ಹೊರರಾಜ್ಯದ ಗರ್ಭಿಣಿ, ವೃದ್ಧರು, ಮಕ್ಕಳಿಗೆ ಹೋಂ ಕ್ವಾರಂಟೈನ್ ಇಲ್ಲ
ವಿವಿಧ ರಾಜ್ಯಗಳಿಂದ ರಾಜ್ಯಕ್ಕೆ ಆಗಮಿಸುವ ಗರ್ಭಿಣಿಯರು, 10 ವರ್ಷದೊಳಗಿನ ಮಕ್ಕಳು, 80 ವರ್ಷ ಮೇಲ್ಪಟ್ಟವೃದ್ಧರು ಹಾಗೂ ಗಂಭೀರ ಅನಾರೋಗ್ಯ ಸಮಸ್ಯೆಯುಳ್ಳವರಿಗೆ 14 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ನಿಂದ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು (ಮೇ. 15): ವಿವಿಧ ರಾಜ್ಯಗಳಿಂದ ರಾಜ್ಯಕ್ಕೆ ಆಗಮಿಸುವ ಗರ್ಭಿಣಿಯರು, 10 ವರ್ಷದೊಳಗಿನ ಮಕ್ಕಳು, 80 ವರ್ಷ ಮೇಲ್ಪಟ್ಟವೃದ್ಧರು ಹಾಗೂ ಗಂಭೀರ ಅನಾರೋಗ್ಯ ಸಮಸ್ಯೆಯುಳ್ಳವರಿಗೆ 14 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ನಿಂದ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರೈಲು ಸೇರಿದಂತೆ ವಿವಿಧ ಸಾರಿಗೆ ವ್ಯವಸ್ಥೆ ಮೂಲಕ ಹೊರ ರಾಜ್ಯದಿಂದ ಬಂದವರನ್ನು ಮೊದಲಿಗೆ ಕೊರೋನಾ ಪರೀಕ್ಷೆ ಮಾಡಲಾಗುವುದು. ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟವರನ್ನು ಕೊರೋನಾ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗುವುದು. ಉಳಿದಂತೆ ಗರ್ಭಿಣಿಯರು, 10 ವರ್ಷದೊಳಗಿನ ಮಕ್ಕಳು 80 ವರ್ಷ ಮೇಲ್ಟಟ್ಟಹಿರಿಯರು ಹಾಗೂ ಗಂಭೀರ ಆರೋಗ್ಯ ಸಮಸ್ಯೆಗಳಾದ ಕ್ಯಾನ್ಸರ್, ಕಿಡ್ನಿ ಮುಂತಾದ ತೊಂದರೆಯಿಂದ ಬಳಲುತ್ತಿರುವವರನ್ನು ಪರೀಕ್ಷೆ ನಡೆಸಿದ ಬಳಿಕ ಸಾಂಸ್ಥಿಕ ಕ್ವಾರಂಟೈನ್ ಬದಲು ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಪ್ಯಾಕೇಜ್-1ರಿಂದ ಬೊಕ್ಕಸಕ್ಕೆ 2500 ಕೋಟಿ ರುಪಾಯಿ ಮಾತ್ರ ಹೊರೆ
ಬುಧವಾರ ವಿದೇಶಗಳಿಂದ ಬರುವ ಕನ್ನಡಿಗರ ಪೈಕಿ ಗರ್ಭಿಣಿಯರು, 10 ವರ್ಷದೊಳಗಿನ ಮಕ್ಕಳು, 80 ವರ್ಷ ಮೇಲ್ಪಟ್ಟವೃದ್ಧರು ಮತ್ತು ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವರಿಗೆ ಸಾಂಸ್ಥಿಕ ಕ್ವಾರಂಟೈನ್‌ನಿಂದ ವಿನಾಯಿತಿ ನೀಡಿ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿತ್ತು. ಇದೀಗ ಈ ನಿಯಮವನ್ನು ಹೊರ ರಾಜ್ಯದಿಂದ ಬರುವವರಿಗೂ ವಿಸ್ತರಿಸಲಾಗಿದೆ.
