Asianet Suvarna News Asianet Suvarna News

ಬೆಂಗಳೂರಿನಲ್ಲಿ 31 ಸಾವಿರ ಬೀದಿ ನಾಯಿಗಳು ಇಳಿಕೆ: ಬಿಬಿಎಂಪಿ ಸಮೀಕ್ಷೆ

ರಾಜಧಾನಿಯಲ್ಲಿ ನಾಲ್ಕು ವರ್ಷದ ಬಳಿಕ ನಡೆಸಲಾದ ಸಮೀಕ್ಷೆಯಲ್ಲಿ 2.79 ಲಕ್ಷ ಬೀದಿ ನಾಯಿಗಳಿದ್ದು, 2019ಕ್ಕೆ ಹೋಲಿಸಿದರೆ ಬೀದಿ ನಾಯಿಗಳ ಸಂಖ್ಯೆ ಶೇ.10ರಷ್ಟು ಕಡಿಮೆಯಾಗಿದೆ. 

31 thousand stray dogs decrease in Bengaluru BBMP survey gvd
Author
First Published Oct 5, 2023, 5:43 AM IST

ಬೆಂಗಳೂರು (ಅ.05): ರಾಜಧಾನಿಯಲ್ಲಿ ನಾಲ್ಕು ವರ್ಷದ ಬಳಿಕ ನಡೆಸಲಾದ ಸಮೀಕ್ಷೆಯಲ್ಲಿ 2.79 ಲಕ್ಷ ಬೀದಿ ನಾಯಿಗಳಿದ್ದು, 2019ಕ್ಕೆ ಹೋಲಿಸಿದರೆ ಬೀದಿ ನಾಯಿಗಳ ಸಂಖ್ಯೆ ಶೇ.10ರಷ್ಟು ಕಡಿಮೆಯಾಗಿದೆ. ಬುಧವಾರ ‘ನಿವೇದಿ’ ಸಂಸ್ಥೆ ಸಹಯೋಗದಲ್ಲಿ ಕೈಗೊಂಡ ಬೀದಿ ನಾಯಿಗಳ ಸಮೀಕ್ಷಾ ವರದಿ ಬಿಡುಗಡೆ ಮಾಡಿ ಮಾತನಾಡಿದ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ತ್ರಿಲೋಕಚಂದ್ರ, ಪರಿಣಾಮಕಾರಿ ಬೀದಿ ನಾಯಿಗಳ ಸಂತಾನಹರಣ ಶಸ್ತ್ರ ಚಿಕಿತ್ಸೆ, ಆ್ಯಂಟಿ ರೇಬಿಸ್‌ ಲಸಿಕೆ ಕಾರ್ಯಕ್ರಮಗಳಿಗೆ ಯೋಜನೆ ರೂಪಿಸಲು ನಡೆಸಲಾದ ಸಮೀಕ್ಷೆಯಲ್ಲಿ ನಗರದಲ್ಲಿ ಒಟ್ಟು 2,79,335 ಬೀದಿ ನಾಯಿಗಳು ಇರುವುದು ಕಂಡು ಬಂದಿದೆ. 

ಈ ಪೈಕಿ 1,65,341 ಗಂಡು, 82,757 ಹೆಣ್ಣು ನಾಯಿಗಳಾಗಿದ್ದು, ಈ ಪೈಕಿ 31,230 ಬೀದಿ ನಾಯಿಗಳ ಲಿಂಗ ಪತ್ತೆ ಸಾಧ್ಯವಾಗಿಲ್ಲ ಎಂದು ತಿಳಿಸಿದರು. 2019ರಲ್ಲಿ ನಡೆಸಲಾದ ಗಣತಿಯಲ್ಲಿ 3.10 ಲಕ್ಷ ಬೀದಿ ನಾಯಿಗಳು ಪತ್ತೆಯಾಗಿದ್ದವು. ಶೇ.51.16ರಷ್ಟು ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಇದೀಗ ಶೇ.71.85 ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದರು. ಈ ಬಾರಿ ಡ್ರೋನ್‌ ಬಳಸಿ ನಾಲ್ಕು ಕೆರೆ ಅಂಗಳದಲ್ಲಿ ಬೀದಿ ನಾಯಿಗಳ ಸಮೀಕ್ಷೆಯನ್ನು ಪ್ರಾಯೋಗಿಕವಾಗಿ ನಡೆಸಲಾಗಿದೆ. 

