ಈ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಆಡಳಿತದಲ್ಲಿದೆ. ಹಿಜಾಬ್ ಅಥವಾ ಯಾವುದೇ ಈ ರೀತಿಯ ಘಟನೆಗಳಿಗೆ ಅವಕಾಶ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಮಂಗಳೂರು (ಫೆ.05): ಈ ರಾಜ್ಯದಲ್ಲಿ ಬಿಜೆಪಿ (BJP) ನೇತೃತ್ವದ ಸರ್ಕಾರ ಆಡಳಿತದಲ್ಲಿದೆ. ಹಿಜಾಬ್ ಅಥವಾ ಯಾವುದೇ ಈ ರೀತಿಯ ಘಟನೆಗಳಿಗೆ ಅವಕಾಶ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಹೇಳಿದ್ದಾರೆ. ಉಡುಪಿ ಸೇರಿ ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ‌ ಹಿಜಾಬ್ ವಿವಾದ (Hijab Controversy) ವಿಚಾರವಾಗಿ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಶಾಲೆ ಅನ್ನೋದು ಸರಸ್ವತಿ ಮಂದಿರ, ಅಲ್ಲಿನ ನಿಯಮ ಮತ್ತು ಅನುಶಾಸನದ ಜೊತೆಗೆ ಕಲಿಯೋದು ಧರ್ಮ, ಅದರೊಳಗೆ ಬೇರೆ ಧರ್ಮ ತರೋದು ಸರಿಯಲ್ಲ. ಮಕ್ಕಳಿಗೆ ‌ಅಗತ್ಯ ಇರೋದು ಶಿಕ್ಷಣ, ಯಾರಿಗೆ ಈ ಶಾಲೆಗಳಲ್ಲಿ ಶಿಕ್ಷಣ ಸಾಧ್ಯವಿಲ್ಲವೋ ಅವರು ಬೇರೆ ದಾರಿ ಹುಡುಕಬಹುದು ಎಂದು ಹೇಳಿದರು.

ಆದರೆ ನಮ್ಮ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೆ, ಇಂಥದ್ದಕ್ಕೆ ಅವಕಾಶ ಇಲ್ಲ. ಶಾಲೆಯ ನಿಯಮದಡಿಯಲ್ಲೇ ಕಲಿಯಬೇಕು. ಇದನ್ನ ತಾಲಿಬಾನ್ ಮಾಡೋಕೆ ನಾವು ಅವಕಾಶ ಕೊಡಲ್ಲ. ಇಲ್ಲಿನ ನಿಯಮ ಮತ್ತು ನಿರ್ಧಾರಗಳಿಗೆ ಪೂರಕವಾಗಿ ಇರಬೇಕು. ಮುಖ್ಯಮಂತ್ರಿ ಆಗಿದ್ದಾಗ ಟಿಪ್ಪು ಜಯಂತಿ ಮಾಡಿ ಸಾಮರಸ್ಯ ಕೆಡಿಸಿದ್ದು ಸಿದ್ದರಾಮಣ್ಣ (Siddaramaiah). ಶಾದಿ ಭಾಗ್ಯದ ಹೆಸರಲ್ಲಿ ಕೆಲವೇ ಸಮುದಾಯಕ್ಕೆ ಅವಕಾಶ ಕೊಟ್ಟ ಅವರು ಹಿಜಾಬ್ ಬಗ್ಗೆ ಮಾತನಾಡುತ್ತಾರೆ. ಅವರ ಕಾಲ ಘಟ್ಟದಲ್ಲಿ ಇಂಥ ಘಟನೆಗಳಾಗಿ ಸಾಮರಸ್ಯ ಹಾಳಾಗಿದೆ. ಹಿಜಾಬ್‌ಗೆ ಸರ್ಕಾರ ಅವಕಾಶ ಕೊಡಲ್ಲ, ಶಾಲೆ ನಿಯಮಕ್ಕೆ ಅನುಸಾರ ಎಲ್ಲವೂ ನಡೆಯುತ್ತೆ. ಹಾಗಾಗಿ ನ್ಯಾಯಾಲಯದ ತೀರ್ಮಾನಕ್ಕೆ‌ ನಾವು ಕಾಯುತ್ತೇವೆ ಎಂದು ನಳಿನ್ ಕುಮಾರ್ ತಿಳಿಸಿದರು.

