ಬೆಂಗಳೂರು [ಅ.19]:  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾತಂತ್ರ್ಯ ಹೋರಾಟದ ಬಗ್ಗೆ ತಿಳಿವಳಿಕೆ ಇಲ್ಲದ ನಂಬರ್‌ ಒನ್‌ ಅಜ್ಞಾನಿ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಅವರಲ್ಲಿ ಸ್ವಾತಂತ್ರ್ಯ ಹೋರಾಟದ ಅಜ್ಞಾನ ತುಂಬಿ ತುಳುಕುತ್ತಿದೆ. ಅವರಿಗೆ ದೇಶದ ಸ್ವಾತಂತ್ರ್ಯ ಹೋರಾಟ ಇತಿಹಾಸ ಗೊತ್ತಿಲ್ಲ. ವೀರ ಸಾವರ್ಕರ್‌ ಈ ದೇಶದ ದೊಡ್ಡ ಸ್ವಾತಂತ್ರ್ಯ ಹೋರಾಟಗಾರ. ಅವರ ಇಡೀ ಕುಟುಂಬ ಸ್ವಾತಂತ್ರ್ಯಕ್ಕಾಗಿ ಬಲಿದಾನವಾಗಿದೆ. ಸಾವರ್ಕರ್‌ ಹಾಗೂ ಅವರ ಮೂವರು ಸಹೋದರು ಒಂದೇ ಜೈಲಿನಲ್ಲಿ ಇರುತ್ತಾರೆ. ಜೈಲಿನಲ್ಲಿ ಎಣ್ಣೆ ತೆಗೆಯುವ ಗಾಣಕ್ಕೆ ಎತ್ತಿನ ಬದಲು ಸಾವರ್ಕರ್‌ ಅವರನ್ನು ಕಟ್ಟಿಹಿಂಸಿಸಲಾಗುತ್ತದೆ. ಸಿದ್ದರಾಮಯ್ಯ ಅವರಿಗೆ ಈ ಮಹಾನ್‌ ವೀರನ ಇತಿಹಾಸ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವಾಜಪೇಯಿ ಪ್ರಧಾನಿಯಾಗಿದ್ದಾಗ ಅಂಡಮಾನ್‌ ಮತ್ತು ನಿಕೋಬಾರ್‌ನಲ್ಲಿ ಸಾವರ್ಕರ್‌ ಸ್ಮರಣಾರ್ಥ ಪ್ರತಿಮೆ ನಿರ್ಮಿಸಿದ್ದರು. ನಂತರ ಯುಪಿಎ ಸರ್ಕಾರ ಬಂದಾಗ ಕಾಂಗ್ರೆಸ್‌ನವರು ಆ ಪ್ರತಿಮೆಯಲ್ಲಿ ಕೆಡವಿದ್ದರು. ಕಾಂಗ್ರೆಸ್‌ನವರಿಗೆ ದೇಶ ಭಕ್ತಿ ಗಂಧಗಾಳಿ ಇಲ್ಲ. ದೇಶ ದ್ರೋಹ ತುಂಬಿ ತುಳುಕುತ್ತಿದೆ. ಕಾಶ್ಮೀರ ವಿಚಾರ, ನಕ್ಸಲ್‌, ಭಯೋತ್ಪಾದನೆ, ಕಪ್ಪು ಹಣ, ಪಾಕಿಸ್ತಾನ, ಅಂಬೇಡ್ಕರ್‌, ಗಾಂಧೀಜಿ ವಿಚಾರದಲ್ಲಿ ಕಾಂಗ್ರೆಸ್‌ ದೇಶದ್ರೋಹಿಯಾಗಿದೆ. ದೇಶದ ಸ್ವಾತಂತ್ರ್ಯ ಹೋರಾಟಗಾರರ ಪೈಕಿ ‘ಸ್ವಾತಂತ್ರ್ಯ ವೀರ’ ಎಂದು ಕರೆಯುವುದು ಸಾವರ್ಕರ್‌ಗೆ ಮಾತ್ರ. 

ಕಾಂಗ್ರೆಸ್‌ನವರು ಮಹಾತ್ಮ ಗಾಂಧಿ ಮಾತ್ರ ಸ್ವಾತಂತ್ರ್ಯ ಹೋರಾಟಗಾರ ಎಂದು ತಿಳಿದುಕೊಂಡಿದ್ದಾರೆ. ಆದರೆ, ಈಗ ಆ ಗಾಂಧೀಜಿ ವಿಚಾರಗಳಿಗೂ ಎಳ್ಳು ನೀರು ಬಿಟ್ಟಿದ್ದಾರೆ ಎಂದು ಅವರು ಪತ್ರಿಕಾ ಹೇಳಿಕೆ ಮೂಲಕ ಟೀಕಿಸಿದ್ದಾರೆ.