ಮಿಸ್ಟರ್ ಡಿಕೆಶಿ ನಿಮ್ಮ ಕೆಟ್ಟ ರಾಜಕೀಯ, ಆಟ ನಡೆಯಲ್ಲ: ದೇವೇಗೌಡ

ಪಶು ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ನಗರದಲ್ಲಿ ಬೀದಿ ನಾಯಿಗಳಲ್ಲಿ ಆ್ಯಂಟಿ ರೇಬಿಸ್‌ ಲಸಿಕೆಯ ಪರಿಣಾಮಕಾರಿ ಬಗ್ಗೆ ನಡೆಸಿದ ಪರೀಕ್ಷೆಯಲ್ಲಿ ಶೇ.71ರಷ್ಟು ಲಸಿಕೆ ಪರಿಣಾಮ ಬೀರಿದೆ ಎಂದು ತಿಳಿದು ಬಂದಿದೆ ಎಂದು ಮಾಹಿತಿ ನೀಡಿದರು. ವಲಯವಾರು ಹಾಗೂ ವಾರ್ಡ್‌ ಮಟ್ಟದಲ್ಲಿ ತಿಳಿದು ಬಂದಿರುವ ಬೀದಿ ನಾಯಿಗಳ ಸಂಖ್ಯೆ ಆಧಾರದಲ್ಲಿ ಸಂತಾನಹರಣ ಹಾಗೂ ಆ್ಯಂಟಿ ರೇಬಿಸ್‌ ಲಸಿಕೆ ಹಾಕುವ ಕಾರ್ಯಕ್ರಮ ರೂಪಿಸಲಾಗುವುದು. ಬೀದಿ ನಾಯಿಗಳ ಸಮೀಕ್ಷೆಗೆ ₹10 ಲಕ್ಷ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು. ಐಸಿಎಆರ್‌ -ನಿವೇದಿ ಸಂಸ್ಥೆಯ ನಿರ್ದೇಶಕ ಡಾ। ಬಲದೇವ್ ರಾಜ್ ಗುಲಾಟಿ, ಪಶುಪಾಲನಾ ವಿಭಾಗದ ಜಂಟಿ ನಿರ್ದೇಶಕ ಡಾ। ರವಿಕುಮಾರ್ ಉಪಸ್ಥಿತರಿದ್ದರು.

ಪ್ರಾಯೋಗಿಕವಾಗಿ ಮೈಕ್ರೋ ಚಿಪ್‌: ನಗರದಲ್ಲಿ ಸುಮಾರು 100 ಬೀದಿ ನಾಯಿಗಳಿಗೆ ಪ್ರಾಯೋಗಿಕವಾಗಿ ಮೈಕ್ರೋ ಚಿಪ್‌ ಅಳವಡಿಕೆ ಹಾಗೂ ಸುಮಾರು 200 ಬೀದಿ ನಾಯಿಗಳಿಗೆ ಜಿಯೋ ಟ್ಯಾಗ್‌ ಅಳವಡಿಕೆ ಮಾಡಲಾಗುತ್ತಿದೆ. ಒಂದು ಮೈಕ್ರೋ ಚಿಪ್‌ಗೆ ಸುಮಾರು ₹200 ಆಗಬಹುದು. ಸಾಧಕ- ಬಾಧಕ ಗಮನಿಸಿ ಎಲ್ಲಾ ನಾಯಿಗಳಿಗೆ ಅಳವಡಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ತ್ರಿಲೋಕಚಂದ್ರ ತಿಳಿಸಿದರು. ‘ನಿವೇದಿ’ ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ। ಕೆ.ಪಿ.ಸುರೇಶ್‌ ಮಾತನಾಡಿ, ಸಮೀಕ್ಷಾ ವರದಿಯು ಶೇ.98ರಷ್ಟು ನಿಖರವಾಗಿದೆ ಎಂದು ತಿಳಿಸಿ ಸಮೀಕ್ಷೆ ನಡೆಸಿದ ಬಗೆಯನ್ನು ವಿವರಿಸಿದರು.

