ಪ್ರಧಾನಿ ನರೇಂದ್ರ ಮೋದಿ 11 ಸಾವಿರ ಕೋಟಿಯ ಯೋಜನೆ ಉದ್ಘಾಟನೆಗಾಗಿ ಕಲ್ಯಾಣ ಕರ್ನಾಟಕದ ಯಾದಗಿರಿ ಜಿಲ್ಲೆಗೆ ಆಗಮಿಸಿದರು. ವೋಟ್‌ ಬ್ಯಾಂಕ್‌ ರಾಜಕಾರಣ ಎಂದೂ ಮಾಡಿಲ್ಲ. ಅಭಿವೃದ್ಧಿ ಆಧರಿತ ರಾಜಕಾರಣ ಮಾಡಿದ್ದೇವೆ ಎಂದು ಹೇಳಿದರು.

ಯಾದಗಿರಿ (ಜ.19): ವಿವಿಧ ಯೋಜನೆಗಳ ಉದ್ಘಾಟನೆಗಾಗಿ ಕಲ್ಯಾಣ ಕರ್ನಾಟಕ ಯಾದಗಿರಿ ಜಿಲ್ಲೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, 11 ಸಾವಿರ ಕೋಟಿ ವೆಚ್ಚದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದರು. ಇದರಲ್ಲಿ ಪ್ರಮುಖವಾಗಿ ನಾರಾಯಣ ಪುರ ಎಡದಂಡೆ ಕಾಲುವೆಜಾಲದ ವಿಸ್ತರಣೆ ಹಾಗೂ ನವೀಕರಣ ಯೋಜನೆಯನ್ನು ಅನಾವರಣ ಮಾಡಿದರು. ಯಾದಗಿರಿಯ ಕೋಡೆಕಲ್‌ನಲ್ಲಿ ನಡೆದ ಸಮಾವೇಶದಲ್ಲಿ ಯೋಜನೆಗಳನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 'ಕರ್ನಾಟಕದ ಎಲ್ಲಾ ಸಹೋದರ, ಸಹೋದರಿಯರಿಗೆ ನನ್ನ ವಂದನೆಗಳು..' ಎಂದು ಕನ್ನಡದಲ್ಲಿಯೇ ಮೋದಿ ಮಾತು ಆರಂಭಿಸಿದಾಗ ಜನಸಾಗರ ಮೋದಿ.. ಮೋದಿ ಎನ್ನುವ ಘೋಷಣೆಗಳ ಮೂಲಕ ಕರತಾಡನ ಮಾಡಿದರು. ಇಂದು ಈ ಸಮಾವೇಶದಲ್ಲಿ ಕಣ್ಣು ಹಾಯಿಸದಲೆಲ್ಲಾ ಜನರೇ ಕಾಣುತ್ತಿದ್ದಾರೆ. ಇದು ನನಗೆ ಬಹಳ ಖುಷಿ ನೀಡಿದೆ ಎಂದಿದ್ದಾರೆ. ಪೆಂಡಾಲ್‌ ಹೊರಗಡೆಯೂ ಜನ ಬಿಸಲಲ್ಲಿ ನಿಂತಿದ್ದಾರೆ ಅವರನ್ನೂ ನಾನು ನೋಡುತ್ತಿದ್ದೇನೆ ಎಂದರು.

ನಿಮ್ಮ ಪ್ರೀತಿ, ಆಶೀರ್ವಾದವೇ ನನ್ನ ಶಕ್ತಿ. ಯಾದಗಿರಿ ಸಮೃದ್ಧ ಇತಿಹಾಸವನ್ನು ಹೊಂದಿದೆ. ಪ್ರತಿ ಕ್ಷೇತ್ರವೂ ಸಂಸ್ಕೃತಿ ಪರಂಪರೆಯೊಂದಿಗೆ ಸಂಯೋಜನೆಗೊಂಡಿದೆ. ಸುರಪುರದ ರಾಜಾ ವೆಂಕಟಪ್ಪ ನಾಯಕ್‌ ಅವರನ್ನು ಪ್ರಧಾನಿ ಮೋದಿ ಈ ವೇಳೆ ನೆನಪಿಸಿಕೊಂಡಿದ್ದಾರೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಸಾಕಷ್ಟು ಜನರಿಗೆ ಉಪಯೋಗವಾಗಲಿದೆ. ಯಾದಗಿರಿಯಲ್ಲಿ ನಾನು ಹೊಸ ಯೋಜನೆಗೆ ಚಾಲನೆ ನೀಡಿದ್ದೇನೆ.ನೀರು, ರಸ್ತೆಯಅತಿದೊಡ್ಡ ಯೋಜನೆಗೆ ಚಾಲನೆ ನೀಡಿದ್ದೇನೆ ಎಂದು ಹೇಳಿದರು. ಹಿಂದಿನ ಸರ್ಕಾರಗಳು ಬರೀ ಯೋಜನೆ ಘೋಷಣೆ ಮಾಡಿ ಹೋಗುತ್ತಿದ್ದವು. ಆದರೆ, ನಮ್ಮ ಸರ್ಕಾರ ಹಾಗಲ್ಲ. ಯೋಜನೆಗಳನ್ನು ಸಾಕಾರ ಮಾಡುತ್ತಿದೆ ಎಂದರು.

