ಬೆಂಗಳೂರು(ಜ.02): ಕಳೆದ ನವೆಂಬರ್‌ನಿಂದ ಬ್ರಿಟನ್‌ ಮೂಲದಿಂದ ರಾಜ್ಯಕ್ಕೆ ಬಂದವರ ಪತ್ತೆ ಕಾರ್ಯ ನಡೆಯುತ್ತಿದ್ದು, ನವೆಂಬರ್‌ 25ರಿಂದ ಈವರೆಗೆ 5,068 ಮಂದಿ ರಾಜ್ಯಕ್ಕೆ ಆಗಮಿಸಿದ್ದಾರೆ. ಈ ಪೈಕಿ 75 ಮಂದಿ ಹೊರತುಪಡಿಸಿ ಎಲ್ಲರೂ ಪತ್ತೆಯಾಗಿದ್ದು, ಇವರ ಶೋಧ ಕಾರ್ಯ ಮುಂದುವರೆದಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್‌ ಹೇಳಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟ್ಟಾರೆಯಾಗಿ ನವೆಂಬರ್‌ 25ರಿಂದ ಈವರೆಗೆ 5,068 ಮಂದಿ ಬ್ರಿಟನ್‌ನಿಂದ ಆಗಮಿಸಿದ್ದಾರೆ. ಇದರಲ್ಲಿ 4,238 ಮಂದಿ ಡಿಸೆಂಬರ್‌ 9ರಿಂದ ಈಚೆಗೆ ಬಂದಿದ್ದಾರೆ. ಇವರಲ್ಲಿ 810 ಮಂದಿ ಹೊರ ರಾಜ್ಯದ ಪ್ರಯಾಣಿಕರಾಗಿದ್ದು, ಆಯಾ ರಾಜ್ಯಗಳಿಗೆ ಇವರ ಮಾಹಿತಿ ಒದಗಿಸಿ ಅಗತ್ಯ ಕ್ರಮಕ್ಕೆ ಸೂಚಿಸಲಾಗಿದೆ.

 

ಇನ್ನು ರಾಜ್ಯದಲ್ಲಿ 75 ಮಂದಿಯ ಸುಳಿವು ಪತ್ತೆಯಾಗಿಲ್ಲ. ಇದರಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 70 ಮಂದಿ ಹಾಗೂ ರಾಜ್ಯದ ಇತರೆಡೆ 5 ಮಂದಿ ಇದ್ದಾರೆ. ಇವರ ಶೋಧ ಕಾರ್ಯ ನಡೆಯುತ್ತಿದ್ದು ಸಂಜೆ ಒಳಗಾಗಿ ಶೋಧಿಸುವುದಾಗಿ ಗೃಹ ಇಲಾಖೆ ತಿಳಿಸಿದೆ. ಬಳಿಕ ಎಲ್ಲರನ್ನೂ ಹಂತ-ಹಂತವಾಗಿ ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಸುಧಾಕರ್‌ ತಿಳಿಸಿದರು.

38 ಮಂದಿಗೆ ಸೋಂಕು:

ಬ್ರಿಟನ್‌ನಿಂದ ಬಂದವರ ಪೈಕಿ 33 ಮಂದಿ ಹಾಗೂ ಅವರ ಪ್ರಾಥಮಿಕ ಸಂಪರ್ಕಿತರಿಗೆ 5 ಮಂದಿಗೆ ಸೇರಿ ಒಟ್ಟು 38 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇಷ್ಟೂಮಾದರಿಗಳನ್ನು ಜೆನೆಟಿಕ್‌ ಸೀಕ್ವೆನ್ಸ್‌ಗೆ ಕಳುಹಿಸಿದ್ದು ಈವರೆಗೆ 10 ಮಂದಿಗೆ ಬ್ರಿಟನ್‌ ವೈರಸ್‌ ದೃಢಪಟ್ಟಿದೆ ಎಂದು ಮಾಹಿತಿ ನೀಡಿದರು.