ಅಧಿಕಾರವಿಲ್ಲದೇ ಬಿಜೆಪಿಗರಿಗೆ ಹತಾಶ: ಸಚಿವ ಮಂಕಾಳ ವೈದ್ಯ
ಬಿಜೆಪಿಯವರು ಕಾಂಗ್ರೆಸ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಪ್ಪುಚುಕ್ಕೆ ತರಲು ಪ್ರಯತ್ನಿಸುತ್ತಿದ್ದು, ಸಿದ್ದರಾಮಯ್ಯನವರದ್ದು ಯಾವುದೇ ತಪ್ಪಿಲ್ಲ ಎಂದ ಸಚಿವ ಮಂಕಾಳ ಎಸ್. ವೈದ್ಯ
ಭಟ್ಕಳ(ನ.20): ಬಿಜೆಪಿಯವರು ಸುಳ್ಳು ಹೇಳಿಕೊಂಡೇ ರಾಜಕಾರಣ ಮಾಡುತ್ತಿದ್ದು, ಅಧಿಕಾರ ಕಳೆದುಕೊಂದು ಹತಾಶರಾಗಿರುವ ಬಿಜೆಪಿಯವರು ಕಾಂಗ್ರೆಸ್ ಸರ್ಕಾರದ ಮೇಲೆ ಯದ್ವಾತದ್ವಾ ಆರೋಪ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಟೀಕಿಸಿದರು.
ಬೇಂಗ್ರೆಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯವರು ಕಾಂಗ್ರೆಸ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಪ್ಪುಚುಕ್ಕೆ ತರಲು ಪ್ರಯತ್ನಿಸುತ್ತಿದ್ದು, ಸಿದ್ದರಾಮಯ್ಯನವರದ್ದು ಯಾವುದೇ ತಪ್ಪಿಲ್ಲ ಎಂದರು.
ಬಿಜೆಪಿ ಕಾಲದ ಕೋವಿಡ್ ಹಗರಣ: ನಮ್ಮ ಸರ್ಕಾರ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ, ಸಚಿವ ಮಂಕಾಳ ವೈದ್ಯ
ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಕೋವಿಡ್ ಸಾಮಗ್ರಿಗಳನ್ನು ಚೀನಾದಿಂದ ತರಿಸಿದೆ. ನಮ್ಮ ದೇಶದಲ್ಲಿ ಈ ಸಾಮಗ್ರಿಗಳು ಕಡಿಮೆ ಬೆಲೆ ಸಿಕ್ಕರೂ ಚೀನಾದಿಂದ ಸಾಮಗ್ರಿ ತರಿಸಲು ಕಾರಣವೇನು ಎಂದು ಪ್ರಶ್ನಿಸಿದ ಸಚಿವರು, ಕೋವಿಡ್ ಸಂದರ್ಭದಲ್ಲಿ ಮಾಡಿದ ಹಗರಣಕ್ಕೆ ಬಿಜೆಪಿಯವರು ಬೆಲೆ ತೆರಲೇಬೇಕು. ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲೇ ಬೇಕು ಎಂದ ಅವರು, ಜಿಲ್ಲೆಯಲ್ಲಿ ವಕ್ಫ್ ಆಸ್ತಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರಿಗಾದರೂ ತೊಂದರೆ ಆದರೆ 24 ಗಂಟೆಯಲ್ಲಿ ಸರಿಪಡಿಸುವ ಭರವಸೆ ನೀಡಿದ್ದೇನೆ. ಆದರೆ ಜಿಲ್ಲೆಯಲ್ಲಿ ಇಲ್ಲಿಯ ವರೆಗೆ ಈ ಬಗ್ಗೆ ಯಾರಿಂದಲೂ ದೂರು ಬಂದಿಲ್ಲ ಎಂದರು. ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ವಕ್ಫ್ ಆಸ್ತಿ ಯಾರಿಗೂ ಕೊಡಲು ಬಿಡುವುದಿಲ್ಲ ಎಂದು ಹೇಳಿದ್ದು, ಇದೀಗ ರಾಜಕೀಯಕ್ಕಾಗಿ ಉಲ್ಟಾ ಮಾತನಾಡುತ್ತಿದ್ದಾರೆ. ಬಿಜೆಪಿಯವರದ್ದು ಬರೀ ಸುಳ್ಳು ಹೇಳುವುದೇ ಆಗಿದೆ ಎಂದರು.
ನನ್ನ ಬಗ್ಗೆ ಯಾರು ಏನೇ ಬೇಕಾದರೂ ಟೀಕೆ ಮಾಡಲಿ. ಇದಕ್ಕೆಲ್ಲ ನಾನು ಜಗ್ಗುವುದೂ ಇಲ್ಲ, ಬಗ್ಗುವುದೂ ಇಲ್ಲ. ಇಲ್ಲ. ಜಿಲ್ಲೆಯ ಅಭಿವೃದ್ಧಿಯೇ ನನಗೆ ಮುಖ್ಯವಾಗಿದೆ. ನಾನು ಸಾಮಾನ್ಯ ಜನರ ಪರವಾಗಿ ಕೆಲಸ ಮಾಡುತ್ತಿದ್ದೇನೆ ಎಂದರು.
ಸರ್ಕಾರ ಅನರ್ಹರ ಬಿಪಿಎಲ್ ಕಾರ್ಡ್‌ನ್ನು ರದ್ದುಪಡಿಸುತ್ತಿದೆ. ಆದರೆ ಅರ್ಹರ ಬಿಪಿಎಲ್ ಕಾರ್ಡ್‌ಗೆ ಏನೂ ತೊಂದರೆ ಇಲ್ಲ. ರಾಜ್ಯದ ಕಾಂಗ್ರೆಸ್ ಸರ್ಕಾರ ಭದ್ರವಾಗಿದೆ. ಸರ್ಕಾರವನ್ನು ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ. ಕಾಂಗ್ರೆಸ್ಸಿನ ಯಾವುದೇ ಶಾಸಕರೂ ಬಿಜೆಪಿ ಆಮಿಷಕ್ಕೆ ಬಲಿಯಾಗುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ತಿಳಿಸಿದ್ದಾರೆ.