ದಕ್ಷಿಣ ಭಾರತದ ಕುಂಭಮೇಳವೆಂದೇ ಖ್ಯಾತವಾದ ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯಲ್ಲಿ, ಗವಿಸಿದ್ದೇಶ್ವರ ಸ್ವಾಮೀಜಿಗಳು ಸ್ವತಃ ಅಕ್ಕಿ ಮೂಟೆ ಹೊತ್ತು ದಾಸೋಹ ಸೇವೆ ಮಾಡಿದ್ದಾರೆ. ಶ್ರೀಗಳ ಈ ಸರಳತೆ ಮತ್ತು 'ಕಾಯಕವೇ ಕೈಲಾಸ' ತತ್ವದ ಪಾಲನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೊಪ್ಪಳ (ಜ.10): ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಪಡೆದಿರುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಜಾತ್ರೆ ಈಗ ಇಡೀ ದೇಶದ ಗಮನ ಸೆಳೆಯುತ್ತಿದೆ. ಪ್ರತಿವರ್ಷದಂತೆ ಈ ಬಾರಿಯೂ ಲಕ್ಷಾಂತರ ಭಕ್ತರು ಅಜ್ಜನ ಜಾತ್ರೆಗೆ ಆಗಮಿಸಿದರು. ಇದೀಗ ಜಾತ್ರೆಯ ದಾಸೋಹ ಭವನದಲ್ಲಿ ನಡೆದ ಒಂದು ಅಪರೂಪದ ದೃಶ್ಯ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ದಾಸೋಹದಲ್ಲಿ ಅಕ್ಕಿ ಮೂಟೆ ಹೊತ್ತ ಸ್ವಾಮೀಜಿ!
ಅಸಂಖ್ಯಾತ ಭಕ್ತರ ಆರಾಧ್ಯ ದೈವ, ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿಯವರು ಅಕ್ಷರಶಃ ಜನಸಾಮಾನ್ಯರಂತೆ ದಾಸೋಹ ಭವನದಲ್ಲಿ ಕಾರ್ಯನಿರ್ವಹಿಸಿ ಎಲ್ಲರ ಅಚ್ಚರಿಗೆ ಕಾರಣವಾಗಿದ್ದಾರೆ. ಜನವರಿ 18ರ ವರೆಗೆ ನಡೆಯಲಿರುವ ಮಹಾಪ್ರಸಾದ ಸೇವೆಗಾಗಿ ಬಂದಿದ್ದ ಅಕ್ಕಿ ಮೂಟೆಯೊಂದನ್ನು ಶ್ರೀಗಳು ಸ್ವತಃ ತಮ್ಮ ಹೆಗಲ ಮೇಲೆ ಹೊತ್ತು ಅಡುಗೆ ಕೋಣೆಗೆ ತಲುಪಿಸಿದ್ದಾರೆ. ಲಕ್ಷಾಂತರ ಭಕ್ತರಿದ್ದರೂ ಶ್ರೀಗಳು ತೋರಿದ ಈ ಸರಳತೆ ಭಕ್ತರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದೆ.
ಮಕ್ಕಳೊಂದಿಗೆ ಮಕ್ಕಳಾದ ಗವಿಸಿದ್ದೇಶ್ವರ ಶ್ರೀಗಳು
ಅಕ್ಕಿ ಮೂಟೆ ಹೊತ್ತು ದಾಸೋಹ ಸೇವೆ ಮಾಡಿದ ಬಳಿಕ, ಶ್ರೀಗಳು ಅಲ್ಲಿ ಕೆಲಸ ಮಾಡುತ್ತಿದ್ದ ಪುಟಾಣಿ ಮಕ್ಕಳೊಂದಿಗೆ ಕೆಲಕಾಲ ಕಾಲ ಕಳೆದರು. ಮಹಾದಾಸೋಹದ ಸೇವೆಯಲ್ಲಿ ತೊಡಗಿದ್ದ ಮಕ್ಕಳ ಯೋಗಕ್ಷೇಮ ವಿಚಾರಿಸಿ, ಅವರೊಂದಿಗೆ ಬೆರೆತು ಸಂತಸ ಹಂಚಿಕೊಂಡರು. ಶ್ರೀಗಳ ಈ ನಡೆ 'ಕಾಯಕವೇ ಕೈಲಾಸ' ಎಂಬ ತತ್ವಕ್ಕೆ ಸಾಕ್ಷಿಯಂತಿದೆ. ಜಾತ್ರೆಯ ಮಹಾಪ್ರಸಾದದ ವ್ಯವಸ್ಥೆಯನ್ನು ಖುದ್ದು ಮೇಲ್ವಿಚಾರಣೆ ಮಾಡುವ ಮೂಲಕ ಶ್ರೀಗಳು ಮಾದರಿಯಾಗಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಫುಲ್ ವೈರಲ್
ಗವಿಸಿದ್ದೇಶ್ವರ ಸ್ವಾಮೀಜಿಯವರು ಅಕ್ಕಿ ಮೂಟೆ ಹೊತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. 'ಇವರೇ ನೋಡಿ ನಿಜವಾದ ದಾಸೋಹಿ' 'ಪೀಠದ ಮೇಲೆ ಕುಳಿತು ಉಪದೇಶ ಮಾಡುವುದಕ್ಕಿಂತ ಕಾಯಕದಲ್ಲಿ ತೊಡಗುವುದು ದೊಡ್ಡದು' ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ದಕ್ಷಿಣ ಭಾರತದ ಕುಂಭಮೇಳವೆಂದೇ ಕರೆಸಿಕೊಳ್ಳುವ ಈ ಜಾತ್ರೆಗೆ ಈ ಬಾರಿ ದಾಖಲೆ ಪ್ರಮಾಣದ ಲಕ್ಷ ಲಕ್ಷ ಭಕ್ತರು ಹರಿದು ಬಂದರು.


