ಬೆಂಗ​ಳೂರು[ಫೆ.03]: ಮತ್ತೆ ಮತ್ತೆ ನೋಟಿಸ್‌ ಕೊಟ್ಟರೂ ಕ್ಯಾರೆ ಎನ್ನದ ಅತೃಪ್ತ ಶಾಸ​ಕರು, ಕಾಂಗ್ರೆಸ್‌ ಶಾಸ​ಕ​ರನ್ನು ಸತ​ತ​ವಾಗಿ ಸಂಪ​ರ್ಕಿ​ಸು​ತ್ತಿ​ರುವ ಬಿಜೆ​ಪಿಯ ಕೆಲ ಶಾಸ​ಕರ ನಿಗೂಢ ನಡ​ವ​ಳಿಕೆಗಳಿಂದಾಗಿ ಬಜೆಟ್‌ ಅಧಿ​ವೇ​ಶ​ನದ ವೇಳೆ ಬಿಜೆಪಿ ಹಾಗೂ ಅತೃಪ್ತ ಕಾಂಗ್ರೆಸ್‌ ಶಾಸ​ಕರು ಸೇರಿ ಸರ್ಕಾ​ರಕ್ಕೆ ಧಕ್ಕೆ ತರು​ವಂತಹ ಪ್ರಯತ್ನ ಮಾಡ​ಬ​ಹುದೇ ಎಂಬ ಆಶಂಕೆ ಕಾಂಗ್ರೆ​ಸ್‌​ನಲ್ಲಿ ಇನ್ನೂ ಜೀವಂತ​ವಾ​ಗಿದೆ.

20ಕ್ಕೂ ಹೆಚ್ಚು ಶಾಸ​ಕರು ಕಾಂಗ್ರೆ​ಸ್‌ನ ನಾಯ​ಕರ ಸಂಪ​ರ್ಕಕ್ಕೆ ಸಿಗು​ತ್ತಿಲ್ಲ ಎಂದು ಬಿಜೆ​ಪಿಯ ಪ್ರಮುಖ ನಾಯ​ಕರೇ ಬಹಿ​ರಂಗ ಹೇಳಿಕೆ ನೀಡು​ತ್ತಿ​ದ್ದಾರೆ. ಇದಕ್ಕೆ ಸಂವಾ​ದಿ​ಯಾಗಿ ಕಾಂಗ್ರೆ​ಸ್‌ನ ಅತೃಪ್ತ ಶಾಸ​ಕರು ಬರೋ​ಬ್ಬರಿ ಒಂದು ತಿಂಗ​ಳಿ​ನಿಂದ ಕಾಂಗ್ರೆಸ್‌ ನಾಯ​ಕ​ರಿಂದ ಅಂತರ ಕಾಯ್ದು​ಕೊಂಡಿದ್ದಾರೆ. ಇದರಿಂದಾಗಿ ಕಾಂಗ್ರೆ​ಸ್ಸಿ​ಗ​ರಿಗೆ ಇಂತಹದ್ದೊಂದು ಅನುಮಾನ ಹುಟ್ಟಿದೆ.

