ಬೆಂಗ್ಳೂರಲ್ಲಿ ಭಾರೀ ಮಳೆ: 300 ಮನೆಗಳಿಗೆ ನುಗ್ಗಿದ ನೀರು, ಕೊಚ್ಚಿ ಹೋದ ಗೃಹೋಪಯೋಗಿ ವಸ್ತುಗಳು

*  4 ಸಾವಿರಕ್ಕೂ ಹೆಚ್ಚು ನರ್ಸರಿ ಸಸಿ ನಾಶ
*  ಮನೆಗಳಲ್ಲಿ 6 ಅಡಿ ನಿಂತ ನೀರು
*  ಕೆಸರಿನ ರಾಡಿಯಲ್ಲಿ ತೊಯ್ದ ಮನೆಗಳು
 

Heavy Rain on April 15th in Bengaluru grg

ಬೆಂಗಳೂರು(ಏ.16):  ರಾಜಧಾನಿಯಲ್ಲಿ ಬೆಂಗಳೂರಿನಲ್ಲಿ(Bengaluru) ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ 300ಕ್ಕೂ ಅಧಿಕ ಮನೆಗಳಿಗೆ ನೀರು(Water) ನುಗ್ಗಿ ಗೃಹೋಪಯೋಗಿ ವಸ್ತುಗಳು ಚರಂಡಿ ಪಾಲಾಗಿದ್ದು, ಕಾರು, ಬೈಕ್‌ ಕೊಚ್ಚಿ ಹೋಗಿವೆ. ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಚಾವಣಿ ಒಡೆದು ರಕ್ಷಿಸಲಾಗಿದೆ. ನಾಲ್ಕು ಸಾವಿರಕ್ಕೂ ಹೆಚ್ಚು ನರ್ಸರಿ ಸಸಿಗಳು ನೆಲಸಮವಾಗಿದೆ.

ಒಟ್ಟಾರೆ ಗುರುವಾರದ ಮಳೆಗೆ ದಕ್ಷಿಣ ಬೆಂಗಳೂರಿನ ಉತ್ತರಹಳ್ಳಿ, ಕಾಮಾಕ್ಯ ಚಿತ್ರಮಂದಿರ, ಗಣೇಶ ಮಂದಿರ ವಾರ್ಡ್‌ ಹಾಗೂ ಚಿಕ್ಕಲಸಂದ್ರ ವಾರ್ಡ್‌ನ ವ್ಯಾಪ್ತಿಯಲ್ಲಿ ನಿವಾಸಿಗಳು ಅಕ್ಷರಶಃ ನಲುಗಿ ಹೋಗಿದ್ದಾರೆ. ಹಾಸಿಗೆ, ದಿಂಬು, ಬಟ್ಟೆ, ಟಿವಿ, ಫ್ರಿಜ್‌, ವಾಷಿಂಗ್‌ ಮೆಷಿನ್‌, ಮಕ್ಕಳ ಪಠ್ಯ ಪುಸಕ್ತ, ಬ್ಯಾಗ್‌, ಚಪ್ಪಲಿ-ಶ್ಯೂ, ದಿನಸಿ ಪದಾರ್ಥಗಳು ನೀರು ಪಾಲಾಗಿವೆ. ಮನೆ ಒಳಗೆ, ಹೊರಗೆ ಹಾಗೂ ನೀರಿನ ತೊಟ್ಟಿಗಳಲ್ಲಿ ಅಡಿ ಎತ್ತರದ ಕೆಸರಿನ ರಾಡಿ ತುಂಬಿಕೊಂಡು ಕುಡಿಯುವ ನೀರಿಗೂ ಅಲ್ಲಿನ ಜನರು ಪರದಾಡುವ ಸ್ಥಿತಿ ಉಂಟಾಗಿತ್ತು. ಇನ್ನು ರಸ್ತೆ, ಪಾದಚಾರಿ ಮಾರ್ಗ, ಟೆಲಿಫೋನ್‌ ಲೈನ್‌ಗಳು ಹಾಳಾಗಿವೆ.

ಅನ್ನದಾತರು, ಜನರಿಗೆ ಸಂತಸದ ಸುದ್ದಿ: ಸತತ 4ನೇ ವರ್ಷವೂ ಉತ್ತಮ ಮುಂಗಾರು: ಐಎಂಡಿ!

