ರಾಜ್ಯದಲ್ಲಿ ಬಂಧಿತ 15 ಮುಖಂಡರಿಗೆ ಪೊಲೀಸರ ಬಿಸಿ, ಆರೋಪಿಗಳ ಹಣದ ಮೂಲ ಶೋಧ

ಬೆಂಗಳೂರು(ಸೆ.25): ಸಮಾಜದಲ್ಲಿ ಎರಡು ಸಮುದಾಯಗಳ ನಡುವೆ ದ್ವೇಷ ಹುಟ್ಟುಹಾಕಲು ಹಾಗೂ ಗಲಭೆ ಸೃಷ್ಟಿಸಲು ಸಂಚು ರೂಪಿಸಿದ ಆರೋಪ ಹೊತ್ತು ಪೊಲೀಸರ ಬಲೆಗೆ ಬಿದ್ದಿರುವ ರಾಜ್ಯದ ಪ್ಯಾಫುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಸಂಘಟನೆಯ ಪ್ರಮುಖ 15 ಮಂದಿ ಮುಖಂಡರ ಆರ್ಥಿಕ ವ್ಯವಹಾರ ಬಗ್ಗೆ ತನಿಖಾ ತಂಡ ಶೋಧಿಸಲಾರಂಭಿಸಿದೆ.

ಎರಡು ದಿನಗಳ ಹಿಂದೆ ರಾಜ್ಯದ ವಿವಿಧೆಡೆ ಹಾಗೂ ದೆಹಲಿಯಲ್ಲಿ ದಾಳಿ ನಡೆಸಿ ಪಿಎಫ್‌ಐ ಮುಖಂಡರನ್ನು ಬೆಂಗಳೂರು ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದರು. ಈ ದಾಳಿ ವೇಳೆ 15 ಮಂದಿ ಪೈಕಿ ಮೂವರ ಆರೋಪಿಗಳ ಮನೆಗಳಲ್ಲಿ ನಗದು ಹಣ ಪತ್ತೆಯಾಗಿದ್ದರೆ, ಬಹುತೇಕರ ಮನೆಗಳಲ್ಲಿ ವಿವಿಧ ಬ್ಯಾಂಕ್‌ಗಳ ಪಾಸ್‌ಬುಕ್‌, ಚೆಕ್‌ಬುಕ್‌ ಹಾಗೂ ಭೂ ವ್ಯವಹಾರದ ದಾಖಲೆಗಳು ಜಪ್ತಿಯಾಗಿವೆ. ಈ ದಾಖಲೆಗಳನ್ನು ಮುಂದಿಟ್ಟು ಅಧಿಕಾರಿಗಳು ಆರೋಪಿಗಳ ಹಣಕಾಸು ವ್ಯವಹಾರ ಕೆದಕಲು ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.

NIA Raid: ಅನ್ಯ ಧರ್ಮದ ದೊಡ್ಡ ಲೀಡರ್‌ಗಳೇ ಪಿಎಫ್‌ಐ ಟಾರ್ಗೆಟ್‌..!

ಬ್ಯಾಂಕ್‌ಗಳಿಗೆ ಪತ್ರ ಬರೆಯಲು ನಿರ್ಧಾರ:

ಪಿಎಫ್‌ಐ ಮುಖಂಡರು ಖಾತೆ ಹೊಂದಿರುವ ಬ್ಯಾಂಕ್‌ಗಳಿಗೆ ಪತ್ರ ಬರೆದು ಎರಡ್ಮೂರು ವರ್ಷಗಳ ಹಣಕಾಸು ವಹಿವಾಟಿನ ಕುರಿತು ಮಾಹಿತಿ ನೀಡುವಂತೆ ಕೋರಲು ಪೂರ್ವ ವಿಭಾಗದ ಪೊಲೀಸರು ನಿರ್ಧರಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಅಕ್ರಮವಾಗಿ ವಿದೇಶದಿಂದ ದೇಣಿಗೆ ಸಂಗ್ರಹಿಸಿ ಕಾನೂನುಬಾಹಿರ ಚಟುವಟಿಕೆಗಳಿಗೆ ಪಿಎಫ್‌ಐ ಸಂಘಟನೆ ಬಳಸಿಕೊಂಡಿದೆ ಎಂಬ ಗಂಭೀರ ಆರೋಪ ಇದೆ. ಹೀಗಾಗಿಯೇ ಈಗ ಬಂಧಿತರಾಗಿರುವ ಎಲ್ಲ ನಾಯಕರು ಆ ಸಂಘಟನೆಯ ಪ್ರಮುಖ ಹುದ್ದೆಯಲ್ಲಿದ್ದವರು. ಹಲವು ವರ್ಷಗಳಿಂದ ರಾಜ್ಯದಲ್ಲಿ ಪಿಎಫ್‌ಐ ಸಂಘಟನೆಯಲ್ಲಿ ಸಕ್ರಿಯವಾಗಿದ್ದವರು. ಇದರಿಂದ ಈ ಸಂಘಟನೆ ಚಟುವಟಿಕೆಗಳಿಗೆ ಅಗತ್ಯವಾದ ಆರ್ಥಿಕ ಮೂಲ ಯಾವುದಿತ್ತು ಎಂಬ ಪ್ರಶ್ನೆ ತನಿಖಾ ತಂಡಕ್ಕೆ ಎದುರಾಗಿದೆ. ಈ ಹಿನ್ನಲೆಯಲ್ಲಿ ಆರೋಪಿಗಳ ಬ್ಯಾಂಕ್‌ ಖಾತೆಗಳ ಆರ್ಥಿಕ ವಹಿವಾಟಿನ ವಿವರ ಪಡೆಯಲಾಗುತ್ತದೆ. ಕೆಲವರ ಮನೆಯಲ್ಲಿ ಪತ್ತೆಯಾದ ಬ್ಯಾಂಕ್‌ ಪಾಸ್‌ ಬುಕ್‌ಗಳು ಇದಕ್ಕೆ ನೆರವಾಗಿದೆ ಎಂದು ಮೂಲಗಳು ತಿಳಿಸಿವೆ.

