Asianet Suvarna News Asianet Suvarna News

BBMP: ರಸ್ತೆ ಗುಂಡಿ ಮುಕ್ತಿಗೆ ಹೊಸ ಡೆಡ್‌ಲೈನ್‌ ನ.10

 • ನ.6ರೊಳಗೆ ರಸ್ತೆ ಗುಂಡಿಗೆ ಮುಕ್ತ ನೀಡೋದಾಗಿ ಹೇಳಿದ್ದ ತುಷಾರ್‌
 • ಆದರೂ ಮತ್ತೆ ಡೆಡ್‌ಲೈನ್‌ ವಿಸ್ತರಣೆ
 • ಇನ್ನೂ 7 ಸಾವಿರ ಗುಂಡಿ ಬಾಕಿ
New deadline for pothole removal november 10 rav
Author
First Published Nov 8, 2022, 6:34 AM IST

ಬೆಂಗಳೂರು (ನ.8) : ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳ ರಸ್ತೆಗಳನ್ನು ನ.10ರೊಳಗೆ ಗುಂಡಿ ಮುಕ್ತಗೊಳಿಸುವುದಾಗಿ ಪಾಲಿಕೆ ನೀಡಿದ್ದ ಅವಧಿ ಮುಕ್ತಾಯಕ್ಕೆ ಕೇವಲ ಮೂರು ದಿನಗಳು ಮಾತ್ರ ಬಾಕಿ ಇವೆ. ಆದರೆ, ನಗರದ ಹಲವು ರಸ್ತೆಗಳಲ್ಲಿ ಸಾವಿರಾರು ಗುಂಡಿಗಳು ಬಾಯ್ತೆರೆದುಕೊಂಡಿದ್ದು, ವಾಹನ ಸವಾರರ ಪರದಾಟ ಮುಂದುವರೆದಿದೆ.

BBMP Recruitment 2022: ಖಾಲಿ ಇರುವ 63 ವೈದ್ಯಕೀಯ ಅಧಿಕಾರಿ ಹುದ್ದೆಗೆ ನೇರ ಸಂದರ್ಶನ

ಮೇ ತಿಂಗಳಿನಿಂದ ಈವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಅಂದಾಜು 31,211 ರಸ್ತೆ ಗುಂಡಿಗಳನ್ನು ಗುರುತಿಸಲಾಗಿದೆ. ಈವರೆಗೆ 24,957 ಗುಂಡಿಗಳನ್ನು ಭರ್ತಿ ಮಾಡಲಾಗಿದ್ದು, 6,254 ಗುಂಡಿಗಳು ಮುಚ್ಚಲು ಬಾಕಿ ಇದೆ ಎಂದು ಪಾಲಿಕೆ ಮಾಹಿತಿ ನೀಡಿದೆ.

ನ.6ರೊಳಗೆ ಬಿಬಿಎಂಪಿ ವ್ಯಾಪ್ತಿಯ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸಲು ಸೂಚನೆ ನೀಡಲಾಗಿದೆ. ಅಷ್ಟರೊಳಗೆ ಗುಂಡಿ ಮುಚ್ಚದ ಎಂಜಿನಿಯರ್‌ಗಳಿಗೆ ನೋಟಿಸ್‌ ಕೊಟ್ಟು ನ.10ರೊಳಗೆ ಗುಂಡಿಗಳನ್ನು ಮುಚ್ಚಬೇಕು. ಇಲ್ಲದಿದ್ದರೆ ನಿರ್ಲಕ್ಷ್ಯ ವಹಿಸಿದ ಎಂಜಿನಿಯರ್‌ಗಳ ವಿರುದ್ಧ ಕ್ರಮಕೈಗೊಂಡು ಅಮಾನತು ಮಾಡುವುದಾಗಿ ಪಾಲಿಕೆ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ತ್ವರಿತವಾಗಿ ನಡೆಯುತ್ತಿದೆ ಎಂದು ಮೇಲ್ನೋಟಕ್ಕೆ ಕಾಣಿಸಿದರೂ ಇನ್ನೂ 7 ಸಾವಿರಕ್ಕಿಂತ ಹೆಚ್ಚು ರಸ್ತೆ ಗುಂಡಿಗಳು ಮುಚ್ಚುವುದಕ್ಕೆ ಬಾಕಿ ಇದೆ ಎಂದು ಪಾಲಿಕೆ ಮೂಲಗಳು ಮಾಹಿತಿ ನೀಡಿವೆ.

