ಬೆಂಗಳೂರು(ಸೆ.25): ಕೊರೋನಾ ಸೋಂಕು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತಡೆಯಲು ಮತ್ತೊಮ್ಮೆ ರಾಜ್ಯದಲ್ಲಿ ಲಾಕ್‌ಡೌನ್‌ ಜಾರಿಯಾಗುವುದೇ ಎಂಬ ಚರ್ಚೆ ಆರಂಭವಾಗಿದೆ. ಆದರೆ ಈ ಹಿಂದಿನಂತೆ ಸಂಪೂರ್ಣ ಲಾಕ್‌ಡೌನ್‌ ಜಾರಿಯಾಗುವ ಸಾಧ್ಯತೆಗಳು ಇಲ್ಲ. ಆದರೆ ಸೋಂಕು ಹೆಚ್ಚಿರುವ ಪ್ರದೇಶಗಳಲ್ಲಿ ಮೈಕ್ರೋ ಸೀಲ್‌ಡೌನ್‌ ಮಾಡುವ ಬಗ್ಗೆ ಚಿಂತನೆ ನಡೆದಿದೆ.

"

ಕೋವಿಡ್‌ ನಿಯಂತ್ರಣ ಕುರಿತಂತೆ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಸಂಬಂಧಪಟ್ಟ ಸಚಿವರೊಂದಿಗೆ ನಡೆಸಿದ ಸಂವಾದದಲ್ಲಿ ಈ ವಿಷಯ ಸೂಕ್ಷ್ಮವಾಗಿ ಪ್ರಸ್ತಾಪವಾಗಿತ್ತು. ಕರ್ನಾಟಕದ ಸುಮಾರು 9 ಜಿಲ್ಲೆಗಳಲ್ಲಿ ಸೋಂಕಿನಿಂದಾಗಿ ಸಾವಿನ ಪ್ರಮಾಣ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಮೋದಿ ಅವರು ಸ್ಥಳೀಯವಾಗಿ ವಾರಕ್ಕೆ ಒಂದೆರಡು ದಿನಗಳ ಲಾಕ್‌ಡೌನ್‌ ಮಾಡಬಹುದೇ ಎಂಬುದನ್ನು ಪರಿಶೀಲಿಸಿ ಎಂಬ ಸಲಹೆ ನೀಡಿದ್ದರು. ಅದರ ಬೆನ್ನಲ್ಲೇ ಲಾಕ್‌ಡೌನ್‌ ಬಗ್ಗೆ ಚರ್ಚೆ ಆರಂಭವಾಗಿತ್ತು.

ಇದಕ್ಕೆ ಪೂರಕ ಎಂಬಂತೆ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್‌ನ ಕೆಲವು ಶಾಸಕರು ಕೊರೋನಾ ಸೋಂಕು ನಿಯಂತ್ರಿಸಲು ಅನಿವಾರ್ಯವಾದಲ್ಲಿ ಲಾಕ್‌ಡೌನ್‌ ಮಾಡುವುದು ಉತ್ತಮ ಎಂಬ ಧಾಟಿಯಲ್ಲಿ ಮಾತನಾಡಿದ್ದರು. ಆದರೆ, ಅದಕ್ಕೆ ಸ್ಪಷ್ಟನೆ ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌, ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌ ಜಾರಿ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದಿದ್ದಾರೆ.

ಕೊರೋನಾ ಲಾಕ್ಡೌನ್‌ಗೆ 6 ತಿಂಗಳು : ತೆರವಿನ ಬಳಿಕ ತಾರಕಕ್ಕೇರಿದ ಸೋಂಕು

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್‌, ಪ್ರಧಾನಿಗಳ ವಿಡಿಯೋ ಸಂವಾದದ ವೇಳೆ ಲಾಕ್‌ಡೌನ್‌ ವಿಚಾರ ಚರ್ಚೆಯಾಗಿಲ್ಲ. ಹೀಗಾಗಿ ರಾಜ್ಯದಲ್ಲಿ ಮತ್ತೊಮ್ಮೆ ಲಾಕ್‌ಡೌನ್‌ ಜಾರಿ ಮಾಡುವ ಪ್ರಶ್ನೆಯೇ ಎದುರಾಗಿಲ್ಲ. ಇಂತಹ ಸುದ್ದಿಗಳಿಗೆಲ್ಲ ಕಿವಿಗೊಡಬೇಡಿ ಎಂದು ಹೇಳಿದ್ದಾರೆ.

ಈ ನಡುವೆ ರಾಜ್ಯದಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರು ನೀಡಿರುವ ಮೈಕ್ರೋ ಕಂಟೇನ್ಮೈಂಟ್‌ ವಲಯಗಳಲ್ಲಿ ಸೀಲ್‌ಡೌನ್‌ ಮಾಡುವುದು ಸೇರಿದಂತೆ ಇತರ ಹಲವು ಪ್ರಮುಖ ಸಲಹೆಗಳ ಹಿನ್ನೆಲೆಯಲ್ಲಿ ಅವುಗಳ ಅನುಷ್ಠಾನ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಅವರು ಸಂಬಂಧಪಟ್ಟ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಚರ್ಚೆ ನಡೆಸಿದರು.