ಯಡಿಯೂರಪ್ಪನವರಿಗೆ ಪರ್ಯಾಯ ಎಲ್ಲಿದೆ?
ಯಡಿಯೂರಪ್ಪನವರಂತೆ ಪೊಲಿಟಿಕಲ್ ಮ್ಯಾನೆಜ್ಮೆಂಟ್ ಬಲ್ಲ ನಾಯಕ ಕರ್ನಾಟಕ ಬಿಜೆಪಿಯಲ್ಲಿ ಕಾಣುತ್ತಿಲ್ಲ. ಉದಾಸಿ, ಸವದಿ, ಬೊಮ್ಮಾಯಿ, ಕತ್ತಿ, ಕೋರೆ, ನಿರಾಣಿ, ಯತ್ನಾಳ್ ಯಾರಿಗೂ ತಮ್ಮ ಜಿಲ್ಲೆಯ ಹೊರಗಡೆ ಪ್ರಭಾವ ಇಲ್ಲ. ಜೊತೆಗೆ ಯಡಿಯೂರಪ್ಪ ಅವರಂತೆ ಬಣಜಿಗರು, ಸಾದರು, ಗಾಣಿಗರು, ಪಂಚಮಸಾಲಿಗಳು ಮತ್ತು ಜಂಗಮರನ್ನು ಒಟ್ಟು ಮಾಡುವ ಶಕ್ತಿ ಇಲ್ಲ. ಅದಕ್ಕೂ ಮುಖ್ಯವಾಗಿ, ಈ ನಾಯಕರಿಗೆ ಸಂಘದ ಆಶೀರ್ವಾದ ಇಲ್ಲ.
ಬೆಂಗಳೂರು (ಜೂ. 05): 2011ರಲ್ಲಿ ಯಡಿಯೂರಪ್ಪನವರನ್ನು ಹೈಕಮಾಂಡ್ ಇಳಿಸಿದಾಗ ಪರ್ಯಾಯದ ರೂಪದಲ್ಲಿ ಮೊದಲು ಡಿವಿಎಸ್, ನಂತರ ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡಲಾಗಿತ್ತು. ಆದರೆ ಪ್ರಬಲ ಸಮುದಾಯಕ್ಕೆ ಸೇರಿದ್ದ ಇಬ್ಬರಿಗೂ ಚುನಾವಣೆ ಗೆಲ್ಲಿಸಿ ಕೊಡುವ ಶಕ್ತಿ ಇರಲಿಲ್ಲ. ಅನಂತ ಕುಮಾರ್ ಅವರಿಗೆ ಪೊಲಿಟಕಲ್ ಮ್ಯಾನೇಜ್ಮೆಂಟ್ ಶಕ್ತಿ ಇತ್ತು. ಆದರೆ ಯಡಿಯೂರಪ್ಪನವರ ಒಪ್ಪಿಗೆ ಇರಲಿಲ್ಲ.
ಈಗಲೂ ಅಷ್ಟೆ, ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ ಎಂದು ಒಂದು ವೇಳೆ ಹೈಕಮಾಂಡ್‌ಗೆ ಅನ್ನಿಸಿದರೂ ಚುನಾವಣೆ ಗೆಲ್ಲಿಸಬಲ್ಲ, ಪೊಲಿಟಿಕಲ… ಮ್ಯಾನೆಜ್ಮೆಂಟ್ ಬಲ್ಲ ನಾಯಕ ಕರ್ನಾಟಕ ಬಿಜೆಪಿಯಲ್ಲಿ ಕಾಣುತ್ತಿಲ್ಲ. ಉದಾಸಿ, ಸವದಿ, ಬೊಮ್ಮಾಯಿ, ಕತ್ತಿ, ಕೋರೆ, ನಿರಾಣಿ, ಯತ್ನಾಳ್ ಯಾರಿಗೂ ತಮ್ಮ ಜಿಲ್ಲೆಯ ಹೊರಗಡೆ ಪ್ರಭಾವ ಇಲ್ಲ. ಜೊತೆಗೆ ಯಡಿಯೂರಪ್ಪ ಅವರಂತೆ ಬಣಜಿಗರು, ಸಾದರು, ಗಾಣಿಗರು, ಪಂಚಮಸಾಲಿಗಳು ಮತ್ತು ಜಂಗಮರನ್ನು ಒಟ್ಟು ಮಾಡುವ ಶಕ್ತಿ ಇಲ್ಲ. ಅದಕ್ಕೂ ಮುಖ್ಯವಾಗಿ, ಈ ನಾಯಕರಿಗೆ ಸಂಘದ ಆಶೀರ್ವಾದ ಇಲ್ಲ. ಇನ್ನು ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ ಅವರಿಗೆ ಸಂಘದ ಬೆಂಬಲ ಇದೆ. ಆದರೆ ಸಮುದಾಯದ ಆಶೀರ್ವಾದ ಇಲ್ಲ.
