ಒಂದೆಡೆ ಮಳೆ ಹೆಚ್ಚುತ್ತಿರುವುದರಿಂದ ರಾಜ್ಯದಲ್ಲಿ ಕನಿಷ್ಠ ತಾಪಮಾನದಲ್ಲಿ ಏರಿಕೆ ಆಗಿದೆ. ಎರಡ್ಮೂರು ದಿನಗಳ ಹಿಂದೆ ರಾಜ್ಯದ ಹಲವು ಭಾಗದಲ್ಲಿ 15 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾಗಿದ್ದ ತಾಪಮಾನ ಈಗ ಏರಿಕೆ ಕಂಡಿದೆ.
ಬೆಂಗಳೂರು(ನ.25): ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ನಾಲ್ಕೈದು ದಿನ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಕೇಂದ್ರ ನೀಡಿದೆ.
ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ನಗರ ಮತ್ತು ಗ್ರಾಮಾಂತರ, ಕೋಲಾರ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಹೆಚ್ಚಿರುವ ಸಾಧ್ಯತೆ ಇದೆ. ಉಳಿದಂತೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿಯೂ ಹೆಚ್ಚಿನ ಮಳೆ ಸುರಿಯುವ ಸಂಭವವಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಹಗುರ ಮಳೆಯಾಗಲಿದೆ.
ರಾಜ್ಯಾದ್ಯಂತ ಎರಡು ದಿನ ಹಗುರ ಮಳೆ ಸಾಧ್ಯತೆ
ಕಳೆದೆರಡು ದಿನಗಳಿಂದ ರಾಜ್ಯದ ವಿವಿಧ ಭಾಗದಲ್ಲಿ ಮಳೆಯಾಗುತ್ತಿದ್ದು ಬೆಳಗಾವಿಯ ಲೋಂಡಾದಲ್ಲಿ 4 ಸೆಂ.ಮೀ, ಕೋಲಾರದ ಮಾಲೂರು, ರಾಮನಗರ ತಲಾ 3, ಹೊಸಕೋಟೆ, ಕೆಎಸ್‌ಎನ್‌ಡಿಎಂಸಿ ಆವರಣ, ಕನಕಪುರದಲ್ಲಿ ತಲಾ 2, ಚಿಕ್ಕಮಗಳೂರು, ಮೈಸೂರು, ಟಿ. ನರಸೀಪುರ, ಶ್ರೀರಂಗಪಟ್ಟಣ, ಮಳವಳ್ಳಿ, ತೊಂಡೇಭಾವಿ, ಗೌರಿಬಿದನೂರು, ಗುಬ್ಬಿ, ಮಧುಗಿರಿ, ತುಮಕೂರು ಮತ್ತು ಚನ್ನಪಟ್ಟಣದಲ್ಲಿ ತಲಾ ಒಂದು ಸೆಂ.ಮೀ. ಮಳೆಯಾಗಿದೆ.
ತಾಪಮಾನದಲ್ಲಿಯೂ ಏರಿಕೆ:
ಒಂದೆಡೆ ಮಳೆ ಹೆಚ್ಚುತ್ತಿರುವುದರಿಂದ ರಾಜ್ಯದಲ್ಲಿ ಕನಿಷ್ಠ ತಾಪಮಾನದಲ್ಲಿ ಏರಿಕೆ ಆಗಿದೆ. ಎರಡ್ಮೂರು ದಿನಗಳ ಹಿಂದೆ ರಾಜ್ಯದ ಹಲವು ಭಾಗದಲ್ಲಿ 15 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾಗಿದ್ದ ತಾಪಮಾನ ಈಗ ಏರಿಕೆ ಕಂಡಿದೆ. ಆದರೆ ಗರಿಷ್ಠ ತಾಪಮಾನದಲ್ಲಿ ಅಲ್ಪ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ.
