ಅರಬ್ಬಿ ಸಮುದ್ರ, ಬಂಗಾಳ ಕೊಲ್ಲಿಯಲ್ಲಿ ಮಳೆಗೆ ಪೂರಕ ವಾತಾವರಣ ಇರುವುದರಿಂದ ಮುಂದಿನ ಮೂರ್ನಾಲ್ಕು ದಿನ ಮಳೆ ಅಬ್ಬರಿಸುವ ಸಾಧ್ಯತೆ: ಹವಾಮಾನ ಕೇಂದ್ರ ಮುನ್ಸೂಚನೆ 

ಬೆಂಗಳೂರು(ಆ.29): ದಕ್ಷಿಣ ಒಳನಾಡಿನ ಬಹುತೇಕ ಕಡೆ ಎರಡು-ಮೂರು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಅರಬ್ಬಿ ಸಮುದ್ರ, ಬಂಗಾಳ ಕೊಲ್ಲಿಯಲ್ಲಿ ಮಳೆಗೆ ಪೂರಕ ವಾತಾವರಣ ಇರುವುದರಿಂದ ಮುಂದಿನ ಮೂರ್ನಾಲ್ಕು ದಿನ ಮಳೆ ಅಬ್ಬರಿಸುವ ಸಾಧ್ಯತೆಗಳಿವೆ ಎಂದು ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ. ವಿದರ್ಭದಿಂದ ಆಂಧ್ರ ಪ್ರದೇಶದ ದಕ್ಷಿಣ ತುದಿಯವರೆಗೆ ಟ್ರಫ್‌ ಹಬ್ಬಿರುವುದು, ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ, ಅರಬ್ಬಿ ಸಮುದ್ರದ ಕೇರಳ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ನಿರ್ಮಾಣವಾಗಿರುವುದರಿಂದ ರಾಜ್ಯದ ಒಳನಾಡು ಮತ್ತು ಕರಾವಳಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸೋಮವಾರ ಬೆಳಗ್ಗೆ 8.30ರ ತನಕ ಬೆಳಗಾವಿ, ಗದಗ, ಕೊಪ್ಪಳ, ಹಾವೇರಿ, ಧಾರವಾಡ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಮಂಡ್ಯ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ಸಂಭವವಿದ್ದು ‘ಯೆಲ್ಲೋ ಅಲರ್ಟ್‌’ ನೀಡಲಾಗಿದೆ.

Mandya: ಭಾರೀ ಮಳೆಗೆ ಕೊಚ್ಚಿ ಹೋದ ಸೇತುವೆ: ರಸ್ತೆ ಸಂಪರ್ಕ ಕಡಿತ

ಸೋಮವಾರದಿಂದ ಮಂಗಳವಾರ ಬೆಳಗ್ಗೆ 8.30ರವರೆಗೆ ಕಲಬುರಗಿ, ಗದಗ, ಧಾರವಾಡ, ಹಾವೇರಿ, ಚಿತ್ರದುರ್ಗ, ದಾವಣಗೆರೆ, ತುಮಕೂರು, ಕೋಲಾರ, ರಾಮನಗರ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಮಂಗಳವಾರದ ಬಳಿಕ ರಾಜ್ಯದ ಒಳನಾಡು ಮತ್ತು ಕರಾವಳಿಯಲ್ಲಿ ಮಳೆ ಮುಂದುವರಿಯುವ ಸಾಧ್ಯತೆಯಿದ್ದು ಹಲವು ಜಿಲ್ಲೆಗಳಿಗೆ ಎಚ್ಚರಿಕೆ ನೀಡಲಾಗಿದೆ.

ಭಾನುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ಕಳೆದ 24 ಗಂಟೆ ಅವಧಿಯಲ್ಲಿ ರಾಜ್ಯದ ಕರಾವಳಿ ಮತ್ತು ಒಳನಾಡಿನಲ್ಲಿ ನೈಋುತ್ಯ ಮುಂಗಾರು ಚುರುಕಾಗಿತ್ತು. ದಕ್ಷಿಣ ಕನ್ನಡದ ಪಣಂಬೂರಿನಲ್ಲಿ 17 ಸೆಂ.ಮೀ., ಸುಬ್ರಹ್ಮಣ್ಯದಲ್ಲಿ 14 ಸೆಂ.ಮೀ. ಮಳೆಯಾಗಿತ್ತು. ಉಳಿದಂತೆ ಮಂಗಳೂರು, ಹಾವೇರಿಯ ಗುತ್ತಲ, ತುಮಕೂರಿನ ಮಧುಗಿರಿಯಲ್ಲಿ ತಲಾ 11, ದಕ್ಷಿಣ ಕನ್ನಡದ ಮುಲ್ಕಿಯಲ್ಲಿ 10 ಸೆಂ.ಮೀ ಮಳೆ ಸುರಿದಿದೆ.