ಮೈಸೂರು (ಮೇ.23): ರಾಜ್ಯದಲ್ಲಿ ನಾಯಕತ್ವದ ಬದಲಾವಣೆ ಮಾತೇ ಇಲ್ಲ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. 

ಮೈಸೂರಿನಲ್ಲಿಂದು ಮಾತನಾಡಿದ ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ಮುರುಗೇಶ್ ನಿರಾಣಿ  ರಾಜ್ಯದಲ್ಲಿ ಯಡಿಯೂರಪ್ಪ ಅವರ ಆಡಳಿತ  ಉತ್ತಮವಾಗಿದೆ. ಇನ್ನೂ ಎರಡು ವರ್ಷ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದರು.

ರಾಜ್ಯದಲ್ಲಿ ನಾಯಕತ್ವ ಬದಲಾಗಲಿದೆ ಎನ್ನುವುದು ಕೇವಲ ಊಹಾಪೋಹ. ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಸಚಿವ ನಿರಾಣಿ ಸ್ಪಷ್ಟಪಡಿಸಿದರು. 

ಕಬುರ್ಗಿಯಲ್ಲಿ ಹೆಚ್ಚು ಸೋಂಕು : ಕಲಬುರ್ಗಿ ಕೊರೋನಾ  ಸೋಂಕಿತರ ಪಟ್ಟಿಯಲ್ಲಿ ರಾಜ್ಯದಲ್ಲೇ 3ನೇ ಸ್ಥಾನದಲ್ಲಿತ್ತು.  ಜಿಲ್ಲಾಡಳಿತ ಹಾಗೂ ಸರ್ಕಾರ ಕಠಿಣ ಕ್ರಮಗಳಿಂದ ರಾಜ್ಯದಲ್ಲಿ 27 ಸ್ಥಾನಕ್ಕೆ ಇಳಿದಿದೆ.  ಕಲಬುರ್ಗಿಯಲ್ಲಿ 30 ಕ್ಕೂ ಹೆಚ್ಚಿನ ಬ್ಲಾಕ್ ಫಂಗಸ್ ಸೋಂಕಿತರಿದ್ದಾರೆ. ಈಗಾಗಲೇ ಬೇಕಾದ ಔಷಧಿಗಳ ಪೂರೈಕೆ ಮಾಡಲಾಗಿದೆ. ಇನ್ನೂ ಕೆಲ ಔಷದಿಗಳ ಕೊರತೆ ಉಂಟಾಗಿದೆ. ಔಷದಿ ಪೂರೈಕೆಗೆ ಬೇಕಾದ ವ್ಯವಸ್ಥೆ ಮಾಡಲಾಗಿದೆ ಎಂದರು. 

ಗಣಿ ಇಲಾಖೆಯಿಂದ 12 ಆಕ್ಸಿಜನ್‌ ಟ್ಯಾಂಕರ್‌ ಪೂರೈಕೆ: ನಿರಾಣಿ ..

ಕೋವಿಡ್ ಕೇರ್ ಸೆಂಟರ್‌ಗಳು ಶೇ.80ರಷ್ಟು ಖಾಲಿ ಇವೆ.  ಕೊರೊನಾ ಸವಾಲನ್ನು ಜಿಲ್ಲಾಡಳಿತಗಳು ಮತ್ತು ಸರ್ಕಾರ ಸಮರ್ಥವಾಗಿ ಎದುರಿಸುತ್ತಿದ್ದೇವೆ. ಹಾಸಿಗೆಗಳಿಗೆ ಕೊರತೆ ಇಲ್ಲ. ಆಕ್ಸಿಜನ್ ಬೇಡಿಕೆ ಕಡಿಮೆ ಆಗಿದೆ. ಬ್ಲಾಕ್ ಫಂಗಸ್ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸೋಂಕು ಅಲ್ಲ.  ಆದರೂ ಜಾಗರೂಕತೆಯಿಂದ ಚಿಕಿತ್ಸೆ ನೀಡಲಾಗುತ್ತಿದೆ. ಬ್ಲಾಕ್ ಫಂಗಸ್ ಔಷಧಿ ಕೊರತೆ ಆಗದಂತೆ ಕ್ರಮ ವಹಿಸಲಾಗಿದೆ ಎಂದರು.
 
ಪ್ರತಿ ತಾಲೂಕಿನಲ್ಲೂ ಆಕ್ಸಿಜನ್ ಜನರೇಟರ್ ಸ್ಥಾಪಿಸಲು ಚಿಂತನೆ ನಡೆಸಲಾಗಿದೆ. ಹೊಸ ನರ್ಸಿಂಗ್ ಕಾಲೇಜು ಬೇಡ ಅನ್ನುವ ತೀರ್ಮಾನಕ್ಕೆ ಬರಲಾಗಿತ್ತು. ಈಗ ನರ್ಸ್‌ಗಳ ಕೊರತೆ ಉಂಟಾಗಿದೆ. ನರ್ಸಿಂಗ್ ಕಾಲೇಜು ತೆರೆಯಲು ಶೈಕ್ಷಣಿಕ ಸಂಸ್ಥೆಗಳು ಮುಂದೆ ಬಂದರೆ ಅನುಮತಿ ನೀಡಲಾಗುವುದು‌. ಕೋವಿಡ್‌ನಲ್ಲಿ ಕೆಲಸ ಮಾಡುವವರಿಗೆ ಗ್ರೇಸ್ ಮಾರ್ಕ್ ನೀಡಲಾಗುವುದು ಎಂದು ಮೈಸೂರಿನಲ್ಲಿ ಸಚಿವ ಮುರುಗೇಶ್ ನಿರಾಣಿ ಹೇಳಿದರು.

ಮರಳು ನೀತಿ ಬದಲು :  ದ್ವಿಚಕ್ರ ವಾಹನ, ಎತ್ತಿನ ಗಾಡಿಯಲ್ಲಿ ರೈತರು ಮತ್ತು ಸ್ಥಳೀಯರು ತಮ್ಮ ಅಗತ್ಯಕ್ಕೆ ಮರಳು ಸಾಗಿಸಿಕೊಂಡರೆ ಕೇಸ್ ಹಾಕುವುದಿಲ್ಲ ಎಂದು ಸಚಿವ ಮುರುಗೇಶ್ ನಿರಾಣಿ ಸ್ಪಷ್ಟಪಡಿಸಿದರು. ಗಣಿ ಭೂ ವಿಜ್ಞಾನ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ಈ ಬಗ್ಗೆ ಸೂಚನೆ ನೀಡಿದ್ದೇನೆ. ಮರಳು ಮಾಫಿಯ ತಡೆಯಲು ಶೀಘ್ರದಲ್ಲೇ ಕಠಿಣವಾದ ಮರಳು ನೀತಿ ಜಾರಿಗೆ ತರುತ್ತೇವೆ ಎಂದು ಮೈಸೂರಿನಲ್ಲಿ ಗಣಿ ಭೂ ವಿಜ್ಞಾನ ಇಲಾಖೆ ಸಚಿವ ಮುರುಗೇಶ್ ನಿರಾಣಿ ಹೇಳಿದರು. 
 
ಶೇ.30ರಷ್ಟು ಅನುದಾನ ಕೋವಿಡ್‌ಗೆ ಬಳಕೆ : ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಶೇ.30ರಷ್ಟು ಅನುದಾನ ಕೋವಿಡ್‌ಗೆ ಬಳಕೆ ಮಾಡಲಾಗುತ್ತದೆ ಎಂದು ಸಚಿವ ಮುರುಗೇಶ್ ನಿರಾಣಿ ಘೋಷಣೆ ಮಾಡಿದ್ದಾರೆ. 

2017ರಿಂದ 2021ರ ಅವಧಿಯಲ್ಲಿ ಇಲಾಖೆ 35 ಕೋಟಿ ರು‌‌. ಆದಾಯ ಗಳಿಸಿದೆ. ಈ ಪೈಕಿ 16 ಸಾವಿರ ಕೋಟಿ ರು. ಈಗ ಉಳಿತಾಯ ಆಗಿದೆ. ಇದರಲ್ಲಿ ಶೇ.30ರಷ್ಟು ಹಣವನ್ನು ಕೋವಿಡ್ ಖರ್ಚಿಗೆ ಬಳಸಿಕೊಳ್ಳಲು ನಿರ್ಧರಿಸಿದ್ದೇವೆ. ಈ ಸಂಬಂಧ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಶೇ.30ರಷ್ಟು ಹಣ ಬಳಸಿಕೊಳ್ಳಲು ಇಲಾಖೆಯ ಕಾಯ್ದೆಗಳಲ್ಲಿ ಅವಕಾಶ ಇದೆ. ಅದಕ್ಕಿಂತಲೂ ಹೆಚ್ಚಿನ ಹಣ ಅಗತ್ಯವಿದ್ದರೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅನುಮತಿ ಪಡೆದುಕೊಳ್ಳುತ್ತೇವೆ ಎಂದು ಮೈಸೂರಿನಲ್ಲಿ ಸಚಿವ ಮುರುಗೇಶ್ ನಿರಾಣಿ ಹೇಳಿದರು.