ನವದೆಹಲಿ(ಜೂ.26): ಒಂದು ಕುಟುಂಬದ ಸ್ವಾರ್ಥಕ್ಕಾಗಿ ದೇಶದ ಹಿತಾಸಕ್ತಿಯನ್ನು ಪಣಕ್ಕಿಡಲಾಗಿತ್ತು. ರಾತ್ರೋ ರಾತ್ರಿ ದೇಶವನ್ನು ಜೈಲಾಗಿ ಮಾರ್ಪಡಿಸಲಾಗಿತ್ತು. ಪತ್ರಿಕೆ, ನ್ಯಾಯಾಲಯ ಹೀಗೆ ಎಲ್ಲಾ ರೀತಿಯ ಸ್ವತಂತ್ರಗಳನ್ನು ಕಸಿದುಕೊಂಡು, ಬಡವರನ್ನು ಸುಲಿಗೆ ಮಾಡಲಾಗಿತ್ತು. ತುರ್ತು ಪರಿಸ್ಥಿತಿಯ ಇಂಥ ಮಾನಸಿಕತೆ ಇನ್ನೂ ವಿರೋಧ ಪಕ್ಷದವರಲ್ಲಿದೆ ಎಂದು  ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕಾಂಗ್ರೆಸ್‌ ವಿರುದ್ದ ಮಾತಿನ ಬಾಣಗಳನ್ನು ಎಸೆದ ಪರಿಯಿದು.

ಇಂದಿರಾ ಗಾಂಧಿ ದೇಶಾದ್ಯಂತ ತುರ್ತು ಪರಿಸ್ಥಿತಿ ಹೇರಿ ಬುಧವಾರ 45 ವರ್ಷ ತುಂಬಿದ ಹಿನ್ನೆಲೆಯಲ್ಲಿ ಟ್ವಿಟರ್‌ನಲ್ಲಿ ಕಾಂಗ್ರೆಸ್‌ ಪಕ್ಷವನ್ನು ತರಾಟೆಗೆ ತಗೆದುಕೊಂಡಿರುವ ಅವರು, ಲಕ್ಷಾಂತರ ಮಂದಿಯ ಹೋರಾಟದದಿಂದಾಗಿ ತುರ್ತು ಪರಿಸ್ಥಿತಿ ಅಂತ್ಯವಾಗಿ ಪ್ರಜಾಪ್ರಭುತ್ವ ಸ್ಥಾಪಿಸಲ್ಪಟ್ಟಿತು. ಆದರೆ ಕಾಂಗ್ರೆಸ್‌ನಲ್ಲಿ ಅದು ಇಂದಿಗೂ ಹಾಗೇ ಇದೆ. ಪಕ್ಷದ ಅಪಸವ್ಯಗಳ ವಿರುದ್ಧ ಧನಿ ಎತ್ತಿದ ಕಿರಿಯರ ಬಾಯಿ ಮುಚ್ಚಿಸಲಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ.

ತುರ್ತುಸ್ಥಿತಿ ಘೋಷಣೆಗೆ 45 ವರ್ಷ: ಇಂದಿರಾಗೆ ಎಮರ್ಜೆನ್ಸಿ ಹೇರುವ ಸಲಹೆ ನೀಡಿದ್ದು ಯಾರು

ಒಂದು ಮನೆತನಕ್ಕೆ ಸೇರಿದದವರಲ್ಲದೇ ಆ ಪಕ್ಷದಲ್ಲಿ ಬೇರೆಯವರಿಗೆ ಏಕೆ ಮಾತನಾಡಲಾಗುತ್ತಿಲ್ಲ? ನಾಯಕರೇಕೆ ಕಾಂಗ್ರೆಸ್‌ನಿಂದ ಬೇಸತ್ತಿದ್ದಾರೆ? ಪಕ್ಷದಲ್ಲಿ ಇನ್ನೂ ಏಕೆ ತುರ್ತು ಪರಿಸ್ಥಿತಿಯ ಮನಸ್ಥಿತಿಗಳು ಹಾಗೇ ಇವೆ? ಈ ಪ್ರಶ್ನೆಗಳನ್ನು ಕಾಂಗ್ರೆಸ್‌ ನಾಯಕರು ತಮ್ಮನ್ನು ತಾವೇ ಕೇಳಿಕೊಳ್ಳಬೇಕು. ಇಲ್ಲದಿದ್ದರೆ ಜನರೊಂದಿಗಿನ ಅವರ ಅಗಲಿಕೆ ಇನ್ನಷ್ಟುದೊಡ್ಡದಾಗಲಿದೆ ಎಂದು ಸರಣಿ ಟ್ವೀಟ್‌ಗಳ ಮೂಲಕ ಶಾ ಕಾಂಗ್ರೆಸ್‌ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.