ಹೀಗಾಗಿ ನಿಗದಿತ ಅವಧಿಯೊಳಗೆ ಪಾಲಿಕೆ ಎಂಜಿನಿಯರ್‌ಗಳು ಬಿಬಿಎಂಪಿ ವ್ಯಾಪ್ತಿಯ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸುತ್ತಾರೆಯೇ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಎಂಟು ವಾರ್ಡ್‌ಗಳಲ್ಲಿ ಈಗಾಗಲೇ ಗುರುತಿಸಲಾಗಿದ್ದ ಬಹುತೇಕ ರಸ್ತೆ ಗುಂಡಿಗಳನ್ನು ಭರ್ತಿ ಮಾಡಿದ್ದೇವೆ ಎಂದು ಅಧಿಕಾರಿಗಳು ಹೇಳಿಕೊಳ್ಳುತ್ತಿದ್ದರೂ ಹಲವರು ರಸ್ತೆಗಳಲ್ಲಿ ಗುಂಡಿಗಳು ಹಾಗೆಯೇ ಇವೆ. ಮುಖ್ಯವಾಗಿ ವಾರ್ಡ್‌ ರಸ್ತೆಗಳ ಪರಿಸ್ಥಿತಿಯಲ್ಲಿ ಸುಧಾರಣೆಯಾಗಿಲ್ಲ. ಪೂರ್ವ ವಲಯ, ಪಶ್ಚಿಮ, ಬೊಮ್ಮನಹಳ್ಳಿ, ಮಹದೇವಪುರ, ದಾಸರಹಳ್ಳಿ, ರಾಜರಾಜೇಶ್ವರಿ ನಗರ ವಲಯಗಳ ಹಲವು ವಾರ್ಡ್‌ಗಳಲ್ಲಿ ನೂರಾರು ರಸ್ತೆ ಗುಂಡಿಗಳು ಇವೆ.

ಬಿಬಿಎಂಪಿ ಕಣ್ಣಿಗೆ ದೊಡ್ಡದಾಗಿ ಕಾಣುವ ಗುಂಡಿಗಳನ್ನೇನೋ ಮುಚ್ಚುತ್ತಿದೆ. ಆದರೆ, ವಾರ್ಡ್‌ ರಸ್ತೆಯ ಸಣ್ಣ ಗುಂಡಿಗಳಿಂದಲೂ ತೊಂದರೆಯಾಗುತ್ತಿದೆ. ಕೆಲವೆಡೆ ಗುಂಡಿ ಮುಚ್ಚಲು ಬಳಸಿದ ಜೆಲ್ಲಿ ಮತ್ತು ಎಂಸ್ಯಾಂಡ್‌ ಕಿತ್ತುಬಂದು ವಾಹನಗಳು ಸ್ಕಿಡ್‌(ಜಾರು) ಆಗುತ್ತಿವೆ. ಆದ್ದರಿಂದ ಗುಣಮಟ್ಟದ ರಸ್ತೆಗಳನ್ನು ಪಾಲಿಕೆ ಮಾಡಬೇಕು ಎಂದು ಮಲ್ಲೇಶ್ವರಂ ನಿವಾಸಿ ಕಾಳಾಚಾರ್‌ ಅವರು ಒತ್ತಾಯಿಸಿದ್ದಾರೆ.

ಕಳೆದ ಮೂರ್ನಾಲ್ಕು ದಿನ ಸುರಿದ ಮಳೆಯಿಂದ ರಸ್ತೆ ಗುಂಡಿ ಮುಚ್ಚುವ ಕೆಲಸಕ್ಕೆ ಅಡ್ಡಿಯಾಗಿತ್ತು. ಈಗ ಮಳೆ ನಿಂತಿದ್ದು ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಆರಂಭಗೊಂಡಿದೆ. ಈ ಬೆನ್ನಲ್ಲೇ ಬೆಸ್ಕಾಂ ಮತ್ತು ಬೆಂಗಳೂರು ಜಲಮಂಡಳಿ ಮತ್ತೆ ರಸ್ತೆ ಗುಂಡಿ ಅಗೆಯುವುದನ್ನು ಪುನರಾರಂಭಿಸಿವೆ. ಹಳೆ ರಸ್ತೆ ಗುಂಡಿಗಳನ್ನೇ ಮುಚ್ಚಲು ಬಿಬಿಎಂಪಿ ಪರದಾಡುತ್ತಿದೆ. ಈ ನಡುವೆ ಬೆಸ್ಕಾಂ ಮತ್ತು ಜಲಮಂಡಳಿ ಇನ್ನಷ್ಟುಗುಂಡಿಗಳನ್ನು ಸೃಷ್ಟಿಸುತ್ತಿದ್ದು, ಪಾಲಿಕೆಗೆ ತಲೆನೋವು ತರಿಸಿದೆ ಎಂಬುದು ಬಿಬಿಎಂಪಿ ಹಿರಿಯ ಅಧಿಕಾರಿಗಳ ಅಭಿಪ್ರಾಯ.

BBMP: 45 ಹೊಸ ವಾರ್ಡ್‌ಗೆ ಅಧಿಕಾರಿಗಳೇ ಇಲ್ಲ!

ಸೋಮವಾರ ಬಿಬಿಎಂಪಿ ವ್ಯಾಪ್ತಿಯ ಪೂರ್ವ-309, ಪಶ್ಚಿಮ-396, ದಕ್ಷಿಣ-6, ಮಹದೇವಪುರ-69, ಆರ್‌.ಆರ್‌.ನಗರ- 122 ಮತ್ತು ಎಂಟು ವಲಯಗಳ ಪ್ರಮುಖ ರಸ್ತೆಗಳು ಸೇರಿದಂತೆ 1009 ರಸ್ತೆ ಗುಂಡಿಗಳನ್ನು ಮುಚ್ಚಿರುವುದಾಗಿ ಪಾಲಿಕೆ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ವಲಯ ರಸ್ತೆಗುಂಡಿಗಳು ಭರ್ತಿ ಬಾಕಿ ಗುಂಡಿಗಳು

 • ಬೊಮ್ಮನಹಳ್ಳಿ 1,409 1,396 13
 • ದಾಸರಹಳ್ಳಿ 1,918 636 1,282
 • ಪೂರ್ವ 5,776 5,364 412
 • ಮಹದೇವಪುರ 2,004 1,762 242
 • ಆರ್‌ಆರ್‌ ನಗರ 3,196 2,677 519
 • ದಕ್ಷಿಣ 1,915 1,684 231
 • ಪಶ್ಚಿಮ 4,980 4,686 294
 • ಯಲಹಂಕ 1,015 699 316
 • ಒಟ್ಟು 3,1211 2,4957 6,254

ರಸ್ತೆ ಗುಂಡಿ ತಪ್ಪಿಸಲು ಹೋಗಿ ಕೆಳಗೆ ಬಿದ್ದಿದ್ದ ಬೈಕ್ ಸವಾರ ಕೋಮಾಗೆ:

ರಸ್ತೆ ಗುಂಡಿ ತಪ್ಪಿಸುವ ಭರದಲ್ಲಿ ಆಯ ತಪ್ಪಿ ಬಿದ್ದು ಸವಾರ ಕೋಮಾ ಸ್ಥಿತಿಯಲ್ಲಿದ್ದಾರೆ. ಆದರೆ, ಸಂಚಾರ ಪೊಲೀಸರು ಮಾತ್ರ ಇದು ಸ್ವಯಂ ಅಪಘಾತವೆಂದು ಪ್ರಕರಣ ದಾಖಲಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಜಾಲಹಳ್ಳಿಯ ಗಂಗಮ್ಮನ ಸರ್ಕಲ್‌ ಬಳಿಯ ಎಸ್‌.ಎಂ.ರಸ್ತೆಯಲ್ಲಿ ನ.1ರಂದು ನಡೆದ ಅಪಘಾತದಲ್ಲಿ ದೊಡ್ಡಬೆಟ್ಟಹಳ್ಳಿಯ ಗಿರಿಧಾಮನಗರ ನಿವಾಸಿ ಸಂದೀಪ್‌(36) ಗಾಯಗೊಂಡು ಕೋಮಾ ಸ್ಥಿತಿಗೆ ತಲುಪಿದ್ದಾರೆ. ಈ ಸಂಬಂಧ ಜಾಲಹಳ್ಳಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಸ್ವಯಂ ಅಪಘಾತ ಪ್ರಕರಣ ದಾಖಲಾಗಿದೆ. ದ್ವಿಚಕ್ರ ವಾಹನ ಸವಾರ ಸಂದೀಪ್‌ ಅತಿವೇಗ ಹಾಗೂ ಅಜಾಗರೂಕ ಚಾಲನೆಯಿಂದ ಈ ಅಪಘಾತ ಸಂಭವಿಸಿದೆ ಎಂದು ಎಫ್‌ಐಆರ್‌ ಹಾಕಲಾಗಿದೆ.

ಆದರೆ, ಸಂದೀಪ್‌ ಕುಟುಂಬದವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಂದೀಪ್‌ ದ್ವಿಚಕ್ರ ವಾಹನದಲ್ಲಿ ಬರುವಾಗ ರಸ್ತೆ ಗುಂಡಿ ತಪ್ಪಿಸುವ ಭರದಲ್ಲಿ ಆಯತಪ್ಪಿ ಬಿದ್ದಿದ್ದರು. ಅಪಘಾತಕ್ಕೆ ರಸ್ತೆ ಗುಂಡಿಯೇ ಕಾರಣ ಎಂದು ಆರೋಪಿಸಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಹಾಗೂ ಸಂಚಾರ ಪೊಲೀಸರು ತಮ್ಮ ತಪ್ಪು ಮುಚ್ಚಿಕೊಳ್ಳಲು ಸ್ವಯಂ ಅಪಘಾತವೆಂದು ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.

Follow Us:
Download App:
 • android
 • ios