ರಾಜ​ಕೀಯ ವಲ​ಯ​ದಲ್ಲಿ ಚರ್ಚೆ​ಯ​ಲ್ಲಿ​ರುವಂತೆ ಬಿಜೆ​ಪಿಯು ಕಾಂಗ್ರೆ​ಸ್‌ನ ಸುಮಾರು 18 ಶಾಸ​ಕ​ರನ್ನು ಸೆಳೆದು, ಅವ​ರಿಂದ ರಾಜೀ​ನಾಮೆ ಕೊಡಿಸಿ ಸರ್ಕಾ​ರ​ವನ್ನು ಅಲ್ಪ​ಮ​ತಕ್ಕೆ ತರುವ ಪ್ರಯ​ತ್ನವನ್ನು ತೀವ್ರ​ವಾಗಿ ನಡೆ​ಸಿತ್ತು. ಆದರೆ, ಈ ಪ್ರಯ​ತ್ನ​ದಲ್ಲಿ ಬಿಜೆ​ಪಿಗೆ ನಿರೀ​ಕ್ಷಿತ ಯಶಸ್ಸು ದೊರ​ಕಿಲ್ಲ. ಹೀಗಾ​ಗಿಯೇ ಈಗ ಬಿಜೆಪಿ ‘ಪ್ಲಾನ್‌ ಬಿ’ಯನ್ನು ಜಾರಿಗೆ ತರಲು ಉದ್ದೇ​ಶಿ​ಸಿದೆ ಎನ್ನ​ಲಾ​ಗು​ತ್ತಿದೆ. ಈ ಪ್ಲಾನ್‌ ಬಿ ಪ್ರಕಾರ ಬಜೆಟ್‌ ಅಧಿ​ವೇ​ಶ​ನದ ವೇಳೆ ಸರ್ಕಾ​ರದ ವಿರುದ್ಧ ಅವಿ​ಶ್ವಾಸ ನಿರ್ಣಯ ತರು​ವುದು. ಇದಕ್ಕೆ ಆಸ್ಪದ ದೊರೆ​ಯದೇ ಇದ್ದರೆ ಸ್ಪೀಕರ್‌ ಬಗ್ಗೆಯೇ ವಿಶ್ವಾ​ಸ​ವಿಲ್ಲ ಎಂಬ ನಿರ್ಣಯವನ್ನು ಮಂಡಿ​ಸು​ವುದು. ಈ ವೇಳೆ ಸುಮಾರು 8ರಿಂದ 12 ಮಂದಿ ಕಾಂಗ್ರೆಸ್‌ ಶಾಸ​ಕರು ವಿಧಾ​ನ​ಸ​ಭೆ​ಯಿಂದ ದೂರ​ವು​ಳಿ​ಯು​ವಂತೆ ಮಾಡಿ ಈ ನಿರ್ಣ​ಯಕ್ಕೆ ಗೆಲುವಾಗುವಂತೆ ಮಾಡು​ವುದು.

ಇಷ್ಟಾ​ದರೆ ತನ್ನಿಂದ ​ತಾನೇ ಸರ್ಕಾರಕ್ಕೆ ಧಕ್ಕೆ ಉಂಟಾ​ಗು​ತ್ತದೆ. ಇದನ್ನು ತಡೆ​ಯಲು ಕಾಂಗ್ರೆ​ಸ್‌-ಜೆಡಿ​ಎಸ್‌ ಏನೇ ರಾಜ​ಕೀಯ ದಾಳ ಉರು​ಳಿ​ಸಿ​ದರೂ ಸಂವಿ​ಧಾ​ನಿಕ ಬಿಕ್ಕಟ್ಟು ನಿರ್ಮಾ​ಣ​ವಾ​ಗಿದೆ ಎಂಬ ನೆಪ​ದಲ್ಲಿ ರಾಜ್ಯ​ಪಾ​ಲರ ಆಳ್ವಿ​ಕೆ​ಯ​ನ್ನಾ​ದರೂ ಬರು​ವಂತೆ ಮಾಡ​ಬ​ಹುದು ಎಂಬುದು ಬಿಜೆಪಿ ಲೆಕ್ಕಾ​ಚಾರ ಎನ್ನ​ಲಾ​ಗು​ತ್ತಿದೆ.

