ಬೆಂಗಳೂರು ಕೆಂಪೆಗೌಡ ವಿಮಾನ ನಿಲ್ದಾಣದಲ್ಲಿ ಇನ್ನುಮುಂದೆ ಪ್ರಯಾಣಿಕರು ತಮ್ಮ ಲಗೇಜ್ ಗಳ ಸ್ಕ್ಯಾನ್ ಗಾಗಿ ಕ್ಯೂ ನಿಲ್ಲಬೇಕಿಲ್ಲ.

ಬೆಂಗಳೂರು : ತಮ್ಮ ಬ್ಯಾಗ್‌ಗಳನ್ನು ತಪಾಸಣೆ ಮಾಡಿಸುವುದಕ್ಕಾಗಿ ಪ್ರಯಾಣಿಕರು ಅನುಭವಿಸುವ ಕಿರಿಕಿರಿ ತಪ್ಪಿಸುವುದಕ್ಕಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ (ಕೆಇಎ) ನಿಲ್ದಾಣದಲ್ಲಿ ‘ಸೆಲ್‌್ಫ ಬ್ಯಾಗ್‌ ಡ್ರಾಪ್‌ ಸಿಸ್ಟಂ’ ಅಳವಡಿಸಿದೆ.

ಈ ವ್ಯವಸ್ಥೆಯನ್ನು ಅಳವಡಿಸುತ್ತಿರುವ ದೇಶದ ಮೊದಲ ವಿಮಾನ ನಿಲ್ದಾಣವಾಗಿದೆ. ಇನ್ನು ಮುಂದೆ ಪ್ರಯಾಣಿಕರು ತಮ್ಮ ಬ್ಯಾಗ್‌ಗಳ ತಪಾಸಣೆಗಾಗಿ ಸರತಿ ಸಾಲಿನಲ್ಲಿ ನಿಲ್ಲುವ ಕಿರಿಕಿರಿ ಅನುಭವಿಸುವಂತಿಲ್ಲ. ವಿಮಾನ ನಿಲ್ದಾಣದಲ್ಲಿ 16 ಸ್ವಯಂಚಾಲಿತ ಮಷಿನ್‌ಗಳನ್ನು ಅಳವಡಿಸಲಾಗಿದ್ದು, ಕೇವಲ 45 ಸೆಕೆಂಡ್‌ಗಳಲ್ಲಿ ಪ್ರಯಾಣಿಕರು ತಮ್ಮ ಬ್ಯಾಗ್‌ಗಳನ್ನು ಚೆಕ್‌ಇನ್‌ ಮಾಡಬಹುದು. ಇದರಿಂದಾಗಿ ನಿಲ್ದಾಣದಲ್ಲಿ ಪ್ರಯಾಣಿಕರ ಸಮಯ ವ್ಯರ್ಥವಾಗುವುದು ತಪ್ಪಲಿದೆ.

ಮೆಟರ್ನಾ ಐಪಿಎಸ್‌ ಕಂಪನಿ ಈ ವ್ಯವಸ್ಥೆಯನ್ನು ಅಳವಡಿಸಿದ್ದು, ಮೊದಲ ಹಂತದಲ್ಲಿ ಕೇವಲ ಏರ್‌ ಏಷ್ಯಾ ಹಾಗೂ ಸ್ಪೈಸ್‌ ಜೆಟ್‌ ಪ್ರಯಾಣಿಕರಿಗೆ ಈ ಸೌಲಭ್ಯ ದೊರೆಯಲಿದೆ. ಮುಂದಿನ ದಿನಗಳಲ್ಲಿ ಪ್ರತಿಯೊಂದು ಏರ್‌ಲೈನ್ಸ್‌ ಪ್ರಯಾಣಿಕರಿಗೂ ಈ ವ್ಯವಸ್ಥೆ ಜಾರಿಯಾಗಲಿದೆ ಎಂದು ಬಿಐಎಎಲ್‌ ತಿಳಿಸಿದೆ.

ಬ್ಯಾಗ್‌ ಸ್ಕ್ಯಾನ್‌: ವಿಮಾನ ನಿಲ್ದಾಣಕ್ಕೆ ಪ್ರವೇಶಿಸಿದ ಪ್ರಯಾಣಿಕ ‘ಸೆಲ್‌್ಫ ಚೆಕ್‌ ಇನ್‌ ಕಿಯಾಸ್ಕ್‌’ನಲ್ಲಿ ಬೋರ್ಡಿಂಗ್‌ ಪಾಸ್‌ ಹಾಗೂ ಬ್ಯಾಗ್‌ ಟ್ಯಾಗ್‌ ಮುದ್ರಿಸಿಕೊಳ್ಳಬೇಕು. ಇದಕ್ಕಾಗಿ ನಿಲ್ದಾಣದಲ್ಲಿ 32 ಹೆಚ್ಚುವರಿ ‘ಸೆಲ್ಫ್ ಚೆಕ್‌ ಇನ್‌ ಕಿಯಾಸ್ಕ್‌’ಗಳನ್ನು ಬಿಐಎಎಲ್‌ ಅಳವಡಿಸಿದೆ. ನಂತರ ‘ಸೆಲ್‌್ಫ ಬ್ಯಾಗ್‌ ಡ್ರಾಪ್‌ ಮಷಿನ್‌’ ಬಳಿಗೆ ತೆರಳಿ ಬೋರ್ಡಿಂಗ್‌ ಪಾಸ್‌ ಸ್ಕಾ್ಯನ್‌ ಮಾಡಿಕೊಳ್ಳಬೇಕು. ನಂತರ ಚೆಕ್‌ಇನ್‌ ಮಾಡುವ ಬ್ಯಾಗ್‌ಗಳನ್ನು ಯಂತ್ರದೊಳಗೆ ಇರಿಸಿದರೆ ಸ್ವಯಂಚಾಲಿತವಾಗಿ ಯಂತ್ರ ಬ್ಯಾಗ್‌ ಗಾತ್ರ ಪರೀಕ್ಷಿಸಿ, ಬ್ಯಾಗ್‌ ಒಳಗಿರುವ ವಸ್ತುಗಳನ್ನೂ ಸ್ಕಾ್ಯನ್‌ ಮಾಡಲಿದೆ ಎಂದು ಬಿಐಎಎಲ್‌ ಮುಖ್ಯ ಕಾರ್ಯಾಚರಣೆ ಅಧಿಕಾರಿ ಜಾವೇದ್‌ ಮಲಿಕ್‌ ತಿಳಿಸಿದ್ದಾರೆ.