ದೂರು ಸ್ವೀಕಾರಕ್ಕೆ ಪೊಲೀಸರು ಹಿಂದೇಟು ಹಾಕುತ್ತಿರುವ ಆರೋಪ ಕೇಳಿಬಂದ ಬೆನ್ನಲ್ಲೇ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಜನಸ್ನೇಹಿ ವ್ಯವಸ್ಥೆ ಜಾರಿಗೆ ದಿಟ್ಟ ಕ್ರಮ. ಇನ್ನು ದೂರು ಕೊಡಲು ಪೊಲೀಸ್ ಠಾಣೆಗೆ ಹೋಗಬೇಕಿಲ್ಲ, ನೀವಿರುವಲ್ಲಿಂದಲೇ ಆನ್‌ಲೈನ್ ಮೂಲಕ ಪೊಲೀಸರಿಗೆ ದೂರು ನೀಡಿ ಸ್ವೀಕೃತಿ ಪಡೆಯಬಹುದಾಗಿದೆ. 

------

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
  • ಗಿರೀಶ್ ಮಾದೇನಹಳ್ಳಿ

ಬೆಂಗಳೂರು (ಜು.1): ಮನೆ ಕಳ್ಳತನ, ಸುಲಿಗೆ, ದರೋಡೆ ಹಾಗೂ ಜೀವ ಬೆದರಿಕೆ... ಹೀಗೆ ಅಪರಾಧ ಕೃತ್ಯಕ್ಕೊಳಗಾಗಿ ಪೊಲೀಸ್ ಠಾಣೆಗೆ ಹೋದರೆ ದೂರು ಸ್ವೀಕರಿಸುತ್ತಾರೋ, ಇಲ್ಲವೋ ಎಂಬ ಯೋಚನೆ ಬಿಟ್ಟು ಇನ್ನು ಮುಂದೆ ನೀವು ಕುಳಿತಲ್ಲೇ ಪೊಲೀಸರಿಗೆ ದೂರು ಸಲ್ಲಿಸಬಹುದು!

ಇಂಥದ್ದೊಂದು ವಿನೂತನ ವ್ಯವಸ್ಥೆ ಜಾರಿಗೊಳಿಸಲು ರಾಜ್ಯ ಗೃಹ ಇಲಾಖೆ ಮುಂದಾಗಿದೆ.

ಆನ್‌ಲೈನ್‌ ಮೂಲಕ ದೂರು ಸ್ವೀಕರಿಸಿ ‘ಶೂನ್ಯ ಎಫ್‌ಐಆರ್‌ (ಜೀರೋ)’ ದಾಖಲಿಸುವಂತಹ ವ್ಯವಸ್ಥೆ ಪರಿಚಯಿಸಲು ಹಿರಿಯ ಅಧಿಕಾರಿಗಳಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದ್ದು, ಈ ಸಂಬಂಧ ಇಲಾಖಾ ಹಂತದಲ್ಲಿ ಸಿದ್ಧತೆಗಳು ಪ್ರಾರಂಭಗೊಂಡಿವೆ.

ತನ್ಮೂಲಕ ನಾಗರಿಕರಿಗೆ ದೂರು ದಾಖಲಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸುವುದು, ಪ್ರತಿ ದೂರಿನ ದಾಖಲಾತಿಯಲ್ಲಿ ಪೊಲೀಸರ ಉತ್ತರಾದಾಯಿತ್ವ ಖಚಿತತೆ ಹಾಗೂ ದೂರು ಸ್ವೀಕಾರ ಹಂತದಲ್ಲೇ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದು ಇಲಾಖೆ ಸದುದ್ದೇಶವಾಗಿದೆ. ಈ ವ್ಯವಸ್ಥೆ ಜಾರಿಯ ಸಾಧಕ-ಬಾಧಕಗಳ ಕುರಿತು ಚಿಂತನ- ಮಂಥನ ನಡೆದಿದೆ.

ಯಾಕೆ ಹೀಗೆ ವ್ಯವಸ್ಥೆ?:

ಅಪರಾಧ ಕೃತ್ಯಗಳ ಸಂಬಂಧ ಸಂತ್ರಸ್ತರ ದೂರು ಆಧರಿಸಿ ಪ್ರಥಮ ವರ್ತಮಾನ ವರದಿ (ಎಫ್‌ಐಆರ್‌) ಅನ್ನು ಪೊಲೀಸರು ದಾಖಲಿಸುತ್ತಾರೆ. ನಂತರ ಆ ಕೃತ್ಯಕ್ಕೆ ಸಂಬಂಧಿಸಿದ ತನಿಖೆ ಆರಂಭವಾಗುತ್ತದೆ. ಆದರೆ ಠಾಣೆಗಳಿಗೆ ಜನ ತೆರಳಿದರೆ ದೂರು ಸ್ವೀಕರಿಸಲು ಪೊಲೀಸರು ಹಿಂದೇಟು ಹಾಕುತ್ತಾರೆ, ಇಂತಿಷ್ಟು ಹಣ ಪಾವತಿಸಿದರೆ ಮಾತ್ರ ಎಫ್‌ಐಆರ್ ದಾಖಲಾಗುತ್ತದೆ, ಅದರಲ್ಲೂ ಹಣವಂತರಿಗೆ ವಿಶೇಷ ಆತಿಥ್ಯ ಇದೆ ಎಂಬ ಆರೋಪಗಳಿವೆ. ಈ ಹಿನ್ನೆಲೆಯಲ್ಲಿ ದೂರು ಸ್ವೀಕಾರ ವ್ಯವಸ್ಥೆಯನ್ನು ‘ಜನ ಸ್ನೇಹಿ’ಗೊಳಿಸಲು ಹಾಗೂ ಭ್ರಷ್ಟಾಚಾರ ಮುಕ್ತವಾಗಿಸುವ ನಿಟ್ಟಿನಲ್ಲಿ ಹೊಸ ಹೆಜ್ಜೆಯಿಡಲು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮುಂದಾಗಿದ್ದಾರೆ. ಇದಕ್ಕೆ ಅಗತ್ಯ ರೂಪರೇಷೆ ಸಿದ್ಧಪಡಿಸಲು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ. ಸಲೀಂ ತಯಾರಿ ನಡೆಸಿದ್ದಾರೆ. ಈ ಸಂಬಂಧ ರಾಜ್ಯ ಪೊಲೀಸ್ ಕಂಪ್ಯೂಟರ್ ವಿಭಾಗದ (ಪಿಸಿಡಬ್ಲ್ಯು) ಐಜಿಪಿ ಲಾಭೂರಾಮ್ ಅವರೊಂದಿಗೆ ಡಿಜಿಪಿ ಸಮಾಲೋಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಹೇಗೆ ದೂರು ದಾಖಲು?

ಪ್ರಸ್ತುತ ಪರ್ಸ್‌, ಎಟಿಎಂ ಕಾರ್ಡ್‌, ಕ್ರೆಡಿಟ್ ಕಾರ್ಡ್‌, ದಾಖಲೆಗಳು ಹಾಗೂ ಮೊಬೈಲ್ ಕಳವು ಹೀಗೆ ಕೆಲ ಸಣ್ಣಪುಟ್ಟ ಅಪರಾಧ ಕೃತ್ಯ ಸಂಬಂಧ ಆನ್‌ಲೈನ್‌ ಮೂಲಕ ದೂರು ದಾಖಲಿಸಿ ಅದಕ್ಕೆ ಪ್ರತಿಯಾಗಿ ಸ್ವೀಕೃತಿ ಪತ್ರ ಪಡೆಯುವ ವ್ಯವಸ್ಥೆ ಇದೆ. ಈ ಬಗ್ಗೆ ಕರ್ನಾಟಕ ಪೊಲೀಸ್ ವೆಬ್‌ಸೈಟ್‌ (ಕೆಎಸ್‌ಪಿ) ಅಥವಾ ಆ್ಯಪ್‌ನಲ್ಲಿ ಇ-ಲಾಸ್‌ ದೂರು ದಾಖಲಿಸಿದರೆ ತಕ್ಷಣ ಸ್ವೀಕೃತಿ ಪಡೆಯಬಹುದು. ಆದರೆ ಈ ಬಗ್ಗೆ ಎಫ್‌ಐಆರ್ ದಾಖಲಾಗುವುದಿಲ್ಲ.

ಇನ್ನು ಮಹಿಳೆ ಮತ್ತು ಮಕ್ಕಳ ವಿರುದ್ಧ ಲೈಂಗಿಕ ಶೋಷಣೆ ಕುರಿತು ಆನ್‌ಲೈನ್‌ ಮೂಲಕ ಮಾಹಿತಿ ನೀಡಬಹುದು. ಈ ವ್ಯವಸ್ಥೆಯನ್ನು ಮತ್ತಷ್ಟು ವಿಸ್ತರಿಸಲು ಯೋಚಿಸಲಾಗುತ್ತದೆ. ಅಂದರೆ ಕೊಲೆ ಹಾಗೂ ಅತ್ಯಾ೧ಚಾರ ಸೇರಿ ಗಂಭೀರ ಸ್ವರೂಪದ ಕೃತ್ಯಗಳನ್ನು ಹೊರತುಪಡಿಸಿ ಮನೆ ಕಳವು, ಸುಲಿಗೆ ಸೇರಿ ಇತರೆ ಕೃತ್ಯಗಳ ಬಗ್ಗೆ ಆನ್‌ಲೈನ್‌ ಮೂಲಕ ದೂರು ಸಲ್ಲಿಸಬಹುದು. ಅಂತೆಯೇ ಕೆಎಸ್‌ಪಿ ವೆಬ್‌ಸೈಟ್ ಅಥವಾ ಆ್ಯಪ್‌ನಲ್ಲೇ ಕುಳಿತಲ್ಲೇ ಜನ ದೂರು ದಾಖಲಿಸಬಹುದು. ಈ ಬಗ್ಗೆ ಸಂಬಂಧಪಟ್ಟ ಠಾಣಾ ಪೊಲೀಸರು, ತಕ್ಷಣ ಆ ದೂರಿನ ಮೇರೆಗೆ ಕಾನೂನು ಕ್ರಮ ಜರುಗಿಸಬೇಕು. ಆಗ ದೂರು ಸ್ವೀಕರಿಸಲು ಪೊಲೀಸರು ನಿರಾಕರಿಸುವಂತಿಲ್ಲ. ಪ್ರತಿಯೊಂದು ದೂರಿಗೂ ಪೊಲೀಸರು ಸ್ಪಂದಿಸಬೇಕಾಗುತ್ತದೆ. ಆ ದೂರಿನ ಮೇಲೆ ಜರುಗಿಸಿದ ಕ್ರಮದ ಕುರಿತು ದೂರು ಠಾಣಾ ಡೈರಿಯಲ್ಲಿ ನಮೂದಿಸಬೇಕಾಗುತ್ತದೆ. ಆಗ ದೂರಿಗೆ ಪೊಲೀಸರು ಉತ್ತರಾದಾಯಿಗಳಾಗಿರುತ್ತಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜನಸ್ನೇಹಿ ಕ್ರಮ

ಅಪರಾಧ ಕೃತ್ಯಗಳ ಸಂಬಂಧ ದೂರು ಸಲ್ಲಿಕೆ ಪ್ರಕ್ರಿಯೆನ್ನು ‘ಜನ ಸ್ನೇಹಿ’ಗೊಳಿಸಲಾಗುತ್ತದೆ. ಆನ್‌ಲೈನ್‌ ದೂರು ಸ್ವೀಕಾರ ವ್ಯವಸ್ಥೆ ಬಗ್ಗೆ ಪ್ರಸ್ತಾಪವಾಗಿದೆ. ಯಾವ ಸ್ವರೂಪದ ಕೃತ್ಯಗಳ ಬಗ್ಗೆ ದೂರು ಪೊಲೀಸರು ದೂರು ಸ್ವೀಕರಿಸಬಹುದು, ಅದಕ್ಕೆ ಕಾನೂನಿನಲ್ಲಿರುವ ಅವಕಾಶಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ.

-ಡಾ.ಎಂ.ಎ.ಸಲೀಂ, ರಾಜ್ಯ ಪೊಲೀಸ್ ಮಹಾನಿರ್ದೇಶಕರು