30 ಹಾಸಿಗೆ ಸಾಮರ್ಥ್ಯಕ್ಕಿಂತ ಕಡಿಮೆ ಇರುವ ಆಸ್ಪತ್ರೆಗಳಲ್ಲಿ ಕೋವಿಡ್‌ ರೋಗಿಗಳನ್ನು ದಾಖಲಿಸಬಾರದು. ಈ ಆಸ್ಪತ್ರೆಗಳಲ್ಲಿ ಕೋವಿಡೇತರ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಬೇಕು ಎಂದು ಸಚಿವ ಸುಧಾಕರ್ ಹೇಳಿದ್ದಾರೆ. 

ಬೆಂಗಳೂರು (ಏ.22):  ರಾಜ್ಯದಲ್ಲಿ ಆಮ್ಲಜನಕ ಘಟಕ ಹೊಂದಿಲ್ಲದ 30 ಹಾಸಿಗೆ ಸಾಮರ್ಥ್ಯಕ್ಕಿಂತ ಕಡಿಮೆ ಇರುವ ಆಸ್ಪತ್ರೆಗಳಲ್ಲಿ ಕೋವಿಡ್‌ ರೋಗಿಗಳನ್ನು ದಾಖಲಿಸಬಾರದು. ಈ ಆಸ್ಪತ್ರೆಗಳಲ್ಲಿ ಕೋವಿಡೇತರ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡುವಂತೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಸೂಚಿಸಿದ್ದಾರೆ.

"

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರ ಕಚೇರಿಗೆ ಭೇಟಿ ನೀಡಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಸರ್ಕಾರ ಹೆಚ್ಚು ಹಣ ಕೊಡುತ್ತದೆ ಎಂದು ಆಮ್ಲಜನಕ ಘಟಕವಿಲ್ಲದ ಆಸ್ಪತ್ರೆಗಳಲ್ಲೂ ಕೋವಿಡ್‌ ರೋಗಿಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ. ಇದು ನಿಲ್ಲಬೇಕು ಎಂದರು.

ಇನ್ನು ಆಮ್ಲಜನಕ ಘಟಕ ಇಲ್ಲದ ಆಸ್ಪತ್ರೆಗಳಲ್ಲಿ ಕೋವಿಡ್‌ ರೋಗಿ ದಾಖಲಿಸಿಕೊಂಡು ಆಮ್ಲಜನಕ ಕೊರತೆಯಿಂದ ಸಾವು ಸಂಭವಿಸಿದರೆ ಸರ್ಕಾರ ಸಹಿಸುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.

ಸುಧಾಕರ್ ಖಾತೆ ಬದಲಿಸಿ ಎಂದು ಆಕ್ರೋಶ : ಅವರ್ಯಾರು ಎಂದ ಸಚಿವರು ...

ಆಮ್ಲಜನಕಕ್ಕೆ ವ್ಯವಸ್ಥೆ: ಜೆಎಸ್‌ಡಬ್ಲ್ಯು ಕಂಪನಿಯವರು ಬೆಂಗಳೂರಿಗೆ 40 ಮೆಟ್ರಿಕ್‌ ಟನ್‌ ಆಮ್ಲಜನಕ ಪೂರೈಸಿದ್ದಾರೆ. 5 ಸಾವಿರ ಸಿಲಿಂಡರ್‌ ಹೆಚ್ಚುವರಿಯಾಗಿ ಬಳಕೆಗೆ ಸಿಕ್ಕಿದೆ. ಇನ್ನು ಬೆಂಗಳೂರಿನಲ್ಲಿ ಆಮ್ಲಜನಕದ ಕೊರತೆ ಆಗುವುದಿಲ್ಲ. ಮುಂದಿನ ತಿಂಗಳ ಹೊತ್ತಿಗೆ 1,500 ಮೆಟ್ರಿಕ್‌ ಟನ್‌ ಆಮ್ಲಜನಕ ಬೇಕಾಗಬಹುದು, ಇದನ್ನು ಒದಗಿಸಿಕೊಡಿ ಎಂದು ಕೇಂದ್ರ ಸರ್ಕಾರಕಕ್ಕೆ ಮುಖ್ಯಮಂತ್ರಿಗಳು ಪತ್ರ ಬರೆದಿದ್ದಾರೆ ಎಂದು ಡಾ. ಸುಧಾಕರ್‌ ಹೇಳಿದರು.

ಮಂಗಳವಾರ ಉತ್ಪಾದನೆ ಆಗಿರುವ 33,000 ರೆಮ್‌ಡಿಸಿವಿರ್‌ನಲ್ಲಿ ರಾಜ್ಯವೇ 23,000 ರೆಮ್‌ಡಿಸಿವಿರ್‌ ಪಡೆದುಕೊಂಡಿದೆ. ಇದರಲ್ಲಿ 10,000 ರೆಮ್‌ಡಿಸಿವಿರ್‌ ಅನ್ನು ಸರ್ಕಾರಿ ಆಸ್ಪತ್ರೆಗಳಿಗೆ ನೀಡಲಾಗಿದೆ. ಉಳಿದ 13,000 ರೆಮ್‌ಡಿಸಿವಿರ್‌ ಅನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.

2,000 ಐಸಿಯು ಬೆಡ್‌: ಬೆಂಗಳೂರಿನಲ್ಲಿ ಕೋವಿಡ್‌ ರೋಗಿಗಳಿಗಾಗಿ ಖಾಸಗಿ ಆಸ್ಪತ್ರೆಗಳು 4,000 ಬೆಡ್‌, ಖಾಸಗಿ ಮೆಡಿಕಲ್‌ ಕಾಲೇಜುಗಳು 1,000 ಬೆಡ್‌, ಸರ್ಕಾರಿ ಆಸ್ಪತ್ರೆಗಳು 1,409 ಬೆಡ್‌ ಹೀಗೆ ಒಟ್ಟು 7,442 ಬೆಡ್‌ಗಳನ್ನು ಮೀಸಲಿರಿಸಲಾಗಿದೆ. 15 ದಿನದೊಳಗೆ ಬೆಂಗಳೂರಿನ ಎಂಟು ವಲಯದಲ್ಲಿ ಒಟ್ಟು 2,000 ಐಸಿಯು ಬೆಡ್‌ ನಿರ್ಮಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಂದಾಯ ಸಚಿವ ಆರ್‌. ಅಶೋಕ್‌, ಕೋವಿಡ್‌ ಹರಡುವುದನ್ನು ತಡೆಯಲು ಸರ್ಕಾರ ಜಾರಿಗೆ ತಂದಿರುವ ಮಾರ್ಗಸೂಚಿಯನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ನಿಯಮವನ್ನು ಉಲ್ಲಂಘಿಸಿದರೆ ಇನ್ನಷ್ಟುಕಠಿಣ ನಿಯಮ ಜಾರಿಗೆ ತರಲಾಗುವುದು ಹೇಳಿದರು. ಆ್ಯಂಬುಲೆನ್ಸ್‌ಗಳು ಜನರಿಂದ ಹಣ ದೋಚಿದರೆ ಕ್ರಿಮಿನಲ್‌ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಸಿದರು.