ಉ.ಕ ರಾಜ್ಯಕ್ಕಾಗಿ ಉದಯಿಸಲಿದೆ ಯುಕೆಪಿ: ಒದ್ದಾಡುತ್ತಿವೆ ಕಾಂಗ್ರೆಸ್, ಬಿಜೆಪಿ!
ಉತ್ತರ ಕರ್ನಾಟಕ ರಾಷ್ಟೀಯ ಪಕ್ಷಗಳಿಗೆ ತಲೆನೋವಾದ ಯುಕೆಪಿ ಪಾರ್ಟಿ ಹುಟ್ಟು?| ಪ್ರತ್ಯೇಕ ಉತ್ತರ ಕರ್ನಾಟಕಕ್ಕೆ ಬೇಡಿಕೆ ಹೊಂದಿದ್ದ ಸಂಘಟನೆಯಿಂದ ಇದೀಗ ಯುಕೆಪಿ ಪಕ್ಷಕ್ಕೆ ತಯಾರಿ| ಫೆಬ್ರುವರಿ 2ರಿಂದ 28ರವರೆಗೆ ಪತ್ರ, ಆನಲೈನ್ ಮುಖಾಂತರ 13 ಜಿಲ್ಲೆಗಳ ಅಭಿಪ್ರಾಯ ಸಂಗ್ರಹಣೆಗೆ ನಿರ್ಧಾರ| ಪಕ್ಷ ಹುಟ್ಟಿಕೊಂಡಲ್ಲಿ ಉ.ಕರ್ನಾಟಕ ಬೆಂಬಲಿಸುತ್ತಿದ್ದ ರಾಷ್ಟ್ರೀಯ ಪಕ್ಷಗಳ ನಾಯಕರ ನಿಲುವೇನು?|ಬಾಗಲಕೋಟೆಯಲ್ಲಿ ಸಭೆ ನಡೆಸಿದ ಪ್ರತ್ಯೇಕ ಉತ್ತರ ಕರ್ನಾಟಕ ಹೋರಾಟ ಸಮಿತಿ ಸದಸ್ಯರು
ಮಲ್ಲಿಕಾರ್ಜುನ ಹೊಸಮನಿ
ಬಾಗಲಕೋಟೆ(ಜ.31): ರಾಜ್ಯದಲ್ಲೀಗ ಯಾವ ಕ್ಷೇತ್ರದಲ್ಲಿ ಕೇಳಿದ್ರೂ ಲೋಕಸಭಾ ಚುನಾವಣೆಯದ್ದೇ ಹವಾ, ಎಲ್ಲಾ ಪಕ್ಷಗಳು ಅಭ್ಯರ್ಥಿಗಳ ಹುಡುಕಾಟದಲ್ಲಿ ಫುಲ್ ಬ್ಯೂಸಿಯಾಗಿದ್ದರೆ ಇತ್ತ ಉತ್ತರ ಕರ್ನಾಟಕದಲ್ಲಿದ್ದು ಇಲ್ಲಿಯವರೆಗೆ ಪ್ರತ್ಯೇಕ ರಾಜ್ಯದ ಕೂಗಿಗೆ ಜೈ ಅನ್ನುತ್ತಿದ್ದ ರಾಜಕೀಯ ನಾಯಕರಿಗೆ ಇದೀಗ ಮತ್ತೊಂದು ತಲೆನೋವೊಂದು ಶುರುವಾಗಿದೆ.
ಯುಕೆಪಿ ಪಕ್ಷದ ಅಭಿಯಾನ ಇಂತಹವೊಂದು ಸಂದಿಗ್ಧತೆಗೆ ಸಾಕ್ಷಿಯಾಗಿದೆ. ರಾಜ್ಯದಲ್ಲಿ ಉತ್ತರ ಕರ್ನಾಟಕವನ್ನ ಕಡೆಗಣಿಸಲಾಗುತ್ತಿದೆ ಎನ್ನುವ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಹೋರಾಟ ಸಮಿತಿಯೊಂದು ಹುಟ್ಟಿಕೊಂಡಿತ್ತು. ಸಾಲದ್ದಕ್ಕೆ ಪ್ರತಿಬಾರಿ ಹೋರಾಟ ಮಾಡುತ್ತಲೇ ಇತ್ತು. ಈ ಮಧ್ಯೆ ರಾಷ್ಟ್ರೀಯ ಪಕ್ಷಗಳ ಕೆಲವು ನಾಯಕರು ಸಹ ಉತ್ತರ ಕರ್ನಾಟಕ ಪ್ರತ್ಯೇಕತೆ ಕೂಗಿಗೆ ಬೆಂಬಲಿಸಿ ಹೇಳಿಕೆಯನ್ನೂ ಕೊಡುತ್ತಿದ್ದರು.
ಆದ್ರೆ ಇದೀಗ ಅದೇ ಉತ್ತರ ಕರ್ನಾಟಕ ಹೋರಾಟ ಸಮಿತಿ ಇಂದಿನ ನಿರ್ಣಯ ಇದೀಗ ರಾಜಕೀಯ ನಾಯಕರ ಆತಂಕಕ್ಕೆ ಕಾರಣವಾಗಿದೆ. ಹೌದು. ಮುಳುಗಡೆ ನಗರಿ ಬಾಗಲಕೋಟೆಯಲ್ಲಿ ಸಭೆ ಸೇರಿದ್ದ ಸಮಿತಿ ಮುಂಬರುವ ಚುನಾವಣೆಗೆ ಹೊಸ ಪಕ್ಷವೊಂದನ್ನು ಹುಟ್ಟಿ ಹಾಕಲು ನಿರ್ಧರಿಸಿದೆ.
