ಹೊಸ ವರ್ಷಾಚರಣೆಗೆ ರಾಜ್ಯದ ಪ್ರವಾಸಿ ತಾಣಗಳಲ್ಲಿ ರಶ್; ಹಂಪಿಗೆ 1 ಲಕ್ಷ, ಅಂಜನಾದ್ರಿ, ಗೋಕರ್ಣಕ್ಕೆ 25 ಸಾವಿರ ಭಕ್ತರ ಭೇಟಿ!
ರಾಜ್ಯಾದ್ಯಂತ ಜನ ಸಡಗರ, ಸಂಭ್ರಮಗಳಿಂದ ಹೊಸ ವರ್ಷವನ್ನು ಸ್ವಾಗತಿಸಿದ್ದು, ಭಾನುವಾರ ರಾತ್ರಿ ರಾಜ್ಯದ ಪ್ರವಾಸಿತಾಣಗಳಲ್ಲಿ ಸಂಭ್ರಮಾಚರಣೆ ಮೇರೆ ಮೀರಿತ್ತು. ಜನ ನರ್ತಿಸಿ, ಹಾಡಿ, ಹರ್ಷೋದ್ಘಾರದ ಮೂಲಕ ಹೊಸ ವರ್ಷವನ್ನು ಹರ್ಷದಿಂದ ಸ್ವಾಗತಿಸಿದರು. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ರಾಜ್ಯದ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದಂಡೇ ಹರಿದು ಬಂದಿತ್ತು.
ಬೆಂಗಳೂರು (ಜ.1): ರಾಜ್ಯಾದ್ಯಂತ ಜನ ಸಡಗರ, ಸಂಭ್ರಮಗಳಿಂದ ಹೊಸ ವರ್ಷವನ್ನು ಸ್ವಾಗತಿಸಿದ್ದು, ಭಾನುವಾರ ರಾತ್ರಿ ರಾಜ್ಯದ ಪ್ರವಾಸಿತಾಣಗಳಲ್ಲಿ ಸಂಭ್ರಮಾಚರಣೆ ಮೇರೆ ಮೀರಿತ್ತು. ಜನ ನರ್ತಿಸಿ, ಹಾಡಿ, ಹರ್ಷೋದ್ಘಾರದ ಮೂಲಕ ಹೊಸ ವರ್ಷವನ್ನು ಹರ್ಷದಿಂದ ಸ್ವಾಗತಿಸಿದರು. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ರಾಜ್ಯದ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದಂಡೇ ಹರಿದು ಬಂದಿತ್ತು.
ಹಂಪಿಯ ಹೇಮಕೂಟ ಪರ್ವತ, ಕಾರವಾರದ ರವೀಂದ್ರನಾಥ ಠಾಗೋರ, ಗೋಕರ್ಣದ ಓಂ, ಕುಡ್ಲೆ, ಮಂಗಳೂರಿನ ಪಣಂಬೂರು, ಕೊಡಗಿನಲ್ಲಿ ವರ್ಷದ ಕೊನೆಯ ಸೂರ್ಯಾಸ್ತಮಾನ ವೀಕ್ಷಣೆಯೊಂದಿಗೆ ಪ್ರವಾಸಿಗರು ಕುಣಿದು ಕುಪ್ಪಳಿಸಿದರು. ಪ್ರವಾಸಿಗರಿಂದಾಗಿ ಎಲ್ಲೆಡೆ ಹೋಟೆಲ್, ಹೋಮ್ ಸ್ಟೇಗಳು ಬಹುತೇಕ ಭರ್ತಿಯಾಗಿದ್ದವು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಎಲ್ಲೆಡೆ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಡ್ರಗ್ಸ್ ಮುಕ್ತ ಹೊಸ ವರ್ಷಾಚರಣೆಗೆ ಪೊಲೀಸರು ಕ್ರಮ ಕೈಗೊಂಡಿದ್ದು, ಅಲ್ಲಲ್ಲಿ ತಪಾಸಣೆ ನಡೆಸುತ್ತಿದ್ದರು. ಹೊಸ ವರ್ಷಾಚರಣೆಯನ್ನು ಬೆಂಗಳೂರಿನಲ್ಲಿ ರಾತ್ರಿ 1 ಗಂಟೆ, ರಾಜ್ಯದ ಇತರೆಡೆ ರಾತ್ರಿ 12.30 ರೊಳಗೆ ಮುಕ್ತಾಯಗೊಳಿಸುವಂತೆ ಸೂಚನೆ ನೀಡಲಾಗಿತ್ತು.
