ಉತ್ತರ ಕರ್ನಾಟಕ ಸಾಧಕರಿಗೆ ಮುಂಬೈಯಲ್ಲಿ ಪ್ರಶಸ್ತಿ: ಬೊಮ್ಮಾಯಿ, ನಟ ನವೀನ ಶಂಕರರಿಂದ ಪ್ರದಾನ
ಕನ್ನಡಪ್ರಭ ವರ್ಷದ ವ್ಯಕ್ತಿ, ಅಸಾಮಾನ್ಯ ಕನ್ನಡಿಗ, ರೈತ ರತ್ನ, ಮಹಿಳಾ ಸಾಧಕಿ, ಕರ್ನಾಟಕ ಬ್ಯುಜಿನೆಸ್ ಅವಾರ್ಡ್, ಸುವರ್ಣ ಕನ್ನಡಿಗ, ಸುವರ್ಣ ಸಾಧಕ ಪ್ರಶಸ್ತಿ ನೀಡಿ ಸಾಧಕರನ್ನು ಗುರುತಿಸುತ್ತಿದೆ.
ಮುಂಬೈ (ನ.04): ನಾಡಿನ ಪ್ರಮುಖ ಸುದ್ದಿ ಸಂಸ್ಥೆಯಾಗಿರುವ "ಕನ್ನಡಪ್ರಭ ಹಾಗೂ ಏಷಿಯಾನೆಟ್ ಸುವರ್ಣ ನ್ಯೂಸ್" ಬರೀ ಸುದ್ದಿ ತರುವ ಕೆಲಸವಷ್ಟೇ ಮಾಡುತ್ತಿಲ್ಲ. ಸುದ್ದಿಯ ಜತೆ ಜತೆಗೆ ಸಾಮಾಜಿಕ ಕಳಕಳಿ ಪ್ರತಿಬಿಂಬಿಸುವ ಕೆಲಸಗಳನ್ನೂ ದಶಕಗಳಿಂದಲೇ ಮಾಡುತ್ತಲೇ ಬಂದಿದೆ. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದಲ್ಲಿ ಎದುರಿಸಿದ್ದ ಅತಿವೃಷ್ಟಿ, ಅನಾವೃಷ್ಟಿ ಸೇರಿದಂತೆ ವಿವಿಧ ಸಂಕಷ್ಟದ ಸಂದರ್ಭದಲ್ಲಿ ತನ್ನದೇ ಆದ ಕೊಡುಗೆ ನೀಡಿದೆ. ಇದರೊಂದಿಗೆ ಸಮಾಜದ ಏಳ್ಗೆಗೆ ಯಾವುದೇ ಪ್ರಚಾರ ಬಯಸದೇ ಸದ್ದಿಲ್ಲದೇ ತೆರೆಮರೆಯಲ್ಲಿ ಕೆಲಸ ಮಾಡುತ್ತಿರುವ ಸಾಧಕರನ್ನು ಗುರುತಿಸುವಲ್ಲಿ ಹಿಂದೆ ಬಿದ್ದಿಲ್ಲ.
ಕನ್ನಡಪ್ರಭ ವರ್ಷದ ವ್ಯಕ್ತಿ, ಅಸಾಮಾನ್ಯ ಕನ್ನಡಿಗ, ರೈತ ರತ್ನ, ಮಹಿಳಾ ಸಾಧಕಿ, ಕರ್ನಾಟಕ ಬ್ಯುಜಿನೆಸ್ ಅವಾರ್ಡ್, ಸುವರ್ಣ ಕನ್ನಡಿಗ, ಸುವರ್ಣ ಸಾಧಕ ಪ್ರಶಸ್ತಿ ನೀಡಿ ಸಾಧಕರನ್ನು ಗುರುತಿಸುತ್ತಿದೆ. ಜತೆಗೆ ವನ್ಯಜೀವಿ ಸಂರಕ್ಷಣಾ ಅಭಿಯಾನ ನಡೆಸಿ ಪರಿಸರ ಹಾಗೂ ವನ್ಯಜೀವಿ ಪ್ರೇಮವನ್ನು ಸಾಬೀತುಪಡಿಸಿದ್ದರೆ, ಕರ್ನಾಟಕದಲ್ಲೂ ಸಾಕಷ್ಟು ಅದ್ಭುತಗಳಿವೆ ಎಂಬುದನ್ನು ಸಮಾಜಕ್ಕೆ ತೋರಿಸುವುದಕ್ಕಾಗಿ "ಸೆವೆನ್ ವಂಡರ್ಸ್ ಆಫ್ ಕರ್ನಾಟಕ" ಎಂಬ ವಿನೂತನ ಹಾಗೂ ವಿಶಿಷ್ಠ ಕಾರ್ಯಕ್ರಮ ಆಯೋಜಿಸಿದ್ದು ಸಾಮಾಜಿಕ ಕಳಕಳಿಗೆ ಹಿಡಿದ ಕೈಗನ್ನಡಿ. ಮೊದಲ ಬಾರಿಗೆ ದೂರದ ಬಹರೇನ್, ದುಬೈ ಹಾಗೂ ಮಲೇಷಿಯಾಗಳಲ್ಲಿ ಯಶಸ್ವಿಯಾಗಿ ಇಂಡಿಯನ್ ಐಕಾನ್ ಅವಾರ್ಡ್ ಕಾರ್ಯಕ್ರಮಗಳನ್ನು ಸಂಘಟಿಸಿ ಇಲ್ಲಿನ ಸಾಧಕರನ್ನು ಹೊರದೇಶಗಳಲ್ಲಿ ಪರಿಚಿಯಿಸಿದ್ದು ಕನ್ನಡಪ್ರಭ ಮತ್ತು ಏಷಿಯಾನೆಟ್ ಸುವರ್ಣ ನ್ಯೂಸ್‌ನ ಹೆಮ್ಮೆ.