ಹೀಗಾ​ಗಿಯೇ ತನಗೆ ಬೇಕಾ​ದಷ್ಟುಕಾಂಗ್ರೆಸ್‌ ಶಾಸ​ಕರು ಆಪ​ರೇ​ಷನ್‌ ಗಾಳಕ್ಕೆ ಬೀಳ​ದಿ​ದ್ದರೂ ಎಷ್ಟುಮಂದಿ ಸಿಗು​ತ್ತಾರೋ ಅಷ್ಟುಶಾಸ​ಕ​ರನ್ನು ಇಟ್ಟು​ಕೊಂಡೇ ಬಿಕ್ಕಟ್ಟು ನಿರ್ಮಾಣ ಮಾಡುವ ಪ್ರಯ​ತ್ನ​ವನ್ನು ಬಿಜೆಪಿ ಮಾಡು​ತ್ತಿದೆ ಎನ್ನ​ಲಾ​ಗಿದೆ. ಈ ರೀತಿಯ ಪ್ರಯ​ತ್ನ​ದಿಂದ ಒಂದು ವೇಳೆ ಸರ್ಕಾ​ರ​ವನ್ನು ಬೀಳಿ​ಸಲು ಸಾಧ್ಯ​ವಾ​ಗ​ದಿ​ದ್ದರೂ ಸಮ್ಮಿಶ್ರ ಸರ್ಕಾರ ಎಂಬುದು ಸ್ಥಿರ​ವಲ್ಲ ಎಂಬ ಭಾವ​ವನ್ನು ರಾಜ್ಯದ ಜನ​ರಲ್ಲಿ ಬಿತ್ತಲು ಸಾಧ್ಯ​ವಾ​ಗು​ತ್ತದೆ. ಇದು ಲೋಕ​ಸಭೆ ಚುನಾ​ವ​ಣೆ​ಯಲ್ಲಿ ಬಿಜೆ​ಪಿಗೆ ಲಾಭ ತರು​ತ್ತದೆ ಎಂಬ ಕಾರ​ಣಕ್ಕೂ ಬಿಜೆಪಿ ಈ ಪ್ರಯತ್ನ ನಡೆ​ಸಿದೆ ಎಂದು ವ್ಯಾಖ್ಯಾ​ನಿ​ಸ​ಲಾ​ಗು​ತ್ತಿ​ದೆ.

ಬಿಜೆ​ಪಿ ಇಂತಹ ಪ್ರಯ​ತ್ನ​ ಮುಂದು​ವ​ರೆ​ಸಿ​ರುವುದು ಕಾಂಗ್ರೆಸ್‌ ನಾಯಕತ್ವಕ್ಕೆ ತಿಳಿದಿದೆ. ಹೀಗಾಗಿ, ಅತೃಪ್ತ ಶಾಸ​ಕರು ಮೊದಲು ಬಿಜೆ​ಪಿಯ ಹಿಡಿ​ತ​ದಿಂದ ಹೊರಬರುವಂತೆ ಮಾಡಲು ಸತ​ತ​ವಾಗಿ ನೋಟಿಸ್‌ ನೀಡ​ತೊ​ಡ​ಗಿದೆ. ಇದಕ್ಕೆ ಮುಖ್ಯ ಕಾರಣ ಕಾಂಗ್ರೆ​ಸ್‌ನ ಅತೃಪ್ತ ಶಾಸ​ಕರು ಬರೋ​ಬ್ಬರಿ ಒಂದು ತಿಂಗ​ಳಿ​ನಿಂದ ಕಾಂಗ್ರೆಸ್‌ ನಾಯ​ಕರ ಸಂಪ​ರ್ಕಕ್ಕೆ ಬರು​ತ್ತಿಲ್ಲ. ಕನಿಷ್ಠ ದೂರ​ವಾಣಿ ಸಂಪ​ರ್ಕಕ್ಕೂ ಸಿಗು​ತ್ತಿಲ್ಲ. ಶಾಸ​ಕಾಂಗ ಪಕ್ಷದ ಸಭೆಗೆ ಗೈರು ಹಾಜ​ರಾದ ಕಾರ​ಣಕ್ಕೆ ನೀಡ​ಲಾದ ನೋಟಿ​ಸ್‌ಗೆ ಅತೃಪ್ತ ಶಾಸ​ಕರು ಉತ್ತರ ನೀಡಿ​ದರೂ ಕಾಂಗ್ರೆಸ್‌ ನಾಯ​ಕ​ರನ್ನು ಭೇಟಿ ಮಾಡಿ ಸಮ​ಜಾ​ಯಿಷಿ ನೀಡುವ ಮನಸ್ಸು ಮಾಡ​ಲಿಲ್ಲ. ಇಷ್ಟ​ಲ್ಲದೆ, ಕಾಂಗ್ರೆಸ್‌ ಶಾಸ​ಕ​ರೊಂದಿಗೆ ಬಿಡ​ದಿಯ ಈಗ​ಲ್‌​ಟನ್‌ ರೆಸಾ​ರ್ಟ್‌ಗೆ ಆಗ​ಮಿಸಿ ಆನಂದ್‌ ​ಸಿಂಗ್‌ ಜತೆ ಜಟಾ​ಪಟಿ ನಡೆ​ಸಿದ ನಂತರ ಶಾಸಕ ಕಂಪ್ಲಿ ಗಣೇಶ್‌ ಕೂಡ ನಾಪ​ತ್ತೆ​ಯಾ​ಗಿದ್ದು, ಅವರು ಮತ್ತೆ ಅತೃ​ಪ್ತ​ರನ್ನು ಕೂಡಿಕೊಂಡಿ​ದ್ದಾರೆ ಎಂಬ ಗುಲ್ಲು ಹಬ್ಬಿ​ದೆ.

ಹೀಗಾಗಿ ಅತೃ​ಪ್ತರು ನೇರ​ವಾಗಿ ಬಂದು ಭೇಟಿ ಮಾಡಿ ಸಮ​ಜಾ​ಯಿಷಿ ನೀಡ​ಬೇಕು ಎಂದು ಶಾಸ​ಕಾಂಗ ಪಕ್ಷದ ಸಭೆಗೆ ಗೈರು ಹಾಜ​ರಾದ ನಾಲ್ಕು ಮಂದಿ ಶಾಸ​ಕ​ರಾದ ರಮೇಶ್‌ ಜಾರ​ಕಿ​ಹೊಳಿ, ಉಮೇಶ್‌ ಜಾಧವ್‌, ಕಂಪ್ಲಿ ಗಣೇಶ್‌ ಮತ್ತು ಬಿ. ನಾಗೇಂದ್ರ ಅವ​ರಿಗೆ ಮತ್ತೆ ನೋಟಿಸ್‌ ನೀಡಲಾಗಿದೆ. ಇದಕ್ಕೂ ಅತೃ​ಪ್ತರು ಜಗ್ಗಿಲ್ಲ. ಇದ​ರಿಂದಾಗಿ ಅತೃ​ಪ್ತರು ಸೇರಿ​ದಂತೆ ಕಾಂಗ್ರೆ​ಸ್‌ನ ಎಲ್ಲಾ ಶಾಸ​ಕರು ಈ ಬಾರಿಯ ಬಜೆಟ್‌ ಅಧಿ​ವೇ​ಶ​ನ​ಕ್ಕೆ ತಪ್ಪದೇ ಹಾಜ​ರಾ​ಗು​ವಂತೆ ಸೋಮ​ವಾರ ವಿಪ್‌ ಕೂಡ ಜಾರಿ ಮಾಡಲು ಪಕ್ಷ ಮುಂದಾ​ಗಿದೆ ಎಂದು ತಿಳಿದು ಬಂದಿ​ದೆ.

ಹೀಗೆ ಸತ​ತ​ವಾಗಿ ನೋಟಿಸ್‌ ಹಾಗೂ ವಿಪ್‌ ನೀಡು​ವುದರ ಹಿಂದೆ ಒಂದಿ​ಬ್ಬ​ರಾ​ದರೂ ಅತೃ​ಪ್ತ​ರ ವಿರುದ್ಧ ಪಕ್ಷಾಂತರ ವಿರೋಧಿ ಕಾಯ್ದೆ ಅಡಿ​ಯಲ್ಲಿ ಕ್ರಮ ಕೈಗೊಂಡು ಬಿಜೆ​ಪಿಯ ಸೆಳೆ​ತಕ್ಕೆ ಸಿಲು​ಕಿ​ರ​ಬ​ಹು​ದಾದ ಇತರ ಶಾಸ​ಕ​ರಿಗೆ ಎಚ್ಚ​ರಿಕೆ ನೀಡುವ ಉದ್ದೇ​ಶ​ವನ್ನು ಕಾಂಗ್ರೆಸ್‌ ನಾಯ​ಕರು ಹೊಂದಿ​ದ್ದಾರೆ ಎಂದು ಹೇಳ​ಲಾ​ಗು​ತ್ತಿ​ದೆ.