ಕರ್ನಾಟಕ ಹಾಗೂ ಮಹಾರಾಷ್ಟ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ

ಒಂದು ಹನಿ ನೀರಿಗೆ ಹೆಚ್ಚು ನೀರಾವರಿ ಮಾಡಬೇಕು ಎನ್ನುವುದು ಪ್ರಧಾನಿ ಮೋದಿ ಅವರ ಕನಸು. ಪರ್‌ ಡ್ರಾಪ್‌, ಮೋರ್‌ ಕ್ರಾಪ್‌ ಎನ್ನುವ ಕನಸನ್ನು ಕಂಡವರು ನರೇಂದ್ರ ಮೋದಿ. ಅದನ್ನು ಸಾಕಾರ ಮಾಡಲು ನಾವು ಬದ್ಧವಾಗಿದ್ದೇವೆ. 60:40ರ ಅನುಪಾತದಲ್ಲಿ ಕೇಂದ್ರ ಸರ್ಕಾರ ಇಲ್ಲಿನ ಯೋಜನೆಗೆ ಅನುದಾನ ನೀಡಿದೆ. ಅಂದಿನ ಸರ್ಕಾರ ಟೆಂಡರ್‌ ಪಾಸ್‌ ಮಾಡಿದ್ದರೂ, ಈ ಯೋಜನೆಗೆ ಹಣ ನೀಡಿದ್ದು ಮೋದಿ ಸರ್ಕಾರ. ಇಂಡಿ, ಜೇವರ್ಗಿ ಕೊನೆ ಭಾಗಕ್ಕೂ ನೀರು ಹರಿಸುವ ಯೋಜನೆ ಇದಾಗಿದೆ. ಶೇ. 20ರಷ್ಟು ಹೆಚ್ಚು ನೀರಿನ ಸಂಗ್ರಹ ಮಾಡಲಾಗುತ್ತಿದೆ. ನಾರಾಯಣಪುರ ಎಡದಂಡೆ ಏಷ್ಯಾದಲ್ಲಿಯೇ ಅತಿದೊಡ್ಡ ನೀರಾವರಿ ಯೋಜನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಯಾದಗಿರಿ: ಮೋದಿ ಆಗಮನಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

ಈ ಯೋಜನೆಯ ಜಾರಿಯಿಂದಾಗಿ 5 ಜಿಲ್ಲೆಯ ರೈತರ ದಶಕಗಳ ಕನಸು ನನಸಾದಂತಾಗಿದೆ. 15 ಲಕ್ಷ ರೈತರಿಗೆ ನೀರಾವರಿಯಿಂದ ಉಪಯೋಗವಾಗಲಿದೆ. 5.50 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ಕಾಲುವೆ ಮೂಲಕ ನೀರು ಹರಿಸುವ ಯೋಜನೆ ಇದಾಗಿದೆ. ದೇಶದ ಮೊದಲ ಸ್ವಯಂಚಾಲಿತ ನೀರಾವರಿ ತಂತ್ರಜ್ಞಾನ ಇದಾಗಿದ್ದು, ಸ್ಕಾಡಾಗೇಟ್‌ ಅನಾವರಣ ಮಾಡಿದ್ದಾರೆ. 1050 ಕೋಟಿ ವೆಚ್ಚದಲ್ಲಿ ನಾರಾಯಣಪುರ ಎಡದಂಡೆ ಕಾಲುವೆಗೆ ಸ್ಕಾಡಾಗೇಟ್‌ ನಿರ್ಮಾಣ ಮಾಡಲಾಗಿದೆ. ಇದೇ ವೇಳೆ ಸೂರತ್‌-ಚೆನ್ನೈ ಎಕ್ಸ್‌ಪ್ರೆಸ್‌ ವೇಗೂ ಅಡಿಗಲ್ಲು ಹಾಕಿದ್ದಾರೆ. ಇದು ಕಲಬುರಗಿ-ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಿಂದ ಹಾದು ಹೋಗಲಿದೆ. 6 ಪಥಗಳ ಗ್ರೀನ್‌ ಫೀಲ್ಡ್‌ ಎಕ್ಸ್‌ಪ್ರೆಸ್‌ ವೇ ಇದಾಗಿದೆ. ಪ್ರಧಾನಿ ನರೇಂದ್ರ ಮೋದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇಸರಿ ಶಾಲು ಹೊದೆಸಿ, ಪೇಟಾ ಹಾಗೂ ಕಾಮಧೇನು ಉಡುಗೊರೆ ನೀಡಿ ಸನ್ಮಾನ ಮಾಡಿದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್‌ ಚಂದ್‌ ಗ್ಲೆಹೊಟ್‌, ಸಚಿವ ಗೋವಿಂದ ಕಾರಜೋಳ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್ ಕಟೀಲ್‌, ಶಾಸಕ ರಾಜೂಗೌಡ ಸೇರಿದಂತೆ ಹಲವರು ಆಗಮಿಸಿದ್ದರು.