ಸರ್ಕಾರದ ಭ್ರಷ್ಟಾಚಾರ ಬಗ್ಗೆ ಮಾಹಿತಿ ಇಲ್ಲ: ಕೆಂಪಣ್ಣ ಉಲ್ಟಾ
ಈ ಸರ್ಕಾರ 40% ಕಮೀಷನ್ ಕೇಳುತ್ತಿದೆ ಎಂಬರ್ಥದಲ್ಲಿ ನಾನು ಹೇಳಿಲ್ಲ. ಭ್ರಷ್ಟಾಚಾರದ ಪರ್ಸೆಂಟೇಜ್ ಕಡಿಮೆಯಾಗಿದೆ. ಪ್ಯಾಕೇಜ್ ರೀತಿ ಟೆಂಡರ್ ಕರೆದರೆ ಹೆಚ್ಚಿನ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ. ಹೀಗಾಗಿ ಪ್ರತಿ ಕಾಮಗಾರಿಗೂ ಪ್ರತ್ಯೇಕ ಟೆಂಡರ್ ಕರೆಯಬೇಕು ಎಂದಷ್ಟೇ ಒತ್ತಾಯಿಸಿದ್ದೇವೆ ಎಂದು ಹೇಳಿದ ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ
ಬೆಂಗಳೂರು(ಫೆ.14): ಸರ್ಕಾರ ಬಿಲ್ ಪಾವತಿಯಲ್ಲಿ ಭ್ರಷ್ಟಾಚಾರ ನಡೆಸಿದ ಯಾವುದೇ ಮಾಹಿತಿ ನನಗಿಲ್ಲ, ಬದಲಾಗಿ ಹಿಂದಿನ ಸರ್ಕಾರಕ್ಕೆ ಹೋಲಿಸಿದರೆ ಸಣ್ಣ ಗುತ್ತಿಗೆದಾರರಿಗೆ ಬಾಕಿ ಅನುದಾನ ಬಿಡುಗಡೆ ಮಾಡಿ ನಮಗೆ ಸ್ಪಂದಿಸಿದೆ ಎನ್ನುವ ಮೂಲಕ ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಯೂಟರ್ನ್ ಹೊಡೆದಿದ್ದಾರೆ.
5 ದಿನಗಳ ಹಿಂದಷ್ಟೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಮೀಷನ್ ಆರೋಪ ಮಾಡಿದ್ದ ಅವರು ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಅಚ್ಚರಿಯ ಹೇಳಿಕೆ ನೀಡಿದರು. ಈ ಸರ್ಕಾರ 40% ಕಮೀಷನ್ ಕೇಳುತ್ತಿದೆ ಎಂಬರ್ಥದಲ್ಲಿ ನಾನು ಹೇಳಿಲ್ಲ. ಭ್ರಷ್ಟಾಚಾರದ ಪರ್ಸೆಂಟೇಜ್ ಕಡಿಮೆಯಾಗಿದೆ. ಪ್ಯಾಕೇಜ್ ರೀತಿ ಟೆಂಡರ್ ಕರೆದರೆ ಹೆಚ್ಚಿನ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ. ಹೀಗಾಗಿ ಪ್ರತಿ ಕಾಮಗಾರಿಗೂ ಪ್ರತ್ಯೇಕ ಟೆಂಡರ್ ಕರೆಯಬೇಕು ಎಂದಷ್ಟೇ ಒತ್ತಾಯಿಸಿದ್ದೇವೆ ಎಂದು ಹೇಳಿದರು.
ಗುತ್ತಿಗೆದಾರರಿಗೆ ಹಿಂದಿನ ಸರ್ಕಾರದ ಅವಧಿಯಲ್ಲಿ ಅನುದಾನ ಬಿಡುಗಡೆಯಾಗುವ ಮಟ್ಟಿನ ಸ್ಪಂದನೆ ಸಿಕ್ಕಿರಲಿಲ್ಲ. ಆದರೆ ಈ ಬಾರಿ ಬಾಕಿ ಬಿಲ್ ಪಾವತಿಸುವ ಮಾಡುವ ಬಗ್ಗೆ ಮುಖ್ಯಮಂತ್ರಿ, ಡಿಸಿಎಂ ಸಕಾರಾತ್ಮಕ ಸ್ಪಂದನೆ ಮಾಡಿದ್ದಾರೆ. 1054 ಮಂದಿ ಸಣ್ಣ ಗುತ್ತಿಗೆದಾರರಿಗೆ ಪೂರ್ಣವಾಗಿ ₹ 1 ಕೋಟಿ ಒಳಗಿನ ಬಿಲ್ ಒಟ್ಟು ₹ 800 ಕೋಟಿಯನ್ನು ಸರ್ಕಾರ ಬಿಡುಗಡೆ ಮಾಡಿದ್ದನ್ನು ಸ್ವಾಗತಿಸುತ್ತೇವೆ ಎಂದರು.