Asianet Suvarna News Asianet Suvarna News

ರಾಜ್ಯದಲ್ಲಿ ಭೀಕರ ಬರ: ರಾಗಿ ಕಟಾವು ಯಂತ್ರಗಳನ್ನು ಕೇಳೋರೇ ಇಲ್ಲ..!

ಮಳೆಯ ಅಭಾವದಿಂದಾಗಿ ಪ್ರಸಕ್ತ ಸಾಲಿನಲ್ಲಿ ರಾಗಿ ಬೆಳವಣಿಗೆ ಕುಂಠಿತವಾಗಿರುವುದು ರೈತರು ಯಂತ್ರದ ಮೊರೆ ಹೋಗದಂತೆ ಮಾಡಿದೆ. ಯಂತ್ರದಿಂದ ಕಟಾವು ಮಾಡಿಸಿದರೆ ಸಿಗಲಿದ್ದ ಅಲ್ಪಸ್ವಲ್ಪ ಮೇವೂ ಭೂಮಿಯಲ್ಲೇ ಉಳಿಯುವುದರಿಂದ ರೈತರು ಕೈಕೊಯ್ಲಿಗೇ ಹೆಚ್ಚಾಗಿ ಮೊರೆ ಹೋಗಿದ್ದಾರೆ. ಇದರಿಂದ ಸಹಜವಾಗಿ ಯಂತ್ರಗಳಿಗೆ ಬೇಡಿಕೆಯೂ ಇಲ್ಲದಂತಾಗಿದೆ.

No Demand Millet Harvesting Machines Due to Drought in Karnataka grg
Author
First Published Nov 25, 2023, 12:25 PM IST

ಸಿದ್ದು ಚಿಕ್ಕಬಳ್ಳೇಕೆರೆ

ಬೆಂಗಳೂರು(ನ.25):  ರಾಗಿ ಕೊಯ್ಲು ಆರಂಭವಾದರೆ ಸಾಕು ತಮಿಳುನಾಡು, ಉತ್ತರ ಕರ್ನಾಟಕ ಭಾಗದಿಂದ ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗೆ ದಾಂಗುಡಿ ಇಡುತ್ತಿದ್ದ ಟ್ರ್ಯಾಕ್ಟರ್‌ ಚಾಲಿತ ರಾಗಿ ಕಟಾವು ಯಂತ್ರ (ಟ್ರ್ಯಾಕ್ಟರ್‌ ಕಂಬೈನ್‌ ಹಾರ್ವೆಸ್ಟರ್‌)ಗಳು ಈ ಬಾರಿ ಬರಗಾಲದಿಂದಾಗಿ ಸದ್ದೇ ಮಾಡುತ್ತಿಲ್ಲ. ಮಳೆಯ ಅಭಾವದಿಂದಾಗಿ ಪ್ರಸಕ್ತ ಸಾಲಿನಲ್ಲಿ ರಾಗಿ ಬೆಳವಣಿಗೆ ಕುಂಠಿತವಾಗಿರುವುದು ರೈತರು ಯಂತ್ರದ ಮೊರೆ ಹೋಗದಂತೆ ಮಾಡಿದೆ. ಯಂತ್ರದಿಂದ ಕಟಾವು ಮಾಡಿಸಿದರೆ ಸಿಗಲಿದ್ದ ಅಲ್ಪಸ್ವಲ್ಪ ಮೇವೂ ಭೂಮಿಯಲ್ಲೇ ಉಳಿಯುವುದರಿಂದ ರೈತರು ಕೈಕೊಯ್ಲಿಗೇ ಹೆಚ್ಚಾಗಿ ಮೊರೆ ಹೋಗಿದ್ದಾರೆ. ಇದರಿಂದ ಸಹಜವಾಗಿ ಯಂತ್ರಗಳಿಗೆ ಬೇಡಿಕೆಯೂ ಇಲ್ಲದಂತಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಕನಿಷ್ಠ ಬೆಂಬಲ ಯೋಜನೆ(ಎಂಎಸ್‌ಪಿ)ಯಡಿ ರಾಗಿಗೆ ತಕ್ಕಮಟ್ಟಿಗೆ ಉತ್ತಮ ಬೆಲೆ ಸಿಗುತ್ತಿರುವುದರಿಂದ ಮೂರ್ನಾಲ್ಕು ವರ್ಷದಿಂದ ರಾಜ್ಯದಲ್ಲಿ ಬಿತ್ತನೆ ಪ್ರಮಾಣವೂ ಗಣನೀಯವಾಗಿ ಹೆಚ್ಚಳವಾಗಿದೆ. ಕೂಲಿಯವರ ಹತ್ತಿರ ರಾಗಿ ಕೊಯ್ಲು ಮಾಡಿಸಿದರೆ ಬಣವೆ ಇಡುವುದು, ಕಣ ಮಾಡಿ ರಾಗಿ ಹುಲ್ಲು ತುಳಿಸುವುದು, ತೂರುವುದು ಮತ್ತಿತರ ಕಾರ್ಯಗಳಿಗೆ ಹೆಚ್ಚು ವೆಚ್ಚವಾಗುತ್ತದೆ. ಜೊತೆಗೆ ಸಮಯಕ್ಕೆ ಸರಿಯಾಗಿ ಕೂಲಿಯವರೂ ಸಿಗುವುದಿಲ್ಲ ಎಂದು ರೈತರು ಯಂತ್ರಗಳ ಮೊರೆ ಹೋಗಿದ್ದರು.

