ಗುಂಡಿ ರಹಿತ ರಸ್ತೆ , ಕಸದ ನಿರ್ವಹಣೆ, ಪಾದಚಾರಿ ಮಾರ್ಗಗಳ ನಿರ್ಮಾಣ, ಜಲಾವೃತ ಮುಕ್ತ ರಸ್ತೆಗಳು, ಪ್ರಮುಖ ರಸ್ತೆಗಳ ಅಭಿವೃದ್ಧಿ ಮತ್ತು ವಿಸ್ತರಣೆ, ಮೇಲ್ಸೇತುವೆಗಳ ನಿರ್ಮಾಣ... ಇವು ಜಿಬಿಎ ರಚನೆಯಾದ ಬಳಿಕ ಮಂಡಿಸುತ್ತಿರುವ ಪ್ರಥಮ ಬಜೆಟ್‌ನಲ್ಲಿ ಆದ್ಯತೆ

ಬೆಂಗಳೂರು : ಗುಂಡಿ ರಹಿತ ರಸ್ತೆಗಳು, ಕಸದ ಸಮರ್ಪಕ ನಿರ್ವಹಣೆ, ಜನಸ್ನೇಹಿ ಪಾದಚಾರಿ ಮಾರ್ಗಗಳ ನಿರ್ಮಾಣ, ಮಳೆಗಾಲದಲ್ಲಿ ಜಲಾವೃತ ಮುಕ್ತ ರಸ್ತೆಗಳು, ಪ್ರಮುಖ ರಸ್ತೆಗಳ ಅಭಿವೃದ್ಧಿ ಮತ್ತು ವಿಸ್ತರಣೆ, ಟ್ರಾಫಿಕ್ ಜಾಮ್ ಉಂಟಾಗುವ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಮೇಲ್ಸೇತುವೆಗಳ ನಿರ್ಮಾಣ...

Add Asianetnews Kannada as a Preferred SourcegooglePreferred

ಇವು ಜಿಬಿಎ ರಚನೆಯಾದ ಬಳಿಕ ಮಂಡಿಸುತ್ತಿರುವ ಪ್ರಥಮ ಬಜೆಟ್‌ನಲ್ಲಿ ಆದ್ಯತೆಯ ವಲಯಗಳು ಆಗಿರಬೇಕು ಎಂಬ ನಿರೀಕ್ಷೆಯನ್ನು ನಗರದ ನಾಗರಿಕರು ಹೊಂದಿದ್ದಾರೆ.

ವಾಹನಗಳ ಸುಗಮ ಸಂಚಾರಕ್ಕೆ ಗುಂಡಿ ರಹಿತ ರಸ್ತೆಗಳು ನಿರ್ಮಾಣವಾಗಬೇಕಿದೆ. ಪಾಲಿಕೆಗಳ ವ್ಯಾಪ್ತಿಯ ಫೋನ್ ಇನ್ ಕಾರ್ಯಕ್ರಮಗಳು, ಮುಖ್ಯ ಆಯುಕ್ತರು ನಡೆಸುವ ಸಾರ್ವಜನಿಕ ಸಭೆಗಳಲ್ಲಿ ರಸ್ತೆ ಗುಂಡಿ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆಯೇ ಗರಿಷ್ಠ ದೂರುಗಳು ಸಲ್ಲಿಕೆಯಾಗುತ್ತಿವೆ. ಹೀಗಾಗಿ, ಗುಂಡಿ ಮುಕ್ತ ರಸ್ತೆಗಾಗಿ ವಿಶೇಷ ಆದ್ಯತೆ ನೀಡಬೇಕಿದೆ. ಗುಂಡಿಗಳನ್ನು ವೈಜ್ಞಾನಿಕ ರೀತಿಯಲ್ಲಿ ಮುಚ್ಚುವುದರ ಕಡೆ ಜಿಬಿಎ ಗಮನ ಹರಿಸಬೇಕು ಎಂದು ನಗರದ ನಾಗರಿಕರು ಒತ್ತಾಯಿಸಿದ್ದಾರೆ.

ಇನ್ನು ನಗರದಲ್ಲಿ ಕಸ ವಿಲೇವಾರಿ ಸಮಸ್ಯೆಯು ಗಂಭೀರವಾಗಿದೆ. ಕಸವನ್ನು ಹಗಲಿನಲ್ಲಿ ಮಾತ್ರವಲ್ಲದೇ, ರಾತ್ರಿ ವೇಳೆಯು ಮನೆಗಳಿಂದ ಸಂಗ್ರಹಕ್ಕೆ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ. ಇನ್ನು ಸಾರ್ವಜನಿಕ ಸ್ಥಳಗಳಲ್ಲಿನ ಕಸವನ್ನು ವಿಲೇವಾರಿ ಮತ್ತು ಎಲ್ಲೆಂದರಲ್ಲೇ ಕಸ ಬಿಸಾಡುವುದನ್ನು ನಿಯಂತ್ರಣಕ್ಕೆ ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕು.

ಮಾರುಕಟ್ಟೆ ಪ್ರದೇಶ ಮತ್ತು ಮುಖ್ಯ ರಸ್ತೆಗಳ ಬದಿಯಲ್ಲಿ ಬೇಕಾಬಿಟ್ಟಿಯಾಗಿ ಕಸ ಹಾಕುವವರ ವಿರುದ್ಧ ಕ್ರಮ ಮತ್ತು ಅಂತಹ ಸ್ಥಳಗಳ ಮೇಲೆ ನಿಗಾ ಇರಿಸಲು ಸಿಸಿ ಕ್ಯಾಮೆರಾಗಳ ಅಳವಡಿಕೆ ಮತ್ತು ಮೇಲ್ವಿಚಾರಣೆಗೆ ಕ್ರಮಕೈಗೊಳ್ಳುವ ನಿರೀಕ್ಷೆ ಇದೆ.

