Asianet Suvarna News Asianet Suvarna News

ಶಾಲೆಗಿಂತಲೂ ಮೊದಲೇ ಅಂಗನವಾಡಿಗಳು ಆರಂಭ? ಮಾರ್ಗಸೂಚಿ ಬಿಡುಗಡೆ

ಶಾಲೆಗಿಂತಲೂ ಮೊದಲೇ ಅಂಗನವಾಡಿಗಳು ಆರಂಭ?| ಅಂಗನವಾಡಿ ತೆರೆಯಲು ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ

Anganawadi Centres To Start Functioning Soon Guidlines Released pod
Author
Bangalore, First Published Feb 9, 2021, 7:33 AM IST

ಬೆಂಗಳೂರು(ಫೆ.09): ರಾಜ್ಯದಲ್ಲಿ ಪ್ರಾಥಮಿಕ ಶಾಲೆಗಳ ಆರಂಭಕ್ಕೂ ಮೊದಲೇ ಅಂಗನವಾಡಿ ಕೇಂದ್ರಗಳನ್ನು ತೆರೆಯಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಕೊರೋನಾ ಮಾರ್ಗಸೂಚಿ ಅಳವಡಿಸಿಕೊಂಡು ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭಿಸುವಂತೆ ಸೂಚನೆ ನೀಡಿದೆ.

ಕೊರೋನಾ ಸೋಂಕು ನಿಯಂತ್ರಿಸುವ ಉದ್ದೇಶದಿಂದ ರಾಜ್ಯದ ಅಂಗನವಾಡಿ ಕೇಂದ್ರಗಳಿಗೆ ರಜೆ ನೀಡಲಾಗಿತ್ತು. ಇದೀಗ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಲು ನಿರ್ಣಯ ಕೈಗೊಳ್ಳುವಂತೆ ಸುಪ್ರೀಂಕೋರ್ಟ್‌ ಆದೇಶ ಹೊರಡಿಸಿರುವುದರಿಂದ ರಾಜ್ಯದಲ್ಲಿಯೂ ಅಂಗನವಾಡಿ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಿದೆ. ಈ ಸಂಬಂಧ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ಈ ಸಂಬಂಧ ಇತ್ತೀಚೆಗೆ ನಡೆದ ವಿಡಿಯೋ ಸಂವಾದದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರು ಹಾಗೂ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಅಂಗನವಾಡಿ ಕೇಂದ್ರಗಳನ್ನು ಆರಂಭಿಸಲು ನಿರ್ಣಯಿಸಿದ್ದಾರೆ. ಕೂಡಲೇ ಕೊರೋನಾ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡು ಅಂಗನವಾಡಿ ಕೇಂದ್ರಗಳನ್ನು ಆರಂಭಿಸಲು ಕ್ರಮ ಕೈಗೊಳ್ಳುವಂತೆಯೂ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಮಾರ್ಗಸೂಚಿ ವಿವರ:

ಅಂಗನವಾಡಿ ಕೇಂದ್ರಗಳನ್ನು ಗ್ರಾಮ ಪಂಚಾಯಿತಿಗಳು ಸ್ಯಾನಿಟೈಸ್‌ ಮಾಡಿಸಬೇಕು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಕಡ್ಡಾಯವಾಗಿ ಆರ್‌ಟಿ-ಪಿಸಿಆರ್‌ ಕೊರೋನಾ ಪರೀಕ್ಷೆ ಮಾಡಿಸಬೇಕು. ವರದಿ ನೆಗೆಟಿವ್‌ ಬಂದಲ್ಲಿ ಮಾತ್ರ ಕೇಂದ್ರಗಳನ್ನು ಆರಂಭಿಸಬೇಕು.

ಅಂಗನವಾಡಿ ಕೇಂದ್ರಗಳ ಸುತ್ತಲಿನ ಪ್ರದೇಶಗಳು, ಕೇಂದ್ರದ ಅಡುಗೆ ಪಾತ್ರೆಗಳನ್ನು ಸ್ವಚ್ಛಗೊಳಿಸಬೇಕು. ಕೇಂದ್ರಗಳನ್ನು ಎಂದಿನಂತೆ ತೆರೆದು ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರು ಹಾಜರಿರಬೇಕು. ಅಂಗನವಾಡಿಗಳಿಗೆ ಹಾಜರಾಗಲು ಇಚ್ಛಿಸುವ ಮಕ್ಕಳ ಪೋಷಕರಿಂದ ಒಪ್ಪಿಗೆ ಪತ್ರವನ್ನು ಪಡೆಯಬೇಕು. ಕೇಂದ್ರಗಳಲ್ಲಿ ಮಕ್ಕಳಿಗೆ ಕೈ ತೊಳೆಯಲು ಸೋಪು ಇರುವಂತೆ ನೋಡಿಕೊಳ್ಳಬೇಕು. ಮಕ್ಕಳು ಬಂದಾಗ ಮತ್ತು ಮನೆಗೆ ತೆರಳುವಾಗ ಕಡ್ಡಾಯವಾಗಿ ಕೈಗಳನ್ನು ಸ್ವಚ್ಛಗೊಳಿಸಬೇಕು. ಪ್ರತಿಯೊಬ್ಬರೂ ಮಾಸ್ಕ್‌ಗಳನ್ನು ಧರಿಸುವ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು.

