ಸಿಬ್ಬಂದಿ ವೇತನ, ವಿದ್ಯುತ್‌ ಶುಲ್ಕ ಹೆಚ್ಚಳ, ಹೊಸ ಒಪ್ಪಂದಗಳಿಂದ ಆರ್ಥಿಕ ಹೊಡೆತ| 2018-19ನೇ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಆಪರೇಟಿಂಗ್‌ ಸಿಬ್ಬಂದಿ ವೇತನ ಪರಿಷ್ಕರಣೆಯಿಂದಾಗಿ 2019-20ರಲ್ಲಿ 39.49 ಕೋಟಿ ರು. ಹೆಚ್ಚು ವೆಚ್ಚ|  

ಬೆಂಗಳೂರು(ಆ.28): ಸಿಬ್ಬಂದಿ ವೇತನ, ವಿದ್ಯುತ್‌ ಶುಲ್ಕ ಹೆಚ್ಚಳ ಹಾಗೂ ಹೊಸ ಒಪ್ಪಂದಗಳ ಹಿನ್ನೆಲೆಯಲ್ಲಿ 2019-20ನೇ ಹಣಕಾಸು (ಕಳೆದ) ವರ್ಷದಲ್ಲಿ ನಮ್ಮ ಮೆಟ್ರೋ ನಿಗಮಕ್ಕೆ 598.58 ಕೋಟಿ ರು.ನಿವ್ವಳ ನಷ್ಟ ಉಂಟಾಗಿದೆ.

2018-19ನೇ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಆಪರೇಟಿಂಗ್‌ ಸಿಬ್ಬಂದಿ ವೇತನ ಪರಿಷ್ಕರಣೆಯಿಂದಾಗಿ 2019-20ರಲ್ಲಿ 39.49 ಕೋಟಿ ರು. ಹೆಚ್ಚು ವೆಚ್ಚವಾಗಿದೆ. ಜತೆಗೆ ಆರು ಬೋಗಿ ರೈಲುಗಳ ನಿರ್ವಹಣೆಯಿಂದಾಗಿ ವಿದ್ಯುತ್‌ ಶುಲ್ಕದಲ್ಲಿ ಹೆಚ್ಚಳ ಮತ್ತು ಒಂದನೇ ಹಂತದ ವಿವಿಧ ವ್ಯವಸ್ಥೆಗಳ ಒಪ್ಪಂದಗಳ ಪೂರ್ಣಗೊಂಡಿದ್ದು, ನಿರ್ವಹಣೆಗಾಗಿ ಹೊಸ ಒಪ್ಪಂದಗಳನ್ನು ಮಾಡಿಕೊಂಡಿದ್ದರಿಂದ ಖರ್ಚುಗಳಲ್ಲಿ ಏರಿಕೆ ಆಗಿದೆ. ಅಲ್ಲದೇ ಹಂತ 1ರ ಎಲ್ಲಾ ಸ್ವತ್ತುಗಳ ಮೇಲಿನ ಸವಕಳಿ ಸೇರಿದಂತೆ ಯಿಂದಾಗಿ 2019-20ರಲ್ಲಿ ಸಂಸ್ಥೆಗೆ ಒಟ್ಟು 598.58 ಕೋಟಿ ರು. ನಿವ್ವಳ ನಷ್ಟವಾಗಿದೆ ಎಂದು ಬಿಎಂಆರ್‌ಸಿಎಲ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಕೇಂದ್ರ ಒಪ್ಪಿದರೆ ಸೆಪ್ಟೆಂಬರ್‌ನಲ್ಲಿ ಮೆಟ್ರೋ ಸಂಚಾರ ಶುರು: ಸಚಿವ ಸುಧಾ​ಕ​ರ್‌

2019-20 ಆರ್ಥಿಕ ವರ್ಷದಲ್ಲಿ ಟಿಕೆಟ್‌ ಮಾರಾಟದಿಂದ 376.88 ಕೋಟಿ ರು. ಆದಾಯ ಗಳಿಸಿದೆ. ಈ ಹಿಂದಿನ ವರ್ಷದ ಆದಾಯ 355.02 ಕೋಟಿ ರು.ಗೆ ಹೋಲಿಸಿದರೆ ಶೇ.6.16 ರಷ್ಟು ಹೆಚ್ಚಳವಾಗಿದೆ. ಕೋವಿಡ್‌-19 ಸೋಂಕಿನ ಪರಿಣಾಮದಿಂದ 2019-20 ಮಾಚ್‌ರ್‍ ತಿಂಗಳಲ್ಲಿ ಪ್ರಯಾಣಿಕರ ಇಳಿಮುಖ ಮತ್ತು ಮಾ.22ರಿಂದ ಮೆಟ್ರೋ ರೈಲು ಸಂಚಾರ ಸ್ಥಗಿತಗೊಳಿಸಿದ ನಂತರ 54.20 ಕೋಟಿ ರು. ಸಾಲಗಳ ಮೇಲೆ ಬಡ್ಡಿಯನ್ನು ಪರಿಗಣಿಸಿದ ನಂತರ ಪ್ರಸ್ತುತ ವರ್ಷದಲ್ಲಿ 54.77 ಕೋಟಿ ರು. ನಷ್ಟವಾಗಿದೆ. ಹಿಂದಿನ ವರ್ಷದಲ್ಲಿ ನಿವ್ವಳ ನಗದು ನಷ್ಟ 29 ಕೋಟಿ ರು.ಗಳಾಗಿತ್ತು ಎಂದು ತಿಳಿಸಿದೆ.

ಟಿಕೆಟೇತರ ಆದಾಯದಿಂದ 41.91 ಕೋಟಿ ರು.ಗಳಿಸಿದ್ದು, ಹಿಂದಿನ ವರ್ಷದಲ್ಲಿ 47.33 ಕೋಟಿ ರು. ಗಳಿಸಿತ್ತು. 2019-20ರಲ್ಲಿ ಟಿಕೆಟೇತರ ಆದಾಯದಲ್ಲಿ ಇಳಿಮುಖವಾಗಿದೆ. ಬಿಬಿಎಂಪಿ ಹೊರವಲಯದಲ್ಲಿ ನೀಡಲಾಗುವ ಜಾಹೀರಾತುಗಳ ನಿರ್ಬಂಧನೆ ಮತ್ತು ಮಾರ್ಚ್‌ನಿಂದ ಲಾಕ್‌ಡೌನ್‌ ಇದ್ದುದ್ದರಿಂದ ಬಿಎಂಆರ್‌ಸಿಎಲ್‌ ಆಸ್ತಿಗಳಿಂದ ಬರುವ ಆದಾಯದಲ್ಲಿ ಇಳಿಮುಖವಾಗಿದೆ. ರಾಜ್ಯ ಸರ್ಕಾರ ಬಿಎಂಆರ್‌ಸಿಎಲ್‌ ಸಂಸ್ಥೆಗೆ ನಗದು ನಷ್ಟವಾದ 43 ಕೋಟಿ ರು. ಮರುಪಾವತಿಸಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಕನಕಪುರ ರಸ್ತೆಯ ವಿಸ್ತರಿತ ಮೆಟ್ರೋ ಟ್ರಯಲ್‌ ರನ್ ಶುರು

ನಮ್ಮ ಮೆಟ್ರೋ ಹಸಿರು ಮಾರ್ಗದ(ನಾಗಸಂದ್ರ-ಯಲಚೇನಹಳ್ಳಿ) ವಿಸ್ತರಣಾ ಮಾರ್ಗವಾದ ಯಲಚೇನಹಳ್ಳಿ- ಅಂಜನಾಪುರ ನಡುವೆ ಮೆಟ್ರೋ ರೈಲು ಪರೀಕ್ಷಾರ್ಥ ಸಂಚಾರಕ್ಕೆ ಚಾಲನೆ ನೀಡಲಾಗಿದ್ದು, ನವೆಂಬರ್‌ ಅಂತ್ಯದೊಳಗೆ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ.

ಪ್ರಯಾಣಿಕರ ಸುರಕ್ಷತೆ ಮತ್ತು ಮೆಟ್ರೋ ಮಾರ್ಗದ ತಾಂತ್ರಿಕ ಸಾಮರ್ಥ್ಯ ಪರೀಕ್ಷಿಸುವ ದೃಷ್ಟಿಯಿಂದ ಸುಮಾರು 30 ದಿನಗಳ ಕಾಲ ವಿಭಿನ್ನ ವೇಗದಲ್ಲಿ ಮೆಟ್ರೋ ರೈಲು ಪರೀಕ್ಷಾರ್ಥ ಸಂಚಾರ ನಡೆಯಲಿದೆ ಎಂದು ಬಿಎಂಆರ್‌ಸಿಎಲ್‌ ಮಾಹಿತಿ ನೀಡಿದೆ.

