ರಾಜ್ಯದ ಜನರಿಗೆ ಅಗತ್ಯವಿದ್ದ ಅಕ್ಕಿ ಕೊಡುವುದಕ್ಕೆ ನಿರಾಕರಿಸಿದ ಕೇಂದ್ರದ ಬಿಜೆಪಿ ಸರ್ಕಾರವು, ಇ-ಹರಾಜು ಮೂಲಕ ಅಕ್ಕಿಯನ್ನು ಹರಾಜು ಮಾಡಲು ಮುಂದಾದರೆ ಅದನ್ನು ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
ಬೆಂಗಳೂರು (ಜು.11) : ರಾಜ್ಯದ ಜನರಿಗೆ ಅಗತ್ಯವಿದ್ದ ಅಕ್ಕಿ ಕೊಡುವುದಕ್ಕೆ ನಿರಾಕರಿಸಿದ ಕೇಂದ್ರದ ಬಿಜೆಪಿ ಸರ್ಕಾರವು, ಇ-ಹರಾಜು ಮೂಲಕ ಅಕ್ಕಿಯನ್ನು ಹರಾಜು ಮಾಡಲು ಮುಂದಾದರೆ ಅದನ್ನು ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕನ್ನಡಿಗರಿಗೆ ಅಕ್ಕಿ ಕೊಡದೆ ಡರ್ಟಿ ಪಾಲಿಟಿಕ್ಸ್ ಮಾಡಿದ್ದ ಕೇಂದ್ರದ ಅಕ್ಕಿಯನ್ನು ಖರೀದಿಸಲು ಈಗ ಯಾರೂ ಮುಂದಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಟೀಕಿಸಿದರು.
ಸೋಮವಾರ ವಿಧಾನಸೌಧದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಐದು ಕೆ.ಜಿ. ಅಕ್ಕಿ ಬದಲಿಗೆ ನೇರ ನಗದು ವರ್ಗಾವಣೆ ಮಾಡುವ ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಆಹಾರ ನಿಗಮ(ಎಫ್‌ಸಿಐ)ಕ್ಕೆ ಅಕ್ಕಿ ಕೊಡಿ ಎಂದು ಕೇಳಿದ್ದೆವು. ಪುಕ್ಕಟೆಯಾಗೇನು ಅಕ್ಕಿ ಕೊಡಿ ಎಂದು ಕೇಳಿರಲಿಲ್ಲ. ಪ್ರತಿ ಕೆ.ಜಿ.ಗೆ 34 ರು. ಮತ್ತು ಸಾಗಾಣಿಕೆ ವೆಚ್ಚ ಸೇರಿದಂತೆ 34.60 ರು. ಕೊಡಲು ನಾವು ಸಿದ್ಧರಿದ್ದೆವು. ಆದರೆ ಕನ್ನಡಿಗರಿಗೆ ಅಕ್ಕಿ ಕೊಡಲು ನಿಗಮಕ್ಕೆ ಕೇಂದ್ರದ ಬಿಜೆಪಿ ಸರ್ಕಾರ ಬಿಡಲಿಲ್ಲ. ಆದರೆ, ಈಗ ನಿಗಮವು ಇ-ಹರಾಜು ಮೂಲಕ ಅಕ್ಕಿ ಮಾರಾಟಕ್ಕೆ ಮುಂದಾಗಿದ್ದು, ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ ಎಂದರು.
5 ಕೆ.ಜಿ. ಅಕ್ಕಿ ಬದಲು 170 ರು. ನಗದು, ಹಣಭಾಗ್ಯಕ್ಕೆ ಇಂದಿನಿಂದ ಚಾಲನೆ
ಕೇಂದ್ರ ಆಹಾರ ನಿಗಮದಿಂದ ಅಕ್ಕಿ ಪಡೆಯಲು ರಾಜ್ಯ ಸರ್ಕಾರ ಸಾಕಷ್ಟುಪ್ರಯತ್ನ ನಡೆಸಿತ್ತು. ರಾಜ್ಯ ಸಚಿವ ಸಂಪುಟ ಸಭೆ ನಿರ್ಧಾರದಂತೆ ಜೂನ್ 9ರಂದು ಎಫ್‌ಸಿಐಗೆ ಅಕ್ಕಿ ಖರೀದಿಸಲು ಪತ್ರ ಬರೆದಿದ್ದೆವು. ಜೂನ್ 12ರಂದು ಎಫ್‌ಸಿಐ ಪತ್ರ ಬರೆದು ಅಕ್ಕಿಯ ಸಾಕಷ್ಟುದಾಸ್ತಾನು ಇದೆ. ನೀವು ಕೇಳಿದಷ್ಟುಅಕ್ಕಿ ಕೊಡುತ್ತೇವೆ ಎಂದಿತ್ತು. ನಮಗೆ 2.29 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಅಗತ್ಯವಿತ್ತು. ಅಲ್ಲದೇ ಪತ್ರದ ಜೊತೆಗೆ ಖುದ್ದಾಗಿ ಎಫ್‌ಸಿಐ ಡೆಪ್ಯೂಟಿ ಜನರಲ್ ಮ್ಯಾನೇಜರ್ ಜೊತೆಗೂ ಮಾತನಾಡಿದ್ದೆ. 7 ಲಕ್ಷ ಮೆಟ್ರಿಕ್ ಟನ್ ಅಕ್ಕಿ ದಾಸ್ತಾನು ಇದೆ. ದೇಶದಲ್ಲಿರುವ ನಮ್ಮ ಗೋದಾಮುಗಳಲ್ಲಿ 235 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಇದ್ದು, ಅಗತ್ಯವಿದ್ದಷ್ಟುಕೊಡುತ್ತೇವೆ ಎಂದಿದ್ದರು ಎಂದು ವಿವರಿಸಿದರು.