"
ಯುಕೆಪಿ ಪಾರ್ಟಿ ಅಂದ್ರೆ ಉತ್ತರ ಕರ್ನಾಟಕ ಪಕ್ಷ ಎಂಬ ಹೆಸರಿನಲ್ಲಿ ಹೊರಬರಲು ಮುಂದಾಗಿದ್ದು, ಪಕ್ಷ ಹುಟ್ಟಿ ಹಾಕುವ ಮುನ್ನ ಜನಾಬಿಪ್ರಾಯ ಸಂಗ್ರಹ ಅಭಿಯಾನವನ್ನ ಮಾಡೋಕೆ ಸಮಿತಿ ನಿರ್ಧರಿಸಿದೆ.
ಹೀಗಾಗಿ ಫೆ.2 ರಿಂದ 28ರವರೆಗೆ ಪತ್ರ ಸೇರಿದಂತೆ ಆನಲೈನ್ ಆಗಿ ಉತ್ತರ ಕರ್ನಾಟಕದ ೧೩ ಜಿಲ್ಲೆಗಳಲ್ಲಿ ಜನಾಭಿಪ್ರಾಯ ಸಂಗ್ರಹಿಸಿ ಮಾರ್ಚ ೩ರಂದು ಹೊಸ ಯುಕೆಪಿ ಪಕ್ಷ ಹುಟ್ಟಿನ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲು ಸಜ್ಜಾಗಿದೆ.
"
ಇನ್ನು ಒಂದೊಮ್ಮೆ ಉತ್ತರ ಕರ್ನಾಟಕ ಪಕ್ಷ ಹುಟ್ಟಿಕೊಂಡಿದ್ದೇ ಆದಲ್ಲಿ ಅದನ್ನೆ ಬೆಂಬಲಿಸೋದಾ ಅಥವಾ ಬಿಡೋದಾ ಅನ್ನೋ ಪ್ರಶ್ನೆ ರಾಜಕೀಯ ನಾಯಕರಿಗೆ ತಲೆಬಿಸಿಯಾಗಲಿದೆ. ಉತ್ತರ ಕರ್ನಾಟಕಕ್ಕೆ ನ್ಯಾಯ ಸಿಗಬೇಕಾದ್ರೆ ಪಕ್ಷ ಸ್ಥಾಪನೆ ಅಗತ್ಯ ಅನ್ನೋದು ಸಮಿತಿ ಅವರ ವಾದ. ಇನ್ನು ಕೇವಲ ಹೋರಾಟ ಮಾಡಿದ್ರೆ ಸಾಲದು ಅದಕ್ಕೆ ಸ್ಪಂದನೆ ಕೊಡಬೇಕಾದ ರಾಜಕಾರಣಿಗಳು ಬೇಕಿರುವ ಹಿನ್ನೆಲೆಯಲ್ಲಿ ಈ ಹೊಸ ಪಕ್ಷ ಹುಟ್ಟು ಹಾಕಲು ಸಮಿತಿ ಮುಂದಾಗಿದೆ.
ಯಾಕಂದ್ರೆ ಈಗಿರೋ ಜನಪ್ರತಿನಿಧಿಗಳು ವಿಧಾನಸೌಧದ ಒಳಗಡೆ ನಮ್ಮ ನಿಲುವುನ್ನು ಸ್ಪಷ್ಟಪಡಿಸುತ್ತಿಲ್ಲ. ಇದ್ರಿಂದ ಸ್ವತ: ಉತ್ತರ ಕರ್ನಾಟಕ ಪಕ್ಷವನ್ನ ಕಟ್ಟಿ ಆ ಮೂಲಕ ನಮ್ಮ ಜನಪ್ರತಿನಿಧಿಗಳಿಂದಲೇ ನಾವು ಯಶಸ್ಸು ಕಾಣಬೇಕೆಂದು ಇಂತಹ ಹೊಸ ಪಕ್ಷದ ಯೋಚನೆ ಮಾಡ್ತಿರೋದಾಗಿ ಸಮಿತಿ ಸದಸ್ಯರು ಹೇಳಿದ್ದಾರೆ.
"
ರಾಜಕೀಯ ಪಕ್ಷಗಳು ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಮಗ್ನರಾಗಿರೋ ಬೆನ್ನಲ್ಲೆ ಉತ್ತರ ಕರ್ನಾಟಕದ ನಿಲುವು ಹೊಂದಿ ಹುಟ್ಟು ಹಾಕಲು ಮುಂದಾಗಿರೋ ಯುಕೆಪಿ ಪಕ್ಷ ಒಂದೊಮ್ಮೆ ಹುಟ್ಟಿಕೊಂಡಲ್ಲಿ ಯಾವ ರೀತಿ ಎಫೆಕ್ಟ್ ನೀಡಬಹುದು ಅನ್ನೋ ಲೆಕ್ಕಾಚಾರ ರಾಜಕೀಯ ನಾಯಕರಲ್ಲಿ ನಿದ್ದೆಗೆಡಿಸಿರುವುದು ಸುಳ್ಳಲ್ಲ.