ರೋಗ ಲಕ್ಷಣ ಇಲ್ಲದ ಅಂತರ್ ಜಿಲ್ಲಾ ಪ್ರಯಾಣಿಕರ ಕ್ವಾರಂಟೈನ್ ಇಲ್ಲ
ಸೋಂಕು ಲಕ್ಷಣಗಳು ಇಲ್ಲದ ಅಂತರ್ ಜಿಲ್ಲಾ ಪ್ರಯಾಣಿಕರನ್ನು ಯಾವುದೇ ರೀತಿಯ ಕ್ವಾರಂಟೈನ್‌ಗೆ ಒಳಪಡಿಸುವಂತಿಲ್ಲ ಎಂದು ಆರೋಗ್ಯ ಇಲಾಖೆ ಆಯುಕ್ತಾಲಯ ಆದೇಶ ಹೊರಡಿಸಿದೆ. ಹೀಗಾಗಿ, ರೋಗ ಲಕ್ಷಣಗಳಿಲ್ಲದಿದ್ದರೂ ಕ್ವಾರಂಟೈನ್‌ಗೆ ಒಳಗಾಗುವ ಭೀತಿಯಿಂದ ಅಂತರ್‌ಜಿಲ್ಲಾ ಪ್ರಯಾಣಿಕರು ನಿರಾಳರಾಗಿದ್ದಾರೆ.
ರಾಜ್ಯದಲ್ಲಿ ವಿದೇಶದಿಂದ ಬಂದ ಪ್ರಯಾಣಿಕರಿಗೆ 14 ದಿನಗಳ ಕಾಲ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್ ಹಾಗೂ 14 ದಿನಗಳ ಕಾಲ ಹೋಂ ಕ್ವಾರಂಟೈನ್ ವಿಧಿಸಲಾಗುತ್ತಿದೆ. ಉಳಿದಂತೆ ಇತರೆ ರಾಜ್ಯಗಳಿಂದ ಬಂದವರಿಗೂ ಕಡ್ಡಾಯವಾಗಿ 14 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ ಮಾಡಬೇಕು ಹಾಗೂ ಸೋಂಕು ಪರೀಕ್ಷೆಗೆ ಒಳಪಡಿಸಬೇಕು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಆದರೆ, ಆರೋಗ್ಯ ಇಲಾಖೆ ಮಾರ್ಗಸೂಚಿಯಲ್ಲಿ ಅಂತರ್ ಜಿಲ್ಲಾ ಪ್ರಯಾಣಿಕರನ್ನು ಯಾವುದೇ ರೀತಿಯ ಕ್ವಾರಂಟೈನ್‌ಗೆ ಒಳಪಡಿಸುವಂತಿಲ್ಲ ಎಂದು ಹೇಳಲಾಗಿತ್ತು. ಆದ್ಯಾಗ್ಯೂ ಸೋಂಕು ಕಡಿಮೆ ಇರುವ ಜಿಲ್ಲೆಗಳ ಸ್ಥಿತಿಯನ್ನು ಅದೇ ರೀತಿ ಮುಂದುವರೆಸಲು ತಪಾಸಣೆ ಹಾಗೂ ಕ್ವಾರಂಟೈನ್ ಅಧಿಕಾರವನ್ನು ಸ್ಥಳೀಯ ಜಿಲ್ಲಾಡಳಿತಗಳಿಗೆ ವಹಿಸಲಾಗಿತ್ತು. ಸ್ಥಳೀಯ ಜಿಲ್ಲಾಡಳಿತಗಳು ಸೋಂಕು ಲಕ್ಷಣಗಳಿಲ್ಲದ ಅಂತರ್ ಜಿಲ್ಲಾ ಪ್ರಯಾಣಿಕರನ್ನೂ ಕ್ವಾರಂಟೈನ್ ಮಾಡಿ ತೊಂದರೆ ನೀಡುತ್ತಿವೆ ಎಂಬ ದೂರುಗಳು ಕೇಳಿ ಬಂದಿತ್ತು.
ಈ ಹಿನ್ನೆಲೆಯಲ್ಲಿ ಸೋಂಕು ಲಕ್ಷಣಗಳಿಲ್ಲದ ಅಂತರ್ ಜಿಲ್ಲಾ ಪ್ರಯಾಣಿಕರನ್ನು ಯಾವುದೇ ರೀತಿಯ (ಸಾಂಸ್ಥಿಕ ಕ್ವಾರಂಟೈನ್ ಹಾಗೂ ಹೋಂ ಕ್ವಾರಂಟೈನ್) ಕ್ವಾರಂಟೈನ್‌ಗೆ ಒಳಪಡಿಸುವಂತಿಲ್ಲ ಎಂದು ಹೇಳಿದೆ.