ಭಾರಿ ಸಂಚಾರ ದಟ್ಟಣೆಯಾಗುವ ತುಮಕೂರು ರಸ್ತೆಯ ಗೊರಗುಂಟೆಪಾಳ್ಯ ಜಂಕ್ಷನ್‌ನಲ್ಲಿ ಮೇಲ್ಸೇತುವೆ ನಿರ್ಮಾಣ, ಮೈಸೂರು ರಸ್ತೆಯಲ್ಲಿ ಸಿರ್ಸಿ ವೃತ್ತದಿಂದ ನಾಯಂಡಹಳ್ಳಿ ರಸ್ತೆವರೆಗೆ ಫ್ಲೈಓವರ್ ನಿರ್ಮಾಣ ಯೋಜನೆ ಸೇರಿ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಉಂಟಾಗುತ್ತಿರುವ ಟ್ರಾಫಿಕ್ ಜಾಮ್ ನಿವಾರಣೆಗೆ ಹೊಸ ಮೇಲ್ಸೆತುವೆಗಳು ಘೋಷಣೆಯಾಗಬಹುದು ಎಂದು ಹೇಳಲಾಗಿದೆ.

ಇನ್ನು ನಗರದ ಬಹಳಷ್ಟು ಕಡೆಗಳಲ್ಲಿ ಪಾದಚಾರಿ ಮಾರ್ಗಗಳು ಹಾಳಾಗಿದ್ದು, ಕೆಲವು ಕಡೆ ಓಡಾಡಲು ಆಗದಂತಹ ಪರಿಸ್ಥಿತಿ ಇದೆ. ಈ ನಿಟ್ಟಿನಲ್ಲಿ ಜನರ ಓಡಾಟಕ್ಕೆ ಅನುಕೂಲವಾಗುವಂತಹ ಪಾದಚಾರಿ ಮಾರ್ಗಗಳ ನಿರ್ಮಾಣದ ನಿರೀಕ್ಷೆ ಇದೆ.

ವೈಟ್ ಟಾಪಿಂಗ್ ರಸ್ತೆಗಳು:

ಇನ್ನು ನಗರದ ಕೇಂದ್ರ ಭಾಗ ಸೇರಿದಂತೆ ಅನೇಕ ಕಡೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆದಿದೆ. ಕಾಮಗಾರಿಗೆ ವೇಗ ನೀಡುವ ಜೊತೆಗೆ ಹೊಸದಾಗಿ ಮತ್ತಷ್ಟು ರಸ್ತೆಗಳನ್ನು ವೈಟ್ ಟಾಪಿಂಗ್ ಯೋಜನೆಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

ಇಂದಿರಾ ಕ್ಯಾಂಟೀನ್‌ಗಳಿಗೆ ಹೊಸ ಮೆನು

ಮಳೆಗಾಲದಲ್ಲಿ ರಸ್ತೆಗಳು ಜಲಾವೃತವಾಗುವುದನ್ನು ತಪ್ಪಿಸಲು ರಾಜಕಾಲುವೆ ಅಭಿವೃದ್ಧಿ, ಕೆರೆಗಳ ಅಭಿವೃದ್ಧಿ, ಹೂಳು ತೆಗೆಯುವುದು ಸೇರಿದಂತೆ ಹೊಸ ಯೋಜನೆಗಳು ಘೋಷಣೆ ಸಾಧ್ಯತೆ ಇದೆ. ನಗರದ ಉದ್ಯಾನಗಳ ಅಭಿವೃದ್ಧಿ, ಪ್ರಮುಖ ಜಂಕ್ಷನ್‌ಗಳ ಸುಂದರೀಕರಣ, ನಗರದ ಎಲ್ಲಾ ಭಾಗಗಳಲ್ಲಿ ಬೀದಿ ದೀಪಗಳನ್ನು ಎಲ್‌ಇಡಿಗೆ ಪರಿವರ್ತಿಸುವ ಯೋಜನೆಗೆ ವೇಗ ನೀಡುವುದು ಮತ್ತು ಇತರ ಕಲ್ಯಾಣ ಯೋಜನೆಗಳು ಬಜೆಟ್‌ನಲ್ಲಿರಲಿವೆ. ಹಾಗೆಯೇ ಇಂದಿರಾ ಕ್ಯಾಂಟೀನ್‌ಗಳಿಗೆ ಗ್ರಾಹಕರನ್ನು ಆಕರ್ಷಿಸಲು ಹೊಸ ಮೆನು ಪರಿಚಯಿಸುವ ಸಾಧ್ಯತೆ ಇದೆ.

ಬಜೆಟ್ ನೇರ ಪ್ರಸಾರ

ಜಿಬಿಎ ಪೂರ್ವ ನಗರ ಪಾಲಿಕೆ ಮತ್ತು ಕೇಂದ್ರ ನಗರ ಪಾಲಿಕೆಗಳ ಆಯುಕ್ತರು ಮಂಡಿಸುವ ಬಜೆಟ್ ಅನ್ನು ಯುಟ್ಯೂಬ್ ಚಾನಲ್ ಮೂಲಕ ನೇರ ಪ್ರಸಾರ ಮಾಡಲಾಗುತ್ತಿದೆ. ಗ್ರೇಟರ್ ಬೆಂಗಳೂರು ಅಥಾರಟಿ ಯುಟ್ಯೂಬ್ ಚಾನಲ್‌ನಲ್ಲಿ ಬಜೆಟ್ ಅನ್ನು ಸಾರ್ವಜನಿಕರು ವೀಕ್ಷಿಸಬಹುದಾಗಿದೆ.