2 ತಾಸಲ್ಲಿ 7.3 ಸೆಂ.ಮೀ. ಮಳೆ

ಗುರುವಾರ ರಾತ್ರಿ ಕೇವಲ 2 ಗಂಟೆಯಲ್ಲಿ ಕಾಮಾಕ್ಯ ಚಿತ್ರಮಂದಿರದ ಸುತ್ತಮುತ್ತಲಿನ ಪ್ರದೇಶದಲ್ಲಿ ಬರೋಬ್ಬರಿ 7.3 ಸೆಂ.ಮೀ. ಮಳೆಯಾದ(Rain) ಹಿನ್ನೆಲೆಯಲ್ಲಿ ರಾಜಕಾಲುವೆಗಳಲ್ಲಿ ನೀರಿನ ಹರಿವು ಹೆಚ್ಚಾಗಿ ಸುತ್ತಮುತ್ತಲಿನ ಮನೆಗಳಿಗೆ ನೀರು ನುಗ್ಗಿ ಅನಾಹುತ ಸಂಭವಿಸಿದೆ ಎಂದು ಬಿಬಿಎಂಪಿ(BBMP) ಹೇಳಿದೆ.

ತೇಲಿದ ಕಾರು, ಸಿಲಿಂಡರ್‌ಗಳು

ಕಾಮಾಕ್ಯ 7ನೇ ಬ್ಲಾಕ್‌ನ ರಾಜಕಾಲುವೆಯ ನೀರು ಜನವಸತಿ ಪ್ರದೇಶಕ್ಕೆ ರಭಸವಾಗಿ ನುಗ್ಗಿದ್ದರಿಂದ ಮನೆಯ ಮುಂದೆ ನಿಲ್ಲಿಸಿದ ಕಾರುಗಳು ನೀರಿನಲ್ಲಿ ತೇಲಿ ಹೋಗಿವೆ. ವಿಶ್ವನಾಥ ಗ್ಯಾಸ್‌ ಏಜೆನ್ಸಿಗೆ ಸೇರಿದ ನೂರಾರು ಸಿಲಿಂಡರ್‌ಗಳು ಕೊಚ್ಚಿಕೊಂಡು ಹೋಗಿವೆ. ನರ್ಸರಿಯಲ್ಲಿದ್ದ 4 ಸಾವಿರ ವಿವಿಧ ಬಗೆಯ ಸಸಿಗಳು ನೆಲ ಸಮವಾಗಿವೆ.

ಪಾಲಿಕೆಯಿಂದಲೇ ಮನೆಗಳ ಸ್ವಚ್ಛತೆ

ನೀರು ನುಗ್ಗಿರುವ ಪ್ರದೇಶ ಸ್ವಚ್ಛಗೊಳಿಸುವ ಸಲುವಾಗಿ ಪ್ರತಿ ಮನೆಗೆ ಇಬ್ಬರು ಪೌರಕಾರ್ಮಿಕರನ್ನು ಬಿಬಿಎಂಪಿ ನಿಯೋಜಿಸಲಾಗಿತ್ತು. ನಿವಾಸಿಗಳು ಹಾಗೂ ಪೌರಕಾರ್ಮಿಕರು ಸೇರಿ ಮನೆ ಸ್ವಚ್ಛ ಮಾಡಿದ ದೃಶ್ಯಗಳು ಶುಕ್ರವಾರ ಇಡೀ ದಿನ ಕಂಡು ಬಂದವು. ಒಟ್ಟಾರೆ 150 ಸಿಬ್ಬಂದಿ, 8 ಟ್ರ್ಯಾಕ್ಟರ್‌, 4 ಜೆಸಿಬಿ ಯಂತ್ರ ಹಾಗೂ 1 ರೊಬೋಟಿಕ್‌ ಯಂತ್ರದ ಬಳಕೆ ಮಾಡಿಕೊಳ್ಳಲಾಗಿತ್ತು. ಸ್ಥಳೀಯ ನಿವಾಸಿಗಳಿಗೆ ತಾತ್ಕಾಲಿಕವಾಗಿ ಊಟ, ನೀರಿನ ವ್ಯವಸ್ಥೆ ಮಾಡಲಾಗಿತ್ತು.
ಚಾವಣಿ ಒಡೆದು ರೋಗಿಯ(Patient) ರಕ್ಷಣೆ  ಪವಾಡ ರೀತಿಯಲ್ಲಿ ಅನಾರೋಗ್ಯ ಪೀಡಿತ ಕುಮಾರ್‌ (45) ಎಂಬ ವ್ಯಕ್ತಿಯನ್ನು ಸ್ಥಳೀಯರು ಚಾವಣಿ ಒಡೆದು ರಕ್ಷಣೆ ಮಾಡಲಾಗಿದೆ.

ಗುರುವಾರ ಮನೆಗೆ ಏಕಾಏಕಿ 6 ಅಡಿಯಷ್ಟು ನೀರು ನುಗ್ಗಿದ್ದರಿಂದ ಮನೆಯಿಂದ ಹೊರಗೆ ಬರುವುದಕ್ಕೆ ಸಾಧ್ಯವಾದೇ ಪರದಾಡುತ್ತಿದ್ದರು. ಸರಿಯಾದ ಸಮಯಕ್ಕೆ ಅಕ್ಕ-ಪಕ್ಕದವರು ಸೀರೆ ಬಳಸಿ ಮನೆ ಒಳಗಿ ಇದ್ದ ಕುಮಾರ್‌ ಅವರನ್ನು ರಕ್ಷಣೆ ಮಾಡಿ ಹೊರಗೆ ತಂದಿದ್ದಾರೆ. ಕಳೆದ 10 ವರ್ಷದ ಹಿಂದೆ ಕುಮಾರ್‌ ಪಾರ್ಶ್ವವಾಯು ಉಂಟಾಗಿತ್ತು. ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ಮಳೆ ಹಾಗೂ ರಾಜಕಾಲುವೆ ಪ್ರವಾಹಕ್ಕೆ ಕಾಮಾಕ್ಯ ಚಿತ್ರಮಂದಿರದ ಹಿಂಭಾಗದಲ್ಲಿ ನಾಯಿ ಮರಿಯೊಂದು ಜೀವ ಕಳೆದುಕೊಂಡಿದೆ. ಶುಕ್ರವಾರ ಪೌರಕಾರ್ಮಿಕರು ಸ್ವಚ್ಛ ಮಾಡುವ ವೇಳೆ ಕೆಸರಿನಲ್ಲಿ ಮೃತ ನಾಯಿ ಮರಿ ಸಿಕ್ಕಿದೆ.

ಪರಿಹಾರ ವಿತರಣೆಗೆ ಸಮೀಕ್ಷೆಗೆ ಸೂಚನೆ

ಮನೆಗಳಿಗೆ ಮಳೆ ನೀರು ನುಗ್ಗಿ ಉಂಟಾದ ಹಾನಿ ಕುರಿತು ಸಮೀಕ್ಷೆ(Surevy) ನಡೆಸಿ ಪರಿಹಾರ ನೀಡಲು ಸೂಕ್ತ ಕೈಗೊಳ್ಳುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತಾ(Gaurav Gupta) ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನಗರದಲ್ಲಿ ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ವಿವಿಧ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾದ ಹಿನ್ನೆಲೆಯಲ್ಲಿ ಶುಕ್ರವಾರ ಪಾಲಿಕೆ ವಿವಿಧ ವಿಭಾಗದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಗುರುವಾರದ ಮಳೆಗೆ 300ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ್ದು, ಮನೆಗಳಿಗೆ ಮೂರು ಅಡಿಯಷ್ಟುನೀರು ನಿಂತು ಗೃಹೋಪಯೋಗಿ ವಸ್ತುಗಳು ಹಾಳಾಗಿವೆ. ಈ ಬಗ್ಗೆ ಕೂಡಲೇ ಕಂದಾಯ ವಿಭಾಗದ ಅಧಿಕಾರಿಗಳು ಸಮೀಕ್ಷೆ ನಡೆಸಿ ಪರಿಹಾರ ನೀಡುವಂತೆ ನಿರ್ದೇಶಿಸಿದ್ದಾರೆ.