ಕೇಂದ್ರ ಸರ್ಕಾರ ರಾಜ್ಯಕ್ಕೆ ಬರ ಪರಿಹಾರ ನೀಡುತ್ತಿಲ್ಲ: ಸಚಿವ ಚಲುವರಾಯಸ್ವಾಮಿ

ಜಿಲ್ಲಾಧಿಕಾರಿಗಳಿಂದಲೇ ದರ ನಿಗದಿ:

ಎಕರೆಗಟ್ಟಲೆ ರಾಗಿಯನ್ನು ಗಂಟೆಗಳೊಳಗಾಗಿ ಕೊಯ್ಲು ಮಾಡಿ ರಾಗಿಯನ್ನೂ ತಕ್ಷಣವೇ ನೀಡುತ್ತಿದ್ದ ಯಂತ್ರಗಳಿಗೆ ಈ ಹಿಂದೆ ಭಾರೀ ಬೇಡಿಕೆ ಇತ್ತು. 2021ರಲ್ಲಿ ಗಂಟೆಗೆ 2700 ರು. ಹಾಗೂ 2022 ರಲ್ಲಿ 3500 ರುಪಾಯಿವರೆಗೂ ರಾಗಿ ಕಟಾವು ಯಂತ್ರಗಳ ಮಾಲೀಕರು ದರ ನಿಗದಿ ಮಾಡಿದ್ದರು. ಹೆಚ್ಚು ಪ್ರದೇಶದಲ್ಲಿ ರಾಗಿ ಬೆಳೆದಿದ್ದರಿಂದ ಕಟಾವು ಮಾಡಿಸಲು ರೈತರು ಪೈಪೋಟಿ ನಡೆಸುತ್ತಿದ್ದುದು ಸಹ ದರ ಹೆಚ್ಚಳಕ್ಕೆ ಕಾರಣವಾಗಿತ್ತು.

ಕಳೆದ ವರ್ಷವೂ ಕಟಾವು ಯಂತ್ರಗಳ ಬಾಡಿಗೆ ದರ ಹೆಚ್ಚಳ ಯಾವ ಮಟ್ಟಕ್ಕೆ ಹೋಗಿತ್ತೆಂದರೆ, ಕೆಲ ಜಿಲ್ಲೆಗಳಲ್ಲಿ ಮಿತಿಮೀರಿ ಹಣ ಪಡೆಯುತ್ತಿದ್ದರಿಂದ ಜಿಲ್ಲಾಧಿಕಾರಿಗಳೇ ಮಧ್ಯಪ್ರವೇಶಿಸಿ ಗಂಟೆಗೆ ಇಂತಿಷ್ಟು ಎಂದು ದರ ನಿಗದಿ ಮಾಡಿದ್ದರು. ಹೆಚ್ಚು ಹಣ ಪಡೆದರೆ ರಾಗಿ ಕಟಾವು ಯಂತ್ರಗಳ ಮಾಲೀಕರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005ರ ಪ್ರಕಾರ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಲಾಗಿತ್ತು.