ಹೊಸ ವರ್ಷಾಚರಣೆಗೆ ನಂದಿಬೆಟ್ಟಕ್ಕೆ ಬರೋ ಪ್ರವಾಸಿಗರಿಗೆ ನಿರ್ಬಂಧ! ಕಾರಣ ಇಲ್ಲಿದೆ
ಬೆಂಗಳೂರಿನಲ್ಲಿ ಎಂ.ಜಿ.ರೋಡ್, ಬ್ರೀಗೇಡ್ ರೋಡ್, ಚರ್ಚ್ ಸ್ಟ್ರೀಟ್, ಇಂದಿರಾನಗರ, ಕೋರಮಂಗಲ, ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ, ಟೆಕ್ ಕಾರಿಡಾರ್‌ಗಳಲ್ಲಿ ಪಾರ್ಟಿ ಜೋರಾಗಿತ್ತು. ಪ್ರತಿಷ್ಠಿತ ಹೋಟೆಲ್‌ಗಳು ವಿದೇಶಿ ಪರಿಕಲ್ಪನೆಯಲ್ಲಿ ಪಾರ್ಟಿ ಆಯೋಜಿಸಿದ್ದು, ವಿಶೇಷ ಪ್ಯಾಕೇಜ್‌ಗಳನ್ನು ಘೋಷಿಸಿದ್ದವು
ಹಂಪಿಗೆ ಸುಮಾರು ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಆಗಮಿಸಿದ್ದರೆ, ಅಂಜನಾದ್ರಿ ಬೆಟ್ಟಕ್ಕೆ 25 ಸಾವಿರಕ್ಕೂ ಹೆಚ್ಚು ಜನರು ಬಂದಿದ್ದು, ಆಂಜನೇಯನ ದರ್ಶನ ಪಡೆದರು. ಗೋಕರ್ಣದಲ್ಲಿ 20 ಸಾವಿರಕ್ಕೂ ಹೆಚ್ಚು ಹಾಗೂ ಮುರ್ಡೇಶ್ವರದಲ್ಲಿ 10 ಸಾವಿರಕ್ಕೂ ಅಧಿಕ ಜನರು ಆಗಮಿಸಿದ್ದರು. ಕೊಡಗಿನ ಪ್ರವಾಸಿ ತಾಣಗಳಿಗೆ ಜನರ ದಂಡು ಹರಿದು ಬಂದಿದ್ದರಿಂದ ಸುಂಟಿಕೊಪ್ಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸುಂಟಿಕೊಪ್ಪ ಠಾಣಾಧಿಕಾರಿ ಎಂ.ಸಿ.ಶ್ರೀಧರ್ ಲಾಠಿ ಹಿಡಿದು ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಜೋಗ ಜಲಪಾತಕ್ಕೆ ಜನ ಸಾಗರವೇ ಹರಿದು ಬಂದಿತ್ತು. ಹೊಸ ವರ್ಷದ ಮುನ್ನಾ ದಿನವೇ ಜೋಗ ಸಮೀಪದ ರೆಸಾರ್ಟ್, ಹೋಟೆಲ್‌ಗಳಲ್ಲಿ ತಂಗಿದ್ದ ಪ್ರವಾಸಿಗರು, ಭಾನುವಾರ ಜೋಗ ಜಲಪಾತಕ್ಕೆ ದಾಂಗುಡಿ ಇಟ್ಟಿದ್ದರು. ಸಿಗಂದೂರು ಶ್ರೀ ಚೌಡೇಶ್ವರಿ ದೇವಾಲಯ, ಶಿವಮೊಗ್ಗದ ತ್ಯಾವರೆಕೊಪ್ಪದಲ್ಲಿರುವ ಹುಲಿ ಮತ್ತು ಸಿಂಹಧಾಮ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಹೊರನಾಡುಗಳಿಗೂ ಜನರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದರು.
ವಿಶ್ವದ ಟಾಪ್ 10 ಪ್ರವಾಸಿ ತಾಣಗಳಲ್ಲಿ ಕೊಡಗು ಜಿಲ್ಲೆಗೆ 7 ನೇ ಸ್ಥಾನ..!
ಹೊಸ ವರ್ಷದ ಆಗಮನ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿ ದೇವಸ್ಥಾನವನ್ನುವಿಶೇಷ ಹೂವುಗಳಿಂದ ಅಲಂಕರಿಸಲಾಗಿತ್ತು. ಚಾಮರಾಜನಗರ ಜಿಲ್ಲೆ ಮಲೆ ಮಹದೇಶ್ವರ ಬೆಟ್ಟದಲ್ಲಿ ವರ್ಷಾಚರಣೆ ಆಚರಿಸಲು ಭಕ್ತರ ದಂಡೇ ಹರಿದು ಬಂತು. ಮಾದಪ್ಪನ ದರ್ಶನ ಪಡೆಯಲು ಭಕ್ತರು ಸಾಲುಗಟ್ಟಿನಿಂತಿದ್ದರು. ವಿಶೇಷ ಪೂಜೆ, ಉತ್ಸವಗಳಲ್ಲಿ ಪಾಲ್ಗೊಳ್ಳುವ ಮೂಲಕ ಉಫೇ ಉಫೇ ಎಂಬ ಜೈಕಾರದ ಮೂಲಕ, ಚಿನ್ನದ ತೇರು ಎಳೆದು ಭಕ್ತರು ಹೊಸ ವರ್ಷವನ್ನು ಸ್ವಾಗತಿಸಿದರು.