Karnataka Lockdown ಕರ್ನಾಟಕ ಲಾಕ್ಡೌನ್ ಆಗುತ್ತಾ? ಮೋದಿ ಸಭೆ ಬಳಿಕ ಸ್ಪಷ್ಟನೆ ಕೊಟ್ಟ ಆರೋಗ್ಯ ಸಚಿವ
* ಕರ್ನಾಟಕದಲ್ಲಿ ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಳ"
* ಕರ್ನಾಟಕದಲ್ಲಿ ಲಾಕ್‌ಡೌನ್ ಜಾರಿ ಅಗುತ್ತಾ?
* ಸ್ಪಷ್ಟನೆ ಕೊಟ್ಟ ಆರೋಗ್ಯ ಸಚಿವ ಡಾ ಕೆ ಸುಧಾಕರ್
ಬೆಂಗಳೂರು, (ಜ.14): ಕರ್ನಾಟಕದಲ್ಲೂ(Karnataka) ಕೊರೋನಾ ವೈರಸ್ (Coronavirus) ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಬಗ್ಗೆ ನಿನ್ನೆ(ಜ.13) ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತಂದಿದ್ದಾರೆ. ಸೋಂಕು ನಿಯಂತ್ರಣಕ್ಕೆ ಇನ್ನಷ್ಟು ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಮೋದಿ ಸಲಹೆ ನೀಡಿದ್ದಾರೆ. ಇದರಿಂದ ಲಾಕ್‌ಡೌನ್ ಪಕ್ಕಾ ಎಂದು ಸಾರ್ವಜನಿಕ ವಲಯದಲ್ಲಿ ಸುದ್ದಿ ಹರಿದಾಡುತ್ತಿದೆ. ಅಲ್ಲದೇ ಗೊಂದಕ್ಕೀಡಾಗಿದೆ. ಇದೀಗ ಇದಕ್ಕೆ ಸ್ವತಃ ಆರೋಗ್ಯ ಸಚಿವ ಡಾ ಕೆ ಸುಧಾಕರ್ (Minister Dr K Sudhakar) ಸ್ಪಷ್ಟನೆ ಕೊಟ್ಟಿದ್ದಾರೆ.
ಇಂದು(ಜ.14) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ಜನತೆ ಆತಂಕ ಪಡುವ ನಿಯಮಗಳನ್ನು ಜಾರಿ ಮಾಡುವುದಿಲ್ಲ. ಯಾವುದೇ ಕಾರಣಕ್ಕೂ ಸರ್ಕಾರ ಲಾಕ್‍ಡೌನ್‍ನಂತಹ ಕಠಿಣ ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಸಾರ್ವಜನಕರಲ್ಲಿ ಇದ್ದ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
Covid 19 Spike: ತಿಂಗಳಾಂತ್ಯಕ್ಕೆ ಬೆಂಗ್ಳೂರಲ್ಲಿ ಕೋವಿಡ್ ಉತ್ತುಂಗಕ್ಕೆ..!
ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಲಾಕ್‍ಡೌನ್ ಮೂಲಕ ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಜನರಿಗೆ ಆರ್ಥಿಕ ನಷ್ಟ ಉಂಟಾಗದಂತೆ ಕ್ರಮ ಕೈಗೊಳ್ಳಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೂಚಿಸಿದ್ದಾರೆ. ಹೀಗಾಗಿ ಸರ್ಕಾರದ ಮುಂದೆ ಲಾಕ್‍ಡೌನ್ ಮಾಡುವಂತಹ ಪ್ರಸ್ತಾವನೆ ಇಲ್ಲ ಎಂದು ಪುನರುಚ್ಚರಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದನೆ ಮತ್ತು ಎರಡನೆ ಅಲೆ ವೇಳೆ ಲಾಕ್‍ಡೌನ್ ಜಾರಿ ಮಾಡಿದ ಪರಿಣಾಮ ಜನರು ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದರು. ಅದರ ಅರಿವು ಕೂಡ ಸರ್ಕಾರಕ್ಕಿದೆ. ಹೀಗಾಗಿ ಲಾಕ್‍ಡೌನ್‍ನಂತಹ ನಿಯಮವಿಲ್ಲದೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗಗೊಳ್ಳುತ್ತೇವೆ. ಕೆಲವು ಕಡೆ ಟಫ್‍ರೂಲ್ಸ್ ಜಾರಿಮಾಡಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ನಾನು ಜನತೆಗೆ ಸ್ಪಷ್ಟ ಭರವಸೆ ಕೊಡುವುದೆಂದರೆ ಆತಂಕಕಾರಿಯಾಗುವ ನಿಯಮಗಳನ್ನು ಜಾರಿ ಮಾಡುವುದಿಲ್ಲ. ಲಾಕ್‍ಡೌನ್ ಪರಿಹಾರವಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ. ಈ ಹಿಂದೆ ಎರಡು ಲಾಕ್‍ಡೌನ್‍ಗಳಿಂದ ನಮಗೆ ಸಮಸ್ಯೆಯಾಗಿದೆ ಎಂಬುದನ್ನು ಒಪ್ಪಿಕೊಂಡರು.
ವಾರಾಂತ್ಯದ ಕಫ್ರ್ಯೂ ಜಾರಿ ಮಾಡಿದರೂ ಸೋಂಕು ಕಡಿಮೆಯಾಗುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ವಾರದಿಂದ ನಾವು ವೀಕೆಂಡ್ ಕಫ್ರ್ಯೂ ಜಾರಿ ಮಾಡಿದ್ದೇವೆ. ಏಳು ದಿನಕ್ಕೆ ಸೋಂಕು ಕಡಿಮೆಯಾಗುವುದಿಲ್ಲ. ಮೊದಲ ಎರಡು ಅಲೆಯಲ್ಲಿ 14 ದಿನಗಳ ಜೈನ್ ಇತ್ತು. ಆದರೆ, ಈ ಅಲೆಯಲ್ಲಿ ಸ್ವಲ್ಪ ಕಡಿಮೆ ಇದೆ. ಈ ಸೋಂಕು ಐದಾರು ಪಟ್ಟು ವೇಗವಾಗಿ ಹರಡುತ್ತದೆ. ಹೀಗಾಗಿ ಇನ್ನೂ ಸ್ವಲ್ಪ ದಿನ ಹೋದರೆ ಇದರ ಫಲಿತಾಂಶ ನಮಗೆ ಲಭ್ಯವಾಗಲಿದೆ ಎಂದರು.
ರಾಜ್ಯದಲ್ಲಿ ಕೊರೊನಾ ಇನ್ನೂ ತುತ್ತತುದಿಗೆ ಹೋಗಬಹುದೆಂದು ತಜ್ಞರೇ ಹೇಳುತ್ತಿದ್ದಾರೆ. ಫೆಬ್ರವರಿ ತಿಂಗಳ ಮೊದಲ ವಾರದಲ್ಲಿ ಈಗಿರುವ ಸಂಖ್ಯೆಗಿಂತ ಹೆಚ್ಚಾಗಬಹುದು. ಮೂರು ಮತ್ತು ನಾಲ್ಕನೆ ವಾರ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ. ಸರ್ಕಾರ ಕೂಡ ಎಲ್ಲ ತ್ವರಿತ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ವಿವರಿಸಿದರು.
ರಾಜ್ಯದಲ್ಲಿ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಶೇ.5 ರಿಂದ 6ರಷ್ಟು ಮಾತ್ರ ಸೋಂಕು ಪೀಡಿತರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ವೈದ್ಯರು, ದಾದಿಯರು ಸೋಂಕಿಗೆ ತುತ್ತಾಗುತ್ತಿದ್ದಾರೆ. ಇದು ನಮಗೆ ಆತಂಕ ಸೃಷ್ಟಿಸಿದೆ. ಹೀಗಾಗಿ ಮತ್ತಷ್ಟು ಎಚ್ಚರಿಕೆಯ ಅವಶ್ಯಕತೆ ಇದೆ ಎಂದು ಮನವಿ ಮಾಡಿದರು.
ಈ ತಿಂಗಳ ಅಂತ್ಯದವರೆಗೆ ಈಗಿರುವ ಮಾರ್ಗಸೂಚಿಗಳೇ ಮುಂದುವರಿಯಲಿವೆ. ಸಾರ್ವಜನಿಕರು ಸಹಕರಿಸಿದರೆ ಮಾತ್ರ ಕೊರೊನಾ ನಿಯಂತ್ರಣಕ್ಕೆ ಬರಲು ಸಾಧ್ಯ. ಹೀಗಾಗಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಜರ್ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಬೂಸ್ಟರ್ ಡೋಸ್ ಪಡೆಯಲು ಯಾರು ಅರ್ಹರಿದ್ದಾರೋ ಅವರೆಲ್ಲ ಸ್ವಯಂಪ್ರೇರಿತರಾಗಿ ಪಡೆಯಬೇಕು. ಎರಡನೆ ಡೋಸ್ ಪಡೆದವರು ಸಹ ತಕ್ಷಣವೇ ನಿಮಗೆ ನಿಗದಿಪಡಿಸಿರುವ ಕೇಂದ್ರಗಳಲ್ಲಿ ಲಸಿಕೆ ಹಾಕಿಸಿಕೊಳ್ಳಿ. ನಿರ್ಲಕ್ಷ್ಯ ಮಾಡಬೇಡಿ ಎಂದು ಹೇಳಿದರು.
ಒಂದೂವರೆ ತಿಂಗಳ ಕಾಲ ಸಭೆ-ಸಮಾರಂಭಗಳನ್ನು ಮುಂದೂಡಬೇಕು. ಸಮಾಧಾನಕರ ಸಂಗತಿ ಎಂದರೆ ಶೇ.5 ರಿಂದ 6ರಷ್ಟು ಮಂದಿ ಮಾತ್ರ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇಂದು ಸೋಂಕು ಹೆಚ್ಚಳವಿರುವ ಜಿಲ್ಲೆಗಳ ಜತೆ ವಚ್ರ್ಯುಯಲ್ ಮೂಲಕ ಸಭೆ ನಡೆಸುತ್ತೇವೆ ಎಂದು ಸುಧಾಕರ್ ಮಾಹಿತಿ ನೀಡಿದರು.