ಉತ್ತರ ಒಳನಾಡಿನ ಧಾರವಾಡ, ಹಾವೇರಿ, ಗದಗ, ಬೆಳಗಾವಿ, ಬಾಗಲಕೋಟೆ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ.
ಬೆಂಗಳೂರು(ಏ.09): ಕರಾವಳಿಯ ಎಲ್ಲ ಜಿಲ್ಲೆಗಳು ಹಾಗೂ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಅನೇಕ ಜಿಲ್ಲೆಗಳಲ್ಲಿ ಮುಂದಿನ 2-3 ದಿನ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಒಳನಾಡಿನ ಧಾರವಾಡ, ಹಾವೇರಿ, ಗದಗ, ಬೆಳಗಾವಿ, ಬಾಗಲಕೋಟೆ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಅದು ಹೇಳಿದೆ.
ವಿವಿಧೆಡೆ ಮಳೆ:
ಶನಿವಾರ ಬೆಳಗ್ಗೆ 8.30ರವರೆಗಿನ 24 ತಾಸು ಅವಧಿಯಲ್ಲಿ ಬೆಳಗಾವಿಯ ಗೋಕಾಕ್‌ನಲ್ಲಿ ಶುಕ್ರವಾರ 5 ಸೆಂ.ಮೀ ಮಳೆಯಾಗಿದೆ. ಉಳಿದಂತೆ ಬೆಳಗಾವಿಯ ಬೈಲಹೊಂಗಲ, ಬೀದರ್‌ನ ಔರಾದ್‌ನಲ್ಲಿ ತಲಾ 4 ಸೆಂ.ಮೀ, ಉತ್ತರ ಕನ್ನಡದ ಮುಂಡಗೊಂಡ, ಗದಗದ ನರಗುಂದ, ಬೆಳಗಾವಿ ನಗರ, ಕಲಬುರಗಿಯ ಖಜೂರಿ, ಬೀದರ್‌ನ ಹುಮನಾಬಾದ್, ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ತಲಾ 1 ಸೆಂ.ಮೀ ಮಳೆಯಾದ ವರದಿಯಾಗಿದೆ.
Weather Forecast: ಇನ್ನೂ 2 ದಿನ ಗುಡುಗು ಸಹಿತ ಮಳೆ: ಸುವರ್ಣನ್ಯೂಸ್‌ಗೆ ಹವಾಮಾನ ಇಲಾಖೆ ಮುನ್ಸೂಚನೆ
ಕಲಬುರಗಿಯಲ್ಲಿ ಉಷ್ಣಾಂಶ ಇಳಿಕೆ:
ಕಳೆದ ಎರಡು ಮೂರು ದಿನಗಳ ಹಿಂದೆ ರಾಜ್ಯದಲ್ಲಿ ಅತಿ ಹೆಚ್ಚು ಉಷ್ಣಾಂಶ ಶೇ. 40 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದ ಕಲಬುರಗಿಯಲ್ಲಿ ಶುಕ್ರವಾರ 34 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಿದೆ. ಗರಿಷ್ಠ ಉಷ್ಣಾಂಶ ವಾಡಿಕೆ ಪ್ರಮಾಣಕ್ಕಿಂತ 5.7 ಡಿಗ್ರಿಯಷ್ಟುಕಡಿಮೆಯಾದರೆ, ಕನಿಷ್ಠ ಉಷ್ಣಾಂಶವೂ ವಾಡಿಕೆ ಪ್ರಮಾಣಕ್ಕಿಂತ 3.2 ಡಿಗ್ರಿ ಸೆಲ್ಸಿಯಸ್ ಇಳಿಕೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಉಳಿದಂತೆ ಶುಕ್ರವಾರ ಬಳ್ಳಾರಿಯಲ್ಲಿ 37.6 ಡಿಗ್ರಿ ಸೆಲ್ಸಿಯಸ್, ಧಾರವಾಡ 36.8, ರಾಯಚೂರು 36.4, ಗದಗ 35.5, ಪಣಂಬೂರು 35.3 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ.
