ಜನವರಿ ಅಂತ್ಯಕ್ಕೆ ರಾಜ್ಯದಲ್ಲಿ ಪ್ರವಾಸೋದ್ಯಮದ ಹೊಸ ನೀತಿ: ಸಚಿವ ಎಚ್‌.ಕೆ.ಪಾಟೀಲ್‌

2024ರ ಜನವರಿ ಅಂತ್ಯದಲ್ಲಿ ರಾಜ್ಯದಲ್ಲಿ ಪ್ರವಾಸೋದ್ಯಮದ ಹೊಸ ನೀತಿ ಬರಲಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ್‌ ತಿಳಿಸಿದರು. 

New tourism policy in the state by the end of January Says Minister HK Patil gvd

ಮೈಸೂರು (ಡಿ.11): 2024ರ ಜನವರಿ ಅಂತ್ಯದಲ್ಲಿ ರಾಜ್ಯದಲ್ಲಿ ಪ್ರವಾಸೋದ್ಯಮದ ಹೊಸ ನೀತಿ ಬರಲಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ್‌ ತಿಳಿಸಿದರು. ಜಿಪಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ್ದ ಬ್ರಾಂಡ್ ಮೈಸೂರು ಸ್ಪರ್ಧೆಯಲ್ಲಿ ವಿನ್ಯಾಸಗೊಂಡ ಲೋಗೋ ಹಾಗೂ ಟ್ಯಾಗ್‌ ಲೈನ್‌ ಅನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪ್ರವಾಸೋದ್ಯಮ ಉತ್ತೇಜಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಸರ್ಕಾರದೊಂದಿಗೆ ಸಾರ್ವಜನಿಕರು ಪ್ರವಾಸೋದ್ಯಮವನ್ನು ಆದ್ಯತಾ ವಲಯವಾಗಿ ಪರಿಗಣಿಸಬೇಕು. ಪ್ರವಾಸೋದ್ಯಮ ನಮ್ಮ ಗೌರವ, ಅಭಿಮಾನದ ಪ್ರಶ್ನೆ ಎಂದರು.

ಶಕ್ತಿ ಯೋಜನೆ ಜಾರಿಗೊಂಡ ಬಳಿಕ ಮಹಿಳೆಯರು ಧಾರ್ಮಿಕ ಸ್ಥಳಗಳು ಮಾತ್ರವಲ್ಲದೇ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳಗಳಿಗೂ ಭೇಟಿ ನೀಡುತ್ತಿದ್ದಾರೆ. ಈಗ ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಕರ್ಯ ಸೃಷ್ಟಿ ಮಾಡುವುದಕ್ಕೆ ಆದ್ಯತೆ ಕೊಡಬೇಕಿದೆ ಎಂದರು. ಸಾರ್ವಜನಿಕರ ಸಹಭಾಗಿತ್ವದಲ್ಲಿ ಸ್ಮಾರಕ, ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ದತ್ತು ಯೋಜನೆ ರೂಪಿಸಲಾಗಿದೆ. ಮೂಲಭೂತ ಸೌಕರ್ಯ ಕಲ್ಪಿಸಲು ನಾಗರಿಕರು ಸಹಕಾರ ನೀಡಬೇಕು. ನರೇಗಾ ಯೋಜನೆ ಮುಖಾಂತರ ಸೌಕರ್ಯ ಕಲ್ಪಿಸಲು ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಅವರು ಸೂಚಿಸಿದರು.

ಜಾತಿ ಗಣತಿ ವರದಿ ತಿಳಿಯದೇ ಕೆಲವರ ವಿರೋಧ: ಸಚಿವ ಶಿವರಾಜ ತಂಗಡಗಿ

500 ಸ್ಮಾರಕಗಳ ಗುರುತು: ರಾಜ್ಯದಲ್ಲಿ 25 ಸಾವಿರಕ್ಕೂ ಹೆಚ್ಚು ಪಾರಂಪರಿಕ ಕಟ್ಟಡಗಳು, ಸ್ಮಾರಕಗಳಿವೆ. ಇವುಗಳಲ್ಲಿ 880 ಸ್ಮಾರಕಗಳನ್ನು ಮಾತ್ರ ಸರ್ಕಾರದಿಂದ ಗುರುತಿಸಲಾಗಿದೆ. ಹೀಗಾಗಿ, ಇನ್ನೂ 500 ಸ್ಮಾರಕಗಳನ್ನು ಗುರುತಿಸಿ ಸಂರಕ್ಷಿಸಲು ಕಾರ್ಯಕ್ರಮ ರೂಪಿಸಿದ್ದೇವೆ. ಬಹಳಷ್ಟು ಸ್ಮಾರಕಗಳು ನಿರ್ವಹಣೆ ಇಲ್ಲದೇ ಹಾಳಾಗಿರುವುದು ದುರ್ದೈವ ಎಂದರು. ಬೇಲೂರು, ಹಳೇಬಿಡಿನಲ್ಲಿದ್ದ 72 ಸುಂದರವಾದ ಮೂರ್ತಿಗಳನ್ನು ಬ್ರಿಟಿಷರು ತೆಗೆದುಕೊಂಡು ಹೋಗಿದ್ದಾರೆ. ಅವುಗಳನ್ನು ವಾಪಸ್‌‍ ತರುವಂತೆ ವ್ಯಕ್ತಿಯೊಬ್ಬರು ಮನವಿ ಮಾಡಿದ್ದಾರೆ. ಆ ಬಗ್ಗೆ ಪರಿಶೀಲಿಸಿ ಮೂರ್ತಿ ವಾಪಸ್‌ ಪಡೆಯಲು ಪ್ರಯತ್ನಿಸುತ್ತೇವೆ ಎಂದು ಅವರು ತಿಳಿಸಿದರು.