ನಿಯಂತ್ರಣಾ ಕೊಠಡಿ ಆರಂಭಕ್ಕೆ ನಿರ್ದೇಶನ

ಪಾಲಿಕೆ ವ್ಯಾಪ್ತಿಯಲ್ಲಿ 9 ಶಾಶ್ವತ ನಿಯಂತ್ರಣ ಕೊಠಡಿಗಳಿದ್ದು, ಮಳೆಗಾಲದಲ್ಲಿ 63 ತಾತ್ಕಾಲಿಕ ಕೊಠಡಿಗಳನ್ನು ಸ್ಥಾಪಿಸಿಕೊಳ್ಳಲಾಗುತ್ತದೆ. ಅಗತ್ಯಕ್ಕೆ ಅನುಗುಣವಾಗಿ ವಿಭಾಗೀಯ ಮಟ್ಟದಲ್ಲಿ ಕೂಡಲೇ ನಿಯಂತ್ರಣ ಕೊಠಡಿ ಸ್ಥಾಪಿಸಿ. ಜತೆಗೆ ಮರಗಳನ್ನು ತೆರವುಗೊಳಿಸುವ ಸಲುವಾಗಿ 21 ತಂಡಗಳಿದ್ದು, ರಾತ್ರಿ ವೇಳೆ 8, ಹಗಲಿನ ವೇಳೆ 13 ತಂಡಗಳನ್ನು ನಿಯೋಜನೆ ಮಾಡಲು ಗೌರವ್‌ ಗುಪ್ತಾ ಸೂಚಿಸಿದರು.

ಮಧ್ಯರಾತ್ರಿ ಗುಪ್ತಾ ಪರಿಶೀಲನೆ, ಸಾಂತ್ವನ

ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌ ಹಾಗೂ ಮುಖ್ಯ ಆಯುಕ್ತ ಗೌರವ್‌ ಗುಪ್ತಾ ಗುರುವಾರ ತಡ ರಾತ್ರಿಯೇ ವಿದ್ಯಾಪೀಠದ ಕಾಮಾಕ್ಯ ಚಿತ್ರಮಂದಿರದ ಸುತ್ತಮುತ್ತಲಿನ ಪ್ರದೇಶದಲ್ಲಿ ರಾಜಕಾಲುವೆ ನೀರು ನುಗ್ಗಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶುಕ್ರವಾರ ಮುಖ್ಯ ಆಯುಕ್ತ ಗೌರವ್‌ ಗುಪ್ತಾ ಭೇಟಿ ನೀಡಿ ನಿವಾಸಿಗಳ ಸಮಸ್ಯೆ ಆಲಿಸಿ ಸಾಂತ್ವನ ಹೇಳಿದರು. ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ, ವಲಯ ಜಂಟಿ ಆಯುಕ್ತ ಜಗದೀಶ್‌ ನಾಯ್‌್ಕ, ಬೃಹತ್‌ ನೀರುಗಾಲುವೆ ವಿಭಾಗದ ಮುಖ್ಯ ಎಂಜಿನಿಯರ್‌ ಸುಗುಣಾ ಇದ್ದರು. ಕಾಮಾಕ್ಯ ಚಿತ್ರಮಂದಿರ ಹಿಂಭಾಗದ ರಸ್ತೆಯ ಕೆಳಭಾಗದಲ್ಲಿ ಹಾದುಹೋಗಿರುವ ರಾಜಕಾಲುವೆಯು ಕಿರಿದಾಗಿದ್ದು, ಅದನ್ನು ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಗೌರವ್‌ ಗುಪ್ತಾ ಸೂಚನೆ ನೀಡಿದರು.

ಎಲ್ಲಿ- ಎಷ್ಟು ಮನೆಗೆ ನೀರು?

ಪ್ರದೇಶ ಮನೆ
ಉತ್ತರಹಳ್ಳಿ 150
ಕಾಮಾಕ್ಯ ಚಿತ್ರಮಂದಿರ 80
ಗಣೇಶ್‌ ಮಂದಿರ ವಾರ್ಡ್‌ 20
ಚಿಕ್ಕಲಸಂದ್ರ ವಾರ್ಡ್‌ 30

ವಿದ್ಯಾಪೀಠದಲ್ಲಿ ಅತ್ಯಧಿಕ ಮಳೆ

ವಿದ್ಯಾಪೀಠದಲ್ಲಿ 7.3 ಸೆಂ.ಮೀ, ವಿ.ವಿ.ಪುರ 4.5, ಸಂಪಂಗಿರಾಮ ನಗರ ಹಾಗೂ ಬೊಮ್ಮನಹಳ್ಳಿ ತಲಾ 4.2, ಬೆಳ್ಳಂದೂರು 4, ಗಾಳಿ ಆಂಜನೇಯ ದೇವಸ್ಥಾನ 3.7, ಅಂಜನಾಪುರ 3.6 ಆರ್‌.ಆರ್‌.ನಗರ ಮತ್ತು ಕೋರಮಂಗಲ ತಲಾ 3.4 ಹಾಗೂ ಬಿಇಎಂಎಲ್‌ ಬಡಾವಣೆ 3.1 ಸೆಂ.ಮೀ. ಮಳೆಯಾಗಿದೆ.

