ತುಮಕೂರು: ಸಾಮೂಹಿಕ ಕೇಶಮುಂಡನದಿಂದ ಹಿಂದೆ ಸರಿದ ಸಿದ್ಧಗಂಗಾ ಮಠ, ವಿದ್ಯಾರ್ಥಿಗಳಿಗೆ ಕೇವಲ ಹೇರ್‌ ಕಟಿಂಗ್‌ಗೆ ಅನುಮತಿ ನೀಡುವುದರೊಂದಿಗೆ ವಿವಾದಕ್ಕೆ ಇತಿಶ್ರೀ ಹಾಡಿದೆ. 

ಮಂಗಳವಾರ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸವಿತಾ ಸಮಾಜದ 200 ಮಂದಿ ಸಿದ್ಧಗಂಗಾ ಮಠದ 4,000 ವಿದ್ಯಾರ್ಥಿಗಳಿಗೆ ಸಾಮೂಹಿಕವಾಗಿ ಹೇರ್‌ ಕಟಿಂಗ್‌ ಮಾಡಿದರು. 

ಶ್ರೀಗಳ ಪುಣ್ಯಸ್ಮರಣೆ ಸಂದರ್ಭದಲ್ಲಿ ಮಠದ ಎಲ್ಲ ವಿದ್ಯಾರ್ಥಿಗಳಿಗೆ ಸಾಮೂಹಿಕ ಕೇಶಮುಂಡನ ಮಾಡುವುದಾಗಿ ಬೆಂಗಳೂರಿನ ಸವಿತಾ ಸಮಾಜ ಯುವ ವೇದಿಕೆ ಸಿದ್ಧಲಿಂಗ ಸ್ವಾಮೀಜಿಗೆ ಮನವಿ ಸಲ್ಲಿಸಿತ್ತು. ಶ್ರೀಗಳು ಕೂಡಾ ಒಪ್ಪಿಗೆ ನೀಡಿದ್ದರು. 

ಆದರೆ ಮಾತೆ ಮಹಾದೇವಿ ಅವರು ಸಾಮೂಹಿಕ ಕೇಶಮುಂಡನ ಲಿಂಗಾಯತ, ವೀರಶೈವ ಸಮಾಜಕ್ಕೆ ವಿರುದ್ಧವಾದದ್ದು ಎಂದು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕೇವಲ ಹೇರ್‌ಕಟ್‌ ಮಾಡಲು ಒಪ್ಪಿಗೆ ನೀಡಿದ್ದಾಗಿ ಸ್ವಾಮೀಜಿ ಸ್ಪಷ್ಟನೆ ನೀಡಿದ್ದರು. 

ಡಾ.ಶಿವಕುಮಾರ ಸ್ವಾಮೀಜಿಗಳ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಕಳೆದ ವಾರ ನಡೆಯಬೇಕಿದ್ದ ಹೇರ್‌ಕಟಿಂಗ್‌ ಅನ್ನು ಮುಂದೂಡಲಾಗಿತ್ತು. ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ 4.30ರ ತನಕ ಮಠದ ವಿದ್ಯಾರ್ಥಿಗಳಿಗೆ ಹೇರ್‌ಕಟಿಂಗ್‌ ನಡೆಯಿತು.