ವಿಧಾನ ಪರಿಷತ್ ಮಾಜಿ ಸಭಾಪತಿ ಹಾಗೂ ಹಿರಿಯ ನ್ಯಾಯವಾದಿ ಎನ್. ತಿಪ್ಪಣ್ಣ (97) ಇಂದು ಬೆಳಿಗ್ಗೆ ಬಳ್ಳಾರಿಯಲ್ಲಿ ನಿಧನರಾಗಿದ್ದಾರೆ. ಅವರ ಅಂತ್ಯಕ್ರಿಯೆ ನಾಳೆ ಚಿತ್ರದುರ್ಗ ಜಿಲ್ಲೆಯ ತುರುವನೂರಿನಲ್ಲಿ ನಡೆಯಲಿದೆ.

ಬಳ್ಳಾರಿ (ಜು.11): ವಿಧಾನಪರಿಷತ್‌ನ ಮಾಜಿ ಸಭಾಪತಿ, ಹಿರಿಯ ನ್ಯಾಯವಾದಿ ಮತ್ತು ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಎನ್. ತಿಪ್ಪಣ್ಣ (97) ಅವರು ಇಂದು ಮುಂಜಾನೆ ಬಳ್ಳಾರಿಯ ಗಾಂಧಿನಗರದ ನಿವಾಸದಲ್ಲಿ ಕೊನೆಯುಸಿರೆಳೆದರು.

Add Asianetnews Kannada as a Preferred SourcegooglePreferred

ತಿಪ್ಪಣ್ಣ ಅವರಿಗೆ ಒಬ್ಬ ಪುತ್ರರಿದ್ದು, ಅವರ ಅಂತ್ಯಸಂಸ್ಕಾರವನ್ನು ನಾಳೆ ಚಿತ್ರದುರ್ಗ ಜಿಲ್ಲೆಯ ತುರವಿನೂರಿನಲ್ಲಿ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಬಳ್ಳಾರಿಯ ಅವರ ನಿವಾಸದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ತಿಪ್ಪಣ್ಣ ಅವರ ವೃತ್ತಿಜೀವನ, ಸಾಧನೆಗಳು

ತಿಪ್ಪಣ್ಣ ಅವರು ಹಲವು ವರ್ಷಗಳ ಕಾಲ ನ್ಯಾಯವಾದಿಯಾಗಿ ಸೇವೆ ಸಲ್ಲಿಸಿದ ಬಳಿಕ ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಿದರು. ಅವರು ನಾಲ್ಕು ಬಾರಿ ವಿಧಾನಪರಿಷತ್‌ಗೆ ಆಯ್ಕೆಯಾಗಿದ್ದು, ಪ್ರತಿಪಕ್ಷದ ಉಪನಾಯಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕೆಲವು ಕಾಲ ವಿಧಾನಪರಿಷತ್‌ನ ಸಭಾಪತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರೊಂದಿಗೆ ಗುರುತಿಸಿಕೊಂಡಿದ್ದ ಅವರು, ಜನತಾದಳದಿಂದ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಬಳಿಕ ಜೆಡಿಯುನಿಂದ ಜೆಡಿಎಸ್‌ಗೆ ಸೇರಿ, ಜೆಡಿಎಸ್‌ನ ರಾಜ್ಯ ಘಟಕದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

ವೀರಶೈವ ಮಹಾಸಭಾದಲ್ಲೂ ಸೇವೆ:

2012ರಲ್ಲಿ ತಿಪ್ಪಣ್ಣ ಅವರು ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದಕ್ಕೂ ಮುಂಚೆ ಮಹಾಸಭಾದ ವಿವಿಧ ಸ್ಥಾನಗಳಲ್ಲಿ ಸೇವೆ ಸಲ್ಲಿಸಿದ್ದ ಅವರು, ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ಮತ್ತು ಇತರ ಹುದ್ದೆಗಳಲ್ಲಿ 20 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು.

ತಿಪ್ಪಣ್ಣ ಅವರ ನಿಧನಕ್ಕೆ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ.