ವಿಶ್ವಪಾರಂಪರಿಕ ತಾಣ ಹಂಪಿ ಸುತ್ತ ಹೋಮ್ ಸ್ಟೇ ಇರಕೂಡದು: ಸಿಎಂ ಸಿದ್ದರಾಮಯ್ಯ ಸೂಚನೆ
ವಿಶ್ವಪಾರಂಪರಿಕ ತಾಣವಾದ ಹಂಪಿ ಸುತ್ತಲಿನ ಗ್ರಾಮಗಳಲ್ಲಿನ ಹೋಮ್ ಸ್ಟೇ, ವಾಣಿಜ್ಯ ಚಟುವಟಿಕೆಗಳನ್ನು ಕೂಡಲೆ ಸ್ಥಗಿತಗೊಳಿಸುವಂತೆ ನ್ಯಾಯಾಲಯ ನೀಡಿರುವ ಆದೇಶ ಪಾಲಿಸುವುದರ ಜತೆಗೆ ಗ್ರಾಮಗಳಲ್ಲಿ ಮೂಲ ಸೌಕರ್ಯ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರು (ಅ.05): ವಿಶ್ವಪಾರಂಪರಿಕ ತಾಣವಾದ ಹಂಪಿ ಸುತ್ತಲಿನ ಗ್ರಾಮಗಳಲ್ಲಿನ ಹೋಮ್ ಸ್ಟೇ, ವಾಣಿಜ್ಯ ಚಟುವಟಿಕೆಗಳನ್ನು ಕೂಡಲೆ ಸ್ಥಗಿತಗೊಳಿಸುವಂತೆ ನ್ಯಾಯಾಲಯ ನೀಡಿರುವ ಆದೇಶ ಪಾಲಿಸುವುದರ ಜತೆಗೆ ಗ್ರಾಮಗಳಲ್ಲಿ ಮೂಲ ಸೌಕರ್ಯ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಹಂಪಿ ವಿಶ್ವಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ವ್ಯಾಪ್ತಿಯ ಗ್ರಾಮಗಳ ಸಮಸ್ಯೆಗಳ ಕುರಿತಂತೆ ಮಾಜಿ ಸಂಸದ ವಿ.ಎಸ್. ಉಗ್ರಮ್ಮ ನೇತೃತ್ವದ ನಿಯೋಗ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚಿಸಿದರು.
ಹಂಪಿ ಪ್ರದೇಶದ 29 ಗ್ರಾಮಗಳಲ್ಲಿದ್ದು, ಅಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯುವಂತೆ 2009ರಲ್ಲಿ ನಾಲ್ವರು ಸ್ವಾಮೀಜಿಗಳು ದಾವೆ ಹೂಡಿದ್ದರು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಧಿಕೃತ ಚಟುವಟಿಕೆಗಳನ್ನು ಗುರುತಿಸುವ ಕೆಲಸ ಪ್ರಾಧಿಕಾರ ಮಾಡಬೇಕು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಆ ಹಿನ್ನೆಲೆಯಲ್ಲಿ ಹೋಮ್ ಸ್ಟೇ ಸೇರಿದಂತೆ ಇನ್ನಿತರ ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ಅವಕಾಶವಿಲ್ಲ. ಹೀಗಾಗಿ 230 ಅಂಗಡಿಗಳನ್ನು ಮುಚ್ಚಲಾಗಿದೆ. ಸದ್ಯ ನ್ಯಾಯಾಲಯ ಸ್ಥಳ ಪರಿಶೀಲನೆ ಮಾಡಲು ಸೂಚಿಸಿದೆ. ವಾಣಿಜ್ಯ ಚಟುವಟಿಕೆಗಳಿಂದ ಪಾರಂಪರಿಕ ತಾಣಕ್ಕೆ ಹಾನಿಯಾಗುತ್ತದೆಯೇ ಎಂಬ ಅಂಶ ಪರಿಶೀಲಿಸಲು ತಿಳಿಸಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದರು.
ಫೆಬ್ರವರಿಗೆ ಮೆಟ್ರೋ ಹಳದಿ ಮಾರ್ಗ ಸೇವೆಗೆ ನೀಡಲು ಕ್ರಮವಹಿಸಿ: ಸಂಸದ ತೇಜಸ್ವಿ ಸೂರ್ಯ
ಮಾಜಿ ಸಂಸದ ಉಗ್ರಪ್ಪ ಮಾತನಾಡಿ, ಹಂಪಿ ಅಭಿವೃದ್ದಿಗೆ ಪ್ರಾಚ್ಯವಸ್ತು ಇಲಾಖೆ ಕ್ರಮವಹಿಸಿಲ್ಲ. ಹಂಪಿಗೆ ಬರುವ ಜನರಿಗೆ ಅದರಿಂದ ತೊಂದರೆಯಾಗಿದೆ. ನ್ಯಾಯಾಲಯದ ಆದೇಶವೂ ಸ್ಥಳೀಯರಿಗೆ ಸಮಸ್ಯೆಯುಂಟು ಮಾಡಿದೆ. ಅವರಿಗೆ ಮೂಲಸೌಕರ್ಯಗಳನ್ನು ನೀಡಬೇಕಿದೆ. ಕಾನೂನು ಬಾಹಿರ ಚಟುವಟಿಕೆ ನಡೆಯದಂತೆ ತಡೆಯುವುದರ ಜತೆಗೆ ಆರ್ಥಿಕ ಚಟುವಟಿಕೆಗಳು ಹಾಗೂ ಹೋಮ್‌ಸ್ಟೇ ನಡೆಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಹಿಂದಿನ ಸರ್ಕಾರದ ಅವಧಿಯಲ್ಲಿ ಸರ್ಕಾರಿ ಜಾಗದಲ್ಲಿ ಸ್ಟಾರ್ ಹೋಟೆಲ್ ನಿರ್ಮಿಸಲು, ಜೈನ ಸಮುದಾಯದ ಆಶ್ರಮ, ಮಠ ನಿರ್ಮಾಣ, ಖಾಸಗಿಯವರಿಗೆ ಹೋಮ್ ಸ್ಟೇ ನಿರ್ಮಿಸಲು ಅವಕಾಶ ನೀಡಿದೆ.
ಬೆಂಗಳೂರಿನಲ್ಲಿ 31 ಸಾವಿರ ಬೀದಿ ನಾಯಿಗಳು ಇಳಿಕೆ: ಬಿಬಿಎಂಪಿ ಸಮೀಕ್ಷೆ
ಆದರೆ, ಬಡವರಿಗೆ ಹೋಟೆಲು, ಹೋಮ್‌ಸ್ಟೇ ನಡೆಸಲು ಅವಕಾಶ ನೀಡುತ್ತಿಲ್ಲ ಎಂದು ವಿವರಿಸಿದರು. ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ವಿಶ್ವಪಾರಂಪರಿಕ ತಾಣವಾದ ಹಂಪಿಯಲ್ಲಿ ಮಾದಕ ವಸ್ತುಗಳ ಬಳಕೆ, ವೇಶ್ಯಾವಟಿಕೆಗಳಂತಹ ಕಾನೂನು ಬಾಹಿರ ಚಟುವಟಿಕೆಗಳನ್ನು ಗುರುತಿಸುವಂತೆ ನ್ಯಾಯಾಲಯ ಸೂಚಿಸಿದೆ. ಅದನ್ನು ಗುರುತಿಸಿ ಕಡಿವಾಣ ಹಾಕಬೇಕಿದೆ. ಅದರ ಜತೆಗೆ ಗ್ರಾಮಗಳಿಗೆ ಸೂಕ್ತ ವಿದ್ಯುತ್ ಸೌಲಭ್ಯ ನೀಡುವುದರ ಜತೆಗೆ ಮೂಲಸೌಕರ್ಯ ಸ್ಥಗಿತಗೊಳ್ಳದಂತೆ ಎಚ್ಚರವಹಿಸಬೇಕು ಎಂದು ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಸೇರಿದಂತೆ ಇತರರಿದ್ದರು.