Asianet Suvarna News Asianet Suvarna News

ಅಂಗನವಾಡಿಗಳ ಉದ್ಧಾರಕ್ಕೆ ಸರ್ಕಾರದ ಬಳಿ ದುಡ್ಡಿಲ್ವಂತೆ: ನ್ಯಾಯಾಲಯಕ್ಕೇ ಆಶ್ಚರ್ಯ..!

* 14 ಸಾವಿರ ಕಡೆ ವಿದ್ಯುತ್‌, 13 ಸಾವಿರ ಕೇಂದ್ರಗಳಲ್ಲಿ ಶೌಚಾಲಯ ಸೌಲಭ್ಯ ಇಲ್ಲ
* 18000 ಅಂಗನವಾಡಿಗೆ ಫ್ಯಾನ್‌ ಇಲ್ಲ
* ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಲಿಖಿತ ಹೇಳಿಕೆ
 

No Money in the Government for Development of Anganawadi in Karnataka grg
Author
Bengaluru, First Published Jun 27, 2021, 7:48 AM IST

ಬೆಂಗಳೂರು(ಜೂ.27): ರಾಜ್ಯದಲ್ಲಿರುವ ಅಂಗನವಾಡಿ ಕೇಂದ್ರಗಳ ಪೈಕಿ 14 ಸಾವಿರ ಅಂಗನವಾಡಿಗಳಿಗೆ ವಿದ್ಯುತ್‌, 13 ಸಾವಿರ ಅಂಗನವಾಡಿಗಳಿಗೆ ಶೌಚಾಲಯ, 18 ಸಾವಿರ ಅಂಗನವಾಡಿ ಕೇಂದ್ರಗಳಿಗೆ ಫ್ಯಾನ್‌ ಸೌಲಭ್ಯ ಇಲ್ಲ. ಇವುಗಳಿಗೆ ಸೌಲಭ್ಯ ಕಲ್ಪಿಸಲು ಪ್ರತ್ಯೇಕ ಹಣಕಾಸಿನ ಲಭ್ಯತೆ ಇಲ್ಲ ಎಂದು ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆ ಸಂಬಂಧ ದಾಖಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ನೇತೃತ್ವದ ವಿಭಾಗೀಯ ಪೀಠಕ್ಕೆ ಸಲ್ಲಿಸಿರುವ ಲಿಖಿತ ಹೇಳಿಕೆಯಲ್ಲಿ ಸರ್ಕಾರ ಈ ವಿಷಯವನ್ನು ತಿಳಿಸಿದೆ. 

ಸರ್ಕಾರದ ಈ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್‌, ವಿದ್ಯುತ್‌ ಸಂಪರ್ಕ ಮತ್ತು ಶೌಚಾಲಯ ವ್ಯವಸ್ಥೆ ಇಲ್ಲದೆ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸಲು ಹೇಗೆ ಸಾಧ್ಯ? ಅಂಗನವಾಡಿಗಳಲ್ಲಿ ಈ ಸೌಲಭ್ಯಗಳನ್ನು ಕಲ್ಪಿಸಲು ಪ್ರತ್ಯೇಕ ಅನುದಾನ ಇಲ್ಲ ಎಂದು ತಿಳಿಸಿರುವುದು ಆಶ್ಚರ್ಯದ ಸಂಗತಿಯಾಗಿದೆ ಎಂದಿದೆ.

ಶಾಲೆಗಿಂತಲೂ ಮೊದಲೇ ಅಂಗನವಾಡಿಗಳು ಆರಂಭ? ಮಾರ್ಗಸೂಚಿ ಬಿಡುಗಡೆ

ಅಂಗನವಾಡಿ ಕೇಂದ್ರಗಳಿಗೆ ಶೌಚಾಲಯ ಮತ್ತು ವಿದ್ಯುತ್‌ ಸಂಪರ್ಕ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸುವ ಸಂಬಂಧ ನ್ಯಾಯಾಲಯಗಳು ಕಾಲಕಾಲಕ್ಕೆ ಹೊರಡಿಸಿರುವ ಆದೇಶಗಳನ್ನು ಕ್ರೋಢೀಕರಿಸಿ ಸಲ್ಲಿಸುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿದ ನ್ಯಾಯಪೀಠ, ಅವುಗಳನ್ನು ಪರಿಶೀಲಿಸಿದ ಬಳಿಕ ಸರ್ಕಾರಕ್ಕೆ ಅಗತ್ಯ ನಿರ್ದೇಶನಗಳನ್ನು ನೀಡಲಾಗುವುದು ಎಂದು ತಿಳಿಸಿ ವಿಚಾರಣೆಯನ್ನು ಜುಲೈ 2ಕ್ಕೆ ಮುಂದೂಡಿತು.

ಲಿಖಿತ ಹೇಳಿಕೆಯಲ್ಲಿ ಏನಿದೆ?:

ರಾಜ್ಯದಲ್ಲಿರುವ 65,911 ಅಂಗನವಾಡಿ ಕೇಂದ್ರಗಳ ಪೈಕಿ 50,963 ಅಂಗನವಾಡಿಗಳಲ್ಲಿ ವಿದ್ಯುತ್‌ ಸಂಪರ್ಕವಿದೆ, 14,948 ಅಂಗನವಾಡಿ ಕೇಂದ್ರಗಳಲ್ಲಿ ವಿದ್ಯುತ್‌ ಸಂಪರ್ಕ ಇಲ್ಲ. ಇವುಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಅಂದಾಜು 45.33 ಕೋಟಿ ರು. ಬೇಕು. ಅದೇ ರೀತಿ 52,221 ಅಂಗನವಾಡಿಗಳಲ್ಲಿ ಮಾತ್ರ ಶೌಚಾಲಯ ವ್ಯವಸ್ಥೆ ಇದ್ದು, 13,690 ಅಂಗನವಾಡಿಗಳಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲ. ಶೌಚಾಲಯ ಇಲ್ಲದ ಒಟ್ಟು ಅಂಗನವಾಡಿಗಳಲ್ಲಿ 3,524 ಅಂಗನವಾಡಿ ಕೇಂದ್ರಗಳು ಸರ್ಕಾರಿ ಕಟ್ಟಡಗಳಲ್ಲಿದ್ದು, ಈ ಕೇಂದ್ರಗಳಲ್ಲಿ ಶೌಚಾಲಯ ಕಟ್ಟಲು 21.19 ಕೋಟಿ ರು. ಬೇಕು. 18,974 ಅಂಗನವಾಡಿಗಳಿಗೆ ಫ್ಯಾನ್‌ ಒದಗಿಸಲು 11.27 ಕೋಟಿ ರು. ಬೇಕು ಎಂದು ಸರ್ಕಾರ ಹೇಳಿದೆ.

ರಾಜ್ಯದ ಅಂಗನವಾಡಿ ಕೇಂದ್ರಗಳ ನಿರ್ವಹಣೆಗೆ 125 ಕೋಟಿ ರು.ಗಳನ್ನು 2021-22ನೇ ಸಾಲಿನ ಆಯವ್ಯಯದಲ್ಲಿ ಮೀಸಲಿಡಲಾಗಿದೆ. ಮುಂದಿನ ಒಂದು ವರ್ಷದ ಅವಧಿಯಲ್ಲಿ 6,700 ಕೇಂದ್ರಗಳಿಗೆ ವಿದ್ಯುತ್‌ ಸಂಪರ್ಕ ಹಾಗೂ 8,300 ಕಟ್ಟಡಗಳಿಗೆ ಫ್ಯಾನ್‌ ಸೌಲಭ್ಯ ಮತ್ತು 1,700 ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯ ಕಟ್ಟಲು ಹಾಗೂ 771 ಹೊಸ ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಹಣಕಾಸು ಇಲಾಖೆ ಒಪ್ಪಿಗೆ ಸಿಕ್ಕ ಬಳಿಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ.
 

Follow Us:
Download App:
  • android
  • ios