ನಮ್ಮ ಮೆಟ್ರೋ 2ನೇ ಹಂತ ರೀಚ್‌-4ರ ಮೊದಲ ವಿಸ್ತರಿತ ಮಾರ್ಗವಾದ ಯಲಚೇನಹಳ್ಳಿ- ಅಂಜನಾಪುರ ನಡುವಿನ 6.29 ಕಿ.ಮೀ ಮಾರ್ಗ ಇದಾಗಿದೆ. ಸುಮಾರು 500 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಯಲಚೇನಹಳ್ಳಿ- ಅಂಜನಾಪುರ ನಡುವೆ ಕೋಣನಕುಂಟೆ ಕ್ರಾಸ್‌(ಅಂಜನಾಪುರ ರೋಡ್‌ ಕ್ರಾಸ್‌), ಕೃಷ್ಣಲೀಲಾ ಪಾರ್ಕ್(ದೊಡ್ಡಕಲ್ಲಸಂದ್ರ), ವಜರಹಳ್ಳಿ, ತಲಘಟ್ಟಪುರ, ಅಂಜನಾಪುರ ಟೌನ್‌ಶಿಪ್‌ ಎಂಬ ಐದು ಎಲಿವೇಟೆಡ್‌ ನಿಲ್ದಾಣಗಳನ್ನು ನಿರ್ಮಿಸಲಾಗಿದೆ.
2016 ಮೇ ತಿಂಗಳಲ್ಲಿ ನಮ್ಮ ಮೆಟ್ರೋ 2ನೇ ಹಂತದಲ್ಲಿ ಯಲಚೇನಹಳ್ಳಿ- ಅಂಜನಾಪುರ ಟೌನ್‌ಶಿಪ್‌ ನಡುವಿನ ಮೆಟ್ರೋ ಮಾರ್ಗದ ಕಾಮಗಾರಿ ಆರಂಭಗೊಂಡಿತ್ತು. ಈಗಾಗಲೇ ರೀಚ್‌-4 ಕಾಮಗಾರಿಯು ಶೇ.90ರಷ್ಟುಪೂರ್ಣಗೊಂಡಿದೆ. ಇನ್ನು ನಿಲ್ದಾಣದೊಳಗಿನ ಪ್ಲಾಟ್‌ಫಾರಂ, ಟಿಕೆಟ್‌ ಕೌಂಟರ್‌, ಗ್ರಾಹಕರ ಕೇಂದ್ರಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಒಂದು ತಿಂಗಳು ಮೆಟ್ರೋ ರೈಲು ಪರೀಕ್ಷಾರ್ಥ ಸಂಚಾರ ನಡೆಸಿದ ಬಳಿಕ ನವೆಂಬರ್‌ ಅಂತ್ಯದೊಳಗೆ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ ಎಂದು ಬಿಎಂಆರ್‌ಸಿಎಲ್‌ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಿಐಇಸಿವರೆಗೂ ವಿಸ್ತರಣೆ:

ಹಸಿರು ಮಾರ್ಗದಲ್ಲಿ ಯಲಚೇನಹಳ್ಳಿ- ಅಂಜನಾಪುರದವರೆಗಿನ ವಿಸ್ತರಿತ ಮಾರ್ಗ ಪೂರ್ಣಗೊಂಡಿದೆ. ಪ್ರಸ್ತುತ ನಾಗಸಂದ್ರ-ಮಾದಾವರ (ಬಿಐಇಸಿ) ವರೆಗೆ ವಿಸ್ತರಿತ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದೆ. ಇದು ಸುಮಾರು 3.03 ಕಿ.ಮೀ ಉದ್ದವಿರಲಿದ್ದು ಈ ಮಾರ್ಗದಲ್ಲಿ ಮಂಜುನಾಥನಗರ, ಚಿಕ್ಕಬಿದರಕಲ್ಲು, ಮಾದವಾರ ಎಂಬ ಎಲಿವೇಟೆಡ್‌ ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ. ಹಸಿರು ಮಾರ್ಗ ಅಂಜನಾಪುರದಿಂದ ಬಿಐಇಸಿ ವರೆಗೆ ಒಟ್ಟು 33.79 ಕಿ.ಮೀ ಉದ್ದ ಇರಲಿದೆ.