ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಒಳಮೀಸಲಾತಿ ಅನ್ವಯ ಹೊಸ ಜಾತಿ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಲಾಗಿದೆ. ಈ ಸೂಚನೆ ಬಂದಿರುವುದರಿಂದ ವಿದ್ಯಾರ್ಥಿಗಳು ಮತ್ತು ಪಾಲಕರು ಆತಂಕಕ್ಕೊಳಗಾಗಿದ್ದಾರೆ.

ಪರಶಿವಮೂರ್ತಿ ದೋಟಿಹಾಳ

ಕುಷ್ಟಗಿ: ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ವಸತಿ ಶಿಕ್ಷಣ ಸಂಸ್ಥೆಗಳ 6ನೇ ತರಗತಿ ಪ್ರವೇಶಾತಿಗೆ ಅರ್ಜಿ ಸಲ್ಲಿಸುತ್ತಿರುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಹೊಸ ಜಾತಿ ಪ್ರಮಾಣ ಪತ್ರ ಪಡೆಯಬೇಕೆಂಬ ಹೊಸ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಒಳಮೀಸಲಾತಿ ವರ್ಗೀಕರಣದ ಆದೇಶದ ಬೆನ್ನಲ್ಲೇ, ಹೊಸ ವರ್ಗೀಕರಣದ ಅನ್ವಯ ಹೊಸ ಜಾತಿ ಪ್ರಮಾಣಪತ್ರ ಪಡೆಯಬೇಕು ಎಂದು ವಸತಿ ಶಿಕ್ಷಣ ಸಂಸ್ಥೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೀಡಿರುವ ಸೂಚನೆ ಆತಂಕಕ್ಕೆ ಕಾರಣವಾಗಿದೆ. ಏಕೆಂದರೆ ವಸತಿ ಶಾಲೆಗಳ ಪ್ರವೇಶಕ್ಕೆ ದಾಖಲಾತಿ ಸಲ್ಲಿಸಲು ಜ.25 ಕೊನೆಯ ದಿನವಾಗಿದೆ.

ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಿಸುವಂತೆ ಒತ್ತಾಯ

ಪರಿಶಿಷ್ಟ ಜಾತಿಯವರಿಗೆ ಒಳಮೀಸಲಾತಿ ಜಾರಿಯಾದ ಹಿನ್ನೆಲೆ ಹೊಸ ಸಮಸ್ಯೆ ತಲೆದೋರಿದ್ದು, ಒಳಮೀಸಲು ವರ್ಗೀಕರಣದ (ಪ್ರವರ್ಗ ಎ, ಬಿ, ಸಿ ಮತ್ತು ಡಿ) ಅನ್ವಯ ಹೊಸ ಜಾತಿ ಪ್ರಮಾಣಪತ್ರ ಸಲ್ಲಿಸಬೇಕೆಂದು ಪರೀಕ್ಷಾ ಪ್ರಾಧಿಕಾರವು ಜ.20ರಂದು ಪ್ರಕಟಣೆ ನೀಡಿದೆ. ಆದರೆ ಕೇವಲ 4-5 ದಿನಗಳಲ್ಲಿ ಹೊಸ ಜಾತಿ ಪ್ರಮಾಣಪತ್ರ ಪಡೆಯುವುದು ಕಷ್ಟ ಸಾಧ್ಯವಾಗಿದೆ. ಹಾಗಾಗಿ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಿಸುವಂತೆ ಒತ್ತಾಯಿಸಲಾಗುತ್ತಿದೆ.