Hijab ಧರಿಸೋದು ಮೂಲಭೂತ ಹಕ್ಕೆಂದು ಘೋಷಿಸಿ: ಹೈಕೋರ್ಟ್‌ ಮೆಟ್ಟಿಲೇರಿದ ಉಡುಪಿ ವಿದ್ಯಾರ್ಥಿನಿ

ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳಿಗೆ ಬಿಟ್ಟದ್ದು: ಸಂಪುಟ ಪುನಾರಚನೆ ಕುರಿತು ರೇಣುಕಾಚಾರ್ಯ ಅಸಮಾಧಾನ ವಿಚಾರಕ್ಕೆ ಸಂಬಂಧಟ್ಟಂತೆ ನಳಿನ್ ಕುಮಾರ್, ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳಿಗೆ ಬಿಟ್ಟದ್ದು, ಅದನ್ನ ಅವರೇ ಯೋಚಿಸುತ್ತಾರೆ. ಸಂಧರ್ಭ ಬಂದಾಗ ರಾಷ್ಟ್ರೀಯ ನಾಯಕರ ಜೊತೆ ಚರ್ಚಿಸಿ ನಿರ್ಧಾರ ಮಾಡುತ್ತಾರೆ. ಅದಕ್ಕೆ ಬೇರೆ ಯಾರೋ ಮಾತನಾಡೋದು ಸರಿಯಲ್ಲ. ಸಮಯ ಬಂದಾಗ ರಾಷ್ಟ್ರೀಯ ನಾಯಕರ ತೀರ್ಮಾನದಂತೆ ಆಗುತ್ತೆ. ಮಂತ್ರಿಮಂಡಲದಲ್ಲಿ ಇರಬೇಕು ಅನ್ನೋ ಅಪೇಕ್ಷೆ ತಪ್ಪಲ್ಲ. ಶಾಸಕರಾದವರೇ ಮಂತ್ರಿ ಆಗಬೇಕು, ಹಾಗಾಗಿ ಎಲ್ಲಾ ಶಾಸಕರಿಗೆ ಅರ್ಹತೆ ಇದೆ. ಆದರೆ ಎಲ್ಲರನ್ನೂ ಮಂತ್ರಿ ಮಾಡಲು ಆಗಲ್ಲ, ಅದಕ್ಕೆ ನೀತಿ ನಿಯಮ ಇದೆ. ಅವಕಾಶ ಇದ್ದಾಗ ರಾಷ್ಟ್ರೀಯ ನಾಯಕರ ಜೊತೆ ಚರ್ಚಿಸಿ ಅವಕಾಶ ಕೊಡುತ್ತೇವೆ. ಆದರೆ ಅದನ್ನ ಹಾದಿ ಬೀದಿಯಲ್ಲಿ ಮಾತನಾಡೋದು ಸರಿಯಲ್ಲ ಎಂದು ತಿಳಿಸಿದ್ದಾರೆ

ಹಿಜಾಬ್​ಗಾಗಿ ಹೈಕೋರ್ಟ್ ಮೆಟ್ಟಿಲೇರಿದ ಮುಸ್ಲಿಂ ವಿದ್ಯಾರ್ಥಿ: ಹಿಜಾಬ್​ಗಾಗಿ ಮುಸ್ಲಿಂ ವಿದ್ಯಾರ್ಥಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಹಿಜಾಬ್ ಧರಿಸುವುದು ಮೂಲಭೂತ ಹಕ್ಕೆಂದು ವಾದ ಮಾಡಿ ಹೈಕೋರ್ಟ್​ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಉಡುಪಿಯ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿನಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಸಂವಿಧಾನದಡಿ ಧಾರ್ಮಿಕ ಹಕ್ಕುಗಳನ್ನು ನೀಡಲಾಗಿದೆ. ಹಿಜಾಬ್ ಧರಿಸುವುದೂ ಧಾರ್ಮಿಕ ಹಕ್ಕಿನ ಭಾಗ ಆಗಿದೆ. ಆದರೆ ಹಿಜಾಬ್ ಧರಿಸಲು ಕಾಲೇಜು ಅನುಮತಿಸಿಲ್ಲ. ಹೀಗಾಗಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಲು ಮನವಿ ಮಾಡಿದ್ದಾರೆ.

Hijab Controversy: ಹಿಜಾಬ್‌ ಧರಿಸುವ ವಿದ್ಯಾರ್ಥಿನಿಯರಿಗೆ ಆನ್‌ಲೈನ್‌ ಪಾಠ ಎಂದ ಶಾಸಕ ರಘುಪತಿ ಭಟ್‌

ಉಡುಪಿಯ ಸರ್ಕಾರಿ ಮಹಿಳಾ ಕಾಲೇಜು ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಉಡುಪಿ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಸೋಮವಾರ ಕಾಲೇಜಿನಲ್ಲಿ ಸಭೆ ನಡೆಸಲಾಗಿತ್ತು. ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರು ಕಾಲೇಜಿನ ಆಡಳಿತ ಮಂಡಳಿ, ಡಿಡಿಪಿಯು ಸಭೆಯಲ್ಲಿ ಭಾಗಿ ಆಗಿದ್ದರು. ಒಂದೂವರೆ ತಿಂಗಳುಗಳ ಕಾಲ ಈ ವಿವಾದ ನಡೆಯಿತು. ಹಿಜಾಬ್ ಧರಿಸದೆ ಕಾಲೇಜಿಗೆ ಬರಲು ನಾಳೆ ಒಂದು ದಿನ ಅವಕಾಶ ಇದೆ. ಕಾಲೇಜಿಗೆ ಬರದಿದ್ದರೆ ಆನ್ಲೈನ್ ಕ್ಲಾಸ್ ಅವಕಾಶ ಮಾಡಲಾಗಿದೆ. ಇನ್ನು ವಿದ್ಯಾರ್ಥಿಗಳು ಹೆಸರಿಗಾಗಿ ಹಠ ಮಾಡುವುದು ಸರಿಯಲ್ಲ. ಹಿಜಾಬ್​ಗೆ ನಮ್ಮ ವಿರೋಧ ಇಲ್ಲ ಅದು ಇಸ್ಲಾಂನ ಪದ್ಧತಿ. ಶರಿಯತ್ ಆಧಾರಿತ ರಾಷ್ಟ್ರ ಬೇರೆ, ಪ್ರಜಾಪ್ರಭುತ್ವ ರಾಷ್ಟ್ರ ಬೇರೆ. ಭಾರತದಲ್ಲಿ ಸರ್ಕಾರದ ಆದೇಶ ಪಾಲಿಸಬೇಕು ಎಂದು ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ ಹೇಳಿಕೆ ನೀಡಿದ್ದರು.