ವಲಯವಾರು ಬೀದಿ ನಾಯಿ ಸಂಖ್ಯೆ
ವಲಯ ಸಂಖ್ಯ

ಪೂರ್ವ 37,685
ಪಶ್ಚಿಮ 22,025
ದಕ್ಷಿಣ 23,241
ದಾಸರಹಳ್ಳಿ 21,221
ಆರ್‌ಆರ್‌ ನಗರ 41,266
ಬೊಮ್ಮನಹಳ್ಳಿ 39,183
ಯಲಹಂಕ 36,343
ಮಹದೇವಪುರ 58,371
ಒಟ್ಟು 2,79,335

ಅಕ್ಟೋಬರ್‌ ಅಂತ್ಯಕ್ಕೆ ಡೆಂಘೀ ನಿಯಂತ್ರಣ: ಆಗಸ್ಟ್‌ನಲ್ಲಿ 1,800 ಹಾಗೂ ಸೆಪ್ಟಂಬರ್‌ನಲ್ಲಿ 2 ಸಾವಿರ ಡೆಂಘೀ ಪ್ರಕರಣ ಕಾಣಿಸಿಕೊಂಡಿವೆ. ಹೆಚ್ಚು ಪ್ರಕರಣ ಕಾಣಿಸಿಕೊಳ್ಳುವ ವಾರ್ಡ್ ನಲ್ಲಿ ಜಾಗೃತಿ ಹಾಗೂ ನಿಯಂತ್ರಣ ಕ್ರಮ ಕೈಗೊಳ್ಳಲಾಗುತ್ತಿದೆ. ಮನೆ ಒಳಭಾಗದಲ್ಲಿಯೇ ಸೊಳ್ಳೆ ಉತ್ಪತ್ತಿ ಆಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಅಕ್ಟೋಬರ್‌ ಅಂತ್ಯದ ವೇಳೆ ನಿಯಂತ್ರಣಕ್ಕೆ ಬರಲಿದೆ ಎಂದು ಡಾ.ತ್ರಿಲೋಕಚಂದ್ರ ತಿಳಿಸಿದರು.

ಕಾಂಗ್ರೆಸ್ ಸೋಲಿಸಲು ಬಿಜೆಪಿ-ಜೆಡಿಎಸ್ ಒಂದಾಗಿದೆ: ನಿಖಿಲ್ ಕುಮಾರಸ್ವಾಮಿ

ಕಟ್ಟಡ ನಿರ್ಮಾಣ ಸಂಸ್ಥೆಗೆ ದಂಡ: ನಗರದಲ್ಲಿ ಕಟ್ಟಡ ನಿರ್ಮಾಣ ಸಂಸ್ಥೆಗಳು ನಿರ್ಮಾಣ ಕಾಮಗಾರಿ ಆವರಣದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಕ್ರಮಗೊಳ್ಳದಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ನಗರದ ಹಲವು ಕಟ್ಟಡ ನಿರ್ಮಾಣ ಸಂಸ್ಥೆಗಳಿಗೆ ದಂಡ ವಿಧಿಸಲಾಗಿದೆ. ನಗರದ ಕುಡಿಯುವ ನೀರಿನ ಘಟಕಗಳ ನೀರಿನ ಗುಣಮಟ್ಟವನ್ನು ಪ್ರತಿ ತಿಂಗಳು ಪರೀಕ್ಷೆ ಮಾಡಲಾಗುತ್ತಿದೆ. ಬೊಮ್ಮನಹಳ್ಳಿಯಲ್ಲಿ ಮೂರು ತಿಂಗಳ ಹಿಂದೆ ಒಂದು ಘಟಕದಲ್ಲಿ ಸಮಸ್ಯೆ ಕಾಣಿಸಿತ್ತು ಸರಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

Follow Us:
Download App:
  • android
  • ios