ಎಫ್‌ಐಸಿ ಹೇಳಿದ್ದನ್ನು ನಾವು ನಂಬಿದ್ದೆವು. ಈ ವಿಷಯ ಗೊತ್ತಾದ ಕೂಡಲೇ ಕೇಂದ್ರ ಸರ್ಕಾರ ಎಫ್‌ಸಿಐ ವ್ಯವಸ್ಥಾಪಕ ನಿರ್ದೇಶಕ(ಎಂಡಿ), ಚೇರ್‌ಮನ್‌ಗೆ ಪತ್ರ ಬರೆದು ರಾಜ್ಯಕ್ಕೆ ಅಕ್ಕಿ ಕೊಡದಂತೆ ಸೂಚಿದ್ದರಿಂದ, ಎಫ್‌ಸಿಐ ಜೂನ್ 14ರಂದು ಪತ್ರ ಬರೆದು ಅಕ್ಕಿ ಕೊಡಲು ಸಾಧ್ಯವಿಲ್ಲವೆಂದು ನಿರಾಕರಿಸಿತು. ಇದನ್ನು ಕೇಂದ್ರ ಸರ್ಕಾರದ ಡರ್ಟಿ ಪಾಲಿಟಿಕ್ಸ್ ಎನ್ನಬೇಕಾ? ರಾಜಕೀಯ ದ್ವೇಷ ಎಂದು ಕರೆಯಬೇಕಾ? ಬಡವರ ವಿರೋಧಿ ಕ್ರಮವೆಂದು ಕರೆಯಬೇಕಾ? ಏನೆಂದು ಕರೆಯಬೇಕು. ಬಡವರಿಗೆ ದ್ರೋಹ ಮಾಡುವಂತ ಕೆಲಸ ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆನಂತರ ಪಂಜಾಬ್ ಸರ್ಕಾರ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಅಕ್ಕಿ ಕೊಡುತ್ತೇವೆ ಎಂದು ಹೇಳಿತು. ಛತ್ತೀಸ್‌ಗಢ ಒಂದು ತಿಂಗಳಿಗೆ ಮಾತ್ರ 1.50 ಲಕ್ಷ ಮೆಟ್ರಿಕ್ ಟನ್ ಕೊಡುತ್ತೇವೆ ಎಂದಿತು. ತೆಲಂಗಾಣ ಒಂದು ದಿನ ಕೊಡಲು ಸಾಧ್ಯವಿಲ್ಲ, ಎಂದರೆ ಮತ್ತೊಂದು ದಿನ ಬೇಕಾದರೆ ಕೇವಲ ಭತ್ತ ಕೊಡುತ್ತೇವೆ ಎಂದರು. ಆಂಧ್ರ ಪ್ರದೇಶ ಸರ್ಕಾರ ಅಕ್ಕಿ ಇಲ್ಲ ಎಂದಿತು. ಇಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಕೇಂದ್ರದ ಏಜೆನ್ಸಿಗಳಿಂದ ಕೊಟೇಷನ್ ಕರೆದಾಗ ದರ ಜಾಸ್ತಿ ಕೇಳಿದರು. ಈ ನಡುವೆ ನಾವು ಕೊಟ್ಟಮಾತನ್ನುಉಳಿಸಿಕೊಳ್ಳಲೇಬೇಕಾದ ಪರಿಸ್ಥಿತಿಯಿಂದ ಸದ್ಯಕ್ಕೆ ಐದು ಕೆ.ಜಿ. ಅಕ್ಕಿ ಬದಲಿಗೆ ಹಣ ಪಾವತಿ ಮಾಡಲು ತೀರ್ಮಾನ ಕೈಗೊಂಡೆವು ಎಂದು ಹೇಳಿದರು.
ದುಡ್ಡಿನ ಭಾಗ್ಯ: ಅಕ್ಕಿ ಬದಲು ಹಣ ನೀಡಿಕೆಗೆ ನಾಳೆ ಚಾಲನೆ
ರಾಜಕೀಯ ದ್ವೇಷ, ಬಡವರ ವಿರೋಧಿ ಕ್ರಮ
ನಾವು ಎಫ್‌ಸಿಐ ಬಳಿ ಅಕ್ಕಿ ಕೇಳಿದ ವಿಷಯ ಗೊತ್ತಾಗುತ್ತಿದ್ದಂತೆ ಕೇಂದ್ರ ಸರ್ಕಾರ ಎಫ್‌ಸಿಐ ಚೇರ್‌ಮನ್‌ಗೆ ಪತ್ರ ಬರೆದು ರಾಜ್ಯಕ್ಕೆ ಅಕ್ಕಿ ಕೊಡದಂತೆ ಸೂಚಿಸಿತು. ಇದನ್ನು ಕೇಂದ್ರ ಸರ್ಕಾರದ ಡರ್ಟಿ ಪಾಲಿಟಿಕ್ಸ್ ಎನ್ನಬೇಕಾ? ರಾಜಕೀಯ ದ್ವೇಷ ಎಂದು ಕರೆಯಬೇಕಾ? ಬಡವರ ವಿರೋಧಿ ಕ್ರಮ ಎನ್ನಬೇಕಾ?
- ಸಿದ್ದರಾಮಯ್ಯ ಮುಖ್ಯಮಂತ್ರಿ
