Asianet Suvarna News Asianet Suvarna News

ಸರ್ಕಾರದಿಂದ ಕನ್ನಡ ನಿರ್ಲಕ್ಷ್ಯ: ಸಿದ್ದು ಕಿಡಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಿದ್ದ ‘ಸಂಕಲ್ಪ ಸೇ ಸಿದ್ಧಿ’ ಕಾರ್ಯಕ್ರಮವನ್ನು ಪೂರ್ಣ ಹಿಂದಿಮಯ ಮಾಡಿದ್ದಕ್ಕೆ ಮತ್ತು ಸ್ವತಃ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವೆಬ್‌ಸೈಟ್‌ನಲ್ಲೇ ಹಿಂದಿ ಮೆರೆಸುತ್ತಿರುವುದಕ್ಕೆ ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಕೆಂಡಮಂಡಲ.

Neglect of Kannada language by BjpGovt. say Siddaramaiah rav
Author
Bengaluru, First Published Aug 6, 2022, 6:21 AM IST

ಬೆಂಗಳೂರು (ಆ.6) : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಿದ್ದ ‘ಸಂಕಲ್ಪ ಸೇ ಸಿದ್ಧಿ’ ಕಾರ್ಯಕ್ರಮವನ್ನು ಪೂರ್ಣ ಹಿಂದಿಮಯ ಮಾಡಿದ್ದಕ್ಕೆ ಮತ್ತು ಸ್ವತಃ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವೆಬ್‌ಸೈಟ್‌ನಲ್ಲೇ ಹಿಂದಿ ಮೆರೆಸುತ್ತಿರುವುದಕ್ಕೆ ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಜೊತೆಗೆ ಕೇಂದ್ರ ಬಿಜೆಪಿ ನಾಯಕರ ಓಲೈಕೆಗಾಗಿ ಮತ್ತೆ ಮತ್ತೆ ಕನ್ನಡವನ್ನು ತುಳಿದು ಹಿಂದಿಯನ್ನು ಮೆರೆಸಿ ಕನ್ನಡ, ಕನ್ನಡಿಗ, ಕರ್ನಾಟಕಕ್ಕೆ ಅವಮಾನ ಮಾಡುತ್ತಿರುವುದು ಖಂಡನೀಯ. ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ಕನ್ನಡಿಗರ ಸ್ವಾಭಿಮಾನವನ್ನು ‘ಉತ್ತರ ಕುಮಾರರ’ ಕಾಲಡಿ ಯಾಕೆ ಅಡ ಇಡುತ್ತೀರಾ ಎಂದು ಪ್ರಶ್ನಿಸಿದ್ದಾರೆ.

ಕನ್ನಡ ಬಳಸಿದಷ್ಟು ಬೆಳೆಯುತ್ತೆ, ಎಲ್ಲಾ ಕ್ಷೇತ್ರದಲ್ಲೂ ಕನ್ನಡ ಭಾಷೆ ಬಳಸಬೇಕು: ಸಿಎಂ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ() ಸಚಿವ ಸುನಿಲ್‌ ಕುಮಾರ್‌(Sunil Kumar ) ಅವರನ್ನು ತರಾಟೆಗೆ ತೆಗೆದುಕೊಂಡು ಸರಣಿ ಟ್ವೀಟ್‌ ಮಾಡಿರುವ ಅವರು, ಅಮಿತ್‌ ಶಾ(Amit sha) ಭಾಗವಹಿಸಿದ್ದ ‘ಸಂಕಲ್ಪ ಸೇ ಸಿದ್ಧಿ’(Sankalp Se Siddhi) ಎಂಬ ಕಾರ್ಯಕ್ರಮದ ಬ್ಯಾನರ್‌ ಸಂಪೂರ್ಣ ಹಿಂದಿಮಯವಾಗಿತ್ತು. ಇನ್ನೊಂದೆಡೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತನ್ನ ಜಾಲತಾಣದಲ್ಲಿ ಹಿಂದಿಯ ಕಿರೀಟ ಇಟ್ಟು ಮೆರೆಸುತ್ತಿದೆ. ರಾಜ್ಯದ ಬಿಜೆಪಿ(BJP) ಸರ್ಕಾರ ತನ್ನತನವನ್ನು ಅಡವಿಟ್ಟು ಹಿಂದಿ(Hindi) ಭಾಷೆಗೆ ಸಂಪೂರ್ಣ ಶರಣಾಗತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿರುವುದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೋ ಅಥವಾ ಹಿಂದಿ ಮತ್ತು ಸಂಸ್ಕೃತಿ ಇಲಾಖೆಯೇ ಎನ್ನುವುದು ಬೊಮ್ಮಾಯಿ ಅವರು ಹಾಗೂ ಸಚಿವ ಸುನಿಲ್‌ ಕುಮಾರ್‌ ಅವರು ಸ್ಪಷ್ಟಪಡಿಸಬೇಕು. ಕನ್ನಡ ಮತ್ತು ಸಂಸ್ಕೃತಿಯ ರಕ್ಷಣೆ ಮತ್ತು ಪೋಷಣೆಗಾಗಿ ಇರುವ ಇಲಾಖೆಯೇ ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡವನ್ನು ಹೊರಗಿಟ್ಟು ಹಿಂದಿ ಭಾಷೆಯ ಪ್ರಚಾರಕ್ಕೆ ಇಳಿದರೆ ಕನ್ನಡ ಭಾಷೆಯನ್ನು ರಕ್ಷಿಸುವವರು ಯಾರು ಎಂದು ಪ್ರಶ್ನಿಸಿದ್ದಾರೆ.

ಕನ್ನಡ ಭಾಷೆ ನಮಗೆ ತಾಯಿ ಸಮಾನ-ಸೂರ್ಯ, ಚಂದ್ರ ಇರೋವರೆಗೂ ಕನ್ನಡ ಇರುತ್ತೆ: ಸಚಿವ ಕಾರಜೋಳ

ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ಕನ್ನಡಿಗರ ಸ್ವಾಭಿಮಾನವನ್ನು ಉತ್ತರ ಕುಮಾರರ ಕಾಲಡಿ ಯಾಕೆ ಅಡ ಇಡುತ್ತೀರಾ? ಶರಣಾಗತಿ ಕನ್ನಡದ ಮಣ್ಣಿನ ಗುಣವಲ್ಲ, ವೀರರಾಣಿ ಅಬ್ಬಕ್ಕನ ನೆಲದಿಂದ ಬಂದ ಸಚಿವ ಸುನಿಲ್‌ ಕುಮಾರ್‌ ಅವರಿಗೆ ಇಂತಹ ಗುಲಾಮಿ ಮನಃಸ್ಥಿತಿ ಬರಬಾರದಿತ್ತು ಎಂದು ಹರಿಹಾಯ್ದಿದ್ದಾರೆ.

Follow Us:
Download App:
  • android
  • ios