ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಮೂರು ವರ್ಷದ ಮಗ ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಸುದ್ದಿ ಕೇಳಿ ಆಘಾತಗೊಂಡ ತಂದೆ ಮನೆಗೆ ಧಾವಿಸುತ್ತಿದ್ದ ವೇಳೆ ಅಪಘಾತದಲ್ಲಿ ಮೃತಪಟ್ಟ ಘಟನೆ ನಡೆದಿದೆ.
ಉನ್ನಾವೋ (ಜೂ. 26) ಸುಂದರ ಕುಟುಂಬಕ್ಕೆ ಒಂದೇ ದಿನ ಎದುರಾದ ಆಘಾತ ಆ ಕುಟುಂಬ ಮಾತ್ರವಲ್ಲ ಸುದ್ದಿ ತಿಳಿದ ಪ್ರತಿಯೊಬ್ಬರಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮೂರು ವರ್ಷದ ಮಗ ಆಟವಾಡುತ್ತಿದ್ದ ವೇಳೆ ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಸುದ್ದಿ ಕೆಲಸದಲ್ಲಿದ್ದ ತಂದೆಗೆ ತಿಳಿಯುತ್ತಿದ್ದಂತೆ ಆಘಾತಗೊಂಡಿದ್ದಾರೆ. ತಕ್ಷವೇ ಬೈಕ್ ಮೂಲಕ ಮನೆಗೆ ಧಾವಿಸಿದ ಮಗುವಿನ ತಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕರುಳು ಹಿಂಡುವ ಘಟನೆ ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದಿದೆ.
ಮಗು ಆಟವಾಡುತ್ತಿದ್ದಾಗ ತಗುಲಿದ ಶಾಕ್
ಮೂರು ವರ್ಷದ ಮಗ ಅಯಾಂಶ್ ಜೈಸ್ವಾಲ್ ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಮಗುವಿನ ತಾಯಿ ಕೆಲಸದಲ್ಲಿದ್ದರೆ, ಇತ್ತ ಮಗ ಆಟವಾಡುತ್ತಿದ್ದ. ಇದಕ್ಕಿದ್ದಂತೆ ಮಗುವಿನ ಆರ್ತನಾದವೊಂದು ಕೇಳಿಸಿದ ಓಡೋಡಿ ಬಂದ ತಾಯಿ ಆಘಾತಗೊಂಡಿದ್ದಾಳೆ. ವಿದ್ಯುತ್ ಶಾಕ್ ತಗುಲಿ ಮಗು ಮಾರುದ್ದ ದೂರದಲ್ಲಿ ಬಿದ್ದಿದೆ. ತಕ್ಷಣವೇ ಮಗುವನ್ನು ಎತ್ತಿಕೊಂಡು ಕೂಗಿದ್ದಾಳೆ. ಇತರ ಸದಸ್ಯರು, ಸ್ಥಳೀಯರು ಆಗಮಿಸಿದ್ದಾರೆ. ನೀರು ಕುಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ತಾಯಿಗೆ ಮಗುವಿನ ಆರೋಗ್ಯ ಗಂಭೀರವಾಗಿದೆ ಅನ್ನೋದು ಅರಿವಾಗಿದೆ. ತಕ್ಷಣವೇ ಆಸ್ಪತ್ರೆ ಕರೆದುಕೊಂಡು ಹೋಗುವಂತೆ ಕೂಗಿದ್ದಾಳೆ.
ಸುದ್ದಿ ತಿಳಿದು ಆಘಾತಗೊಂಡ ತಂದೆ
ಮಗುವನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಪರಿಶೀಲಿಸಿದ ವೈದ್ಯರು ಮಗು ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ. ವಿದ್ಯುತ್ ಶಾಕ್ ತಗುಲಿದಾಗಲೇ ಮಗು ಮೃತಪಟ್ಟಿದೆ ಎಂದು ವೈದ್ಯರು ಹೇಳಿದ್ದಾರೆ. ಇದರ ನಡುವೆ ಕುಟುಂಬ ಸದಸ್ಯರು ಮಗುವಿನ ತಂದೆ ವಿಷ್ಣು ಕುಮಾರ್ ಜೈಸ್ವಾಲ್‌ಗೆ ಮಾಹಿತಿ ನೀಡಿದ್ದಾರೆ. ಕೆಲಸದಲ್ಲಿದ್ದ ತಂದೆಗೆ ಮಗು ವಿದ್ಯುತ್ ಶಾಕ್ ತಗುಲಿ ಮೃತಪಟ್ಟಿದೆ ಅನ್ನೋ ಮಾಹಿತಿ ಸಿಕ್ಕಿದೆ. ಈ ಸುದ್ದಿ ಕೇಳಿ ತಂದೆ ಆಘಾತಗೊಂಡಿದ್ದಾರೆ. ನಿಂತಲ್ಲೇ ಕುಸಿದಿದ್ದಾರೆ.