ಕೊರೋನಾ ನಿಭಾಯಿಸುವಲ್ಲಿ ಮೋದಿ ಯಶಸ್ವಿಯಾದ್ರಾ? ಅಕ್ಟೋಬರ್‌ನಲ್ಲಿ ಸಿಗುತ್ತೆ ಉತ್ತರ!
ಇನ್ನು ಸದಾನಂದ ಗೌಡರು, ಅಶೋಕ್, ಸಿ.ಟಿ ರವಿ, ಅಶ್ವಥ್ ನಾರಾಯಣ ಅವರಿಗೆæ ಒಕ್ಕಲಿಗರು ದೇವೇಗೌಡರನ್ನು ಬಿಟ್ಟು ಬಂದು ಪೂರ್ತಿ ಬೆಂಬಲ ಕೊಡುವುದು ಸಾಧ್ಯವಿಲ್ಲ. ನಳಿನ್ ಕಟೀಲು ಅವರಿಗೆ ಸಂಘಟನೆ ಬಲವಿದೆಯೇ, ಹೊರತು ಮಂಗಳೂರಿನ ಹೊರಗಡೆ ಏನೂ ಪ್ರಭಾವ ಇಲ್ಲ. ಈಶ್ವರಪ್ಪ, ಕಾರಜೋಳರಿಗೆ ನಾಯಕತ್ವ ಕೊಟ್ಟರೆ ಬಿಜೆಪಿ ಪ್ರಬಲ ಸಮುದಾಯದ ವೋಟ್ ಬ್ಯಾಂಕ್ ಕಳೆದುಕೊಳ್ಳೋದು ನಿಶ್ಚಿತ. ಇನ್ನು ದೆಹಲಿಯಲ್ಲಿ ಪ್ರಭಾವಿ ಸಂತೋಷ ಜಿ ಅವರಿಗೆ ಪೊಲಿಟಿಕಲ್ ಮ್ಯಾನೇಜ್ಮೆಂಟ್ ಗೊತ್ತು, ಸಂಘ ಪರಿವಾರದ ಬೆಂಬಲವೂ ಇದೆ. ಆದರೆ ಅವರಿಗೆ ಪಕ್ಷ ನಡೆಸಿ ಗೊತ್ತೇ ಹೊರತು, ಸರ್ಕಾರದ ಅನುಭವ ಇಲ್ಲ.
ಬಹುತೇಕ ರಾಜ್ಯದಲ್ಲಿ ಪರ್ಯಾಯ ನಾಯಕತ್ವ ಇಲ್ಲದಿರುವುದೇ ಯಡಿಯೂರಪ್ಪನವರಿಗೆ ದೊಡ್ಡ ನಿರಾಳತೆ. ಅಲ್ಲಿಯವರೆಗೆ ಇಲ್ಲಿ ಶಾಸಕರು ಎಷ್ಟೇ ಸಪ್ಪಳ ಮಾಡಿದರೂ ದಿಲ್ಲಿ ನಾಯಕರಿಗೆ ಮೌನವೇ ಭೂಷಣದ ಅನಿವಾರ್ಯತೆ. ಅಂದ ಹಾಗೆ, 2011ರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸುರೇಶ್ ಕುಮಾರ್ ಹೆಸರು ದಿಲ್ಲಿಯಲ್ಲಿ ಓಡಾಡುತ್ತಿತ್ತು. ಆಗ ಈ ಬಗ್ಗೆ ಕೇಳಿದಾಗ, ‘ಅಯ್ಯೋ ನನಗೆ ಸಾಧ್ಯವಿಲ್ಲ. ಯಡಿಯೂರಪ್ಪ ಬಿಟ್ಟರೆ ಇಲ್ಲಿ ಯಾರಿಗೂ ಶಾಸಕರನ್ನು ಸಂಭಾಳಿಸಿ ಆಡಳಿತ ನಡೆಸಲು ಬರಲ್ಲ. ಅವರಿಗೆ ಆಟ ಆಡೋದು, ಆಡಿಸೋದು ಎರಡೂ ಗೊತ್ತು’ ಎಂದಿದ್ದರು.
ಬಿಎಸ್‌ವೈಗೆ ‘ದೆಹಲಿ ಅಪಾಯ’ ದೂರ: ರಾಜಾಹುಲಿ ದೂಷಿಸಲು ಕಾರಣ ಉಳಿದಿಲ್ಲ!
2009ರ ನವೆಂಬರ 8ರ ಆ ದಿನ
2009 ನವೆಂಬರ್ 8 ಯಡಿಯೂರಪ್ಪ ಸರ್ಕಾರದ ವಿರುದ್ಧ ಜನಾರ್ಧನ ರೆಡ್ಡಿ ಮತ್ತು ಜಗದೀಶ್ ಶೆಟ್ಟರ್ ಬಂಡಾಯ ಮೊಳಗಿಸಿದ ದಿನ. ಅವತ್ತು ಬೆಳಿಗ್ಗೆ 40 ಶಾಸಕರು ಹೈದರಾಬಾದಿಗೆ ಹೋದ ನಂತರ, ನಾನು ತುಘಲಕ್ ಕ್ರೆಸೆಂಟ್‌ನಲ್ಲಿದ್ದ ಅನಂತ ಕುಮಾರ್ ನಿವಾಸಕ್ಕೆ ಓಡಿದೆ. ಒಂದು ಗಂಟೆ ಕಾದರೂ ಅನಂತ ಭೇಟಿ ಸಾಧ್ಯವಾಗಲಿಲ್ಲ. ಕೊನೆಗೆ ಕಾಡಿ ಬೇಡಿದ ನಂತರ ಅನಂತ ನೇರವಾಗಿ ಬೆಡ್‌ರೂಮಿಗೆ ಕರೆಸಿಕೊಂಡರು. ‘ಕ್ಯಾಮೆರಾ ತಂದಿದ್ದೀರಾ.. ಹಾಗಿದ್ದರೆ ಹೊರಗಿಟ್ಟು ಬನ್ನಿ’ ಎಂದು ಕೇಳಿದಾಗ, ‘ಇಲ್ಲ ಸರ್’ ಎಂದೆ. ‘ಕೂತ್ಕೊಳ್ಳಿ’ ಎಂದು ಹೇಳಿದ ಅನಂತ ಕುಮಾರ್ ಶೇವ್ ಮಾಡಿಕೊಳ್ಳತೊಡಗಿದರು. ಹಾಗೇ ಮಾತನಾಡುತ್ತಾ ನಾನು ಹೇಳಿದ್ದನ್ನೆಲ್ಲಾ ಕೇಳಿಸಿಕೊಳ್ಳುತ್ತಿದ್ದ ಕುಮಾರ್ ಬಂಡಾಯದ ಬಗ್ಗೆ ಮಾತ್ರ ತುಟಿ ಪಿಟಕ್ ಅನ್ನಲಿಲ್ಲ.
ಕೊನೆಗೆ ಸುಸ್ತಾದ ನಾನು, ‘ಸರ್ ರೆಡ್ಡಿ ಬಂಡಾಯದಿಂದ ಯಡಿಯೂರಪ್ಪ ಕುರ್ಚಿ ಹೋಗುತ್ತದೋ, ಇಲ್ಲವೋ ಅಷ್ಟು ಹೇಳಿ’ ಎಂದೆ. ‘ನೀವು ಪತ್ರಕರ್ತ ಅಲ್ಲವಾ.. ಸ್ವಲ್ಪ ಅಶೋಕಾ ರೋಡ್ ಮೂಸಿ ನೋಡಿ’ ಎಂದರು. ‘ಅಯ್ಯೋ ಯಾರು ಹೇಳ್ತಾರೆ ಸರ್? ನಿಮ್ಮ ಹಿಂದಿ ನಾಯಕರು ಕನ್ನಡ ಪತ್ರಕರ್ತರು ಎಂದರೆ ಮಾತನಾಡಿಸೋಲ್ಲ’ ಎಂದಾಗ, ‘ಪ್ರಶಾಂತ್, ಜಗತ್ತಿನ ಯಾವುದೇ ರಾಜಕೀಯ ಬಂಡಾಯದಲ್ಲಿ ಮೊದಲ ಸಲವೇ ರಾಜ ಅಧಿಕಾರ ಕಳೆದುಕೊಂಡ ಉದಾಹರಣೆಗಳಿಲ್ಲ. ಯಡಿಯೂರಪ್ಪ ಅವರಿಗೇನೂ ಆಗುವುದಿಲ್ಲ. ನೀವು ರಾಜಕೀಯ ವರದಿ ಮಾಡುವವರು ಸ್ವಲ್ಪ ಇತಿಹಾಸ ಓದಿಕೊಂಡು ವಿಶ್ಲೇಷಣೆ ಮಾಡಿ’ ಎಂದು ನಗುತ್ತಾ ಸೀದಾ ಸ್ನಾನಕ್ಕೆ ಹೋದರು. ಅನಂತ ಮತ್ತು ಬಿಎಸ್‌ವೈ ಆಗ ಎಷ್ಟೇ ಬಡಿದಾಡಿಕೊಂಡರೂ ಪತ್ರಕರ್ತರ ಎದುರು ಕೆಟ್ಟಶಬ್ದ ಪ್ರಯೋಗ ಮಾಡುತ್ತಿರಲಿಲ್ಲ. ಒಮ್ಮೊಮ್ಮೆ ಮೂಡ್ ಇದ್ದಾಗ ಯಡಿಯೂರಪ್ಪ, ‘ಕುಮಾರ ಏನಂತಾರೆ’ ಎಂದು ಕೇಳಿದರೆ, ಅನಂತ ಕುಮಾರ್, ‘ಚೇರ್ಮನ್ನರು ಏನಂತಾರೆ, ಸಿಕ್ಕಿದ್ರಾ?’ ಎಂದಷ್ಟೇ ಕೇಳುತ್ತಿದ್ದರು.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