ರಿಪೋಟರ್ಸ್ ಡೈರಿ: ಸಿದ್ದರಾಮಯ್ಯ ಸಂಡೇ ಲಾಯರಂತೆ, ಹೌದಾ!
ಎನ್‌ಕೆ ಅಚೀವರ್ಸ್: ಇದೀಗ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ತೆರೆಮರೆಯಲ್ಲಿ ತಮ್ಮದೇ ಕ್ಷೇತ್ರದಲ್ಲಿ ಸದ್ದಿಲ್ಲದೇ ಸಾಧನೆ ಮಾಡುತ್ತಿರುವ ಸಾಧಕರನ್ನು ಗುರುತಿಸಿ "ಎನ್‌ಕೆ ಅಚೀವರ್ಸ್" ಎಂಬ ಪ್ರಶಸ್ತಿ ನೀಡಿ ಗೌರವಿಸಿದ್ದು ಮತ್ತೊಂದು ಯಶಸ್ವಿಯ ಹೆಜ್ಜೆಯನ್ನು ಇಟ್ಟಿದೆ. ಅದು ಕೂಡ ಮಹಾರಾಷ್ಟ್ರದ ಮುಂಬೈಯಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದ್ದು ವಿಶೇಷ. ಮುಂಬೈಯ ಪ್ರತಿಷ್ಠಿತ ಹೋಟೆಲ್ ಆದ "ಸುಪ್ರೀಮ್ ಬ್ಯುಜಿನೆಸ್ ಪಾರ್ಕ್‌ನ ಹಿರಾನಂದಾನಿ ಗಾರ್ಡನ್ ಪವಾಯಿಯ ಆಥೇನಾ ಬ್ಯಾಂಕ್ವಿಟ್ ಹಾಲ್"ನಲ್ಲಿ ಆಯೋಜಿಸಿದ್ದ ಸಮಾರಂಭವೂ ವೈಶಿಷ್ಟ್ಯಪೂರ್ಣ ಹಾಗೂ ಅರ್ಥಪೂರ್ಣವಾಗಿ ನಡೆಯಿತು.
ಶಿಕ್ಷಣ, ವೈದ್ಯಕೀಯ, ವ್ಯಾಪಾರ ವಹಿವಾಟು, ಸಾಮಾಜಿಕ ಸೇವೆ ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಬರೋಬ್ಬರಿ 24 ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದರೊಂದಿಗೆ ಉತ್ತರ ಕರ್ನಾಟಕದ ಸಾಧಕರನ್ನು ಮಹಾರಾಷ್ಟ್ರದಲ್ಲಿ ಪರಿಚಯಿಸಿದಂತಾಗಿದ್ದು ವಿಶೇಷ. ಕನ್ನಡಪ್ರಭ ಮತ್ತು ಏಷಿಯಾನೆಟ್ ಸುವರ್ಣ ನ್ಯೂಸ್ ಆಯೋಜಿಸಿದ್ದ ಅಪರೂಪದ ಕಾರ್ಯಕ್ರಮಕ್ಕೆ ತಾನಾಗಲೇ ಹುಬ್ಬಳ್ಳಿಯ "ಪ್ರಭಾಸ್ ವಿ- ಕೇರ್ ಹೆಲ್ತ್ ಕ್ಲಿನಿಕ್ ಪ್ರಾವೈಟ್ ಲಿಮಿಟೆಡ್" ಕೂಡ ಸಾಥ್ ನೀಡಿದ್ದು ಮತ್ತೊಂದು ವಿಶೇಷ.
ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ, ಚಿತ್ರನಟ ನವೀನ ಶಂಕರ ಪ್ರಶಸ್ತಿ ಪ್ರಧಾನ ಮಾಡಿ ಶುಭ ಹಾರೈಸಿದರು. ಅಲ್ಲದೇ, ಸಂಸ್ಥೆಯ ಈ ಸಮಾಜಮುಖಿ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಹಾಗೆ ನೋಡಿದರೆ ಮಹಾರಾಷ್ಟ್ರ ಸರ್ಕಾರದ ಡಿಸಿಎಂ ದೇವೇಂದ್ರ ಫಡ್ನವೀಸ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು. ಆದರೆ ಕೆಲಸದ ಒತ್ತಡದಿಂದಾಗಿ ಕಾರ್ಯಕ್ರಮಕ್ಕೆ ಆಗಮಿಸಲು ಸಾಧ್ಯವಾಗದಿದ್ದರೂ ವಿಡಿಯೋ ಸಂದೇಶ ಕಳುಹಿಸಿ ಸಂಸ್ಥೆ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಪ್ರಧಾನ ಸಂಪಾದಕರಾದ ರವಿ ಹೆಗಡೆ, ಕನ್ನಡಪ್ರಭ ಪುರವಣಿ ಪ್ರಧಾನ ಸಂಪಾದಕ ಗಿರೀಶರಾವ್ ಹತ್ವಾರ್ (ಜೋಗಿ), ವಿಶೇಷ ಯೋಜನೆ ಸಂಪಾದಕ ಬಿ.ವಿ. ಮಲ್ಲಿಕಾರ್ಜುನಯ್ಯ, ಹುಬ್ಬಳ್ಳಿ ಆವೃತ್ತಿ ಮುಖ್ಯಸ್ಥ ಮಲ್ಲಿಕಾರ್ಜುನ ಸಿದ್ದಣ್ಣವರ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. ಎರಡು ಗಂಟೆಗೂ ಹೆಚ್ಚು ಕಾಲ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಯಾವುದೇ ಪ್ರಶಸ್ತಿ ಪುರಸ್ಕೃತರು, ಅವರ ಕುಟುಂಬಸ್ಥರನ್ನು ಸೆಳೆದಿದ್ದು ವಿಶೇಷ.
ಮೋದಿ ಪುಢಾರಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿಗರ ಆಕ್ರೋಶ
ಸಮಾಜಕ್ಕೆ ಸಲ್ಲಿಸಿದ ನಮ್ಮ ಅಳಿಲು ಸೇವೆ ಮೆಚ್ಚಿ ನಾಡಿನ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಯು ನಮಗೆ "ಎನ್‌ಕೆ ಅಚೀವರ್ಸ್" ಎಂದು ಅವಾರ್ಡ್ ನೀಡಿದೆ. ಕೆಲವೊಂದು ಪ್ರಶಸ್ತಿಗಳು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸುತ್ತವೆ. ಅದೇ ರೀತಿ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ನೀಡಿರುವ ಪ್ರಶಸ್ತಿಯೂ ನಮ್ಮ ಜವಾಬ್ದಾರಿ ಹೆಚ್ಚಿಸಿದೆ. ಅದು ಕೂಡ ಯಾವುದೋ ಊರಲ್ಲಿ ನಮ್ಮ ಪಾಡಿಗೆ ಕೆಲಸ ಮಾಡುತ್ತಿದ್ದ ನಮ್ಮನ್ನು ಮುಂಬೈಗೆ ಕರೆತಂದು ಪ್ರಶಸ್ತಿ ನೀಡಿ ಗೌರವಿಸಿದ್ದು ನಮ್ಮ ಗರಿಮೆ ಹೆಚ್ಚಿಸಿದಂತಾಗಿದೆ. ಈ ಪ್ರಶಸ್ತಿಗೆ ನಮ್ಮ ಹಿರಿಮೆ ಎಂದು ಪ್ರಶಸ್ತಿ ಪುರಸ್ಕೃತರು ಧನ್ಯತಾ ಭಾವ ಅರ್ಪಿಸಿದ್ದು ಮತ್ತೊಂದು ವಿಶೇಷ.