Karnataka Rains: ಕರ್ನಾಟಕದಲ್ಲಿ ಮುಂದಿನ 4 ದಿನ ಗುಡುಗು, ಸಿಡಿಲು ಸಹಿತ ಭಾರೀ ಮಳೆ..!
* ಕುಸಿದ ಗರಿಷ್ಠ, ಕನಿಷ್ಠ ಉಷ್ಣಾಂಶ
* ರಾತ್ರಿ, ಮುಂಜಾನೆ ತಣ್ಣನೆಯ ವಾತಾವರಣ
* ಶನಿವಾರವೂ ಮಳೆ
ಬೆಂಗಳೂರು(ಏ.16): ರಾಜ್ಯದಲ್ಲಿ(Karnataka) ಬೇಸಿಗೆ ಮಳೆಯ(Summer Rain) ಅಬ್ಬರ ಇನ್ನಷ್ಟುದಿನ ಮುಂದುವರಿಯಲಿದ್ದು, ಕರಾವಳಿ, ಒಳನಾಡಿನಲ್ಲಿ ಏ.19ರವರೆಗೆ ಗುಡುಗು, ಸಿಡಿಲು ಸಹಿತ ಮಳೆ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಲಕ್ಷದ್ವೀಪ ಭಾಗದಲ್ಲಿನ ಮೇಲ್ಮೈ ಸುಳಿಗಾಳಿ ಮತ್ತು ವಿದರ್ಭದಿಂದ ಉತ್ತರ ಕರ್ನಾಟಕದವರೆಗೆ(North Karnataka) ಹಬ್ಬಿರುವ ಟ್ರಫ್ ಕಾರಣದಿಂದ ರಾಜ್ಯದ್ಯಂತ ಏ.19ರವರೆಗೆ ಗುಡುಗು ಸಹಿತ ಮಳೆಯಾಗಲಿದೆ. ಅದರಲ್ಲೂ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಿಗೆ ಭಾರಿ ಮಳೆಯಾಗಲಿದೆ.
ಶನಿವಾರ ಬೀದರ್, ರಾಯಚೂರು, ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಯನ್ನು ಹೊರತು ಪಡಿಸಿ ಉಳಿದೆಲ್ಲ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು ‘ಹಳದಿ’ (Yellow Alert) ಎಚ್ಚರಿಕೆಯನ್ನು ನೀಡಲಾಗಿದೆ. ಭಾನುವಾರ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಇನ್ನಷ್ಟು ಬಿರುಸು ಪಡೆಯಲಿದ್ದು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಯಲ್ಲಿ ಅತಿ ಭಾರಿ ಮಳೆಯ ‘ಆರೆಂಜ್’ ಅಲರ್ಚ್ ನೀಡಲಾಗಿದೆ. ಉಳಿದಂತೆ ಬೀದರ್, ರಾಯಚೂರು, ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆ ಹೊರತು ಪಡಿಸಿ ಉಳಿದ ಜಿಲ್ಲೆಗಳಲ್ಲಿ ಭಾರಿ ಮಳೆಯ ‘ಹಳದಿ’ ಸೂಚನೆ ನೀಡಲಾಗಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಗುಡುಗು, ಮಿಂಚಿನ ಎಚ್ಚರಿಕೆಯನ್ನು ನೀಡಲಾಗಿದೆ. ಸೋಮವಾರ ಮತ್ತು ಮಂಗಳವಾರ ಕೂಡ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ(Department of Meteorology) ಹೇಳಿದೆ.
ಬೆಂಗ್ಳೂರಲ್ಲಿ ಭಾರೀ ಮಳೆ: 300 ಮನೆಗಳಿಗೆ ನುಗ್ಗಿದ ನೀರು, ಕೊಚ್ಚಿ ಹೋದ ಗೃಹೋಪಯೋಗಿ ವಸ್ತುಗಳು
ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ಕಳೆದ 24 ಗಂಟೆ ಅವಧಿಯಲ್ಲಿ ಭಾಗಮಂಡಲದಲ್ಲಿ ಅತಿ ಹೆಚ್ಚು 8 ಸೆಂ.ಮೀ ಮಳೆಯಾಗಿದೆ. ಹಿರೇಕೇರೂರು 6 ಸೆಂ.ಮೀ, ತುರುವೇಕೆರೆ, ರಾಮನಗರದ ಮಾಗಡಿ, ಹೆಸರಘಟ್ಟದಲ್ಲಿ ತಲಾ 5 ಸೆಂ.ಮೀ, ಬೆಂಗಳೂರು ನಗರದಲ್ಲಿ 4 ಸೆಂ.ಮೀ ಮಳೆಯಾಗಿದೆ. ರಾಜ್ಯದ ಗರಿಷ್ಠ ಉಷ್ಣಾಂಶ 40.4 ಡಿಗ್ರಿ ಸೆಲ್ಸಿಯಸ್ ಕಲಬುರಗಿಯಲ್ಲಿ ದಾಖಲಾಗಿದೆ.
ಮಳೆಯಿಂದಾಗಿ ನಗರದಲ್ಲಿ ತಂಪು ವಾತಾವರಣ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ(Bengaluru) ಬುಧವಾರ ಮತ್ತು ಗುರುವಾರ ಭಾರಿ ಮಳೆ ಸುರಿದ ಹಿನ್ನೆಲೆಯಲ್ಲಿ ನಗರದ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ(Temperature) ತುಸು ಕಡಿಮೆಯಾಗಿದೆ. ಬಿಸಿಲಿನಿಂದ ತತ್ತರಿಸಿದ್ದ ನಗರದಲ್ಲಿ ಈಗ ಕೊಂಚ ತಣ್ಣನೆಯ ವಾತಾವರಣ ಮೂಡಿದೆ.
