ಬಿಎಸ್‌ವೈಗೆ ‘ದೆಹಲಿ ಅಪಾಯ’ ದೂರ: ರಾಜಾಹುಲಿ ದೂಷಿಸಲು ಕಾರಣ ಉಳಿದಿಲ್ಲ!
ದೆಹಲಿ ಜೊತೆಗೆ ಯಡಿಯೂರಪ್ಪ ಅವರ ಸಂಬಂಧ ಅಷ್ಟಕಷ್ಟೇ| ಅಡ್ವಾಣಿ, ನಿತಿನ್ ಗಡ್ಕರಿಯಿಂದ ಹಿಡಿದು ಈಗಿನ ಮೋದಿ, ಶಾ ವರೆಗೆ ಎಲ್ಲರೊಂದಿಗೂ ಯಡಿಯೂರಪ್ಪ ಅವರದು ಸ್ವಲ್ಪ ಸಿಹಿ, ಸ್ವಲ್ಪ ಕಹಿ| ತಮಗಿಂತ ಕಿರಿಯರಾದ ಮಂತ್ರಿಗಳು, ಶಾಸಕರು ಹಾಗೂ ಅಧಿಕಾರಿಗಳನ್ನೂ ನಾಚಿಸುವಂತೆ ಯಡಿಯೂರಪ್ಪ 50 ದಿನಗಳಿಂದ ದುಡಿಯುತ್ತಿದ್ದಾರೆ
ನವದೆಹಲಿ(ಮೇ.22): ಮುಖ್ಯಮಂತ್ರಿ ಆದಾಗಲೆಲ್ಲ ದೆಹಲಿ ಜೊತೆಗೆ ಯಡಿಯೂರಪ್ಪ ಅವರ ಸಂಬಂಧ ಅಷ್ಟಕಷ್ಟೇ. ಹಿಂದೆ ಅಡ್ವಾಣಿ, ನಿತಿನ್ ಗಡ್ಕರಿಯಿಂದ ಹಿಡಿದು ಈಗಿನ ಮೋದಿ, ಶಾ ವರೆಗೆ ಎಲ್ಲರೊಂದಿಗೂ ಯಡಿಯೂರಪ್ಪ ಅವರದು ಸ್ವಲ್ಪ ಸಿಹಿ, ಸ್ವಲ್ಪ ಕಹಿ ಎಂಬಂಥ ಸಂಬಂಧ. ಕರ್ನಾಟಕ ಬಿಜೆಪಿಗೆ ಯಡಿಯೂರಪ್ಪ ಒಬ್ಬರೇ ಜನ ನಾಯಕ ಎಂದು ದಿಲ್ಲಿಯವರು ಒಪ್ಪುತ್ತಾರೆ. ಜೊತೆಜೊತೆಗೇ ಮೂಗುದಾರ ಹಾಕಲೂ ಬರುತ್ತಾರೆ.
ಅಶ್ವತ್ಥ ನಾರಾಯಣ್, ಕಾರಜೋಳ, ಸವದಿ ಹೀಗೆ ಮೂವರನ್ನು ಉಪಮುಖ್ಯಮಂತ್ರಿ ಮಾಡಿದ್ದಾರಲ್ಲವೇ. ಆದರೆ ಕೊರೋನಾ ಕಾಲದಲ್ಲಿ ಯಡಿಯೂರಪ್ಪ ಮಾಡಿದ ಕೆಲಸ, ತೋರಿಸಿದ ಸಾಮರ್ಥ್ಯ ಮಾತ್ರ ದಿಲ್ಲಿ ಹೈಕಮಾಂಡ್ ನಾಯಕರ ಹಾಗೂ ಆರ್‌ಎಸ್‌ಎಸ್‌ನವರ ಮೆಚ್ಚುಗೆಗೆ ಪಾತ್ರವಾಗಿದೆ.
'ಆತ್ಮ ನಿರ್ಭರತೆ'ಗೆ ಮೋದಿ ಕರೆ: ಲಾಭದಾಯಕವಾಗುತ್ತಾ ಕೃಷಿ ಕ್ಷೇತ್ರ?
ಕೊರೋನಾ ಅಪ್ಪಳಿಸುವ ಮುಂಚೆ ಕೆಲವು ಲಿಂಗಾಯತ ಶಾಸಕರಿಂದಲೇ ಅಮಿತ್ ಶಾ ಹಾಗೂ ನಡ್ಡಾ ಅವರಿಗೆ ಯಡಿಯೂರಪ್ಪ ವಿರುದ್ಧ ದೂರು ಕೊಡುವ ಪ್ರಯತ್ನ ನಡೆದಿತ್ತು. ಆದರೆ ಈಗ ಕೊಡುವವರಿಗೂ ಆಸಕ್ತಿಯಿಲ್ಲ, ಕೇಳಿಸಿಕೊಳ್ಳುವವರಿಗೂ ಪುರುಸೊತ್ತಿಲ್ಲ. ತಮಗಿಂತ ಕಿರಿಯರಾದ ಮಂತ್ರಿಗಳು, ಶಾಸಕರು ಹಾಗೂ ಅಧಿಕಾರಿಗಳನ್ನೂ ನಾಚಿಸುವಂತೆ ಯಡಿಯೂರಪ್ಪ 50 ದಿನಗಳಿಂದ ದುಡಿಯುತ್ತಿದ್ದಾರೆ.
ತಮ್ಮದೇ ರಾಜ್ಯ ಗುಜರಾತ್‌ನಲ್ಲಿ ಕೊರೋನಾ ತಾಂಡವ ಆಡುತ್ತಿರುವಾಗ, ಕರ್ನಾಟಕದಲ್ಲಿ ಸೋಂಕು ಹಬ್ಬದಂತೆ ತಡೆದ ಯಡಿಯೂರಪ್ಪ ಬಗ್ಗೆ ತಾತ್ಕಾಲಿಕವಾಗಿ ಅಂತೂ ದಿಲ್ಲಿಯಲ್ಲಿ ಹೈಕಮಾಂಡ್ ಮಟ್ಟದಲ್ಲಿ ಕೌತುಕ ಮನೆ ಮಾಡಿದೆ. ಸದ್ಯಕ್ಕಂತೂ ವಿಜಯೇಂದ್ರ ಹಸ್ತಕ್ಷೇಪ ಮುಂತಾದ ವಿಷಯದ ಚರ್ಚೆಗೆ ವೇದಿಕೆ ಸಿಗುತ್ತಿಲ್ಲ. ಮಗದೊಮ್ಮೆ ತಾನಾಗಿಯೇ ಸಂಪುಟ ಪುನಾರಚನೆಗೆ ಕೈಹಾಕುವವರೆಗೆ ಯಡಿಯೂರಪ್ಪ ಮತ್ತವರ ಸರ್ಕಾರಕ್ಕೆ ಅಪಾಯ ದಿಲ್ಲಿಯಿಂದಂತೂ ಕಾಣುತ್ತಿಲ್ಲ. ಸಂಕಷ್ಟವೂ ಕೂಡ ಕೆಲವರಿಗೆ ಹೊಸ ಅವಕಾಶ ಕೊಡುತ್ತದೆ ನೋಡಿ!
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