ಬೆಂಗಳೂರು(ಸೆ.03): ಕನ್ನಡ ಚಿತ್ರರಂಗದ ಜತೆ ಮಾದಕ ವಸ್ತು ಜಾಲದ ನಂಟು ವಿವಾದದ ಉರುಳು ಈಗ ಹಿರಿಯ ಕಾಂಗ್ರೆಸ್‌ ಮುಖಂಡರೊಬ್ಬರ ಪುತ್ರನ ಕೊರಳಿಗೆ ಸುತ್ತಿಕೊಳ್ಳುವ ಸಂಭವವಿದೆ.

ಈತ ಇತ್ತೀಚಿಗೆ ಎನ್‌ಸಿಬಿ ಬಲೆಗೆ ಬಿದ್ದಿದ್ದ ಚಲನಚಿತ್ರರಂಗಕ್ಕೆ ಡ್ರಗ್ಸ್‌ ಪೂರೈಸುತ್ತಿದ್ದ ಜಾಲದ ಕಿಂಗ್‌ಪಿನ್‌ ಎನ್ನಲಾದ ಡಿ.ಅನಿಕಾ ತಂಡದ ಜತೆ ಸಂಪರ್ಕ ಹೊಂದಿದ್ದ. ಕೆಲವು ರಾಜಕಾರಣಿಗಳು, ಉದ್ಯಮಿಗಳು ಹಾಗೂ ಚಿತ್ರರಂಗದವರಿಗೆ ಈತನ ಮೂಲಕ ಡ್ರಗ್ಸ್‌ ಸರಬರಾಜಾಗಿರಬಹುದು ಎನ್ನಲಾಗುತ್ತಿದೆ. ಇನ್ನಷ್ಟು ತನಿಖೆಯಿಂದ ನಿಖರ ಮಾಹಿತಿ ಹೊರಬೀಳಲಿದೆ.

"

ಪಬ್‌, ಪಂಚಾತಾರಾ ಹೋಟೆಲ್‌ ಹಾಗೂ ನಗರ ಹೊರವಲಯದ ರೆಸಾರ್ಟ್‌ಗಳಲ್ಲಿ ಈತ ಪಾರ್ಟಿಗಳನ್ನು ಆಯೋಜಿಸುತ್ತಿದ್ದ. ತನ್ನ ತಂದೆ ಮೂಲಕ ಆತನಿಗೆ ರಾಜಕಾರಣಿಗಳ ಪರಿಚಯವಿದೆ. ಉದ್ಯಮಿಗಳ ಹಾಗೂ ನಟರ ಜತೆ ಸಹ ಸ್ನೇಹವಿದೆ. ಈ ಸ್ನೇಹದ ಹಿನ್ನೆಲೆಯಲ್ಲಿ ಅವರಿಗೆ ಆಗಾಗ್ಗೆ ಪಾರ್ಟಿ ನೀಡುತ್ತಿದ್ದ. ಅಲ್ಲಿ ಅನಿಕಾಳನ್ನು ಸಹ ಆಹ್ವಾನಿಸುತ್ತಿದ್ದ. ಅನಿಕಾಳ ಮೂಲಕ ಡ್ರಗ್ಸ್‌ ತರಸಿಕೊಂಡು ಪಾರ್ಟಿಗಳಿಗೆ ಬಳಸುತ್ತಿದ್ದ ಎಂದು ತಿಳಿದು ಬಂದಿದೆ.

ಡ್ರಗ್ಸ್‌ ಮಾಫಿಯಾ ದಂಧೆಯ ಬಗ್ಗೆ ಸ್ಫೋಟಕ ಮಾಹಿತಿ ಬಾಯ್ಬಿಟ್ಟ ಪೆಡ್ಲರ್

ಅನಿಕಾ ತಂಡದ ಮೊಹಮ್ಮದ್‌ ಅನೂಪ್‌ ಹಾಗೂ ರವೀಂದ್ರನ್‌ ಸಹ ಕೇರಳ ರಾಜ್ಯದವರಾಗಿದ್ದಾರೆ. ಹೀಗಾಗಿ ಕೇರಳ ಮೂಲದ ಕಾಂಗ್ರೆಸ್‌ ಮುಖಂಡನ ಪುತ್ರ ಈ ಅನೂಪ್‌ನೊಂದಿಗೆ ಆತ್ಮೀಯತೆ ಹೊಂದಿದ್ದ. ಎಂಡಿಎಂಎ ಹಾಗೂ ಎಲ್‌ಸಿಡಿ ಸೇರಿದಂತೆ ವಿದೇಶಿ ಮೂಲದ ಡ್ರಗ್ಸ್‌ಗಳನ್ನು ಈ ಗೆಳೆಯರಿಂದ ತರಿಸಿಕೊಳ್ಳುತ್ತಿದ್ದ. ಇನ್ನುಳಿದ ಗಾಂಜಾ ಹಾಗೂ ಚರಸ್‌ ಮತಿತರ ಡ್ರಗ್ಸ್‌ಗಳನ್ನು ಸ್ಥಳೀಯ ಪೆಡ್ಲರ್‌ಗಳ ಮೂಲಕವೂ ತಲುಪುತ್ತಿತ್ತು. ಇವುಗಳನ್ನು ಆತ ಪಾರ್ಟಿಗಳಿಗೆ ಬಳಸುತ್ತಿದ್ದ ಎಂಬ ಆರೋಪಗಳು ಕೇಳಿ ಬಂದಿವೆ.

ಉದ್ಯಮಿ ಪುತ್ರನ ಮೇಲೆ ಹಲ್ಲೆ ಹಾಗೂ ಕಾರು ಅಪಘಾತ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿತನಾಗಿ ಸಂಕಷ್ಟಕ್ಕೆ ಸಿಲುಕಿದ್ದ. ಈಗ ಮತ್ತೆ ಮಾದಕ ವಸ್ತು ಮಾರಾಟ ಜಾಲದಲ್ಲಿ ಸಹ ಆತನ ಹೆಸರು ತಳುಕು ಹಾಕಿಕೊಂಡಿರುವುದು ಮತ್ತೊಂದು ಸಂಕಟ ಎದುರಾಗಿದೆ. ಚಲನಚಿತ್ರ ರಂಗದವರು ಮಾತ್ರವಲ್ಲ ರಾಜಕಾರಣಿಗಳ ಪುತ್ರರು ಇದ್ದಾರೆ ಎಂಬ ಆರೋಪಕ್ಕೆ ಪುಷ್ಟಿ ಬಂದಂತಾಗಿದೆ.