ಆರೋಪಿಗಳಿಗೆ ಇ.ಡಿ. ಸಂಕಷ್ಟ?:

ಕಾನೂನುಬಾಹಿರ ಕೃತ್ಯಗಳ ಆರೋಪ ಹೊತ್ತು ಬೆಂಗಳೂರು ಪೊಲೀಸರ ಬಲೆಗೆ ಬಿದ್ದಿರುವ ರಾಜ್ಯ ಪಿಎಫ್‌ಐ ಸಂಘಟನೆಯ ಪ್ರಮುಖ ಮುಖಂಡರಿಗೆ ಈಗ ಜಾರಿ ನಿರ್ದೇಶನಾಲಯ (ಇ.ಡಿ.)ದ ಭಯ ಶುರುವಾಗಿದ್ದು, ಆರೋಪಿಗಳ ಮನೆಯಲ್ಲಿ ಪತ್ತೆಯಾದ 34 ಲಕ್ಷ ರು. ಹಣದ ಕುರಿತು ಇ.ಡಿ.ಗೆ ಪೊಲೀಸರು ಮೌಖಿಕ ಮಾಹಿತಿ ನೀಡಿದ್ದಾರೆ.

ಪಿಎಫ್‌ಐ ದಾಳಿ ವೇಳೆ ಸಾವರ್ಕರ್‌ ಸೇರಿ ಹಲವು ಪುಸ್ತಕ, ಹಣ ಪತ್ತೆ

ಈಗಾಗಲೇ ದೆಹಲಿಯಲ್ಲಿ 120 ಕೋಟಿ ರು. ಅಕ್ರಮವಾಗಿ ವಿದೇಶಿ ದೇಣಿಗೆ ಸಂಗ್ರಹ ಪ್ರಕರಣದಲ್ಲಿ 40ಕ್ಕೂ ಹೆಚ್ಚಿನ ಮುಖಂಡರನ್ನು ಇ.ಡಿ. ಬಂಧಿಸಿ ತನಿಖೆಗೊಳಪಡಿಸಿದೆ. ಅಂತೆಯೇ ಅಕ್ರಮ ಹಣ ವರ್ಗಾವಣೆ ಹಾಗೂ ವಿದೇಶಿ ದೇಣಿ ಸಂಗ್ರಹ ಜಾಲದ ವಿಸ್ತಾರವೂ ಕರ್ನಾಟಕಕ್ಕೂ ವ್ಯಾಪಿಸಿರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ರಾಜ್ಯದಲ್ಲಿ ಗುರುವಾರ ನಡೆದ ದಾಳಿ ವೇಳೆಯಲ್ಲಿ ಪಿಎಫ್‌ಐ ಜಿಲ್ಲಾಧ್ಯಕ್ಷ ಶೇಖ್‌ ಏಜಾಜ್‌ ಅಲಿ ಬಳಿ 14 ಲಕ್ಷ ರು., ಶಿವಮೊಗ್ಗದ ಪಿಎಫ್‌ಐ ಪ್ರಾದೇಶಿಕ ವಲಯ ಅಧ್ಯಕ್ಷ ಶಾಹಿದ್‌ ಖಾನ್‌ ಮನೆಯಲ್ಲಿ 19 ಲಕ್ಷ ರು. ಹಾಗೂ ದಾವಣಗೆರೆ ಜಿಲ್ಲೆಯ ಪಿಎಫ್‌ಐ ಮಾಜಿ ಜಿಲ್ಲಾಧ್ಯಕ್ಷ ಇಮಾಮುದ್ದೀನ್‌ ಮನೆಯಲ್ಲಿ 1 ಲಕ್ಷ ರು. ಸೇರಿ 34 ಲಕ್ಷ ರು. ಹಣವನ್ನು ಜಪ್ತಿ ಮಾಡಲಾಗಿತ್ತು. ಆದರೆ ಎರಡು ದಿನಗಳ ವಿಚಾರಣೆ ವೇಳೆ ಈ ಹಣ ಸಂಬಂಧ ಆರೋಪಿಗಳು ಸರಿಯಾದ ಲೆಕ್ಕ ನೀಡಿಲ್ಲ. ಈ ಜಪ್ತಿ ಹಣದ ಬಗ್ಗೆ ಇ.ಡಿ.ಗೆ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಕ್ರಮ ಹಣ ವರ್ಗಾವಣೆ ಬಗ್ಗೆ ಸ್ಥಳೀಯರು ಪೊಲೀಸರು ತನಿಖೆ ನಡೆಸಲು ಕಾನೂನಿನಲ್ಲಿ ಅವಕಾಶವಿಲ್ಲ. ಹೀಗಾಗಿ ದಾಖಲೆ ಇಲ್ಲದ ಹಣದ ಬಗ್ಗೆ ಇ.ಡಿ.ಗೆ ಪತ್ರ ಬರೆಯಲಾಗುತ್ತದೆ. ಈಗಾಗಲೇ ಪ್ರಾಥಮಿಕ ಹಂತದಲ್ಲಿ ಮೌಖಿಕವಾಗಿ ಕೇಂದ್ರ ತನಿಖಾ ಸಂಸ್ಥೆಗಳಿಗೆ ವಿವರಣೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.