Asianet Suvarna News Asianet Suvarna News

ಕೈಗಾರಿಕೆಗಳಿಗೆ ಮೆಗಾ ಆಫರ್‌: ಸ್ಥಾಪನೆಗೆ ಅನುಮತಿ ಬೇಡ

ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಇರುವ ನಿಯಮಗಳನ್ನು ಸರಳೀಕರಣಗೊಳಿಸಿ ಕ್ರಾಂತಿಕಾರಕ ಬದಲಾವಣೆ ಮಾಡುವ ನಿಟ್ಟಿನಲ್ಲಿ ‘ಕರ್ನಾಟಕ ರಾಜ್ಯ ಕೈಗಾರಿಕೆಗಳ (ಸೌಲಭ್ಯ) ಕಾಯ್ದೆ 2002’ಕ್ಕೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಸಚಿವ ಸಂಪುಟ ಮಹತ್ವದ ತೀರ್ಮಾನ ಕೈಗೊಂಡಿದೆ.

No permission needed to found a industry in Karnataka
Author
Bangalore, First Published Jun 26, 2020, 9:16 AM IST

ಬೆಂಗಳೂರು(ಜೂ.26): ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಇರುವ ನಿಯಮಗಳನ್ನು ಸರಳೀಕರಣಗೊಳಿಸಿ ಕ್ರಾಂತಿಕಾರಕ ಬದಲಾವಣೆ ಮಾಡುವ ನಿಟ್ಟಿನಲ್ಲಿ ‘ಕರ್ನಾಟಕ ರಾಜ್ಯ ಕೈಗಾರಿಕೆಗಳ (ಸೌಲಭ್ಯ) ಕಾಯ್ದೆ 2002’ಕ್ಕೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಸಚಿವ ಸಂಪುಟ ಮಹತ್ವದ ತೀರ್ಮಾನ ಕೈಗೊಂಡಿದೆ.

ಕೈಗಾರಿಕೆ ಸ್ಥಾಪನೆ ಮಾಡಲು ಭೂ ಪರಿವರ್ತನೆ, ಬಿಲ್ಡಿಂಗ್‌ ಪ್ಲ್ಯಾನ್‌ ಸೇರಿದಂತೆ ಇತರೆ ಕಾರ್ಯಗಳಿಗಾಗಿ ವಿವಿಧ ಇಲಾಖೆಗಳಿಂದ ಅನುಮತಿ ಸಿಗುವವರೆಗೆ ಕಾಯಬೇಕಾದ ಅಗತ್ಯ ಇಲ್ಲ. ರಾಜ್ಯ ಮತ್ತು ಜಿಲ್ಲಾ ಸಮಿತಿಗಳಿಂದ ಅನುಮತಿ ದೊರಕಿದ ತಕ್ಷಣ ಕೈಗಾರಿಕೆ ಸ್ಥಾಪನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬಹುದು. ಮೂರು ವರ್ಷದ ಅವಧಿಯಲ್ಲಿ ವಿವಿಧ ಇಲಾಖೆಗಳ ಅನುಮತಿ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಕೈಗಾರಿಕೆ ಸಚಿವ ಜಗದೀಶ್‌ ಶೆಟ್ಟರ್‌ ತಿಳಿಸಿದ್ದಾರೆ.

ಕುಟುಂಬ ಹಿತಾಸಕ್ತಿಗೆ ದೇಶ ಪಣಕ್ಕಿಟ್ಟಿದ್ದರು: ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ

ವಿಧಾನಸೌಧದಲ್ಲಿ ಗುರುವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಇರುವ ನಿಯಮಗಳನ್ನು ಸರಳೀಕರಣಗೊಳಿಸುವ ಸಂಬಂಧ ರಾಜ್ಯ ಕೈಗಾರಿಕೆಗಳ (ಸೌಲಭ್ಯ) ಕಾಯ್ದೆಗೆ ತಿದ್ದುಪಡಿ ಮಾಡಲು ನಿರ್ಧರಿಸಲಾಗಿದೆ. ಸುಗ್ರೀವಾಜ್ಞೆ ಮೂಲಕ ಕಾಯ್ದೆಯನ್ನು ಜಾರಿಗೊಳಿಸಲಾಗುವುದು. ಕೈಗಾರಿಕೆಗಳು ಸ್ಥಾಪನೆಯಾಗಲು ತಕ್ಷಣ ಅನುಮತಿ ಸಿಗಬೇಕು ಎಂಬ ಕಾರಣಕ್ಕಾಗಿ ಇದನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಸುಲಭವಾಗಿ ಕೈಗಾರಿಕೆಗಳು ಆರಂಭಗೊಳ್ಳಬೇಕು ಮತ್ತು ರಾಜ್ಯವನ್ನು ಕೈಗಾರಿಕಾ ಸ್ನೇಹಿ ಮಾಡಬೇಕು ಎನ್ನುವುದು ಸರ್ಕಾರದ ಉದ್ದೇಶ. ಕೈಗಾರಿಕೆಗಳ ಸ್ಥಾಪನೆಗೆ ಹಲವಾರು ಕ್ರಮಗಳನ್ನು ಸರಳೀಕರಿಸಲಾಗುತ್ತಿದೆ. ರಾಜ್ಯದ ಕೈಗಾರಿಕಾ ಕ್ಷೇತ್ರದಲ್ಲಿ ಸರ್ಕಾರದ ಈ ತೀರ್ಮಾನವು ಕ್ರಾಂತಿಕಾರಕವಾದ ನಿರ್ಣಯವಾಗಿದೆ. ಕೈಗಾರಿಕೋದ್ಯಮಿಗಳು ತಮ್ಮ ಯೋಜನೆಗೆ ರಾಜ್ಯದಲ್ಲಿನ ರಾಜ್ಯ, ಜಿಲ್ಲಾ ಸಮಿತಿಗಳಿಂದ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆದುಕೊಳ್ಳಬೇಕು. ಈ ಅನುಮತಿಯ ಆಧಾರದ ಮೇಲೆ ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯ ಇರುವ ಕಟ್ಟಡ ಕಾಮಗಾರಿ, ಯಂತ್ರೋಪಕರಣಗಳ ಅಳವಡಿಕೆ ಸೇರಿದಂತೆ ಇನ್ನಿತರೆ ಕೆಲಸಗಳನ್ನು ಪ್ರಾರಂಭಿಸಬಹುದು. ಮೂರು ವರ್ಷದೊಳಗೆ ಅಥವಾ ತಮ್ಮ ವಾಣಿಜ್ಯ ಉತ್ಪಾದನೆ ಮಾಡುವ ವೇಳೆಗೆ ಎಲ್ಲಾ ಇಲಾಖೆಗಳಿಂದ ಅಗತ್ಯ ಅನುಮತಿ ಪಡೆದುಕೊಳ್ಳಬೇಕು. ಅಲ್ಲದೇ, ಯಾವುದೇ ನಿಯಮಗಳನ್ನು ಉಲ್ಲಂಘನೆ ಮಾಡುವುದಿಲ್ಲ ಎಂದು ಸ್ವಯಂ ದೃಢೀಕರಣ ಮಾಡುವುದು ಕಡ್ಡಾಯವಾಗಿದೆ ಎಂದು ಶೆಟ್ಟರ್‌ ಮಾಹಿತಿ ನೀಡಿದರು.

ತುರ್ತುಸ್ಥಿತಿ ಘೋಷಣೆಗೆ 45 ವರ್ಷ: ಇಂದಿರಾಗೆ ಎಮರ್ಜೆನ್ಸಿ ಹೇರುವ ಸಲಹೆ ನೀಡಿದ್ದು ಯಾರು

ದೇಶದಲ್ಲಿ ಗುಜರಾತ್‌ ಮತ್ತು ರಾಜಸ್ಥಾನದಲ್ಲಿ ಸಣ್ಣ ಕೈಗಾರಿಕೆಗಳ ಆರಂಭಕ್ಕಾಗಿ ಈ ವ್ಯವಸ್ಥೆ ಇದೆ. ಆದರೆ, ನಮ್ಮ ರಾಜ್ಯದಲ್ಲಿ ಇನ್ನೊಂದು ಹೆಜ್ಜೆಯನ್ನು ಮುಂದಿಟ್ಟು, ಎಲ್ಲಾ ಕೈಗಾರಿಕೆಗಳ ಸ್ಥಾಪನೆಗೂ ಇದು ಅನ್ವಯವಾಗುವಂತೆ ಜಾರಿಗೊಳಿಸಲಾಗುತ್ತಿದೆ. ಕೈಗಾರಿಕೆ ಇಲಾಖೆಯು ರಾಜಸ್ಥಾನ ಮತ್ತು ಗುಜರಾತ್‌ ರಾಜ್ಯಗಳ ಮೇಲ್ಕಂಡ ಅಧಿನಿಯಮಗಳನ್ನು ಅಧ್ಯಯನ ಮಾಡಿದೆ. ವಿವಿಧ ಇಲಾಖೆಗಳೊಂದಿಗೆ ತಿದ್ದುಪಡಿಯ ಬಗ್ಗೆ ವಿಸ್ತೃತವಾಗಿ ಚರ್ಚಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಕೈಗಾರಿಕೋದ್ಯಮಿಗಳು ಉತ್ಪಾದನೆ ಮಾಡುವ ಪೂರ್ವದಲ್ಲಿ ಸಂಬಂಧಪಟ್ಟಅಗತ್ಯ ಅನುಮತಿ ಮತ್ತು ಅನುಮೋದನೆಗಳನ್ನು ಪಡೆದು ಕೈಗಾರಿಕೆಗಳನ್ನು ಪ್ರಾರಂಭಿಸುವುದು ಕಡ್ಡಾಯವಾಗಿದೆ. ಈ ನಿಯಮ ಪಾಲನೆ ಮಾಡದಿದ್ದರೆ ಕೈಗಾರಿಕೆಗಳಿಗೆ ದಂಡ ವಿಧಿಸುವ ಅವಕಾಶವನ್ನೂ ಈ ಕಾಯ್ದೆಯಲ್ಲಿ ನೀಡಲಾಗಿದೆ ಎಂದು ವಿವರಿಸಿದರು.

Follow Us:
Download App:
  • android
  • ios