ಪ್ರಸ್ತುತ ವಿದ್ಯಾರ್ಥಿಗಳ ಕೈಯಲ್ಲಿ ಹಳೆಯ ಜಾತಿ ಪ್ರಮಾಣ ಪತ್ರವಿದ್ದು, ಈಗ ಪ್ರಾಧಿಕಾರದ ಸೂಚನೆಯಂತೆ ನಿಗದಿತ ಅವಧಿಯಲ್ಲಿ ಹೊಸ ಜಾತಿ ಪ್ರಮಾಣ ಪತ್ರ ಸಿಗದಿದ್ದರೆ ಸೌಲಭ್ಯದಿಂದ ವಂಚಿತರಾಗುವ ಭಯ ಕಾಡುತ್ತಿದೆ. ಗ್ರಾಮೀಣ ಪ್ರದೇಶದ ಬಡ ಕುಟುಂಬದ ಮಕ್ಕಳು ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ಶಿಕ್ಷಣ ಪಡೆಯಲು ಮುಂದಾಗಿದ್ದು, ಜಾತಿ ಪ್ರಮಾಣಪತ್ರದ ನಿಯಮದಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆ ದಟ್ಟವಾಗಿದೆ.

ಶೀಘ್ರ ಪ್ರಮಾಣಪತ್ರ ನೀಡಲು ಆಗ್ರಹ

ಜಾತಿ ಪ್ರಮಾಣಪತ್ರ ಪಡೆಯಲು ಆಗುತ್ತಿರುವ ವಿಳಂಬ ಪರಿಗಣಿಸಿ, ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ವಿಸ್ತರಿಸಬೇಕು. ಸದ್ಯಕ್ಕೆ ಹಳೆಯ ಪ್ರಮಾಣ ಪತ್ರದ ಆಧಾರದ ಮೇಲೆ ಅರ್ಜಿ ಸ್ವೀಕರಿಸಿ ದಾಖಲಾತಿ ಸಮಯದಲ್ಲಿ ಹೊಸ ಪ್ರಮಾಣಪತ್ರ ಸಲ್ಲಿಸಲು ಅವಕಾಶ ನೀಡಬೇಕು. ತುರ್ತಾಗಿ ಪ್ರಮಾಣಪತ್ರ ನೀಡಲು ಆಯಾ ತಾಲೂಕು ಕಚೇರಿಗಳಲ್ಲಿ ವಿಶೇಷ ವ್ಯವಸ್ಥೆ ಮಾಡಬೇಕು. ಏಕೆಂದರೆ ಸರ್ವರ್‌ ಸೇರಿ ನಾನಾ ಸಮಸ್ಯೆ ಇರುತ್ತದೆ. ಅರ್ಜಿ ಸಲ್ಲಿಸಲು ಕೊನೆ ದಿನಾಂಕ ವಿಸ್ತರಿಸದಿದ್ದರೆ ವಿದ್ಯಾರ್ಥಿಗಳು ಗುಣಮಟ್ಟದ ವಸತಿ ಶಿಕ್ಷಣದಿಂದ ವಂಚಿತರಾಗಲಿದ್ದಾರೆ.

ಹೊಸ ಜಾತಿ ಪ್ರಮಾಣಪತ್ರ ಪಡೆಯಲು ಕಾಲಾವಕಾಶ ನೀಡುವುದರ ಜೊತೆಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಿಸಬೇಕು. ಇಲ್ಲದಿದ್ದರೆ ಮಕ್ಕಳು ಶಿಕ್ಷಣದಿಂದ ವಂಚಿತರಾಗಲಿದ್ದಾರೆ ಎಂದು ವಿದ್ಯಾರ್ಥಿ ಪೋಷಕರು ಹೇಳುತ್ತಾರೆ.

ಒಳಮೀಸಲು ಕಾರಣ ಜಾತಿ ವರ್ಗೀಕರಣದ ಕುರಿತು ಹೊಸ ಜಾತಿ ಪ್ರಮಾಣ ಪತ್ರ ತರುವಂತೆ ಪ್ರಾಧಿಕಾರ ಆದೇಶ ಮಾಡಿದೆ. ಈ ಕುರಿತು ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಪ್ರವೇಶ ದಿನಾಂಕ ವಿಸ್ತರಣೆ ಮಾಡುವ ವಿಶ್ವಾಸವಿದೆ ಎಂದು ನಿಡಶೇಸಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಿಬ್ಬಂದಿ ಗೋವಿಂದಗೌಡ ಅವರ ಅಭಿಪ್ರಾಯವಾಗಿದೆ.