ಮಳೆ ಅನಾಹುತ ಪ್ರದೇಶಗಳು

ಗುರುವಾರ ರಾತ್ರಿ ಸುರಿದ ಮಳೆಗೆ ಕಾಮಕ್ಯ ಚಿತ್ರಮಂದಿರ, ಗಣೇಶ್‌ ಮಂದಿರ ವಾರ್ಡ್‌, ಚಿಕ್ಕಲಸಂದ್ರ ವಾರ್ಡ್‌, ಉತ್ತರಹಳ್ಳಿ, ಪ್ರಮೋದ ಲೇಔಟ್‌, ಮಲ್ಲತಹಳ್ಳಿ, ಗಾಲ್‌್ಫ ಕ್ಲಬ್‌ ಹಾಗೂ ದೊಡ್ಡಾನೆಕುಂದಿಯ ಹಲವು ಪ್ರದೇಶಗಳು ಜಲಾವೃತಗೊಂಡಿದ್ದವು.

Karnataka Rains: ಕರ್ನಾಟಕದ ಹಲವೆಡೆ ಭಾರೀ ಮಳೆ: ಸಿಡಿಲು ಬಡಿದು ಇಬ್ಬರ ಸಾವು

ಅವಾಂತರಕ್ಕೆ ಅಸಮರ್ಪಕ ಕಾಮಗಾರಿಯೇ ಕಾರಣ

ರಿಂಗ್‌ ರಸ್ತೆ ಪಕ್ಕದ ಚರಂಡಿಯ ಬಳಿ ಕಾಮಗಾರಿ ನಡೆಸಲಾಗುತ್ತಿದೆ. ಅಸರ್ಮಪಕ ಕಾಮಗಾರಿಯಿಂದ ಈ ರೀತಿಯ ತೊಂದರೆಯಾಗಿದೆ. ಜನರ ಲಕ್ಷಾಂತರ ರುಪಾಯಿ ಮೌಲ್ಯದ ವಸ್ತುಗಳಿಗೆ ಹಾನಿಯಾಗಿದೆ. ಅಧಿಕಾರಿಗಳು ಯಾರು ಕೂಡ ಸ್ಥಳಕ್ಕೆ ಆಗಮಿಸಿಲ್ಲ. ಚುನಾವಣೆಯ ಸಂದರ್ಭದಲ್ಲಿ ಬರುತ್ತಾರೆ. ಈಗ ಯಾರು ಬಂದಿಲ್ಲ. ನಮ್ಮ ಈ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕು ಅಂತ ಕಾಮಾಕ್ಯ ಲೇಔಟ್‌ನ ನಿವಾಸಿ ಶಂಕರ್‌ ತಿಳಿಸಿದ್ದಾರೆ.

10 ಸಾವಿರ ಪರಿಹಾರ

ಗುರುವಾರದ ಮಳೆಯಿಂದ ಉತ್ತರಹಳ್ಳಿ, ಮುನೇಶ್ವರ ಬಡಾವಣೆಯ ತಗ್ಗು ಪ್ರದೇಶದ ಮನೆ-ಅಂಗಡಿ ಮಳಿಗೆಗಳಿಗೆ ನೀರು ನುಗ್ಗಿದೆ. ದಿನಸಿ ವಸ್ತುಗಳು ನೀರು ಪಾಲಾಗಿವೆ. ಸಂತ್ರಸ್ತರಿಗೆ ತಲಾ .10 ಸಾವಿರ ಪರಿಹಾರ ನೀಡಲಾಗುವುದು ಅಂತ ಶಾಸಕ ಎಂ.ಕೃಷ್ಣಪ್ಪ ಹೇಳಿದ್ದಾರೆ. 
 

Latest Videos
Follow Us:
Download App:
  • android
  • ios