ಮಕ್ಕಳಲ್ಲಿ ಜ್ವರ, ಕೆಮ್ಮು, ನೆಗಡಿ, ಗಂಟಲು ನೋವು ಸೇರಿದಂತೆ ಇನ್ನಿತರ ಲಕ್ಷಣಗಳಿದ್ದಲ್ಲಿ ಹಾಜರಾಗದಂತೆ ಸೂಚಿಸಬೇಕು. ಇಂತಹ ಮಕ್ಕಳ ಚಿಕಿತ್ಸೆಗೆ ಹತ್ತಿರದ ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ತಿಳಿಸಬೇಕು. ಪ್ರಥಮ ಹಂತದಲ್ಲಿ ಪೂರಕ ಪೌಷ್ಟಿಕ ಆಹಾರಗಳನ್ನು ಮನೆಗೆ ನೀಡುವುದನ್ನು ಮುಂದುವರಿಸಬೇಕು.

ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಮೇಲ್ವಿಚಾರಕರು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆಯೂ ಸೂಚಿಸಲಾಗಿದೆ.

ಕಾರ್ಯಕರ್ತೆಯರ ವಿರೋಧ

ಅಂಗನವಾಡಿ ಕೇಂದ್ರಗಳಿಗೆ ಬರುವ ಮಕ್ಕಳಿಗೆ ಸ್ವಚ್ಛತೆ, ಸಾಮಾಜಿಕ ಅಂತರ ಮತ್ತು ಮಾಸ್ಕ್‌ ಧರಿಸುವಂತೆ ಸೂಚಿಸುವುದು ಕಷ್ಟದ ವಿಷಯವಾಗಿದೆ. ಒಂದು ವೇಳೆ ಪುಟ್ಟಮಕ್ಕಳಿಗೆ ಆರೋಗ್ಯ ಸಮಸ್ಯೆ ಉಂಟಾದರೆ ಯಾರು ಹೊಣೆ ಎಂದು ಅಂಗನವಾಡಿ ಕಾರ್ಯಕರ್ತೆಯರ ಸಂಘ ಸರ್ಕಾರವನ್ನು ಪ್ರಶ್ನಿಸಿದೆ. ಈ ಕುರಿತು ಮಾತನಾಡಿದ ಸಂಘದ ಅಧ್ಯಕ್ಷೆ ವರಲಕ್ಷ್ಮೇ, ಕೊರೋನಾ ಕಾಲದಲ್ಲಿ ಮಕ್ಕಳನ್ನು ನಿರ್ವಹಿಸುವುದು ಭಾರಿ ಕಷ್ಟದ ವಿಷಯವಾಗಿದೆ. ಈ ಕುರಿತು ಮತ್ತೊಮ್ಮೆ ಸರ್ಕಾರದ ಜೊತೆ ಚರ್ಚಿಸಿ ಬಳಿಕ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಮಕ್ಕಳಿಗೆ ಅಂಗನವಾಡಿ ಕೇಂದ್ರಗಳ ಸೌಲಭ್ಯ ಸಿಗಬೇಕು ಎಂಬ ಉದ್ದೇಶದಿಂದ ಸುಪ್ರೀಂ ಕೋರ್ಟ್‌ ಆದೇಶದ ಮೇರೆಗೆ ಸಭೆ ನಡೆಸಿ ತೀರ್ಮಾನಿಸಲಾಗಿದೆ. ಈಗಾಗಲೇ ನೆರೆ ರಾಜ್ಯಗಳು ಕೂಡ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಿದ್ದು, ರಾಜ್ಯದಲ್ಲಿಯೂ ಆರಂಭಿಸುವಂತೆ ನಿರ್ದೇಶನ ನೀಡಲಾಗಿದೆ.

- ಆರ್‌.ಎಸ್‌. ಪೆದ್ದಪ್ಪಯ್ಯ, ಆಯುಕ್ತರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

 

ಮಾರ್ಗಸೂಚಿಯಲ್ಲೇನಿದೆ?

* 3 ರಿಂದ 6 ವರ್ಷದ ಮಕ್ಕಳಿಗೆ ಬೆಳಗ್ಗೆ 9.30ರಿಂದ 12 ಗಂಟೆವರೆಗೆ ಕ್ಲಾಸ್‌

* ಕನಿಷ್ಠ 5 ಮಕ್ಕಳು ಅಂಗನವಾಡಿಗೆ ಹಾಜರಾಗುವಂತೆ ಕ್ರಮ ಕೈಗೊಳ್ಳಬೇಕು

* 20 ಮಕ್ಕಳಿದ್ದಲ್ಲಿ ಪ್ರತಿ ದಿನ 5 ಮಕ್ಕಳಂತೆ ಪಾಳಿ ಪದ್ಧತಿಯಲ್ಲಿ ಪ್ರವೇಶ ನೀಡಬೇಕು

* 10ಕ್ಕಿಂತ ಕಡಿಮೆ ಇದ್ದಲ್ಲಿ ದಿನ ಬಿಟ್ಟು ದಿನ 5 ಮಕ್ಕಳಂತೆ ಹಾಜರಾಗಲು ಸೂಚಿಸಬೇಕು

* 6 ತಿಂಗಳಿನಿಂದ 3 ವರ್ಷದ ಮಕ್ಕಳು, ಗರ್ಭಿಣಿ, ಬಾಣಂತಿಯರಿಗೆ ಪ್ರವೇಶ ನೀಡಬಾರದು

* ಕಡ್ಡಾಯವಾಗಿ ಮಕ್ಕಳ ಪೋಷಕರ ಒಪ್ಪಿಗೆ ಪತ್ರ ಪಡೆಯಬೇಕು

Follow Us:
Download App:
  • android
  • ios