45 ಹೊಸ ವಾರ್ಡ್‌ಗೆ ಅಧಿಕಾರಿಗಳೇ ಇಲ್ಲ! ಹೊಸ ವಾರ್ಡ್‌ ರಚಿಸಿ 100 ದಿನ ಕಳೆದರೂ ಸಿಬ್ಬಂದಿ ನೇಮಕ ಮಾಡದ ಬಿಬಿಎಂಪಿ ಹುದ್ದೆ ಮಂಜೂರಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿಲ್ಲ 

ವಿಶೇಷ ವರದಿ

ಬೆಂಗಳೂರು (ನ.7) : ಬಿಬಿಎಂಪಿಯ ವಾರ್ಡ್‌ ಮರುವಿಂಗಡಣೆ ಪೂರ್ಣಗೊಂಡು 100 ದಿನ ಪೂರ್ಣಗೊಂಡರೂ ಹೊಸ 45 ವಾರ್ಡ್‌ಗಳಿಗೆ ಆಗತ್ಯವಿರುವ ಅಧಿಕಾರಿ, ಸಿಬ್ಬಂದಿಯ ಮಂಜೂರಾತಿಗೆ ಬಿಬಿಎಂಪಿ ಈವರೆಗೆ ಸರ್ಕಾರಕ್ಕೆ ಪ್ರಸ್ತಾವನೆಯನ್ನೇ ಸಲ್ಲಿಸಿಲ್ಲ. ಇದರಿಂದ ಇರುವ ಅಧಿಕಾರಿಗಳು, ಸಿಬ್ಬಂದಿ ಎರಡೆರಡು ವಾರ್ಡ್‌ಗಳ ನಿರ್ವಹಣೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ.

ರಾಜ್ಯದ Vande Bharat Express ರೈಲು ಇಂದಿನಿಂದ ‘ಓಟ’

ರಾಜ್ಯ ಸರ್ಕಾರವು ಜುಲೈ 15ರಂದು ಬಿಬಿಎಂಪಿಯ ವಾರ್ಡ್‌ಗಳ ಮರುವಿಂಗಡಣೆಯ ಬಗ್ಗೆ ಅಂತಿಮ ಅಧಿಸೂಚನೆ ಹೊರಡಿಸುವ ಮೂಲಕ ವಾರ್ಡ್‌ ಸಂಖ್ಯೆಯನ್ನು 198ರಿಂದ 243ಕ್ಕೆ ಏರಿಕೆ ಮಾಡಿತ್ತು. ಆದಾದ ಬಳಿಕ ಬಿಬಿಎಂಪಿಯು ವಾರ್ಡ್‌ಗೆ ಅಗತ್ಯವಿರುವ ಅಧಿಕಾರ ಸಿಬ್ಬಂದಿಯ ನೇಮಕಕ್ಕೆ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ನೇಮಕ ಮಾಡಿಕೊಳ್ಳುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿಲ್ಲ.

ಬಿಬಿಎಂಪಿಯ 198 ವಾರ್ಡ್‌ಗಳಿರುವ ಅಧಿಕಾರಿ ಸಿಬ್ಬಂದಿಗೆ ಹೆಚ್ಚುವರಿ ಅಧಿಕಾರ ಹಂಚಿಕೆ ಮಾಡಿ ಹೊಸ ವಾರ್ಡ್‌ಗಳ ನಿರ್ವಹಣೆ ಮಾಡುವುದಕ್ಕೆ ಸೂಚನೆ ನೀಡಲಾಗಿದೆ. ಇದರಿಂದ ಅಧಿಕಾರಿ, ಸಿಬ್ಬಂದಿಗೆ ಎರಡೆರಡು ವಾರ್ಡ್‌ಗಳ ನಿರ್ವಹಣೆ ಮಾಡಬೇಕಾದ ಒತ್ತಡ ಉಂಟಾಗಿದೆ. ಈಗಾಗಲೇ ಬಿಬಿಎಂಪಿ ಅಧಿಕಾರಿ ಸಿಬ್ಬಂದಿಯ ಕೊರತೆ ಕಾಡುತ್ತಿದೆ. ಈ ನಡುವೆ ಹೆಚ್ಚುವರಿ ಕೆಲಸ ವಹಿಸಿರುವುದರಿಂದ ನಿಗದಿತ ಅವಧಿಯಲ್ಲಿ ಸಾರ್ವಜನಿಕರಿಗೆ ಸ್ಪಂದಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶೇ.50ಕ್ಕಿಂತ ಹೆಚ್ಚಿನ ಹುದ್ದೆ ಖಾಲಿ

ರಾಜ್ಯ ಸರ್ಕಾರವು ಬಿಬಿಎಂಪಿಯ 198 ವಾರ್ಡ್‌ಗೆ 12,827 ಹುದ್ದೆಗಳನ್ನು ಮಂಜೂರು ಮಾಡಿದೆ. ಅದರಲ್ಲಿ 7,369 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಉಳಿದಂತೆ 8,063 ಹುದ್ದೆಗಳು ಖಾಲಿಯಿವೆ. ಕಾಮಗಾರಿ ವಿಭಾಗಕ್ಕೆ 7,055 ಹುದ್ದೆಗಳು ಮಂಜೂರಾಗಿದ್ದು, 2,889 ಹುದ್ದೆಗಳು ಭರ್ತಿಯಾಗಿವೆ. 4,166 ಹುದ್ದೆಗಳು ಖಾಲಿಯಿವೆ.

2,845 ಅಧಿಕಾರಿ, ಸಿಬ್ಬಂದಿ ಬೇಕು:

ವಾರ್ಡ್‌ ಮರು ವಿಂಗಡಣೆಯಿಂದಾಗಿ ವಾರ್ಡ್‌ ಮಟ್ಟದಲ್ಲಿ ಕೆಲಸ ಮಾಡುವ ಸಹಾಯಕ ಕಂದಾಯ ಅಧಿಕಾರಿ, ಕಾರ್ಯಪಾಲಕ ಎಂಜಿನಿಯರ್‌, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌, ಸಹಾಯಕ ಕಂದಾಯ ಅಧಿಕಾರಿಗಳು ಸೇರಿದಂತೆ 45 ವಾರ್ಡ್‌ಗೆ 2,845 ಅಧಿಕಾರಿ, ಸಿಬ್ಬಂದಿಯ ಅವಶ್ಯಕತೆಯಿದೆ. ಈ ಅಧಿಕಾರಿ ಸಿಬ್ಬಂದಿಗೆ ಮಾಸಿಕ .100 ಕೋಟಿ ವೇತನ ಹೆಚ್ಚುವರಿ ಪಾವತಿ ಮಾಡಬೇಕಾಗುತ್ತದೆ. ಈ ಬಗ್ಗೆ ಕರಡು ಪ್ರಸ್ತಾವನೆ ಸಿದ್ಧಪಡಿಸಿದ್ದರೂ ಸರ್ಕಾರಕ್ಕೆ ಸಲ್ಲಿಕೆ ಮಾಡಿಲ್ಲ.

ಮೇಲ್ವರ್ಗದ ಬಡವರ 10% ಮೀಸಲು ಉಳಿಯುತ್ತಾ? ಇಂದು ಸುಪ್ರೀಂ ತೀರ್ಪು

ಈಗಾಗಲೇ ವಾರ್ಡ್‌ ಕಚೇರಿ ಆರಂಭಿಸಲಾಗಿದೆ. ಲಭ್ಯವಿರುವ ಅಧಿಕಾರಿ ಸಿಬ್ಬಂದಿ ನಿಯೋಜನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ಕ್ರಮ ವಹಿಸಲಾಗಿದೆ. ಹೆಚ್ಚುವರಿ ಅಧಿಕಾರಿ ಸಿಬ್ಬಂದಿ ಮಂಜೂರಾತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

-ರಂಗಪ್ಪ, ವಿಶೇಷ ಆಯುಕ್ತ, ಬಿಬಿಎಂಪಿ ಆಡಳಿತ.

45 ಹೊಸ ವಾರ್ಡ್‌ಗೆ ಅಗತ್ಯವಿರುವ ಅಧಿಕಾರಿ-ಸಿಬ್ಬಂದಿ ವಿವರ

ವಿಭಾಗ ಹುದ್ದೆ ಸಂಖ್ಯೆ ವೇತನ(ಕೋಟಿ .)

  • ಕಂದಾಯ 163 7.92
  • ಎಂಜಿನಿಯರಿಂಗ್‌ 71 5.77
  • ಆರೋಗ್ಯ/ಘನತ್ಯತಾಜ್ಯ 2,340 74.95
  • ಸಾಮಾನ್ಯ ಆಡಳಿತ 271 10.44
  • ಒಟ್ಟು 2,845 99.04