ದತ್ತು ಯೋಜನೆ ಸಂಬಂಧಿಸಿದಂತೆ ವಿದೇಶದಲ್ಲಿರುವ ಅನಿವಾಸಿ ಭಾರತೀಯರು ಒಲವು ತೋರಿದ್ದಾರೆ. ತಮ್ಮ ಊರು, ತಾಲೂಕು, ಜಿಲ್ಲೆಯಲ್ಲಿರುವ ದೇವಸ್ಥಾನ, ಪ್ರವಾಸಿ ತಾಣಗಳ ಅಭಿವೃದ್ಧಿಗೆ ಉತ್ಸುಕರಾಗಿದ್ದು, ನೆರವು ನೀಡಲು ಮುಂದೆ ಬಂದು ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ ಎಂದರು. ಮೈಸೂರು ನಗರದಲ್ಲಿರುವ ಪಾರಂಪರಿಕ ಕಟ್ಟಡಗಳನ್ನು ಸರ್ಕಾರ ರಕ್ಷಿಸುತ್ತದೆ. ಸಂರಕ್ಷಣೆಗೆ ಸರ್ಕಾರವೇ ಅನುದಾನ ಕೊಡುತ್ತದೆ ಎಂದು ನಿರೀಕ್ಷಿಸದೇ ಸ್ಮಾರಕ, ಪಾರಂಪರಿಕ ಕಟ್ಟಡಗಳನ್ನು ಜನರ ಪಾಲ್ಗೊಳ್ಳುವಿಕೆಯ ಮೂಲಕ ರಕ್ಷಣೆ ಮಾಡಬೇಕಿದೆ. ಇದಕ್ಕೆ ನಾಗರಿಕರು ಸಹಾಯ, ಸಹಕಾರ ನೀಡಬೇಕು ಎಂದು ಅವರು ಕೋರಿದರು.

ಶಾಸಕರಾದ ದರ್ಶನ್‌ ಧ್ರುವನಾರಾಯಣ, ಡಿ. ರವಿಶಂಕರ್‌, ಸಿ.ಎನ್‌. ಮಂಜೇಗೌಡ, ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಪ್ರಾಚ್ಯವಸ್ತು ಪುರಾತತ್ವ ಇಲಾಖೆಯ ಆಯುಕ್ತ ದೇವರಾಜು, ಜಿಪಂ ಸಿಇಒ ಕೆ.ಎಂ. ಗಾಯತ್ರಿ, ಡಿಸಿಪಿ ಎಸ್. ಜಾಹ್ನವಿ, ನಗರ ಪಾಲಿಕೆ ಹೆಚ್ಚುವರಿ ಆಯುಕ್ತೆ ಎಂ.ಜೆ. ರೂಪಾ, ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಎಂ.ಕೆ. ಸವಿತಾ, ಸಹಾಯಕ ನಿರ್ದೇಶಕ ಟಿ.ಕೆ. ಹರೀಶ್ ಇದ್ದರು.

ಜಾತಿ ಗಣತಿ ಬಗ್ಗೆ ಊಹಾಪೋಹ ಬೇಡ: ಸಚಿವ ಪರಮೇಶ್ವರ್‌

ಬ್ರಾಂಡ್‌ ಮೈಸೂರು- ಇದು ಮೈಸೂರಿನ ಪ್ರವಾಸೋದ್ಯಮ ಇತಿಹಾಸದಲ್ಲಿ ಬದಲಾವಣೆ ತರುವ ವಿಶೇಷ ಪ್ರಯತ್ನವಾಗಿದೆ. ಈ ಯೋಜನೆ ಸಕಾರಗೊಂಡರೆ ಅಗಾಧವಾದ ಅನುಕೂಲವಿದೆ. ಲೋಗೊ ಮತ್ತು ಟ್ಯಾಗ್‌ಲೈನ್‌ ಗಳು ತಕ್ಷಣವೇ ಆಕರ್ಷಿಸುತ್ತದೆ. ಪ್ರವಾಸಿಗರು ಮೈಸೂರು ಭೇಟಿಯನ್ನು ಸ್ಮರಣೀಯವಾಗಿಸಲು ಜಿಲ್ಲಾಡಳಿತ ಕಾರ್ಯೋನ್ಮುಖವಾಗಬೇಕು.
- ಎಚ್‌.ಕೆ. ಪಾಟೀಲ್‌, ಪ್ರವಾಸೋದ್ಯಮ ಸಚಿವರು

Latest Videos
Follow Us:
Download App:
  • android
  • ios