ಬೈಕ್ ಅಪಘಾತದಲ್ಲಿ ಮೃತಪಟ್ಟ ತಂದೆ
ತಕ್ಷಣವೇ ಬೈಕ್ ಮೂಲಕ ಮನೆಗೆ ಧಾವಿಸಿದ್ದಾರೆ. ಆಘಾತ, ನೋವಿನಲ್ಲಿ ವೇಗವಾಗಿ ಮನೆಗೆ ಆಗಮಿಸುತ್ತಿದ್ದ ವಿಷ್ಣು ಕುಮಾರ್ ಜೈಸ್ವಾಲ್ ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿಯಾಗಿದೆ. ಇದರ ಪರಿಣಾಮ ತೀವ್ರವಾಗಿ ಗಾಯಗೊಂಡ ವಿಷ್ಣು ಕುಮಾರ್ ಜೈಸ್ವಾಲ್ ಅವರನ್ನು ಘಟನೆ ನಡೆದ ಪಟ್ಟಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಭೀಕರ ಅಪಘಾತ ಹಾಗೂ ತೆಲೆಗೆ ತೀವ್ರವಾದ ಗಾಯವಾಗಿದ್ದ ಕಾರಣ ವಿಷ್ಣು ಕುಮಾರ್ ಜೈಸ್ವಾಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮಗುವಿನ ಸಾವಿನ ನೋವಲ್ಲಿ ಕಾಯುತ್ತಿದ್ದ ಕುಟುಂಬಕ್ಕೆ ಶಾಕ್
ವಿಷ್ಣು ಕುಮಾರ್ ಜೈಸ್ವಾಲ್ ಬೈಕ್ ಮೂಲಕ ಹೊರಟಿರುವುದಾಗಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಕಣ್ಮೀರಿಡುತ್ತಲೇ ಮಾತುಗಳನ್ನಾಡಿದ್ದರೆ. ಆದರೆ ಎಷ್ಟು ಹೊತ್ತಾದರೂ ಮನೆಗೆ ತಲುಪಿಲ್ಲ. ಇತ್ತ ಮಗುವಿನ ಸಾವು ಮಾಹಿತಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಸೇರಿದಂತೆ ಹಲವರು ಮನೆಗೆ ಆಗಮಿಸಿದ್ದಾರೆ. ಆದರೆ ವಿಷ್ಣು ಕುಮಾರ್ ಜೈಸ್ವಾಲ್ ಮಾತ್ರ ಸುಳಿವಿಲ್ಲ. ಕರೆ ಮಾಡಿದರೆ ಫೋನ್ ಕೆನಕ್ಟ್ ಆಗದೆ ಆತಂಕಗೊಂಡಿದ್ದಾರೆ.
ಮಗನ ಬೆನ್ನಲ್ಲೇ ತಂದೆಯೂ ಸಾವು
ವಿಷ್ಣು ಕುಮಾರ್ ಜೈಸ್ವಾಲ್ ಆಪಘಾತದಲ್ಲಿ ಮೃತಪಟ್ಟಿದ್ದಾರೆ ಅನ್ನೋ ಮಾಹಿತಿ ಪತ್ನಿಗೆ ತಿಳಿಯುತ್ತಿದ್ದಂತೆ ಪತ್ನಿ ಕುಸಿದಿದ್ದಾರೆ. ಅಸ್ವಸ್ಥಗೊಂಡಿದ್ದಾರೆ. ಕೆಲವೇ ಗಂಟೆಗಳ ಅಂತರದಲ್ಲಿ ಮಗನನ್ನು ಕಳೆದುಕೊಂಡಿದ್ದಲ್ಲದೆ, ಪತಿಯನ್ನು ಕಳೆದುಕೊಂಡ ಪತ್ನಿಯ ಆಕ್ರಂದನ ಮುಗಿಲು ಮುಟ್ಟಿದೆ. ಇಡೀ ಕುಟುಂಬ ಕಣ್ಣೀರಿಡುತ್ತಿದೆ. ಮಾಹಿತಿ ತಿಳಿಯುದ್ದಂತೆ ಸ್ಥಳೀಯರು ಸೇರಿದಂತೆ ಹಲವು ವಿಷ್ಣು ಕುಮಾರ್ ಜೈಸ್ವಾಲ್ ಮನೆಗೆ ಆಗಮಿಸಿ ಸಾಂತ್ವನ ಹೇಳುತ್ತಿದ್ದಾರೆ.