ಶುಕ್ರವಾರ ದಿನದ ಬಹುಭಾಗ ಮೋಡ ಕವಿದ ವಾತಾವರಣವೇ ಇದ್ದು, ತೇವಾಂಶ ಹೆಚ್ಚಿದ್ದರೂ ಧಗೆ ಕಡಿಮೆ ಇತ್ತು. ಕಳೆದ ಕೆಲ ದಿನಗಳಿಂದ 35 ಡಿಗ್ರಿ ಸೆಲ್ಸಿಯಸ್‌ನಷ್ಟಿದ್ದ ದಿನದ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ. ಅದೇ ರೀತಿ ದಿನದ 22-23 ಡಿಗ್ರಿ ಸೆಲ್ಸಿಯಸ್‌ನಷ್ಟಿದ್ದ ದಿನದ ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ. ಇದರಿಂದಾಗಿ ರಾತ್ರಿ ಮತ್ತು ಮುಂಜಾನೆ ತಣ್ಣನೆಯ ವಾತಾವರಣ ಕಂಡು ಬಂದಿದೆ.
ನಿನ್ನೆಯೂ ಸುರಿದ ಮಳೆ
ಶುಕ್ರವಾರ ಕೂಡ ನಗರದಲ್ಲಿ ಅಲ್ಲಲ್ಲಿ ಹಗುರದಿಂದ ಮಳೆಯಾಗಿದೆ. ವಿದ್ಯಾಪೀಠದಲ್ಲಿ ಗರಿಷ್ಠ 2 ಸೆಂ.ಮೀ. ಮಳೆ ಸುರಿದಿದೆ. ಉಳಿದಂತೆ ಕುಮಾರಸ್ವಾಮಿ ಬಡಾವಣೆ, ಪಟ್ಟಾಭಿರಾಮ ನಗರ, ಲಕ್ಕಸಂದ್ರ, ವಿ.ವಿ.ಪುರ, ಸಂಪಂಗಿರಾಮ ನಗರ, ಹೊಯ್ಸಳ ನಗರ, ಬೆನ್ನಿಗಾನಗಳ್ಳಿ, ವಿದ್ಯಾರಣ್ಯಪುರ, ಅಟ್ಟೂರು, ಚೌಡೇಶ್ವರಿ ವಾರ್ಡ್, ಮಹದೇವಪುರದಲ್ಲಿ ಮಳೆಯಾಗಿದೆ.
ಅನ್ನದಾತರು, ಜನರಿಗೆ ಸಂತಸದ ಸುದ್ದಿ: ಸತತ 4ನೇ ವರ್ಷವೂ ಉತ್ತಮ ಮುಂಗಾರು: ಐಎಂಡಿ!
ಗುರುವಾರ ಒಂದೇ ದಿನ ವಿದ್ಯಾಪೀಠ ಮತ್ತು ಬಸವನಗುಡಿಯಲ್ಲಿ 9 ಸೆಂ.ಮೀ. ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಹಿತಿ ನೀಡಿದೆ. ಉಳಿದಂತೆ ಸಾರಕ್ಕಿ 6.2 ಸೆಂ.ಮೀ, ಸಂಪಂಗಿರಾಮ ನಗರ 5.3 ಸೆಂ.ಮೀ., ವಿ. ವಿ. ಪುರ, ದೊರೆಸಾನಿಪಾಳ್ಯದಲ್ಲಿ ತಲಾ 5.2 ಸೆಂ.ಮೀ ಮಳೆಯಾಗಿದೆ.
ಏಪ್ರಿಲ್ ಮೊದಲಾರ್ಧದ ಗರಿಷ್ಠ ಮಳೆ ದಾಖಲು
ಭಾರತೀಯ ಹವಾಮಾನ ಇಲಾಖೆ ನಿರ್ವಹಿಸುವ ಬೆಂಗಳೂರು ನಗರದ ಮಳೆ ಮಾಪನ ಕೇಂದ್ರದಲ್ಲಿ 3.85 ಸೆಂ.ಮೀ ಮಳೆ ದಾಖಲಾಗಿದೆ. ಇದು ಕಳೆದ ಹತ್ತು ವರ್ಷದಲ್ಲಿ ಈ ಮಾಪನ ಕೇಂದ್ರದಲ್ಲಿ ಏಪ್ರಿಲ್ ತಿಂಗಳ ಒಂದು ದಿನದಲ್ಲಿ ದಾಖಲಾದ ಮೂರನೇ ಗರಿಷ್ಠ ಮಳೆ ಪ್ರಮಾಣವಾಗಿದೆ. ಕಳೆದ ವರ್ಷ ಏ.24ರಂದು 6.6 ಸೆಂ.ಮೀ ಮತ್ತು 2015ರ ಏ.24ರಂದು 5.3 ಸೆಂ.ಮೀ ಮಳೆಯಾಗಿತ್ತು. ಏಪ್ರಿಲ್ ತಿಂಗಳ ಮೊದಲಾರ್ಧದ ಗರಿಷ್ಠ ಮಳೆ ಈ ವರ್ಷ ದಾಖಲಾಗಿದೆ.
ಶನಿವಾರವೂ ಮಳೆ
ನಗರದಲ್ಲಿ ಶನಿವಾರವೂ ಮಳೆಯಾಗುವ ಸೂಚನೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ದಿನದ ಗರಿಷ್ಠ ಮತ್ತು ಕನಿಷ್ಠ ಉಷ್ಣತೆ ಕ್ರಮವಾಗಿ 33 ಮತ್ತು 19 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆಯಿದೆ.