ನಿಸಬೇಕಾಗುತ್ತದೆ ಎಂದರು.
ಇದನ್ನೂ ಓದಿ: ಕೇಂದ್ರ ಸಚಿವರ ಸಹೋದರ ಗೋಪಾಲ್ ಜೋಷಿ ತಲೆಮರೆಸಿಕೊಂಡಿದ್ದಾರೆ; ಗೃಹ ಸಚಿವ ಪರಮೇಶ್ವರ
ಇನ್ನು ರಾಜ್ಯದಲ್ಲಿ ಮುಡಾ ಹಗರಣದ ಬಗ್ಗೆ ಮುಂದಿನ ಹೋರಾಟದ ಕುರಿತು ಪಕ್ಷದ ಮಟ್ಟದಲ್ಲಿ ಚರ್ಚಿಸಲಾಗುವುದು. ಇಡಿ ದಾಳಿಯ ನಂತರ ದಾಖಲೆಗಳು ಸಿಕ್ಕ ಬಳಿ ಪರಿಶೀಲಿಸಿ ಹೋರಾಟ ಮಾಡಲಾಗುವುದು ಎಂದು ವಿಪಕ್ಷ ನಾಯಕ ಆರ್. ಅಶೋಕ್ ಮಾಹಿತಿ ನೀಡಿದರು.