ಬೆಂಗಳೂರು(ಜ.02): ಬಸ್‌ಗಳ ಕಾರ್ಯಾಚರಣೆ ಹಾಗೂ ಚಾಲನಾ ಸಿಬ್ಬಂದಿ ಕರ್ತವ್ಯಕ್ಕೆ ನಿಯೋಜಿಸುವಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಬಿಎಂಟಿಸಿ ಫೆ.1ರಿಂದ ಹೊಸದಾಗಿ ‘ಕರ್ತವ್ಯ ನಿಯೋಜನೆ ಪದ್ಧತಿ’ ಜಾರಿಗೆ ಮುಂದಾಗಿದೆ.

ಪ್ರಯಾಣಿಕರ ಕೊರತೆ ಹಿನ್ನೆಲೆಯಲ್ಲಿ ಸದ್ಯ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಬಿಎಂಟಿಸಿ ಬಸ್‌ ಕಾರ್ಯಾಚರಣೆ ಮಾಡುತ್ತಿದೆ. ನಿಗಮದಲ್ಲಿ ಒಟ್ಟು 27 ಸಾವಿರ ಚಾಲನಾ ಸಿಬ್ಬಂದಿ ಇದ್ದಾರೆ. ಪ್ರತಿ ದಿನ ವಾರಾಂತ್ಯದ ರಜೆ ಪಡೆದವರು, ವಿವಿಧ ಕಾರಣಗಳಿಗೆ ರಜೆ ತೆಗೆದುಕೊಂಡವರು, ಕರ್ತವ್ಯಕ್ಕೆ ಗೈರು ಹಾಜರಾದ ಸಿಬ್ಬಂದಿ ಈ ಎಲ್ಲವನ್ನೂ ಗಮನದಲ್ಲಿರಿಸಿಕೊಂಡು ಉಳಿದ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲು ಈ ಹೊಸ ಪದ್ಧತಿ ಸಹಾಯಕವಾಗಲಿದೆ.

ಬ್ರಿಟನ್‌ ದೇಶದಿಂದ ಬಂದ 75 ಜನರು ಇನ್ನೂ ನಾಪತ್ತೆ

ಈ ನೂತನ ಪದ್ಧತಿ ಅನ್ವಯ ನಿಗಮದ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಚಾಲನಾ ಸಿಬ್ಬಂದಿಯ ಸೇವಾ ಹಿರಿತನಕ್ಕೆ ಅನುಗುಣವಾಗಿ ಜೇಷ್ಠತಾ ಪಟ್ಟಿಯನ್ನು ಹುದ್ದೆವಾರು ತಯಾರಿಸಲಾಗುತ್ತಿದೆ. ಇದರಿಂದ ಲಂಚ ಪಡೆದು ತಮಗೆ ಬೇಕಾದ ಸಿಬ್ಬಂದಿಯನ್ನು ಬೇಕಾದ ಮಾರ್ಗಕ್ಕೆ ಕರ್ತವ್ಯಕ್ಕೆ ನಿಯೋಜಿಸುವ ಪ್ರಕರಣಗಳಿಗೆ ತಡೆ ಬೀಳಲಿದೆ.

ಅಂತೆಯೆ ಘಟಕದಲ್ಲಿನ ಎಲ್ಲ ಬಸ್‌ಗಳಿಗೆ ಪ್ರತ್ಯೇಕ ಮಾರ್ಗದ ಬ್ಲಾಕ್‌ಗಳು ಹಾಗೂ ಚಾಲನಾ ಸಿಬ್ಬಂದಿ ಜೇಷ್ಠತಾ ಪಟ್ಟಿಯನ್ನು ಮುಂಚಿತವಾಗಿ ಸೂಚನಾ ಫಲಕದಲ್ಲಿ ಪ್ರದರ್ಶಿಸಲಾಗುತ್ತದೆ. ಕೌನ್ಸೆಲಿಂಗ್‌ ವೇಳೆ ಚಾಲನಾ ಸಿಬ್ಬಂದಿಗೆ ಸೂಕ್ತವಾದ ಮಾರ್ಗ ಹಾಗೂ ವಾರದ ರಜೆ ಆಯ್ಕೆಗೆ ಅನುಕೂಲ ಮಾಡಿಕೊಡಲಾಗುತ್ತದೆ. ಅಂತೆಯೆ ಸಾಮಾನ್ಯ ಪಾಳಿಗೆ ಚಾಲನಾ ಸಿಬ್ಬಂದಿ ಕರ್ತವ್ಯಕ್ಕೆ ನಿಯೋಜಿಸುವಾಗ ಕನಿಷ್ಠ ಶೇ.50ರಷ್ಟುಮಹಿಳಾ ನಿರ್ವಾಹಕಿಯರ ನಿಯೋಜನೆಗೆ ಆದ್ಯತೆ ನೀಡಲು ನಿಗಮ ನಿರ್ಧರಿಸಿದೆ.