ಆದರೆ ಈಗ ಪರಿಸ್ಥಿತಿ ಸಂಪೂರ್ಣ ವಿಭಿನ್ನವಾಗಿದ್ದು, ಬರಗಾಲದಿಂದಾಗಿ ಬಹಳಷ್ಟು ರೈತರು ಬೆಳೆದಿದ್ದ ರಾಗಿ ಬೆಳೆ ನಾಶವಾಗಿದೆ. ಇರುವ ಒಂದಿಷ್ಟು ಬೆಳೆ ಎತ್ತರಕ್ಕೆ ಬೆಳೆಯದೇ ಗೇಣು, ಮೊಳದುದ್ದಕ್ಕೇ ತೆನೆ ಬಿಟ್ಟಿದೆ. ಗಂಟೆಗೆ 2200ರಿಂದ 2400 ರುಪಾಯಿಗೆಲ್ಲಾ ಯಂತ್ರಗಳು ಬಾಡಿಗೆಗೆ ಸಿಕ್ಕರೂ ಬೇಡಿಕೆ ಇಲ್ಲದಂತಾಗಿದೆ.

ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲ: ಅಲ್ಕೋಡ ಹನಮಂತಪ್ಪ

ಎರಡ್ಮೂರು ವರ್ಷಗಳಿಂದ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ ಮತ್ತಿತರ ಜಿಲ್ಲೆಗಳಿಗೆ ಕೊಯ್ಲಿನ ಸಮಯದಲ್ಲಿ ಭಾರೀ ಸಂಖ್ಯೆಯಲ್ಲಿ ಕಟಾವು ಯಂತ್ರಗಳು ಆಗಮಿಸುತ್ತಿದ್ದವು. ಹಳ್ಳಿ-ಹಳ್ಳಿಯಲ್ಲೂ ಐದಾರು ಯಂತ್ರಗಳು ‘ಮೊಕ್ಕಾಂ’ ಹೂಡುತ್ತಿದ್ದವು. ಈ ಭಾರಿ ಮಳೆ ಅಭಾವದಿಂದ ರಾಗಿ ಹೆಚ್ಚು ಬೆಳವಣಿಗೆಯಾಗಿಲ್ಲ ಎಂದು ಅರಿತಿರುವ ಬಹಳಷ್ಟು ಯಂತ್ರಗಳ ಮಾಲೀಕರು ಇತ್ತ ತಲೆ ಹಾಕುತ್ತಿಲ್ಲ. ಹಳ್ಳಿಗೆ ಒಂದೋ, ಎರಡೋ ಯಂತ್ರ ಮಾತ್ರ ಆಗಮಿಸಿದ್ದು, ಅವಕ್ಕೂ ಸರಿಯಾಗಿ ಬಾಡಿಗೆ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ನಾನು ಎರಡು ರಾಗಿ ಕಟಾವು ಯಂತ್ರಗಳನ್ನು ಹೊಂದಿದ್ದೇನೆ. ಎರಡ್ಮೂರು ವರ್ಷದಿಂದ ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಗೆ ಯಂತ್ರಗಳನ್ನು ಕಳುಹಿಸುತ್ತಿದ್ದೆ. ಆದರೆ ಈ ಸಲ ಮಳೆ ಕಡಿಮೆಯಾಗಿ ಬೆಳವಣಿಗೆ ಕುಂಠಿತ ಆಗಿರುವುದರಿಂದ ಕಳುಹಿಸಿಲ್ಲ ಎಂದು ಗಂಗಾವತಿಯ ನಾಗರಾಜ್‌ ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios